Budget 2022: ಈ ಬಾರಿಯ ಬಜೆಟ್​ನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಾಧ್ಯತೆ; ಶಿಕ್ಷಣ, ನೀರಾವರಿ ಕ್ಷೇತ್ರದ ನಿರೀಕ್ಷೆಗಳೇನು?

| Updated By: ಸುಷ್ಮಾ ಚಕ್ರೆ

Updated on: Jan 31, 2022 | 7:23 PM

Education Budget 2022: ದೇಶದಲ್ಲಿ ಹೆಚ್ಚೆಚ್ಚು ಆಸ್ಪತ್ರೆಗಳು, ವೆಲ್​ನೆಸ್ ಸೆಂಟರ್ ನಿರ್ಮಾಣ ಮಾಡಬೇಕಾಗಿದೆ. ರಾಜ್ಯಗಳೂ ಏಮ್ಸ್ ಆಸ್ಪತ್ರೆಗೆ ಬೇಡಿಕೆ ಇಟ್ಟಿವೆ. ಕಳೆದ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 93,223 ಕೋಟಿ ರೂಪಾಯಿ ನೀಡಲಾಗಿತ್ತು. ಈ ಬಾರಿ ಶೇ.13-15 ರಷ್ಟು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ.

Budget 2022: ಈ ಬಾರಿಯ ಬಜೆಟ್​ನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಾಧ್ಯತೆ; ಶಿಕ್ಷಣ, ನೀರಾವರಿ ಕ್ಷೇತ್ರದ ನಿರೀಕ್ಷೆಗಳೇನು?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಭಾರತ ಇನ್ನೂ ಕೊರೊನಾ (Coronavirus) ಸಾಂಕ್ರಾಮಿಕದಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಮುಂದೆಯೂ ಕೊರೊನಾ ವೈರಸ್ ರೂಪಾಂತರ ಹೊಂದುತ್ತಲೇ ಇರುತ್ತದೆ. ಹೀಗಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಆರೋಗ್ಯದ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದೆ. ನೀರಾವರಿ, ರಕ್ಷಣಾ ಕ್ಷೇತ್ರಗಳಿಗೆ ಮೋದಿ ಸರ್ಕಾರ ಬಜೆಟ್​ನಲ್ಲಿ ಪ್ರಾಶಸ್ತ್ಯ ನೀಡುವ ನಿರೀಕ್ಷೆ ಇದೆ. ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ವರ್ಷದ ಬಜೆಟ್​ನಲ್ಲಿ 2.23 ಲಕ್ಷ ಕೋಟಿ ರೂಪಾಯಿಯನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಲಾಗಿತ್ತು. ಈ ವರ್ಷ ದೇಶದಲ್ಲಿ ಸದ್ಯ ಕೊರೊನಾದ 3ನೇ ಅಲೆ ನಿಯಂತ್ರಣದಲ್ಲಿದ್ದರೂ ಮುಂದಿನ ದಿನಗಳಲ್ಲಿ ಎದುರಾಗುವ ಸಾಂಕ್ರಾಮಿಕವನ್ನು ನಿಭಾಯಿಸಲು ಇನ್ನೂ ಹೆಚ್ಚಿನ ಹಣವನ್ನು ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಬಲಪಡಿಸಲು ನೀಡುವ ಅನಿವಾರ್ಯತೆ ಇದೆ. ದೇಶದ ಜನರಿಗೆ ಬೂಸ್ಟರ್ ಡೋಸ್ ನೀಡುತ್ತಿರುವಂತೆ ಆರ್ಥಿಕ ಕ್ಷೇತ್ರದ ಚೇತರಿಕೆಗೆ ಹಾಗೂ ಆರೋಗ್ಯ ಕ್ಷೇತ್ರಕ್ಕೂ ನಿರ್ಮಲಾ ಸೀತಾರಾಮನ್ ಬಜೆಟ್ (Budget Expectations) ಮೂಲಕ ಬೂಸ್ಟರ್ ಡೋಸ್ ನೀಡುವ ನಿರೀಕ್ಷೆ ಇದೆ.

