ಹೊಸದಾಗಿ ಹೊಟೇಲ್​ ಆರಂಭಿಸಲು ಹೊರಟಿದ್ದೀರೇ, ಹಾಗಿದ್ದರೆ ಈ ವಿಚಾರಗಳನ್ನು ತಿಳಿದಿರಿ

|

Updated on: Jan 24, 2025 | 8:06 AM

ನೀವು ಹೊಸದಾಗಿ ಹೊಟೇಲ್​​ ಆರಂಭಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಯಾವ ರೀತಿಯಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ? ಯಾವೆಲ್ಲ ಅನುಮತಿ ಪಡೆಯಬೇಕು? ಆಹಾರಕ್ಕೆ ದರಗಳನ್ನು ಯಾವ ರೀತಿಯಾಗಿ ನಿಗದಿ ಮಾಡಬೇಕು? ಹೊಟೇಲ್​​ ಆರಂಭಿಸಿದ ನಂತರ ಏನೆಲ್ಲ ಸವಾಲುಗಳು ಎದುರಾಗುತ್ತವೆ? ಅವುಗಳಿಗೆ ಪರಿಹಾರವೇನು? ಸದ್ಯ ಯಾವೆಲ್ಲ ಸಮಸ್ಯೆಗಳಿವೆ ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹೊಸದಾಗಿ ಹೊಟೇಲ್​ ಆರಂಭಿಸಲು ಹೊರಟಿದ್ದೀರೇ, ಹಾಗಿದ್ದರೆ ಈ ವಿಚಾರಗಳನ್ನು ತಿಳಿದಿರಿ
ಹೊಟೇಲ್​
Follow us on

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ನಗರ, ಗ್ರಾಮಗಳಲ್ಲಿ ಹೊಟೇಲ್​ ಅನ್ನು ಕಾಣುತ್ತೇವೆ. ಅದು ಬೀದಿ ಬದಿಯ ಸಣ್ಣ ಹೋಟೆಲ್​ ಅಥವಾ ಪ್ರಮುಖ ರಸ್ತೆಯಲ್ಲಿನ ದೊಡ್ಡ ಹೋಟೆಲ್​ ಆಗಿರಬಹುದು. ಹೊಟೇಲ್​​ ಉದ್ಯಮ ಎಂದೆಂದಿಗೂ ಲಾಭದಾಯಕ ಕ್ಷೇತ್ರವಾಗಿದೆ ಎಂದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ, ಮೊದಲಿಗೆ ಚಿಕ್ಕದಾಗಿ ಹೊಟೇಲ್​​ ಆರಂಭಿಸಿ, ನಂತರದ ದಿನಗಳಲ್ಲಿ ಆದಾಯದ ತಕ್ಕಂತೆ ತಮ್ಮ ಕಾರ್ಯವ್ಯಪ್ತಿಯನ್ನು ವಿಸ್ತರಿಸುತ್ತಾ ಹೋಗುತ್ತಾರೆ.

ಮುಂಚಿನ ದಿನಗಳಲ್ಲಿ ಹೊಟೇಲ್​ ಉದ್ಯಮವೆಂದರೇ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮೀಸಲು ಎಂಬ ಮಾತು ಇತ್ತು. ಆದರೆ, ಈಗ ಎಲ್ಲ ಭಾಗದವರೂ ಹೊಟೇಲ್​​ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಟೇಲ್​​ ಉದ್ಯಮದಲ್ಲೂ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಹೊಸದಾಗಿ ಹೊಟೇಲ್​​ ಆರಂಭಿಸಬೇಕಿದ್ದರೇ  ಯಾವ ರೀತಿಯಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ? ಹೊಟೇಲ್​​ ಆರಂಭಿಸಿದ ನಂತರ ಏನೆಲ್ಲ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಎದುರಿಸುವುದು ಹೇಗೆ? ಸದ್ಯ ಯಾವೆಲ್ಲ ಸಮಸ್ಯೆಗಳಿವೆ ಎಂಬುವುದನ್ನು ಬೆಂಗಳೂರಿನ ವಿಜಯನಗರದ ನ್ಯೂ ಶಾಂತಿ ಸಾಗರ, ಕೃಷ್ಣ ವೈಭವ ಮತ್ತು ವಿವಿಧ ಪ್ರದೇಶಗಳಲ್ಲಿನ ಕೆಲ ಪ್ರಮುಖ ಹೊಟೇಲ್​​ ಮಾಲೀಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹೊಟೇಲ್​ನಲ್ಲಿ ವಿಧಗಳಿವೆ. ಕೇವಲ ಉಪಹಾರ ಮತ್ತು ಊಟ ನೀಡುವುದು, ಹೊಟೇಲ್​ ಜೊತೆಗೆ ಪಾರ್ಟಿ ಹಾಲ್​, ವಸತಿ ಸಹಿತ ಹೊಟೇಲ್​​ಗಳು, ಬೀದಿ ಬದಿಯ ಹೊಟೇಲ್​ಗಳು, ಕೇವಲ ಸ್ನಾಕ್ಸ್​​ ಮಾರುವ ಹೊಟೇಲ್​ಗಳು ಇವೆ. ನಿಮ್ಮ ಹಣಕಾಸಿನ ಸ್ಥಿತಿ ತಕ್ಕಂತೆ ನಿಮ್ಮ ಹೊಟೇಲ್ ಇರುತ್ತದೆ. ​

