ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೇಳಿಕೆಯೊಂದನ್ನು ನೀಡಿದ ವಿವಾದ ಸೃಷ್ಟಿಸಿದ ರಾಜಸ್ಥಾನ ಬಿಜೆಪಿ ಶಾಸಕ
ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಪಾಟೀಲ್ ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ನರೇಂದ್ರ ಮೋದಿಯವರು ದಿನಕ್ಕೆ ಎರಡು ತಾಸು ಮಾತ್ರ ನಿದ್ದೆ ಮಾಡುತ್ತಾರೆ ಎಂದು ಹೇಳಿದ್ದರು.
ಜೈಪುರ: ಬಿಜೆಪಿ ಶಾಸಕ ಜ್ಞಾನ್ ಚಾಂದ್ ಪರಾಖ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರ ಬಗ್ಗೆ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಇವರು, ಪ್ರಧಾನಿ ನರೇಂದ್ರ ಮೋದಿಯವರು ಶಿವನ ಅವತಾರ ಎಂದು ಹೇಳಿದರೆ ಖಂಡಿತ ಅತಿಶಯೋಕ್ತಿಯಾಗುವುದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಹರ ಹರ ಮಹದೇವ್ ಎಂಬ ಘೋಷಣೆ ಅತ್ಯಂತ ಪ್ರಸಿದ್ಧವಾಗಿತ್ತು. ಆದರೆ ಈಗ ಅನೇಕ ಕಡೆ ಹರ ಹರ ಮೋದಿ ಎಂಬ ಕೂಗು ಕೇಳುತ್ತದೆ ಎಂದೂ ಹೇಳಿದ್ದರು. ಈ ಹೇಳಿಕೆಯೀಗ ವಿವಾದ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿದೆ.
ಈ ಶಾಸಕರು ಅಷ್ಟಕ್ಕೆ ಸುಮ್ಮನಾಗದೆ, ಸರ್ಜಿಕಲ್ ಸ್ಟ್ರೈಕ್, ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ಎನ್ಕೌಂಟರ್ ಇತ್ಯಾದಿಗಳನ್ನು ಉಲ್ಲೇಖಿಸಿಯೂ ಪ್ರಧಾನಿ ಮೋದಿಯವರು ಶಿವನ ಅವತಾರ ಎಂದಿದ್ದರು. ಈಶ್ವರ ಮೂರನೇ ಕಣ್ಣು ತೆರೆದಾಗ ಜಗತ್ತು ವಿನಾಶ ಎಂದು ಪುರಾಣದಲ್ಲಿ ಹೇಳಲಾಗಿದೆ. ಹಾಗೇ ಪ್ರಧಾನಿ ಮೋದಿ ಮೂರನೇ ಕಣ್ಣು ತೆರೆದಿದ್ದಾರೆ. ಅದಕ್ಕಾಗಿಯೇ ಕಾಶ್ಮೀರದಲ್ಲಿರುವ ಉಗ್ರರು ನಾಶವಾಗುತ್ತಿದ್ದಾರೆ. ಪಾಕಿಸ್ತಾನ ನೆಲಕ್ಕೇ ಹೋಗಿ ಭಯೋತ್ಪಾದಕರ ಮೇಲೆ ಸರ್ಜಿಕಲ್ ದಾಳಿ ಮಾಡಲಾಗಿದೆ ಎಂದು ಹೇಳಿದ್ದರು. ಹಾಗೇ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿ ಭಾರತ ಸುರಕ್ಷಿತವಾಗಿದೆ ಮತ್ತು ಮುಂದೆಯೂ ಸುರಕ್ಷಿತವಾಗಿರುತ್ತದೆ ಎಂದು ವಿಶ್ಲೇಷಣೆ ಮಾಡಿದ್ದರು.
ಕಾಂಗ್ರೆಸ್ ಆಕ್ಷೇಪ: ಬಿಜೆಪಿ ಶಾಸಕ ಪ್ರಧಾನಿ ನರೇಂದ್ರ ಮೋದಿಯವರನ್ನು ಶಿವನ ಅವತಾರ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕ ಮಹೇಶ್ ಜೋಶಿ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹೇಶ್ ಜೋಶಿ ಮಾತನಾಡಿ, ಒಬ್ಬ ಮನುಷ್ಯನನ್ನು ದೇವರಿಗೆ ಹೋಲಿಸುವುದು ಮಹಾನ್ ಅಪರಾಧ. ಇದೀಗ ಪ್ರಧಾನಿ ನರೇಂದ್ರ ಮೋದಿಯವರನ್ನು ಈಶ್ವರನ ಅವತಾರ ಎಂದು ಹೇಳುವ ಮೂಲಕ ಶಿವನಿಗೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ 2 ತಾಸು ನಿದ್ದೆ ಮಾಡುತ್ತಾರೆ
ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಪಾಟೀಲ್ ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ನರೇಂದ್ರ ಮೋದಿಯವರು ದಿನಕ್ಕೆ ಎರಡು ತಾಸು ಮಾತ್ರ ನಿದ್ದೆ ಮಾಡುತ್ತಾರೆ. ಉಳಿದ ಸಮಯವನ್ನೆಲ್ಲ ದೇಶಕ್ಕಾಗಿ ಕೆಲಸ ಮಾಡಲು ಮೀಸಲಿಟ್ಟಿದ್ದಾರೆ ಎಂದು ಹೇಳಿದ್ದರು. ಚಂದ್ರಶೇಖರ್ ಪಾಟೀಲ್ ಅವರು ಕೊಲ್ಹಾಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಹೀಗೆ ಹೇಳಿದ್ದರು.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ; ಸಚಿವ ವಿ.ಸೋಮಣ್ಣ ವಿರುದ್ಧ ಸಮನ್ಸ್ ಜಾರಿ
Published On - 9:54 am, Tue, 22 March 22