ಕೊರೊನಾ ಲಸಿಕೆ ಹಾಗೂ ಫಾರ್ಮಾಸೂಟಿಕಲ್ಸ್ ಕ್ಷೇತ್ರಕ್ಕೆ ಉತ್ತೇಜನ ನೀಡುವಂಥ ಕ್ರಮಗಳನ್ನು ಬಜೆಟ್​ನಲ್ಲಿ ಘೋಷಿಸಬಹುದು. ದೇಶದಲ್ಲಿ ಇನ್ನೂ 2ರಿಂದ 15 ವರ್ಷದವರಿಗೆ ಕೊರೊನಾ ಲಸಿಕೆ ನೀಡಿಲ್ಲ. ಈ ಬಗ್ಗೆ ಬಜೆಟ್​ನಲ್ಲಿ ಕಾಲಮಿತಿ ಘೋಷಿಸಬಹುದು. ಬಹುತೇಕ ಮಾರ್ಚ್ ತಿಂಗಳಿನಿಂದಲೇ 12ರಿಂದ 15 ವರ್ಷ ವಯೋಮಾನದವರಿಗೆ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ. ಮುಂದೆ ಇನ್ನೂ ಯಾವುದಾದರೂ ಹೊಸ ಪ್ರಭೇದದ ಕೊರೊನಾ ವೈರಸ್ ಪತ್ತೆಯಾದರೂ, ಅದನ್ನು ಎದುರಿಸಲು ದೇಶದ ಆರೋಗ್ಯ ಕ್ಷೇತ್ರ ಸಜ್ಜಾಗಬೇಕಾಗಿದೆ.

ಭಾರತದಲ್ಲಿ ಕೊರೊನಾದ ಮೂರು ಅಲೆಯಲ್ಲಿ ಸಾವನ್ನಪ್ಪಿರುವವರಲ್ಲಿ ಶೇ.48ರಷ್ಟು ಜನರು ಕೋಮಾರ್ಬಿಡಿಯಿಂದ ಬಳಲುತ್ತಿರುವವರಾಗಿದ್ದರು. ಕೊರೊನಾದಿಂದ ಸಾವನ್ನಪ್ಪಿದ ಶೇ.48ರಷ್ಟು ರೋಗಿಗಳ ಪೈಕಿ ಶೇ.30ರಷ್ಟು ಹೈಪರ್ ಟೆನ್ಷನ್​ನಿಂದ ಬಳಲುತ್ತಿರುವವರಾಗಿದ್ದರು. ಶೇ.19ರಷ್ಟು ಜನರು ಡಯಾಬಿಟಿಸ್, ಶೇ.8ರಷ್ಟು ಜನರು ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರಾಗಿದ್ದರು. ಹೈಪರ್ ಟೆನ್ಷನ್, ಡಯಾಬಿಟಿಸ್ ಹಾಗೂ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಕೊರೊನಾ ರೋಗಿಗಳೇ ಗುಣಮುಖವಾಗೋದು ಕಷ್ಟವಾಗಿತ್ತು. ಹೀಗಾಗಿ ಈ ರೋಗಗಳಿಗೆ ತುತ್ತಾಗದಂತೆ ಜನರ ಜೀವನ ಶೈಲಿ ಇರುವಂತೆ ನೋಡಿಕೊಳ್ಳಬೇಕು. ಪಂಜಾಬ್ ರಾಜ್ಯದಲ್ಲಿ ಜನರು ಹೆಚ್ಚಾಗಿ ಸಿಹಿ ಪದಾರ್ಥಗಳನ್ನ ಸೇವಿಸುತ್ತಾರೆ. ಇದರಿಂದಾಗಿ ಪಂಜಾಬ್ ರಾಜ್ಯದಲ್ಲಿ ಜನರು ಹೆಚ್ಚಾಗಿ ಡಯಾಬಿಟಿಸ್​ನಿಂದ ಬಳಲುತ್ತಿದ್ದಾರೆ. ಹೀಗಾಗಿ ಪಂಜಾಬ್ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಪ್ರಮಾಣ ಉಳಿದ ರಾಜ್ಯಗಳಿಗಿಂತ ಹೆಚ್ಚಾಗಿದೆ. ಹೀಗಾಗಿ, ಇಂಥ ರೋಗಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂಥ ವ್ಯವಸ್ಥೆ ಆಗಬೇಕು. ದೇಶದಲ್ಲಿ ಮಹಿಳೆಯರು, ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆ ನಿವಾರಣೆಗೆ ಪೌಷ್ಠಿಕ ಆಹಾರ ನೀಡಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಒಬೆಸಿಟಿಯಿಂದನೂ ಜನರು ಬಳಲುತ್ತಿದ್ದಾರೆ.

