ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ ಮತ್ತು ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನವನ್ನು (ಸಪ್ಟೆಂಬರ್ ೫ ) ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರು ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದುದು ಹಾಗೂ ಆದರ್ಶವಾದುದು.
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ
ತಮದಿಂದಾವರಿತವಾದ ಮನಸ್ಸನ್ನು ಜ್ಞಾನದ ಬೆಳಕಿನತ್ತ ಒಯ್ದು, ಅರಿವಿನ ಪರಿಧಿಯನ್ನು ವಿಸ್ತರಿಸುವಲ್ಲಿ ಗುರುವಿನ ಪಾತ್ರ ಅಗ್ರಗಣ್ಯವಾದುದು. ಶಿಕ್ಷಕರ ಮಾರ್ಗದರ್ಶನವಿಲ್ಲದೆ ವ್ಯಕ್ತಿಯು ಜೀವನದಲ್ಲಿ ಉನ್ನತಿಯನ್ನು ಹೊಂದುವುದು ಅಸಾಧ್ಯ. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಶಿಷ್ಯರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿದ್ದಾರೆ. ಅದರಿಂದಲೇ ಆತ್ಮತೃಪ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ.
ಗುರುವು ಶಿಷ್ಯನಿಗೆ ಒಂದೇ ಒಂದು ಅಕ್ಷರವನ್ನು ಕಲಿಸಿದರೂ ಕೂಡಾ ಅದರ ಋಣ ಪರಿಹಾರಕ್ಕೆ ತಕ್ಕ ದಕ್ಷಿಣೆಯು ಇಲ್ಲ. ಆದರೆ ಇಂದಿನ ಶಿಕ್ಷಣ ಪದ್ಧತಿ ಹಾಗೂ ಸಮಾಜದಲ್ಲಿ ಜನರ ಮನಸ್ಥಿತಿಯು, ‘ಹಣಕ್ಕೆ ಬದಲಾಗಿ ವಿದ್ಯೆ’ ಎಂಬ ವಿನಿಮಯ ಪದ್ಧತಿಯನ್ನು ಅಳವಡಿಸಿಕೊಂಡಂತೆ ಭಾಸವಾಗುತ್ತಿದೆ. ‘ಗುರುವೇ ನಮಃ’ ಎಂದು ಹೇಳುತ್ತಿದ್ದ ಮಾತು ಇಂದು ‘ಗುರುವೇನು ಮಹಾ’ ಎಂದಾಗಿದೆ. ಹಾಗಾದರೆ ಮಾನವನ ಬೌದ್ಧಿಕ ಮಟ್ಟ ಬೆಳೆದಿದೆಯೋ? ಅಥವಾ ಅವನತಿಯತ್ತ ಸಾಗಿದೆಯೋ? ಗುರುವಿನ ಬಗ್ಗೆ, ವಿದ್ಯೆಯ ಬಗ್ಗೆ ಗೌರವವಿಲ್ಲದ ದರ್ಪಗಳೇ ಬದುಕನ್ನು ಅದಃಪತನಕ್ಕೆ ತಳ್ಳುತ್ತಿದೆಯೇ ? ಗುರುವನ್ನು ಆರಾಧಿಸಿ, ಗೌರವನ್ನು ಕೊಡುವ ಅವಶ್ಯಕತೆ ವಿದ್ಯಾರ್ಥಿಗಿದೆ. ವ್ಯಕ್ತಿಯು ಜೀವನದಲ್ಲಿ ಅಚಲವಾದ ಗುರಿಯನ್ನಿಟ್ಟು ಗುರುವಿನ ಮಾರ್ಗದರ್ಶನದಿಂದ ಬೆಳೆಯಬೇಕು; ದೇಶವನ್ನು ಬೆಳಗಿಸಬೇಕು.
ಪಂಚಮಿ ಬಾಕಿಲಪದವು
Published On - 10:28 am, Mon, 5 September 22