ಸ್ಕೂಟರ್ವೊಂದನ್ನು ಖರೀದಿ ಮಾಡಬೇಕು ಅನ್ನೋ ನನ್ನ ಕನಸು ಅಂತೂ ದಶಮಿ ದಿನ (2021ರ ಅಕ್ಟೋಬರ್ 15) ನನಸಾಗಿತ್ತು. ಒಂದು ವಾರದ ಮೊದಲು ನಾನು ಅಣ್ಣನ ಜತೆ ಶೋರೂಂಗೆ ಹೋಗಿ ಸ್ಕೂಟರ್ ನೋಡಿ, ಕೊನೆಗೂ ಹೊಂಡಾ ಆ್ಯಕ್ಟಿವಾ 125 ಸಿಸಿ ಒಕೆ ಮಾಡಿ, ದಶಮಿ ಒಳ್ಳೆಯ ದಿನ..ಅವತ್ತೇ ಬೇಕು ಅಂತ ಹೇಳಿ ಬಂದಾಗಿತ್ತು. ಹಾಗೇ, ದಶಮಿ ದಿನ ಮಧ್ಯಾಹ್ನ ಅಪ್ಪ-ಅಣ್ಣನ ಜತೆ ಹೋಗಿ ಸ್ಕೂಟರ್ ಕೀ ತಗೋಂಡಾಗ ಎಂತಾ ಖುಷಿ ಅಂತೀರಿ..! ಆಗಿಂದಾಗ್ಲೇ ಫೋಟೋ ತೆಗೆಸ್ಕೊಂಡು ವಾಟ್ಸ್ಆ್ಯಪ್ ಸ್ಟೇಟಸ್, ಫೇಸ್ಬುಕ್ ಸ್ಟೋರಿಗೆಲ್ಲ ಹಾಕಿ, ಲೈಕ್ಸು-ಲವ್ ಮಾರ್ಕ್ ತಗೋಂಡಾಯ್ತು. ಆಮೇಲೆ, ಪೂಜೆ ಎಲ್ಲ ಮಾಡಿಸ್ಕೊಂಡು ಮನೆಗೆ ಬಂದಿದ್ದೂ ಆಯ್ತು..
ಇಲ್ಲಿಂದ ಶುರುವಾಯ್ತು ನೋಡಿ ನನ್ನ ಸ್ಕೂಟರ್ ಟ್ರಾವೆಲ್. ಆದ್ರೆ ಈ ಸ್ಕೂಟರ್ ಟ್ರಾವೆಲ್ ಬಗ್ಗೆ ಹೇಳೋಕೂ ಮೊದಲು ಅದನ್ನ ತಗೋಂಡಿದ್ದು ಹಿನ್ನೆಲೆ ಚೂರು ಹೇಳಿಬಿಡ್ತೇನೆ. ನನಗೆ ಸ್ಕೂಟಿ ಓಡಿಸ್ಬೇಕು ಅಂತ ಕನಸಿದ್ರೂ ತೀರಾ 7 ತಿಂಗಳ ಹಿಂದಿನವರೆಗೂ ನನಗೇನೂ ಓಡಿಸೋಕೆ ಬರ್ತಿರಲಿಲ್ಲ. ಕಲಿಯೋ ಪ್ರಯತ್ನ ಕೂಡ ಮಾಡಿರಲಿಲ್ಲ. ಬೆಂಗಳೂರಲ್ಲಿ ಮನೆ ಮಾಡಿದ್ದ ನನಗೆ ಮೊದಲು ಕೆಲಸ ಮಾಡ್ತಿದ್ದ ಆಫೀಸ್ ತುಂಬ ಹತ್ರ ಇದ್ದಿದ್ದರಿಂದ ಅದರ ಅನಿವಾರ್ಯತೆನೂ ಕಾಡಿರಲಿಲ್ಲ. ಆದರೆ 2020ರ ನವೆಂಬರ್ನಲ್ಲಿ ನನ್ನ ಆಫೀಸ್ ಬದಲಾಯ್ತು ನೋಡಿ. ಆಗ ಅನುಭವಕ್ಕೆ ಬರೋಕೆ ಶುರುವಾಯ್ತು ಬೆಂಗಳೂರು ಓಡಾಟದ ಬಿಸಿ. ಎರಡು ಬಸ್ ಚೇಂಜ್ ಮಾಡೋದು, ಇಲ್ಲ ಆಟೋಕ್ಕೆ ದುಡ್ಡು ಸುರಿಯೋದಕ್ಕಿಂತ ಒಂದು ಸ್ಕೂಟರ್ ಇಟ್ಕೋಳೋದು ಸರಿ ಅನ್ಸೋಕೆ ನನಗೆ ಶುರುವಾಗಿತ್ತು. ಅಂದ್ರೆ..ಕಾಲೇಜು ದಿನಗಳಿಂದ ಪಟ್ಟಿದ್ದ ಆಸೆಗೆ ಮತ್ತೊಮ್ಮೆ ಗರಿಬರಲು ತೊಡಗಿತ್ತು. ಅದಕ್ಕೆ ಸರಿಯಾಗಿ ನನ್ನ ಅಪ್ಪ ಕೂಡ ನೀರೆರೆದರು. ಹೀಗೆ ಪ್ರತಿದಿನ ಗುದ್ದಾಡೋದು ಬೇಡ, ಏನಾದ್ರೂ ಆಗಲಿ ಒಂದು ಗಾಡಿ ತಗೋಂಡುಬಿಡು ಅಂದರು.