ದೇಶದಲ್ಲಿ ಹೆಚ್ಚೆಚ್ಚು ಆಸ್ಪತ್ರೆಗಳು, ವೆಲ್​ನೆಸ್ ಸೆಂಟರ್ ನಿರ್ಮಾಣ ಮಾಡಬೇಕಾಗಿದೆ. ರಾಜ್ಯಗಳೂ ಏಮ್ಸ್ ಆಸ್ಪತ್ರೆಗೆ ಬೇಡಿಕೆ ಇಟ್ಟಿವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಿಸುವ ಗುರಿ ಇದೆ. ನಮ್ಮ ಕರ್ನಾಟಕದಲ್ಲಿ ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿಲ್ಲ . ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಾಣ ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಿ ಹಣ ಹಂಚಿಕೆ ಮಾಡಬೇಕಾಗಿದೆ.

ಕೊರೊನಾದಿಂದ ಶಿಕ್ಷಣ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಆನ್​ಲೈನ್ ಕ್ಲಾಸ್​ಗಳೇ ಕಳೆದ ಮೂರು ವರ್ಷದಿಂದ ನಡೆಯುತ್ತಿವೆ. ಹೀಗಾಗಿ ದೇಶದಲ್ಲಿ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೂ ಒತ್ತು ನೀಡಬೇಕಾಗಿದೆ. ಬಡವರ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಪೋನ್, ಟ್ಯಾಬ್, ಲ್ಯಾಪ್ ಟಾಪ್​ಗಳಿಲ್ಲ. ಹೀಗಾಗಿ, ಬಡ ಮಕ್ಕಳಿಗೆ ಟ್ಯಾಬ್, ಲ್ಯಾಪ್ ಟಾಪ್ ಲಭ್ಯವಾಗುವಂತೆ ಮಾಡಬೇಕು. ಗ್ರಾಮೀಣ ಭಾಗಗಳಲ್ಲಿ ಇಂಟರ್ ನೆಟ್ ಸಮಸ್ಯೆ ಕೂಡ ಇದೆ. ಇದನ್ನು ಕೇಂದ್ರ ಸರ್ಕಾರವೇ ಬಗೆಹರಿಸಬೇಕು. ಕೊರೊನಾದಂಥ ಸಾಂಕ್ರಮಿಕ ಎದುರಿಸಲು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದೇಶದಲ್ಲಿ ಮೆಡಿಕಲ್ ಸೀಟುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಶೈಕ್ಷಣಿಕ ಸಾಲದ ಮೇಲಿನ ಬಡ್ಡಿದರ ಕಡಿತ ಮಾಡಬೇಕು. ಎಜುಟೆಕ್ ಮೇಲೆ ವಿಧಿಸುತ್ತಿರುವ ಶೇ.18ರ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಕೆ ಮಾಡಬೇಕು ಎಂಬ ಬೇಡಿಕೆಯೂ ಇದೆ.

ಕಳೆದ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 93,223 ಕೋಟಿ ರೂಪಾಯಿ ನೀಡಲಾಗಿತ್ತು. ಈ ಬಾರಿ ಶೇ.13-15 ರಷ್ಟು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. 2020-21 ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ 99,311 ಕೋಟಿ ರೂಪಾಯಿ ನೀಡಲಾಗಿತ್ತು. ಕಳೆದ ವರ್ಷ ಶಿಕ್ಷಣಕ್ಷೇತ್ರಕ್ಕೆ ನೀಡಿದ್ದ ಹಣದ ಮೊತ್ತದಲ್ಲಿ ಕಡಿತ ಮಾಡಲಾಗಿತ್ತು. ಈಗ ಮತ್ತೆ ಏರಿಕೆ ಮಾಡಬೇಕೆಂಬ ಬೇಡಿಕೆ ಇದೆ.

