ಶಾಲಾ ದಿನಗಳಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರುವುದಕ್ಕೆ ಎರಡು ಕಾರಣವಿತ್ತು. ಒಂದು ನಾನು ಎತ್ತರ ಇಲ್ಲದೇ ಇರುವುದು, ಇನ್ನೊಂದು ಓದಿನಲ್ಲಿ ಮುಂದಿರುವುದು. ಹೇಗಾದರೂ ಹಿಂದಿನ ಬೆಂಚಲ್ಲಿ ಕೂರಬೇಕು ಎಂಬ ಆಸೆ ನೆರವೇರಿದ್ದು ಹೈಸ್ಕೂಲ್ ನಲ್ಲಿ. ಹಿಂದಿನ ಬೆಂಚಿನಲ್ಲಿ ಕೂರುವವರು ದಡ್ಡರು ಎಂದು ಅಂದುಕೊಂಡೇ ಬೆಳೆದಿದ್ದ ನನಗೆ ಎಲ್ಲ ಬೆಂಚುಗಳೂ ಒಂದೇ, ಜಾಗ ಯಾವುದಾದರೇನೂ ಕಲಿಕೆ ಮುಖ್ಯ ಎಂದು ಹೇಳಿಕೊಟ್ಟಿದ್ದು ಹೈಸ್ಕೂಲ್. ನಿಮಗಿಷ್ಟವಾದ ಜಾಗದಲ್ಲಿ ಕೂರಬಹುದು, ಜಾಸ್ತಿ ಮಾತಾಡಿದ್ರೆ ಜಾಗ ಬದಲಿಸುತ್ತೇವೆ ಎಂಬ ವಾರ್ನಿಂಗ್ ಜತೆಗೆ ನಮ್ಮ ಆಯ್ಕೆಯ ಬೆಂಚುಗಳಲ್ಲಿ ಕೂರುವಂತೆ ನಮ್ಮ ಕ್ಲಾಸ್ ಟೀಚರ್ ಹೇಳಿದ್ದರು. ಏಳನೇ ತರಗತಿವರೆಗೆ ಮನೆ ಪಕ್ಕದಲ್ಲಿರುವ ಹಳ್ಳಿಯ ಶಾಲೆಯಿಂದ ಪಟ್ಟಣದಲ್ಲಿರುವ ಹೈಸ್ಕೂಲ್ ಗೆ ಸೇರಿದ ಖುಷಿ. ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ವಿದ್ಯಾರ್ಥಿಗಳು ಪಾಸಾಗುವ ಶಾಲೆ, ಅದು ಹೆಣ್ಮಕ್ಕಳ ಸರ್ಕಾರಿ ಶಾಲೆ. ಓರಗೆಯವರು ಮಿಕ್ಸೆಡ್ ಸ್ಕೂಲ್ ನಲ್ಲಿ ಕಲಿಯುವಾಗ ನನಗೂ ಆ ಶಾಲೆಗೆ ಸೇರಬೇಕು ಎಂಬ ಆಸೆಯಿದ್ದರೂ, ಹೆಣ್ಮಕ್ಕಳ ಶಾಲೆ ಬೆಸ್ಟ್ ,ಬಸ್ಸಿಳಿದು ಸ್ವಲ್ಪದೂರ ನಡೆಯಬೇಕು. ಆದರೆ ಚೆನ್ನಾಗಿ ಕಲಿಸ್ತಾರೆ ಎಂದು ಅಪ್ಪ ಅಮ್ಮ ಹೇಳಿ ನನ್ನನ್ನು ಆ ಶಾಲೆಗೆ ಸೇರಿಸಿದ್ದರು. ಒಂದು ತರಗತಿಯಲ್ಲಿ 40 ವಿದ್ಯಾರ್ಥಿನಿಯರು, ನಮ್ಮದು ಎಫ್ ಡಿವಿಜನ್. ಇ ಡಿವಿಜನ್ ವರೆಗೆ ಮಲಯಾಳಂ, ಎಫ್ ಡಿವಿಜನ್ ಮಾತ್ರ ಕನ್ನಡ. ತಿಳಿ ಗುಲಾಬಿ ಶರ್ಟ್, ಕಡು ಗುಲಾಬಿ ಲಂಗ, ಎರಡು ಜಡೆ ಹೆಣೆದು ಮಡಚಿ ಪಿಂಕ್ ರಿಬ್ಬನ್ ನಲ್ಲಿಯೇ ಚಂದವಾಗಿ ಕಟ್ಟಿರಬೇಕು.ಕೂದಲು ಬಿಟ್ಟುಕೊಂಡು ಬರುವಂತಿಲ್ಲ, ಒಪ್ಪವಾಗಿ ಜಡೆ ಹೆಣೆದಿರಬೇಕು, ಲಂಗದ ಉದ್ದ ಮಂಡಿಯಿಂದ ಕೆಳಗೆ ಇರಲೇ ಬೇಕು. ಪ್ರತಿಯೊಂದರಲ್ಲೂ ಅಚ್ಚುಕಟ್ಟು, ಶಿಸ್ತು. ವಾರದ ಒಂದು ದಿನ ಬುಧವಾರ ಮಾತ್ರ ಕಲರ್ ಡ್ರೆಸ್ , ಇನ್ನುಳಿದ ದಿನ ಯುನಿಫಾರ್ಮ್ ಧರಿಸಲೇ ಬೇಕು. ನೀವೆಲ್ಲರೂ ಅಸೆಂಬ್ಲಿಯಲ್ಲಿ ನಿಂತರೆ ಗುಲಾಬಿ ಹೂ ಅರಳಿಂದಂತೆ ಕಾಣುತ್ತಿದ್ದೀರಿ ಎಂದು ನಮ್ಮ ಹೆಡ್ ಮಿಸ್ಟ್ರೆಸ್ ಹೇಳಿದ್ದರು.