ನಂತರ ವರ್ಕ್ ಫ್ರಂ ಹೋಂ ಶುರುವಾಗಿ ಸ್ಕೂಟರ್ ಕಲಿಯೋಕೂ ಅವಕಾಶ ಸಿಕ್ತು. ಅಪ್ಪನೇ ಖುದ್ದಾಗಿ ನಿಂತು ಮಾರ್ಗದರ್ಶನನೂ ಮಾಡಿದರು. ಇಷ್ಟೆಲ್ಲ ಆಗಿದ್ದು 2021ರ ಏಪ್ರಿಲ್ನಿಂದ ಜೂನ್ವರೆಗೆ. ಊರಲ್ಲೇ ಇದ್ದಿದ್ದರಿಂದ ದಿನಾ ಸಂಜೆ ಆಫೀಸ್ ಕೆಲಸ ಮುಗಿದಕೂಡಲೇ ಒಂದು ರೌಂಡು ದೊಡ್ಡಪ್ಪನ ಸ್ಕೂಟರ್ ತಗೋಂಡು ಹೋಗೋದು, ಪ್ರ್ಯಾಕ್ಟೀಸ್ ಮಾಡೋದು ಮಾಡ್ತಿದ್ದೆ. ಆದರೆ ಜುಲೈನಿಂದ ಮಳೆಯೂ ಜಾಸ್ತಿ ಆಗಿದ್ದಕ್ಕೆ ಅದೂ ನಿಂತೋಯ್ತು. ಮತ್ತೆ ಸೆಪ್ಟೆಂಬರ್ ಕೊನೇಗೆ ಮಳೆ ಕಡಿಮೆ ಆದಾಗ ಸ್ಕೂಟಿ ಓಡ್ಸೋದು ಶುರುವಾಯ್ತು. ಅಂತೂ ಅಕ್ಟೋಬರ್ನಲ್ಲಿ ದಶಮಿ ಒಳ್ಳೇದಿನ, ಊರಲ್ಲೇ ಸ್ಕೂಟರ್ ತಗೋಂಡುಬಿಡದು. ಬೆಂಗಳೂರು ಆಫೀಸ್ಗೆ ಕರೆದ್ರೆ, ತಗೋಂಡು ಹೋಗಬಹುದು ಅಂತ ನಿರ್ಧಾರ ಮಾಡಿದೆ.
ಈಗ ಹೇಳ್ತೇನೆ ಸ್ಕೂಟರ್ ಟ್ರಾವೆಲ್: ಆಗ್ಲೇ ಹೇಳಿದಾಂಗೆ ಸ್ಕೂಟರ್ನಾ ಒಳ್ಳೇದಿನ ತಗೋಂಡೆ. ಅಲ್ಲೇ ಮನೆ ಹತ್ರನೇ ಓಡಿಸ್ಕೊಂಡು ಇದ್ದಿದ್ದು ಬಿಟ್ರೆ ದೂರೆಲ್ಲೂ ತಗೋಂಡು ಹೋಗ್ತಿರಲಿಲ್ಲ. ಹೆಚ್ಚಂದ್ರೆ ಮನೆಯಿಂದ ಆರೇಳು ಕಿಲೋಮೀಟರ್ ದೂರ. ಒಮ್ಮೆ ಅದಕ್ಕಿಂತ ಮುಂದೆ ಹೋಗಬೇಕು ಅಂದ್ರೆ ಅಣ್ಣನೇ ತಗೋಳ್ತಿದ್ದ. ನಾನು ಹಿಂದೆ ಕೂರ್ತಿದ್ದೆ. ಒಂದು ಕಾರಣ ನನಗೆ ಇನ್ನೂ ಸ್ವಲ್ಪ ಅಭ್ಯಾಸ ಆಗಲಿ ಅನ್ನೋದಾಗಿದ್ರೆ, ಇನ್ನೊಂದು ಕಾರಣ ಲೈಸೆನ್ಸ್ ಇರಲಿಲ್ಲ. ಎಲ್ಎಲ್ಆರ್ ಇದ್ರೂ ಪೇಟೆ ಒಳಗೆಲ್ಲ ಹೊಡೆಯೋದು ಬೇಡ ಅಂತ ಮೊದಲೇ ನಿರ್ಧಾರ ಆಗಿತ್ತು. ಮನೇಲೂ ಸ್ವಲ್ಪ ರಿಸ್ಟ್ರಿಕ್ಷನ್ ಇತ್ತು.
