ಎಸ್.ಡಿ.ಎಮ್ ಸಮಾಜಕಾರ್ಯದ ಮೊದಲ ವರ್ಷದ ವಿದ್ಯಾರ್ಥಿಗಳ ಅಧ್ಯಯನ ಶಿಬಿರ ಮುಂಡಗೋಡಿನಲ್ಲಿ ನಿಗದಿಯಾಗಿತ್ತು. ಕಲಿಕೆಯ ಜೊತೆ ಹೊಸ ಅನುಭವಗಳಿಗೆ ಕಾತುರದೊಂದಿಗೆ ನಮ್ಮ ಪ್ರಯಾಣ ಶುರುವಾಯಿತು. ಹಾಡು ಹರಟೆ ಸದ್ದು ಗದ್ದಲ. ಎಲ್ಲರಲ್ಲೂ ಉತ್ಸಾಹ..ಹುಮ್ಮಸ್ಸು.. ಮರವಂತೆ..ಘಾಟ್.. ಸುಂದರ ಪರಿಸರದ ನಡುವೆ ನಾವು ಮುಂಡಗೋಡು ತಲುಪಿದ್ದೇ ಅರಿವಾಗಲಿಲ್ಲ.. ಲೊಯೋಲ ವಿಕಾಸ ಕೇಂದ್ರ ನಮ್ಮನ್ನು ಬರಮಾಡಿಕೊಂಡು ಉಟೋಪಚಾರ ವ್ಯವಸ್ಥೆಯೊಂದಿಗೆ ಸತ್ಕರಿಸಿತು. ಮರುದಿನ ಎರಡು ದಿನಗಳ ಗ್ರಾಮ ವಾಸ್ತವ್ಯ ..ವಿದ್ಯಾರ್ಥಿಗಳೆಲ್ಲರನ್ನು ಪ್ರತ್ಯೇಕ ಗುಂಪುಗಳನ್ನಾಗಿ ಮಾಡಿ ಗ್ರಾಮಗಳಿಗೆ ಕಳುಹಿಸಲಾಯಿತು.. ನನ್ನ ಅಧ್ಯಯನ ಗ್ರಾಮ ಹಳೆಕರಗಿನಕೊಪ್ಪ. ಹಳೆಕರಗಿನಕೊಪ್ಪದ ಪರಿಸರ ಹೊಸ ಅನುಭವಗಳಿಗೆ ನಮ್ಮನ್ನು ಸ್ವಾಗತಿಸಿತು. ಪುಟ್ಟ ಸಂಸಾರದ ಮನೆಯೊಂದರಲ್ಲಿ ನಮ್ಮ ವಾಸ. ಅಪ್ಪಟ ಲಂಬಾಣಿ ಸಂಪ್ರದಾಯದ ಮನೆ.
ಅವರ ಭಾಷೆ, ಸಂಪ್ರದಾಯ, ಉಟೋಪಚಾರ ಎಲ್ಲವೂ ವಿಭಿನ್ನ. ತಮ್ಮ ಸ್ವಂತ ಮಕ್ಕಳಂತೆ ಹೊಟ್ಟೆ ತುಂಬಾ ಊಟ ಮನಸು ತುಂಬಾ ಪ್ರೀತಿ ವಾತ್ಸಲ್ಯ ತುಂಬಿದರು. ಅವರ ಜೀವನಶೈಲಿ, ವ್ಯವಸಾಯ, ರೀತಿ ರಿವಾಜು ಎಲ್ಲವನ್ನೂ ನಮಗೆ ಪರಿಚಯಿಸಿದರು. ಎಲ್ಲೋ ದೂರದ ಮುಂಡಗೋಡಿನಲ್ಲಿ ನಾವಿದ್ದರೂ ನಮ್ಮವರ ಜೊತೆಯೇ ಬೆರೆತ ಅನುಭವ. ನಮ್ಮ ವಾಸ್ತವ್ಯದ ಎರಡನೆಯ ದಿನ ಗ್ರಾಮ ಸಭೆ ಹಮ್ಮಿಕೊಂಡಿದ್ದೆವು. ಹಳೆಕರಗಿನಕೊಪ್ಪದ ಹಳೆಬೇರುಗಳು ಅರ್ಥಾತ್ ಹಿರಿತಲೆಗಳು ಹೊಸಪೀಳಿಗೆ ಎಲ್ಲರೂ ಸೇರಿಕೊಂಡರು. ಅವರ ಗ್ರಾಮದ ಏಳಿಗೆಗಾಗಿ ಏನೆಲ್ಲಾ ವ್ಯ ವಸ್ಥೆಗಳು ಆಗಬೇಕೆಂದು ಹಂಚಿಕೊಂಡರು.
ಇದನ್ನೂ ಓದಿ: ಬಸ್ಸಿನಲ್ಲಿ ವಿದ್ಯಾರ್ಥಿನಿ, ಮಹಿಳೆಯರಿಗೆ ಎಷ್ಟು ಸುರಕ್ಷಿತ? ಪುಂಡರ ಅಸಭ್ಯ ವರ್ತನೆಗೆ ಯಾಕಿಲ್ಲ ಕಡಿವಾಣ?
ನಮ್ಮ ಗ್ರಾಮವಾಸ್ತವ್ಯಯ ಕೊನೆಯ ದಿನ ..ನಮ್ಮವರನ್ನು ಬಿಟ್ಟು ಹೋಗುತ್ತೇವೆಂಬ ಬಾರದ ಮನಸ್ಸು.. ಎರಡು ದಿನಗಳಲ್ಲಿ ಹಳೆಕರಗಿನಕೊಪ್ಪದ ಜನರೊಂದಿಗೆ ಬೆಳೆಸಿದ ಬಾಂಧವ್ಯ ಅನನ್ಯ. ನೂರಾರು ಸವಿನೆನಪುಗಳೊಂದಿಗೆ ನಮ್ಮ ಅಧ್ಯಯನ ಶಿಬಿರವನ್ನು ಮುಗಿಸಿ ಹೊನ್ನಾವರದ ಪ್ರಕೃತಿ ಸೌಂದರ್ಯವನ್ನು ಅನುಭವಿಸಿ ನಮ್ಮೂರಿನತ್ತ ಹೆಜ್ಜೆ ಬೆಳೆಸಿದೆವು. ನಾಲ್ಕೈದು ದಿನದ ಶಿಬಿರ ಸಾವಿರಾರು ಅನುಭವ, ಪರಿಪಾಠವನ್ನು ಕಲಿಸಿತು. ಯಾವುದೇ ಸಂದರ್ಭ ಬಂದರೂ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಸವಾಲನ್ನು ಎದುರಿಸಿ ಬದುಕುವ ತತ್ವವನ್ನು ಮುಂಡಗೋಡು ತಿಳಿಸಿತು. ನೆನಪುಗಳ ಚೀಲದಲ್ಲಿ ಮುಂಡಗೋಡಿನ ಮಜಲುಗಳು ಎಂದೂ ಮರೆಯಲಾಗದು.
ಲೇಖನ: ವೈಷ್ಣವೀ.ಜೆ.ರಾವ್