ಸ್ಥಳ ಮತ್ತು ಆಹಾರ ಪದ್ಧತಿ

ಯಾವುದೇ ಹೊಟೇಲ್​ ಆರಂಭಿಸುವ ಮುನ್ನ ಸ್ಥಳ ಬಹಳ ಮುಖ್ಯವಾದದು. ಶಹರ, ಗ್ರಾಮೀಣ ಅಥವಾ ಪಟ್ಟಣದಲ್ಲಿ ಯಾವ ಏರಿಯಾ ಅಥವಾ ಓಣಿಯಲ್ಲಿ ಹೊಟೇಲ್​ ತೆರದರೆ ಸೂಕ್ತ ಎಂಬುವುದು ಮೊದಲಿಗೆ ಅರಿತುಕೊಳ್ಳಬೇಕು. ಹೊಟೇಲ್​ ಆರಂಭಿಸುವ ಸ್ಥಳದಲ್ಲಿನ ಜನರು ಹೆಚ್ಚಾಗಿ ಯಾವ ತರಹದ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ ಎಂಬುವುದು ಬಹಳ ಮುಖ್ಯವಾಗಿದೆ. ಉದಾ: ನೀವು ಹೊಟೇಲ್​ ತೆರೆಯುವ ಪ್ರದೇಶದಲ್ಲಿ ಹೆಚ್ಚಾಗಿ ಸಸ್ಯಾಹಾರಿಗಳಿದ್ದರೆ ನೀವು ಸಸ್ಯಾಹಾರಿ ಹೊಟೇಲ್​ ತೆರೆಯುವುದು ಉತ್ತಮ.
ಮಾಲೀಕನಲ್ಲಿ ಮೊದಲಿಗೆ ತಾನು ಆರಂಭಿಸಲು ಹೊರಟಿರುವ ಹೊಟೇಲ್​ ಯಾವುದಾಗಿರಬೇಕೆಂದು ಸ್ಪಷ್ಟ ಚಿತ್ರಣ ಇರಬೇಕು. ತಾನು ಅಂದುಕೊಂಡಿರುವ ಹೊಟೇಲ್ ಯಾವ ನಗರದಲ್ಲಿ ತರೆದರೆ ಸೂಕ್ತ ಎಂಬುವುದನ್ನು ಅರಿತುಕೊಳ್ಳಬೇಕು. ಸಸ್ಯಾಹಾರಿಗಳೇ ಹೆಚ್ಚಾಗಿರುವ ನಗರದಲ್ಲಿ ಮಾಂಸಾಹಾರಿ ಹೊಟೇಲ್​​ ತೆರೆದರೆ ವ್ಯಾಪಾರ ಕಡಿಮೆಯಾಗಬಹುದು. ಹೊಟೇಲ್​ಗಳೇ ಹೆಚ್ಚಾಗಿರುವ ಪ್ರದೇಶದಲ್ಲಿ ನೀವೂ ಹೊಟೇಲ್​ ಆರಂಭಿಸಲು ಹೊರಟಿದಿದ್ದೀರಿ ಎಂದರೇ ತೊಂದರೆ ಇಲ್ಲ, ಆದರೆ ನೀವು ಎಲ್ಲರಿಗಿಂತ ಯಾವ ರೀತಿ ಭಿನ್ನವಾಗಿ ಗ್ರಾಹಕರಿಗೆ ಆಹಾರ ನೀಡುತ್ತೀರಿ ಎಂಬುವುದು ಮುಖ್ಯವಾಗುತ್ತದೆ. ಅಂದರೆ, ಕ್ವಾಲಿಟಿ ಮತ್ತು ಕ್ವಾಂಟಿಟಿ ಬಹಳ ಮುಖ್ಯವಾಗುತ್ತದೆ.