ಆದ್ರೂ ನನಗೆ ನವೆಂಬರ್ ಕೊನೇ ಹೊತ್ತಿಗೆ ಅಸಮಾಧಾನ ಶುರುವಾಯ್ತು. ಇನ್ನೆಷ್ಟು ದಿನ ಅಂತ ಹೀಗೆ ಊರುಸುತ್ತನೇ ಬೈಕ್ ಓಡಿಸ್ಕೊಂಡು ಇರಲಿ. ನನಗೆ ರೂಢಿ ಆಗೋದು ಬೇಡ್ವಾ? ಬೆಂಗಳೂರಲ್ಲಿ ಓಡಿಸ್ಬೇಕು ಅಂದ್ರೆ ಇಲ್ಲಿ ಪೇಟೆಲಿ ಅಭ್ಯಾಸ ಮಾಡಿಕೊಳ್ಳಲೇಬೇಕು ಅಂತ ಅದೂ-ಇದು ಹೇಳೋಕೆ ಶುರು ಮಾಡಿದೆ. ಅದು ಮನೆಲೂ ಹೌದು ಅಂತ ಅನ್ನಿಸ್ತು. ಹಾಗೇ ಒಂದಿನ ಅಪ್ಪ-ಅಮ್ಮಂಗೆ ಪೇಟೆಗೆ ಹೋಗೋದಿತ್ತು. ಆಗ ಅಪ್ಪ ಅವರ ಬೈಕ್ ತಗೋಂಡ್ರು. ನಾನು ನನ್ನ ಆ್ಯಕ್ಟಿವಾ ತಗೋಂಡೆ. ಮೊದಲ ಸಲ ಪೇಟೆಗೆ ನಾನೊಬ್ಬಳೇ ಸ್ಕೂಟರ್ ತಗೊಂಡು ಹೋಗೋದು ಬೇಡ. ತುಂಬ ವಾಹನಗಳು ಬರ್ತಿರ್ತವೆ ಅಂತ ಹೀಗೊಂದು ಪ್ಲ್ಯಾನ್ ಮಾಡಿ ಹೊರಟಿದ್ದೆವು. ಏನೇ ಆಗಲಿ ಬಹುದಿನಗಳಿಂದ ಸ್ಕೂಟರ್ನಾ ಪೇಟೆಗೆ ತಗೋಂಡು ಹೋಗಬೇಕು ಅನ್ನೋ ನನ್ನ ಆಸೆ ಈಡೇರಿತ್ತು. ಫುಲ್ ಖುಷಿಯಾಗಿ, ತುಂಬ ಆರಾಮಾಗಿ, ಏನೇನೂ ತೊಂದರೆ ಆಗದೆ ಹೋಗಿ ಬಂದಿದ್ದೂ ಆಯ್ತು.
ಪೇಶೆಂಟ್ ತರ ಆಯ್ತು ನನ್ನ ಸ್ಕೂಟರ್: ಇದು ನನ್ನನ್ನು ಅತ್ಯಂತ ಕೋಪ ಮತ್ತು ಮುಜುಗರಕ್ಕೀಡು ಮಾಡಿದ ವಿಚಾರ. ಒಂದಿನ ಸಂಜೆ ಆರು ಗಂಟೆ ಮೇಲೆ ನನ್ನ ಪ್ರೀತಿಯ ಆ್ಯಕ್ಟಿವಾ ತಗೋಂಡು ಸುಮಾರು ನಾಲ್ಕು ಕಿಮೀ ದೂರ ಹೋಗಿದ್ದೆ. ವಾಪಸ್ ಬರೋವಷ್ಟರಲ್ಲಿ ಫುಲ್ ಕತ್ತಲು. ಇನ್ನೇನು ಮನೆ ಒಂದು ಕಿಮೀ ಇದೆ ಅನ್ನೋಷ್ಟರಲ್ಲಿ ಸ್ಕೂಟರ್ ಬಂದ್ ಆಗಿತ್ತು. ಇದು ನನಗೆ ಹೊಸ ಅನುಭವ. ಸೆಲ್ಫ್ ಸ್ಟಾರ್ಟ್ ಮಾಡಿದ್ರೆ ಆಗಲಿಲ್ಲ. ಮತ್ತೊಂದು ಬಾರಿ ಮಾಡಿದಾಗ ಸ್ಟಾರ್ಟ್ ಆಯ್ತು. ಆದ್ರೆ ಅಲ್ಲಿಂದ ಮನೆಗೆ ಬರೋಷ್ಟರಲ್ಲಿ ಮೂರು ಬಾರಿ ಬಂದ್ ಆಗಿತ್ತು. ಅಂದ್ರೆ ನನ್ನ ಹೊಸ ಸ್ಕೂಟರ್ಲಿ ಏನೋ ಸಮಸ್ಯೆ ಪ್ರಾರಂಭ ಆಗಿತ್ತು.