ಹೊಸ ವಾತಾವರಣ, ಹೈಸ್ಕೂಲ್ ನಲ್ಲಿ ಹೊಸ ಗೆಳತಿಯರ ಪರಿಚಯದೊಂದಿಗೆ ನಾವು ಆಟ- ಪಾಠದಲ್ಲಿ ತೊಡಗಿದೆವು. ಎಲ್ಲ ವಿಷಯಗಳೊಂದಿಗೆ ಪಿಟಿ ಪಿರಿಯಡ್ ಇರುವಂತೆ ಕ್ರಾಫ್ಟ್ ಪಿರಿಯಡ್ ಕೂಡಾ ನಮಗಿತ್ತು. ವಾರದಲ್ಲಿ ಮೂರು ದಿನ ಕ್ರಾಫ್ಟ್ ಪಿರಿಯಡ್. ಅದರಲ್ಲಿ ನಮಗೆ ಎಂಬ್ರಾಯ್ಡರಿ, ಹೂದಾನಿ ಮಾಡುವುದು, ಮ್ಯಾಟ್, ಚಾಪೆ ಹೆಣೆಯುವುದು, ಬೊಂಬೆ ತಯಾರಿ,ಫ್ಯಾಬ್ರಿಕ್ ಪೇಂಟಿಂಗ್ ಹೀಗೆ ಹಲವಾರು ‘ಕಲೆ’ ಹೇಳಿಕೊಡುತ್ತಿದ್ದರು. ನಾವು ಕನ್ನಡದ ಮಕ್ಕಳಾದರೂ ನಮ್ಮ ಕ್ರಾಫ್ಟ್ ಟೀಚರ್ ಮಲಯಾಳಿ. ಕ್ರಾಫ್ಟ್ ಗೆ ಭಾಷೆಯ ಅಗತ್ಯವಿಲ್ಲ ಎಂದು ಹೇಳುವುದರ ಬದಲು ನಾವು ಮಾತನಾಡುವ ಕನ್ನಡ ಮಿಶ್ರಿತ ಮಲಯಾಳಂ ಅವರಿಗೂ ಅವರ ಮಲಯಾಳಂ ಮಿಶ್ರಿತ ಕನ್ನಡ ನಮಗೂ ಅರ್ಥವಾಗುತ್ತಿತ್ತು. ಆ ಕ್ಲಾಸುಗಳಲ್ಲಿ ಅವರು ಹೇಳಿಕೊಟ್ಟ ಹಲವು ಕ್ರಾಫ್ಟ್ ಗಳಲ್ಲಿ ಕೆಲವನ್ನು ಮರೆತಿದ್ದರೂ ಅವರು ಹೇಳಿದ ಕೆಲವು ಮಾತುಗಳು ಈಗಲೂ ನೆನಪಲ್ಲಿ ಅಚ್ಚಳಿಯದೆ ಉಳಿದಿದೆ.