ಹೊಟೇಲ್​ ಹೇಗಿರಬೇಕು?

ನಿಮ್ಮ ಹಣಕಾಸಿನ ಆಧಾರದ ಮೇಲೆ ಹೊಟೇಲ್ ವಿಸ್ತೀರಣ ಮತ್ತು ಅಲಂಕಾರ ಅವಲಂಬಿತವಾಗಿರುತ್ತದೆ. ಇನ್ನು, ಆಯಾ ಸ್ಥಳದ ಅನುಗುಣವಾಗಿ ಹೊಟೇಲ್​ ಬಾಡಿಗೆ ಅವಲಂಬಿತವಾಗಿರುತ್ತದೆ. ಉದಾ: ಬೇರೆ ಊರುಗಳಿಗೆ ಹೋಲಿಕೆ ಮಾಡಿದರೇ ಬೆಂಗಳೂರಿನ ಬಹುತೇಕ ನಗರಗಳಲ್ಲಿ ಹೊಟೇಲ್​​ನ ಬಾಡಿಗೆ ಸ್ವಲ್ಪ ಮಟ್ಟಿಗೆ ಅಧಿಕವಾಗಿರುತ್ತದೆ. ಹೀಗಾಗಿ, ಆದಷ್ಟು ಕಡಿಮೆ ಬಾಡಿಗೆಯ ಕಟ್ಟಡದಲ್ಲಿ ಹೊಟೇಲ್​​ ತೆರೆಯುವುದು ಉತ್ತಮ.

ಶಾಂತಿ ಸಾಗರ ಹೊಟೇಲ್​​

ಅಡುಗೆ ಮನೆ ಮತ್ತು ಕೆಲಸಗಾರರು

ಹೊಟೇಲ್​ನಲ್ಲಿನ ಅಡುಗೆ ಮನೆ ಬಹಳ ಶುಚಿಯಾಗಿರಬೇಕು. ಅಡುಗೆ ಮನೆಯ ಯಾವ ರೀತಿ ಇರಬೇಕೆಂದು ಮೊದಲೇ ನಿರ್ಧರಿಸಬೇಕು. ಅಡುಗೆ ಮನೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೈಸ್​ ಆಗಲೇಬಾರದು. ನೀವು ಎಷ್ಟು ಶುಚಿಯಾಗಿ ಅಡುಗೆ ಮಾಡುತ್ತೀರಿ ನಿಮ್ಮ ವ್ಯಾಪಾರ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನು, ಇತ್ತೀಚಿನ ದಿನಗಳಲ್ಲಿ ಅಡುಗೆ ಭಟ್ಟರದ್ದೇ ದೊಡ್ಡ ತಲೆ ನೋವಾಗಿದೆ. ಏಕೆಂದರೆ, ಹೊಟೇಲ್​ಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅಡುಗೆ ಭಟ್ಟರಿಗೆ ಡಿಮ್ಯಾಂಡ್​ ಹೆಚ್ಚಿದೆ. ಅವರನ್ನು ಹಿಡಿಯುವುದೇ ಕಷ್ಟವಾಗಿದೆ.
ಅನುಭವಿ ಅಡುಗೆ ಭಟ್ಟರಿಗೆ ಹೆಚ್ಚಿನ ಬೇಡಿಕೆ ಇದೆ. ಅವರ ಮಾಸಿಕ ವೇತನವೂ ಅಧಿಕವಾಗಿದೆ. ಕ್ವಾಲಿಟಿ ಆಹಾರ ನೀಡಬೇಕೆಂದರೆ ಅನುಭವಿ ಭಟ್ಟರು ಬೇಕೆ ಬೇಕು. ಹೀಗಾಗಿ, ಅನುಭವಿ ಅಡುಗೆ ಭಟ್ಟರಿಗೆ ಹೆಚ್ಚು ವೇತನ ನೀಡಿ ಕರೆತರಬೇಕಾದ ಅನಿವಾರ್ಯತೆ ಇದೆ. ನೀವು ಎಷ್ಟೇ ಉತ್ತಮವಾದ ಪದಾರ್ಥಗಳನ್ನು ತಂದು ಕೊಟ್ಟರೂ, ಸರಿಯಾಗಿ ಅಡುಗೆ ಮಾಡದಿದ್ದರೆ ಏನು ಪ್ರಯೋಜನ? ಹೀಗಾಗಿ, ಅನುಭವಿ ಅಡುಗೆ ಭಟ್ಟರು ಪ್ರತಿಯೊಂದು ಹೊಟೇಲ್​ನಲ್ಲಿ ಇರಲೇಬೇಕು.