ಮನೆಗೆ ಬರ್ತಿದ್ದಾಂಗೆ ಮೊದಲು ಅಣ್ಣನ ಕರೆದೆ. ಕರೆಯೋ ಸ್ಟೈಲ್ನಲ್ಲೇ ಅವನಿಗೆ ಗೊತ್ತಾಗಿತ್ತು ಒಂದೋ ನಾನು ಬಿದ್ದೆ ಇಲ್ಲ, ಗಾಡಿಗೇನೋ ಆಯ್ತು ಅಂತ. ಅದರಲ್ಲಿ ಅವನ ಎರಡನೇ ಊಹೆ ಸರಿಯಾಗಿತ್ತು. ಬಂದು ಅವನೊಮ್ಮೆ ಚೆಕ್ ಮಾಡಿದ. ಮತ್ತೊಂದು ರೌಂಡ್ ಹೋಗಿಬಂದ. ಆಗೆಲ್ಲ ನೆಟ್ಟಗೇ ಇತ್ತು ನನ್ನ ಬೈಕು. ಆದ್ರೂ ಅವನು, ಇದನ್ನು ಶೋರೂಮ್ಗೆ ತಗೋಂಡು ಹೋಗೋಣ ಅಂದ. ಆದ್ರೆ ಮರುದಿನ ಅನ್ನೋಷ್ಟರಲ್ಲಿ ಸ್ಕೂಟಿ ಕತೆ ಏನಾಗಿತ್ತು ಅಂದ್ರೆ, ಕಿಕ್ ಹೊಡೆದ್ರೂ ಚಾಲೂ ಆಗ್ದ ಸ್ಥಿತಿ ತಲುಪಿತ್ತು. ನಾನೋ ಕೆಂಡಾಮಂಡಲ. ಹೊಸ ಗಾಡಿ, ತಗೋಂಡು ಎರಡೂ ತಿಂಗಳೂ ಆಗಲಿಲ್ಲ. ಹಾಳಾಯ್ತಾ ಅಂತ ಕೂಗೋಕೆ ಶುರು ಮಾಡಿದೆ. ಶೋ ರೂಂಗೆ ಫೋನ್ ಮಾಡಿ ಸಿಡಿಮಿಡಿ ಅಂದೆ. ನನ್ನ ಕಾಟ ತಾಳೋಕಾಗ್ದೆ ಶೋರೂಮ್ನವರು ಪೇಟೆಯಿಂದ 20 ಕಿಮೀ ದೂರ ಇರೋ ನನ್ನ ಹಳ್ಳಿಗೆ ದೊಡ್ಡ ಗಾಡಿ ಕಳಿಸಿ, ಅದ್ರ ಮೇಲೆ ಸ್ಕೂಟರ್ ಕಟ್ಕೊಂಡು ಹೋದ್ರು. ಅವರು ಹೊರಡೋವಾಗ, ಗಾಡಿಗೆ ಒಂದೂ ಸ್ಕ್ರ್ಯಾಚ್ ಆಗೋ ಹಾಗಿಲ್ಲ ನೋಡಿ ಅಂತ ಖಡಕ್ ಆಗಿ ಹೇಳಿಬಿಟ್ಟಿದ್ದೆ. ಅದೇನೆ ಆಗಲಿ, ಸ್ಕೂಟರ್ನ ರಿಲೇ ಹೋಗಿತ್ತು ಅಂತ ಅದನ್ನು ಬೇರೆದು ಹಾಕಿ ಕೊಟ್ಟಿದ್ರು. ಹೊಸ ಗಾಡಿ ಅಂದ್ಮೇಲೆ ಹೀಗೆಲ್ಲ ಆಗೋದು ಕಾಮನ್ ಅಂತ ನಮ್ಮ ಮನೇಲಿ ನನ್ನ ಸಮಾಧಾನ ಮಾಡಿದ್ರು.
ರಕ್ತ ಸುರಿಯುತ್ತಿತ್ತು..ಕಾಲು ನೋಯುತ್ತಿತ್ತು-ಸ್ಕೂಟರ್ ಓಡ್ತಿತ್ತು : ಇದು ಮಾತ್ರ ನಿರೀಕ್ಷೆಗೂ ಸಿಲುಕದ ಕ್ಷಣವಾಗಿತ್ತು. ಗಾಡಿ ಹಾಳಾಗಿ ವಾಪಸ್ ಬಂದಮೇಲೆ ಆರಾಮಾಗಿ ಓಡಿಸ್ಕೊಂಡು ಇದ್ದೆ. ಈ ಮಧ್ಯೆ ಮನೇಲೆಲ್ಲ ಒಪ್ಪಿಸಿ, ಪೂಸಿ ಹೊಡೆದು ಒಬ್ಬಳೇ ಪೇಟೆಗೆ ಕೂಡ ಸ್ಕೂಟರ್ ತಗೋಂಡು ಹೋಗಿ ಬಂದಿದ್ದೆ. ಹಾಗಾಗಿ ಧೈರ್ಯ ಕೂಡ ಬಂದಿತ್ತು. ಈ ಧೈರ್ಯನೇ ಎಡವಟ್ಟು ಮಾಡ್ತು.
