ವಿಶ್ವದ ಅತ್ಯಂತ ದೊಡ್ಡ ಹಿಂದು ದೇಗುಲ ನಿರ್ಮಾಣಕ್ಕೆ 2.5 ಕೋಟಿ ರೂ.ಮೌಲ್ಯದ ಭೂಮಿ ದಾನ ಮಾಡಿದ ಮುಸ್ಲಿಂ ಉದ್ಯಮಿ
ಆಚಾರ್ಯ ಕಿಶೋರ್ ಕುನಾಲ್ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಹಾವೀರ್ ಮಂದಿರ್ ಟ್ರಸ್ಟ್ನ ಮುಖ್ಯಸ್ಥರಾಗಿದ್ದು, ಈ ಟ್ರಸ್ಟ್ನಿಂದ ಒಟ್ಟು 125 ಎಕರೆ ಪ್ರದೇಶದಲ್ಲಿ ಭವ್ಯವಾದ ರಾಮಾಯಣ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.
ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯ ಕೈತ್ವಾಲಿಯಾ ಎಂಬ ಪ್ರದೇಶದಲ್ಲಿ ವಿರಾಟ್ ರಾಮಾಯಣ ಮಂದಿರ ನಿರ್ಮಾಣ ಮಾಡಲು ಮುಸ್ಲಿಂ ಕುಟುಂಬವೊಂದು 2.5 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ದೇಣಿಗೆಯಾಗಿ ನೀಡಿದೆ. ಇಲ್ಲಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ದೇವಾಲಯ ನಿರ್ಮಾಣವಾಗಲಿದ್ದು, ಅದಕ್ಕೆ ಮುಸ್ಲಿಂ ಕುಟುಂಬ ಭೂಮಿ ನೀಡಿರುವುದು ತುಂಬ ವಿಶೇಷ ಎನ್ನಿಸಿದೆ. ಹಿಂದು ದೇಗುಲ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿರುವ ಪಾಟ್ನಾ ಮೂಲದ ಮಹಾವೀರ ಟ್ರಸ್ಟ್ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಇಷ್ಟಿಯಾಕ್ ಅಹ್ಮದ್ ಖಾನ್ ಎಂಬುವರು ಭೂಮಿಯನ್ನು ದಾನ ಮಾಡಿದ್ದಾರೆ. ಇವರು ಪೂರ್ವ ಚಂಪಾರಣ್ಯದಲ್ಲಿ ಒಬ್ಬರು ಉದ್ಯಮಿ ಎಂದು ತಿಳಿಸಿದ್ದಾರೆ.
ದೇಗುಲ ನಿರ್ಮಾಣಕ್ಕೆ ಇಷ್ಟಿಯಾಕ್ ಭೂಮಿ ನೀಡಿದ್ದಾರೆ. ಅದೂ ದಾನವಾಗಿ ಕೊಟ್ಟಿದ್ದು, ನೋಂದಣಿ ಪ್ರಕ್ರಿಯೆ ಪೂರ್ವ ಚಂಪಾರಣ್ಯದ ಕೆಶಾರಿಯಾ ಸಬ್ ಉಪವಿಭಾಗ ಕಚೇರಿಯಲ್ಲಿ ನಡೆದಿದೆ ಎಂದು ಕಿಶೋರ್ ಕುನಾಲ್ ಮಾಹಿತಿ ನೀಡಿದ್ದಾರೆ. ಖಾನ್ ಕುಟುಂಬ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಭೂಮಿ ನೀಡುವ ಮೂಲಕ ಸಾಮಾಜಿಕ ಸಾಮರಸ್ಯ, ಕೋಮು ಸೌಹಾರ್ದತೆಗೆ ಉದಾಹರಣೆಯಾಗಿದ್ದಾರೆ. ಇದು ಎರಡು ಸಮುದಾಯಗಳ ನಡುವಿನ ಭಾತೃತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಂ ಸಹೋದರರ ಸಹಕಾರ ಇಲ್ಲದೆ ಈ ಯೋಜನೆ ಪೂರ್ಣಗೊಳ್ಳುವುದು ಕಷ್ಟ ಎಂದೂ ತಿಳಿಸಿದ್ದಾರೆ.
ಆಚಾರ್ಯ ಕಿಶೋರ್ ಕುನಾಲ್ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಹಾವೀರ್ ಮಂದಿರ್ ಟ್ರಸ್ಟ್ನ ಮುಖ್ಯಸ್ಥರಾಗಿದ್ದು, ಈ ಟ್ರಸ್ಟ್ನಿಂದ ಒಟ್ಟು 125 ಎಕರೆ ಪ್ರದೇಶದಲ್ಲಿ ಭವ್ಯವಾದ ರಾಮಾಯಣ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಕಾಂಬೋಡಿಯಾದಲ್ಲಿರುವ 215 ಅಡಿ ಎತ್ತರದ, ಜಗತ್ಪ್ರಸಿದ್ಧ 12ನೇ ಶತಮಾನದ ಅಂಕೋರ್ ವಾಟ್ ಸಂಕೀರ್ಣಕ್ಕಿಂತಲೂ ಎತ್ತರವಾಗಿರಲಿದೆ. ಹಾಗೇ, ಈ ಭವ್ಯ ಮಂದಿರದ ಸಂಕೀರ್ಣದಲ್ಲಿ ಒಟ್ಟು 18 ದೇಗುಲಗಳು ಇರಲಿವೆ. ಇಲ್ಲಿ ವಿಶ್ವದ ಅತ್ಯಂತ ದೊಡ್ಡ ಶಿವಲಿಂಗ ಸ್ಥಾಪನೆಯಾಗಲಿದ್ದು, ಎತ್ತರದ ಗೋಪುರಗಳೂ ಇರಲಿವೆ. ಒಟ್ಟಾರೆ 500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಾಮಾಯಣ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಈ ಮಂದಿರ ನಿರ್ಮಾಣಕ್ಕಾಗಿ, ದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣ ಕಾರ್ಯ ನಡೆಸುತ್ತಿರುವ ತಜ್ಞ ಇಂಜಿನಿಯರ್ಗಳಿಂದ ಟ್ರಸ್ಟ್ ಸೂಕ್ತ ಸಲಹೆಯನ್ನೂ ಪಡೆಯಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 3 ವರ್ಷದ ನಂತರ ಮತ್ತೂ ಎತ್ತರಕ್ಕೆ ಏರಲಿದ್ದಾರಾ ಯೋಗಿ ಆದಿತ್ಯನಾಥ್? ಮುಖ್ಯಮಂತ್ರಿ ಪ್ರಮಾಣ ವಚನ ಮುಹೂರ್ತ ಏನೆನ್ನುತ್ತದೆ?