ಇನ್ನು, ಹೊಟೇಲ್​ ಮಾಲೀಕನು ಕೂಡ ಅಡುಗೆ ಮಾಡುವುದುನ್ನು ಕಲಿತಿದ್ದರೆ ಉತ್ತಮ. ಅನುಭವಿ ಅಡುಗೆ ಭಟ್ಟರಿದ್ದರೆ, ಆಹಾರ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ.

ದರಗಳ ನಿಗದಿ ಹೇಗೆ?

ಆಹಾರಕ್ಕೆ ದರ ನಿಗದಿ ನೀವು ಕೊಡುವ ಕ್ವಾಲಿಟಿ ಮೇಲೆ ಅವಲಂಬಿತವಾಗಿರುತ್ತದೆ. ಬ್ಯ್ರಾಂಡೆಡ್​ ಅಡುಗೆ ದಿನಸಿ ಸಾಮಾಗ್ರಿಗಳನ್ನು ಮತ್ತು ಫ್ರೆಶ್​​ ತರಕಾರಿಗಳನ್ನು ಉಪಯೋಗಿಸಿ, ನೀವು ಗ್ರಾಹಕರಿಗೆ ರುಚಿಯಾದ ಆಹಾರ ನೀಡಿದರೆ ಸಹಜವಾಗಿ ಆಹಾರದ ದರ ಜಾಸ್ತಿ ಇರುತ್ತದೆ. ಬ್ರ್ಯಾಂಡೆಡ್ ಪದಾರ್ಥಗಳನ್ನು ಉಪಯೋಗಿಸುವುದರಿಂದ ಸಹಜವಾಗಿ ಆಹಾರದ ದರವನ್ನು ಹೆಚ್ಚಿಗೆ ಮಾಡಲೇಬೇಕಾಗುತ್ತದೆ. ಆಗ, ಕಡಿಮೆ ಬೆಲೆಗೆ ನೀಡಲು ಆಗಲ್ಲ. ಒಂದು ವೇಳೆ ಕಡಿಮೆ ಬೆಲೆಗೆ ನೀಡಿದರೇ ನಮಗೆ ನಷ್ಟವಾಗುತ್ತದೆ. ಇದಲ್ಲದೇ, ಕಟ್ಟಡ ಬಾಡಿಗೆ, ನೀರಿನ, ವಿದ್ಯುತ್​​, ತೆರಿಗೆ ಮತ್ತು ಕೆಲಸಗಾರರಿಗೆ ವೇತನ ಇವೆಲ್ಲವನ್ನು ಗಮನದಲ್ಲಿಟ್ಟು ದರ ನಿರ್ಧಾರ ಮಾಡಬೇಕಾಗುತ್ತದೆ.

ಅನುಮತಿಗಳು ಏನು ಬೇಕು?