ಆ ದಿನ ಡಿಸೆಂಬರ್ 10. ಮರುದಿನ ನಮ್ಮ ಮನೆಯಲ್ಲಿ ಪಾರಾಯಣ ಪೂಜೆ ಇದ್ದುದರಿಂದ ಒಂದಷ್ಟು ಸಾಮಗ್ರಿ, ಹೂವು, ಹಣ್ಣುಗಳೆಲ್ಲ ಅಗತ್ಯವಿತ್ತು. ನನಗೂ ಪೇಟೆಗೆ ಹೋಗಿ ಅಭ್ಯಾಸ ಆಗಿದ್ದರಿಂದ, ಸರಿ ನಾನೇ ಹೋಗ್ತೇನೆ ಎಂದು ಹೇಳಿದ ಕೂಡಲೇ ಅಪ್ಪ-ಅಮ್ಮ-ಅಣ್ಣ ಎಲ್ಲ ಒಪ್ಪಿಕೊಂಡಿದ್ರು. ಆದ್ರೆ ನಿಧಾನ ಹೋಗಿ ಬಾ, ಹುಷಾರಾಗಿ ಹೋಗಿ ಬಾ ಅಂತ ಏಳೆಂಟು ಸಲ ಹೇಳಿ ಕಳಿಸಿದ್ರು. ಆಯ್ತು ಅಂತ ಹೇಳಿ ನಾನೂ ತುಂಬ ಕೇರ್ ಫುಲ್ ಆಗಿಯೇ ಬೆಳಗ್ಗೆ ಪೇಟೆಗೆ ಹೋಗಿದ್ದೆ. ಏನೇನು ಬೇಕೋ ಅದನ್ನೆಲ್ಲ ತಗೋಂಡು ಹೊರಡೋಷ್ಟರಲ್ಲಿ ಮಧ್ಯಾಹ್ನ 2 ಗಂಟೆ ಮೇಲಾಯಿತು, ತುಂಬ ಬಿಸಿಲು ಹೊತ್ತು ಬೇರೆ !
ಶಿರಸಿ ನೀಲೇಕಣಿ ದಾಟಿದ ಮೇಲೆ ಕುಮಟಾ ರಸ್ತೆ ನರಕ ತೋರಿಸುವಂತಾಗಿದೆ. ರಸ್ತೆ ಕಾಮಗಾರಿ ನೆಪದಲ್ಲಿ ಅಲ್ಲೆಲ್ಲ ಭಯಂಕರ ಹೊಂಡ-ಗುಂಡಿಗಳು ಉಂಟಾಗಿವೆ. ನನ್ನೂರು ಸಂಪಖಂಡ ಸಮೀಪ ಒಂದು ಹಳ್ಳಿಯಾಗಿದ್ದರಿಂದ ಹೆಗಡೆಕಟ್ಟಾ ಕ್ರಾಸ್ ಎಂಬಲ್ಲಿ ತಿರುಗಿ ಒಳದಾರಿಯಲ್ಲಿ ಬರಬಹುದು. ಕುಮಟಾ ರಸ್ತೆ ಬೇಡ ಎಂಬ ಕಾರಣಕ್ಕೆ ನಾನೂ ಹಾಗೇ ಮಾಡಿದೆ. ಹೆಗಡೆಕಟ್ಟಾ ಕ್ರಾಸ್ನಲ್ಲಿ ತಿರುಗಿ ಸುಮಾರು 20 ಕಿಮೀ ದೂರ ಸರಿಯಾಗಿಯೇ ಬಂದೆ. ಅಲ್ಲೆಲ್ಲ ಹೇಗೆ ಅಂದರೆ ಡಾಂಬರು ರೋಡು ಅಗಲ ಇರುವುದಿಲ್ಲ. ದೊಡ್ಡ ಲಾರಿಯೆಲ್ಲ ಬಂದರೆ ತುಂಬ ಕಷ್ಟ. ಹಾಗೇ ನಾನು ಶಿರಸಿ ಕಡೆಯಿಂದ ಮನೆಗೆ ಹೋಗುತ್ತಿದ್ದೆ. ಒಂದು ತಿರುವಿನಲ್ಲಿ ದೊಡ್ಡ ಲಾರಿಯೊಂದು ಸಿಕ್ಕಾಪಟೆ ಜೋರಾಗಿ ಬಂತು. ಆ ಚಾಲಕ ಒಂದು ಹಾರ್ನ್ ಕೂಡ ಮಾಡಲಿಲ್ಲ. ತೀರ ನನ್ನ ಹತ್ತಿರವೇ ಬಂದು ಅದು ಹೇಗೋ ತಿರಿಸಿಕೊಂಡು ನಡೆದ. ನನಗೆ ಮಾತ್ರ ಜೀವ ಬಾಯಿಗೆ ಬಂದಂತೆ ಆಗಿತ್ತು. ಆಗಲೇ ಕೈ-ಕಾಲು ಗಡಗಡ ನಡುಗತೊಡಗಿತ್ತು. ಅವನೆಷ್ಟು ಹತ್ತಿರ ಬಂದಿದ್ದ ಅಂದ್ರೆ, ಪುಣ್ಯಕ್ಕೆ ಅದು ಖಾಲಿ ಲಾರಿ ಆಗಿದ್ದರಿಂದ ಅವನಿಗೆ ಅಷ್ಟು ಸುಲಭಕ್ಕೆ ತಿರುಗಿಸಲು ಸಾಧ್ಯವಾಗಿತ್ತು.