ಕ್ರಾಫ್ಟ್ ಅಂತ ನಿರ್ಲಕ್ಷ್ಯ ಮಾಡಬೇಡಿ, ಇದರಲ್ಲಿ ಪರೀಕ್ಷೆ ಇಲ್ಲ, ಮಾರ್ಕ್ಸ್ ಕೂಡಾ ಸಿಗುವುದಿಲ್ಲ. ಆದರೆ ನೀವು ಏನಾದರೊಂದು ಕಲೆ ಕಲಿತರೆ ಅದು ನಿಮ್ಮ ಕೈ ಹಿಡಿಯುತ್ತದೆ. ನೀವು ಹತ್ತನೇ ಕ್ಲಾಸು ಮುಗಿಸುತ್ತೀರಿ, ಆಮೇಲೆ ಕೆಲವರು ಮುಂದೆ ಓದುತ್ತಾರೆ , ಇನ್ನು ಕೆಲವರು ಮದುವೆ ಆಗಿ ಹೋಗ್ತಾರೆ. ಗಂಡ ದುಡಿಯುತ್ತಾನೆ, ನಾನು ಮಕ್ಕಳು, ಮನೆ ಅಂತ ನೋಡಿಕೊಳ್ಳುತ್ತೇನೆ ಎಂದು ಕೂರಬೇಡಿ. ನೀವು ದುಡಿದು ಸಂಪಾದನೆ ಮಾಡಿ. ಬೊಟ್ಟು, ಬಳೆ, ಒಡವೆಗಾಗಿ ಗಂಡನ ಮುಂದೆ ಕೈಚಾಚುವ ಬದಲು ನಿಮಗೆ ಬೇಕಾದುದನ್ನು ನೀವೇ ಖರೀದಿ ಮಾಡುವಷ್ಟಾದರೂ ಹಣ ಸಂಪಾದನೆ ಮಾಡಿ. ನಾಳೆ ಗಂಡ ಕೈಕೊಟ್ಟು ಹೋದರೂ ನೀವು ದುಡಿಯುವ ಹೆಣ್ಣಾಗಿದ್ದರೆ ಇಂಡಿಪೆಂಡೆಂಟ್ ಆಗಿ ಬದುಕಿ. ನಿಮ್ಮ ಜತೆಗಿರುವವರು ನೀವೇ, ಹೆಣ್ಮಕ್ಕಳು ಮನೆಯಲ್ಲೇ ಕೂರಬೇಕಾದವರಲ್ಲ ಎಂದು ನಿಮ್ಮ ಹೆತ್ತವರು ಶಾಲೆಗೆ ಕಳುಹಿಸಿರುವುದು. ಆ ವಿದ್ಯೆಯನ್ನು ಸುಮ್ಮನೆ ಹಾಳು ಮಾಡಬೇಡಿ. ಕಷ್ಟ ಬರುತ್ತದೆ, ಅದು ಬಂದಾಗ ಇದುಂ ಕಡನ್ನ್ ಪೋವುಂ ( this shall too pass) ಎಂದು ನಿಶ್ಚಿಂತರಾಗಿರಿ. ಯಾವುದಕ್ಕೂ ಧೈರ್ಯಗುಂದದೇ ಬದುಕಿ ತೋರಿಸಬೇಕು. ಶಾಲೆಯಲ್ಲಿ ಕಲಿಯುವುದು ಬೇರೆ, ಬದುಕು ಕಲಿಸುವುದು ಬೇರೆ ಎಂದಿದ್ದರು. ಅವರು ಇಷ್ಟು ಹೇಳಿದ ಮಾತುಗಳಲ್ಲಿ ಇಂಡಿಪೆಂಡೆಂಟ್ ಆಗಿ ಬದುಕಿ ಮತ್ತು this shall too pass ಎಂಬ ವಾಕ್ಯ ಮನಸ್ಸಿಗೆ ನಾಟಿತ್ತು. ಮುಂದೆ ಹೈಸ್ಕೂಲ್ ಮುಗಿಸಿ, ಕಾಲೇಜು ಓದಿ, ಬಯಸಿದ ಕೆಲಸವೂ ಸಿಕ್ಕಿತು. ಮೊದಲ ಬಾರಿ ಉದ್ಯೋಗ ನಿಮಿತ್ತ ಚೆನ್ನೈ ಹೊರಟಿದ್ದೆ. ಹೊಸ ಊರು, ಹೊಸ ಭಾಷೆ ಹೊಸ ಅನುಭವಗಳೊಂದಿಗೆ ಇಂಡಿಪೆಂಡೆಂಟ್ ಬದುಕು ಅಲ್ಲಿಂದ ಶುರುವಾಗಿತ್ತು.
ಕ್ರಾಫ್ಟ್ ಟೀಚರ್ ಆಗಿದ್ದ ಮೇರಿ ಟೀಚರ್ ನನ್ನೂರು ಕಾಸರಗೋಡಿನಿಂದ ವರ್ಗವಾಗಿ ಹೋಗಿ ವರ್ಷಗಳೇ ಕಳೆದಿವೆ. ಅವರೀಗ ಎಲ್ಲಿದ್ದಾರೋ, ಹೇಗಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ ಅವರ ಮಾತು ನನ್ನಲ್ಲಿ ಪ್ರಭಾವ ಬೀರಿದ್ದಂತೂ ನಿಜ. ಬದುಕಲ್ಲಿ ಸೋತಾಗ ಅತ್ತು ಕಣ್ಣೀರು ಹಾಕಿ ಆಮೇಲೆ ಎದ್ದು ನಿಂತು ಊದಿದ ಕಣ್ಣುಗಳಿಗೆ ದಪ್ಪನೆ ಕಾಜಲ್ ಹಚ್ಚಿ, ಮುಖದಲ್ಲೊಂದು ನಗು ತಂದು This shall too pass ಎಂದು ಎದ್ದು ನಿಲ್ಲುತ್ತೇನೆ. ಬದುಕು ಮುಂದೆ ಸಾಗಿದೆ.