ಆಯಾ ನಗರ ಪಾಲಿಕೆ ಅನುಮತಿ ಕಡ್ಡಾಯವಾಗಿ ಬೇಕು. ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆಯಬೇಕು. ಹೊಟೇಲ್​ಗೆ 25 ಲಕ್ಷ ರೂ.ಗಿಂತ ಅಧಿಕವಾಗಿ ಹೂಡಿಕೆ ಮಾಡುತ್ತಿದ್ದರೆ ಕಡ್ಡಾಯವಾಗಿ ನೀವು ಎಫ್​ಎಸ್​ಎಸ್​ಎಐ ಅನುಮತಿ ಪಡೆಯಲೇಬೇಕು. ಇದಕ್ಕಿಂತ ಕಡಿಮೆ ಹೂಡಿಕೆ ಇದ್ದರೆ ಅನುಮತಿ ಅವಶ್ಯವಿಲ್ಲ ಅಂತಾರೆ. ಆದರೆ, ಸಣ್ಣ ಹೊಟೇಲ್​ ಆದರೂ ಎಫ್​ಎಸ್​ಎಸ್​ಎಐ ಅನುಮತಿ ಪಡೆದರೆ ಬಹಳ ಉತ್ತಮ. ಭವಿಷ್ಯದ ದಿನಗಳಲ್ಲಿ ಉಪಯೋಗವಾಗುತ್ತದೆ. ಎಫ್​​ಎಸ್​ಎಸ್​​​ಎಐ ನೀಡಿದ ಲೈಸನ್ಸ್​​ ಅನ್ನು ಪ್ರತಿ ವರ್ಷ ಅಥವಾ ಐದು ವರ್ಷಕ್ಕೊಮ್ಮೆ ರಿನಿವಲ್​ ಮಾಡಬೇಕು. ಪ್ರತಿ ರಿನಿವಲ್​ ಸಮಯದಲ್ಲೂ ಸರ್ವಿಸ್​ ಚಾರ್ಜ್​​ ನೀವು ತುಂಬಬೇಕು. ಹಾಗೇ, ಒಂದು ವೇಳೆ ನೀವು ಹೊಟೇಲ್​​ ಜೊತೆಗೆ ಪಾರ್ಟಿ ಹಾಲ್​ ಅಥವಾ ರೆಸ್ಟೋರೆಂಟ್​ ಮಾಡುತ್ತಿದ್ದರೆ ಎಸ್ಕಾಂ ಅನುಮತಿ ಪಡೆಯಬೇಕು.

ಸಾಮಾನ್ಯವಾಗಿ ಕಟ್ಟಡದ ಮಾಲೀಕರೇ ವಿದ್ಯುತ್​ ಪೂರೈಕೆ ಮಾಡುತ್ತಾರೆ. ಅವರು ಪೂರೈಕೆ ಮಾಡಿದ್ದಕ್ಕಿಂತಲೂ ಹೆಚ್ಚು ವಿದ್ಯುತ್​ ಉಯೋಗಿಸುತ್ತೀರಿ ಎಂದರೇ, ಅನುಮತಿ ಪಡೆಯಲೇಬೇಕು. ಎಷ್ಟು ಕಿಲೋವ್ಯಾಟ್​ ಉಪಯೋಗಿಸುತ್ತೀರಿ ಎಂದು ಎಸ್ಕಾಂಗೆ ತಿಳಿಸಿ ಹಣ ಡಿಪಾಸಿಟ್​ ಮಾಡಿ, ಅನುಮತಿ ಪಡೆಯಬೇಕು. ಇನ್ನು, ಜನಬಿಡ ಪ್ರದೇಶದಲ್ಲಿ ದೊಡ್ಡ ಹೊಟೇಲ್​ ತೆರೆಯುತ್ತಿದ್ದರೆ ಪಾರ್ಕಿಂಗ್​ಗಾಗಿ ಸ್ಥಳ ಇದ್ದರೆ ಉತ್ತಮ. ಬೆಂಗಳೂರಿನಂತಹ ಊರುಗಳಲ್ಲಿ ದೊಡ್ಡ ದೊಡ್ಡ ಹೊಟೇಲ್​, ರೆಸ್ಟೋರೆಂಟ್​ಗಳಲ್ಲಿ ಪಾರ್ಕಿಂಗ್​ಗಾಗಿ ಜಾಗ ಇದ್ದರೆ, ಗ್ರಾಹಕರಿಗೆ ಒಳ್ಳೆಯದಾಗುತ್ತದೆ. ನಿಮ್ಮ ಹೊಟೇಲ್​ಗೆ ಬಂದ ಗ್ರಾಹಕ ನಿಶ್ಚಿಂತೆಯಾಗಿ ವಾಹನ ಪಾರ್ಕ್​ ಮಾಡಿ ಬರುತ್ತಾರೆ.

ದರ ಏರಿಕೆ ಹೇಗೆ ಆಗುತ್ತದೆ?