ಅಷ್ಟಾದ ಮೇಲೆ ನನಗೆ ತುಂಬ ಭಯವಾಯಿತು. ಮನಸಲ್ಲೇ ತೀರ್ಮಾನ ಮಾಡಿದ್ದೆ ಎಲ್ಲಾದರೂ ಸರಿ ಬೈಕ್ ನಿಲ್ಲಿಸಿಕೊಂಡು ಕೆಲಕಾಲ ನಿಲ್ಲಬೇಕು. ನನ್ನ ಕೈಯಲ್ಲಿ ಗಾಡಿ ಹೊಡೆಯೋಕೆ ಸಾಧ್ಯವಾಗ್ತಿಲ್ಲ ಅಂತ ಮನಸು ಹೇಳ್ತಾನೇ ಇತ್ತು. ಆದ್ರೆ ಸದ್ಯ ನಾನಿದ್ದ ಜಾಗದಲ್ಲಿ ನನ್ನ ಸ್ಕೂಟರ್ ನಿಲ್ಲಿಸೋಕೆ ಸರಿಯಾದ ಜಾಗ ಇರಲಿಲ್ಲ. ಆಗಲೇ ಹೇಳಿದಂತೆ ಅದೆಲ್ಲ ಸಣ್ಣ ರಸ್ತೆ. ಅಕ್ಕಪಕ್ಕ ಅಗಳ. ಆದರೆ ಹೀಗೆ ಹೆದರಿಕೊಂಡು ತುಂಬ ದೂರ ಬರಲಾಗಲಿಲ್ಲ. ಅದೇನಾಯ್ತೋ ಗೊತ್ತಿಲ್ಲ ಕೈಯೆಲ್ಲ ನಡುಗಿ, ಮುಂದಿನ ಬ್ರೇಕ್ ಹಿಡಿದುಬಿಟ್ಟಿದ್ದೆ. ಗಾಡಿ ಇಳಿಜಾರಿನಲ್ಲಿ ಇದ್ದುದರಿಂದ ಸ್ವಲ್ಪ ಜೋರಾಗಿಯೇ ಇತ್ತು. ಒಂದು ಸ್ಟೆಪ್ ಹಾರಿ, ಬಲಕ್ಕೆ ವಾಲಿ ಬಿದ್ದಿತ್ತು. ನನ್ನ ಮೈಮೇಲೆ ಬೈಕ್ ಬಿದ್ದು, ಕಾಲು ಅಡಿಗೆ ಆಗಿತ್ತು. ಬಲಗಾಲು, ಬಲ ಗೈ ಜಖಂ ಆಗಿತ್ತು. ಅಡ್ಡಬಂದ ಲಾರಿಯವ ಹೊರಟುಹೋಗಿದ್ದ, ನಾನಿಲ್ಲಿ ಧೊಪ್ಪನೆ ಬಿದ್ದು ಏಟು ಮಾಡಿಕೊಂಡಿದ್ದೆ. ಕೈಗಿಂತಲೂ ಕಾಲು ಜಾಸ್ತಿಯೇ ಎನ್ನಿಸುವಷ್ಟು ಗಾಯವಾಗಿ ರಕ್ತ ಸುರಿಯುತ್ತಿತ್ತು. ನನ್ನ ಹಿಂದೆಯೇ ಸ್ಕೂಟರ್ನಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತ ಅಕ್ಕಂದಿರು ನನ್ನ ಬೈಕ್ ಎತ್ತಿಕೊಟ್ಟರು.
ಇಷ್ಟಾದ ಮೇಲೆ ನಾನು ನಿಲ್ಲಲಿಲ್ಲ. ಯಾರಿಗೂ ಫೋನ್ ಮಾಡಲೂ ಇಲ್ಲ. ಯಾಕೆಂದ್ರೆ ನಾನು ಅಲ್ಲಿಂದ ಮನೆಗೆ ಫೋನ್ ಮಾಡಿ ಬಿದ್ದೆ ಅಂದ್ರೆ ಮನೆಯಲ್ಲಿ ಟೆನ್ಷನ್ ನೂರುಪಟ್ಟು ಜಾಸ್ತಿಯಾಗುತ್ತೆ ಅನ್ನೋದು ನನಗೆ ಸ್ಪಷ್ಟವಾಗಿ ಗೊತ್ತು. ಹಾಗಾಗಿ ರಕ್ತ ಸುರಿಯುತ್ತಿದ್ದ ಕಾಲು, ಕೈ ಹೊತ್ತುಕೊಂಡೇ ಮತ್ತೆ ಸುಮಾರು 15 ಕಿಮೀ ಸ್ಕೂಟರ್ ಓಡಿಸಿಕೊಂಡು ಬಂದೆ. ಅಲ್ಲೊಂದು ದೇವಸ್ಥಾನಕ್ಕೆ ಹೋಗುವ ದಾರಿ ಇದೆ. ನಾನು ತುಂಬ ನಂಬುವ ದೇವರು ಆ ಗಣಪತಿ. ಅದೇ ದಾರಿಯಲ್ಲಿ ನಿಂತು ಮನೆಗೆ ಫೋನ್ ಮಾಡಿ ಆಗಿದ್ದನ್ನೆಲ್ಲ ಹೇಳಿದೆ. ನಂತರ ಅಪ್ಪ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಡ್ರೆಸ್ಸಿಂಗ್ ಮಾಡಿಸಿಕೊಂಡು ಮನೆಗೆ ಹೋಗಿದ್ದಾಯ್ತು. ಪಾಪ ಮನೆಯಲ್ಲಿ ಎಲ್ಲ ತುಂಬ ಭಯಗೊಂಡಿದ್ದರು.
ಅಂಗಿ ತೋಳು ಹರಿದಿದ್ದು ಈಗ.. : ಡಿ.10ರ ಕತೆಯೇ ಇದು. ಅವತ್ತು ಮಧ್ಯಾಹ್ನ ಬಿದ್ದು-ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದಾಗ ಡಾಕ್ಟರ್ (ಇವರು ತುಂಬ ಪರಿಚಯದ ವೈದ್ಯರು) ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಕೊಟ್ಟಿದ್ರು. ಮಾತ್ರೆಗಳನ್ನು ಕೊಟ್ಟಿದ್ರು. ಆಗ ನನಗೆ ಊಟ ಆಗಿರಲಿಲ್ಲ ಎಂಬ ಕಾರಣಕ್ಕೆ ಟಿಟಿ ಇಂಜೆಕ್ಷನ್ ಕೊಟ್ಟಿರಲಿಲ್ಲ. ಹಾಗಾಗಿ ಸಂಜೆ ಮತ್ತೆ ಅಣ್ಣನ ಜತೆ ಹೋಗಬೇಕಾಯ್ತು. ಅವತ್ತು ನಾನು ಹಾಕಿದ್ದ ಬಟ್ಟೆಯೆಲ್ಲ ರಕ್ತಮಯವಾಗಿತ್ತು. ಮನೆಗೆ ಬಂದ್ರೂ ನಾನು ಅದನ್ನು ಬಿಚ್ಚಿರಲಿಲ್ಲ. ಸಂಜೆ ಮತ್ತೆ ಆಸ್ಪತ್ರೆಗೆ ಹೋಗಿ ಬಂದಮೇಲೆ ಬೇರೆದು ಹಾಕಿಕೊಂಡ್ರಾಯ್ತು ಅನ್ಕೊಂಡಿದ್ದೆ.
ಸರಿ ವೈದ್ಯರು ಒಳಗೆ ಕರೆದ್ರು. ಟಿಟಿ ಇಂಜೆಕ್ಷನ್ ಸೊಂಟಕ್ಕೆ ಕೊಟ್ಬಿಡಿ ಎಂದೆ. ಆದ್ರೆ ಮರುದಿನ ರಾತ್ರಿ ಬೆಂಗಳೂರಿಗೆ ಹೋಗೋ ಪ್ಲ್ಯಾನ್ ಇದ್ದಿದ್ದರಿಂದ ಸೊಂಟಕ್ಕೆ ಕೊಟ್ರೆ ಮತ್ತೆ ಸೊಂಟ ನೋವು ಬರಬಹುದು ಅಂತ ಡಾಕ್ಟರ್ ಬೇಡ ಅಂದ್ರು (ಬಿಡಿ ನಂತರ ಕಾಲು ಗಾಯದ ಕಾರಣಕ್ಕೆ ಬೆಂಗಳೂರು ಪ್ರಯಾಣ ಕ್ಯಾನ್ಸಲ್ ಆಯ್ತು). ಅಲ್ಲದೆ ಟಿಟಿ ಇಂಜೆಕ್ಷನ್ ಕೈಯಿಗೇ ತಗೋಳ್ಳೋದು ಒಳ್ಳೇದು ಅಂತ ಹೇಳಿದ್ರು. ಆದ್ರೆ ನಾನು ಹಾಕಿಕೊಂಡು ಹೋಗಿದ್ದ ಟಾಪ್ನ ತೋಳು ತುಂಬ ಬಿಗಿಯಾಗಿತ್ತು. ಅದನ್ನು ಮೇಲೆ ಸೇರಿಸೋಕೆ ಆಗ್ತಾನೇ ಇರಲಿಲ್ಲ. ಆಗ ಅಲ್ಲಿಯೇ ಇದ್ದ ನನ್ನ ಅಣ್ಣ ಒಂದು ಖತರ್ನಾಕ್ ಐಡಿಯಾ ಮಾಡಿದ. ತಡಿ, ತೋಳು ಹರಿದೇ ಬಿಡುವಾ ಅಂದ, ಅದಕ್ಕೆ ತಕ್ಕಂತೆ ಡಾಕ್ಟರ್ ಕತ್ತರಿ ತಂದ್ರು. ನಾನು ಬಾಯಿ ಬಿಟ್ಟುಕೊಂಡು ನೋಡ್ತಾನೇ ಇದ್ದೆ. ಅಯ್ಯೋ ಬೇಡ ಅಂದೆ..ಆದ್ರೆ ಅಣ್ಣ ಕೇಳಲೇ ಇಲ್ಲ. ತೋಳನ್ನು ಕತ್ತರಿಸಿ, ಹರಿದು ಮುಗಿಸಿದ. ಡಾಕ್ಟರ್ ದೊಡ್ಡಕೆ ನಗುತ್ತಲೇ ಇಂಜೆಕ್ಷನ್ ಕೊಟ್ಟಿದ್ರು. ನನಗೂ ನಗು ಬಂತು. ನಾನು ಹಾಕಿದ್ದ ಲೆಗ್ಗಿನ್ಸ್ ಬಲ ಮೊಣಕಾಲು ಬಳಿ ಹರಿದಿದ್ದರೆ, ಅಂಗಿಯ ಬಲತೋಳು ಹರಿದು ಜೋಲುತ್ತಿತ್ತು. (ಎಡಗೈಗೆ ಇತ್ತೀಚೆಗೆ ವ್ಯಾಕ್ಸಿನ್ ತಗೋಂಡಿದ್ರಿಂದ, ಬಲಗೈಗೆ ಟಿಟಿ ಇಂಜೆಕ್ಷನ್ ಕೊಟ್ಟಿದ್ರು.) ಅದೇ ವೇಷದಲ್ಲಿ ಡಾಕ್ಟರ್ ರೂಂನಿಂದ ಅಣ್ಣನ ಕೈ ಹಿಡಿದುಕೊಂಡು ಹೊರಗೆ ಬಂದ್ರೆ, ಅಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿದ್ದವರೆಲ್ಲ ನನ್ನನ್ನು ಒಂಥರಾ ನೋಡಿದ್ರು..!