ಇತ್ತೀಚಿನ ದಿನಗಳಲ್ಲಿ ಹೊಟೇಲ್​ ಉದ್ಯಮದಲ್ಲೂ ಸ್ಪರ್ಧೆ ಹೆಚ್ಚಾಗಿರುವುದರಿಂದ ಗ್ರಾಹಕರನ್ನು ಆಕರ್ಶಿಸುವ ನಿಟ್ಟಿನಲ್ಲಿ ಒಂದು ಹೊಟೇಲ್​ನಿಂದ ಮತ್ತೊಂದು ಹೊಟೇಲ್​ಗೆ ದರದಲ್ಲಿ ವ್ಯಾತ್ಯಾಸವಾಗುತ್ತದೆ. ಸಾಮಾನ್ಯವಾಗಿ ಆಹಾರದ ದರ ಏರಿಕೆ, ದಿನನಿತ್ಯ ಬಳಸುವ ಪದಾರ್ಥಗಳ ಮೇಲೆ ಅವಲಂಬಿತವಾಗುತ್ತದೆ. ಹಾಗಂತ, ತರಕಾರಿ ಮತ್ತು ದಿನಸಿ ಸಾಮಾಗ್ರಿಗಳಲ್ಲಿ ಬೆಲೆ ಏರಿಕೆಯಾಗಿದೆ, ದಿಢೀರ್​ ಅಂತ ಆಹಾರದ ಬೆಲೆಯನ್ನೂ ಏರಿಕೆ ಮಾಡಲು ಆಗಲ್ಲ. ಕೆಲ ದಿನಗಳು ಕಾಯುತ್ತೇವೆ, ತರಕಾರಿ ಮತ್ತು ದಿನಸಿ ಸಾಮಾಗ್ರಿಗಳ ಬೆಲೆ ಏರಿಳಿತವಾಗುತ್ತಿದ್ದರೆ, ಆಹಾರದ ಬೆಲೆ ಒಂದೇ ಇರುತ್ತದೆ. ಏರಿಳಿತ ಮಾಡಲ್ಲ. ಆದರೆ, ಕೆಲವೊಂದು ಸಾರಿ ಅನಿವಾರ್ಯವಾಗಿ ಏರಿಕೆ ಮಾಡಲೇಬೇಕಾಗುತ್ತದೆ.

ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಏಕೆಂದರೆ ಗ್ಯಾಸ್​ ಸಿಲಿಂಡರ್​ ಅನ್ನು ವಾರ, 15 ಅಥವಾ ತಿಂಗಳಿಗೊಮ್ಮೆ ಕೊಂಡುಕೊಳ್ಳುವುದರಿಂದ ದರ ಏರಿಕೆ ಬಿಸಿ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂಬುವುದು ನ್ಯೂ ಶಾಂತಿಸಾಗರ ಹೊಟೇಲ್​ನವರ ಅಭಿಪ್ರಾಯಾವಾಗಿದೆ. ಆದರೆ, ಕೃಷ್ಣ ವೈಭವ ಹೊಟೇಲ್​ ಮಾಲೀಕರ ಅಭಿಪ್ರಾಯ ಬೇರೆಯಾಗಿದ್ದು, ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆ ಕೂಡ ಪರಿಣಾಮಕಾರಿಯಾಗಿದೆ. ಆದರೆ, ದಿನನಿತ್ಯ ಬಳಸುವ ಪದಾರ್ಥಗಳ ಬೆಲೆ ಏರಿಕೆಯೇ ನಮಗೆ ಹೆಚ್ಚು ಹೊಡೆತ ಬೀಳುತ್ತದೆ ಎಂಬುವುದು ಎರಡೂ ಹೊಟೇಲ್​ನವರ ಅಭಿಪ್ರಾಯವಾಗಿದೆ.

ಇನ್ನು, ಹೊಟೇಲ್​ ಉದ್ಯಮ ಲಾಭದಾಯಕದ್ದೇ, ಆದರೆ, ಯಾವ ರೀತಿಯಾಗಿ ನಡೆಸಿಕೊಂಡು ಹೋಗುತ್ತೇವೆ ಮತ್ತು ಗ್ರಾಹಕರನ್ನು ಯಾವ ರೀತಿಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂಬುವುದು ಮುಖ್ಯವಾಗಿರುತ್ತದೆ.