ತುಂಬ ನೋವಾಗಿತ್ತು: ಅದ್ಯಾಕೋ ಗಾಡಿ ತಗೋಂಡ ಮೇಲೆ ಒಂದಲ್ಲ ಒಂದು ಎಡವಟ್ಟು ಆಗ್ತಾ ಇದೆ. ಗಾಡಿ ಹಾಳಾಯ್ತು. ನಾನು ನೋಡಿದ್ರೆ ಈ ಪರಿ ಬಿದ್ದೆ ಅನ್ನೋ ಬೇಸರ ಶುರುವಾಗಿತ್ತು. ಹೀಗೆ ಬಿದ್ದು ಏಟು ಮಾಡಿಕೊಳ್ಳುವುದಕ್ಕೂ ಮೊದಲು ಹೊಸಗಾಡಿಯನ್ನು ಎರಡು ಬಾರಿ ಕೆಡವಿದ್ದೆ. ಆದರೆ ನನಗೆ ಪೆಟ್ಟಾಗಿರಲಿಲ್ಲ. ಆದ್ರೆ ಈ ಸಲವಂತೂ ಗಾಡಿಯೂ ಸ್ಕ್ರ್ಯಾಚ್ ಆಗಿತ್ತು. ನನ್ನ ದೇಹದ ಮೇಲೂ ಗಾಯಗಳಾಗಿದ್ದವು. ಆ ಗಾಡಿ ಮುಟ್ಟೋಕೆ ಬೇಜಾರು ಆಗ್ತಿತ್ತು. ನನಗೆ ಗಾಡಿನೂ ಬೇಡ-ಏನೂ ಬೇಡ ಅಂತ ವಟವಟ ಅನ್ನೋಕೆ ಶುರು ಮಾಡಿದ್ದೆ. ಮತ್ತೆ ಮನೇಲಿ ಅಪ್ಪ-ಅಮ್ಮ, ಅಣ್ಣ ಎಲ್ಲ ತಿಳಿ ಹೇಳಿ ಧೈರ್ಯ ತುಂಬಿದ ಮೇಲೆ ಈಗ ಮತ್ತೆ ಆರಾಮಾಗಿ ಸ್ಕೂಟರ್ ಓಡಿಸ್ತಾ ಇದ್ದೇನೆ. ತುಂಬ ಜಾಗ್ರತೆಯಿಂದ, ಸಿಕ್ಕಾಪಟೆ ಸ್ಲೋ ಆಗಿ. ಆದ್ರೂ ಕೂಡ ಇಳಿಜಾರು ಬಂತೆಂದ್ರೆ ಸ್ವಲ್ಪ ನಡುಕ. ಅಂದು ಬಿದ್ದಿದ್ದು ನೆನಪಾಗತ್ತೆ. ಗಾಡಿ ಕೂಡ ಶೋರೂಮಿಗೆ ಬಿಟ್ಟು, ಸರಿ ಮಾಡಿಸಿಯಾಗಿದೆ. ಹಾ..ನನಗೀಗ ಲೈಸೆನ್ಸ್ ಕೂಡ ಆಗಿದೆ. ಗಾಡಿಗೆ ನಂಬರ್ ಪ್ಲೇಟೂ ಬಂದಿದೆ. ಸ್ಕೂಟರ್ನ ತುಂಬ ಕಾಳಜಿ ಮಾಡೋಕೆ ಹೋದ್ರೆ, ಇನ್ನೆಲ್ಲ ಅದು ಹಳೇದಾಗತ್ತೆ, ಮೋಹ ಬಿಟ್ಟುಬಿಡಬೇಕು, ಹೊಲಸು, ಸ್ಕ್ರ್ಯಾಚು ಆಗೋದೆಲ್ಲ ಸಹಜ ಅಂತ ಅಪ್ಪ ಸಣ್ಣಕೆ ಗದರಿಕೊಳ್ತಾರೆ.
-ಲಕ್ಷ್ಮೀ ಹೆಗಡೆ
ಇದನ್ನೂ ಓದಿ: ಮನೆಯ ಬಾಗಿಲುಗಳಿಗೂ ಬಾಯಿ ಬರುತ್ತಿದ್ದರೆ ಅವು ಸುಮ್ಮನಿರುತ್ತಿದ್ದವೇ?
Published On - 8:33 am, Thu, 3 February 22