ದೇಶದಲ್ಲಿ ನೀರಾವರಿ ಸೌಲಭ್ಯ ಹೆಚ್ಚಾದಷ್ಟು ಬರಡು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯ. ಇದರಿಂದ ರೈತರಿಗೂ ಅನುಕೂಲ. ರೈತರಿಗೆ ಉದ್ಯೋಗ ಸಿಗುವುದರ ಜೊತೆಗೆ ಕೃಷಿ ಉತ್ಪಾದನೆ ಹೆಚ್ಚಾಗುತ್ತೆ. ರೈತರ ಆದಾಯವೂ ಹೆಚ್ಚಾಗುತ್ತೆ. ನೀರಾವರಿ ಸೌಲಭ್ಯ ಹೆಚ್ಚಿಸಲು ನದಿ ಜೋಡಣೆಯ ಕಲ್ಪನೆ ದಶಕಗಳಿಂದ ಇದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆನ್-ಬೆಟ್ವಾ ನದಿ ಜೋಡಣೆ ಮಾಡಿದಂತೆ ದೇಶದಲ್ಲಿ ಉಳಿದ ನದಿಗಳ ಜೋಡಣೆಗೂ ಒತ್ತು ನೀಡಬೇಕು. ಆಂಧ್ರ-ತೆಲಂಗಾಣದಲ್ಲೂ ಕೃಷ್ಣಾ-ಗೋದಾವರಿ ನದಿಜೋಡಣೆ ಮಾಡಲಾಗಿದೆ. ಇದೇ ರೀತಿ ಗೋದಾವರಿ-ಕಾವೇರಿ ನದಿ ಜೋಡಣೆ, ಕೃಷ್ಣಾ -ಕಾವೇರಿ ನದಿ ಜೋಡಣೆಯಂಥ ಯೋಜನೆಗೂ ಒತ್ತು ನೀಡಬೇಕಾಗಿದೆ. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೇ, ಕೇಂದ್ರ ಸರ್ಕಾರವು ಯೋಜನೆ ಜಾರಿಗೆ ಹಣ ನೀಡಬೇಕಾಗುತ್ತೆ. ಈ ಬಗ್ಗೆಯೂ ಕರ್ನಾಟಕದ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಕನಸಾದ ನದಿ ಜೋಡಣೆಗೆ ಮೋದಿ ಸರ್ಕಾರ ಎಷ್ಟರ ಮಟ್ಟಿಗೆ ಒತ್ತು ನೀಡುತ್ತೆ ಎಂಬುದು ಕುತೂಹಲ ಕೆರಳಿಸಿದೆ.

ಇನ್ನು, ರಕ್ಷಣಾ ಕ್ಷೇತ್ರಕ್ಕೂ ಈ ಬಾರಿಯ ಬಜೆಟ್​ನಲ್ಲಿ ಆದ್ಯತೆ ಸಿಗಲಿದೆ. ವರ್ಷದಿಂದ ವರ್ಷಕ್ಕೆ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಸೇನೆಯ ಆಧುನೀಕರಣ, ಶಸ್ತ್ರಾಸ್ತ್ರ ಖರೀದಿ, ಆತ್ಮನಿರ್ಭರ ಭಾರತ್ ಯೋಜನೆಯಡಿ ದೇಶೀಯವಾಗಿಯೇ ಶಸ್ತ್ರಾಸ್ತ್ರ ಉತ್ಪಾದನೆಗೆ ಹೆಚ್ಚಿನ ಅನುದಾನವನ್ನು ಬಜೆಟ್ ನಲ್ಲಿ ನೀಡಬೇಕಾಗಿದೆ.

ಇದನ್ನೂ ಓದಿ: Budget Expectations ವೇಗದ ರೈಲುಗಳು, ವಿದ್ಯುದ್ದೀಕರಣ ಮತ್ತು ಹೆಚ್ಚಿನ ಸೌಲಭ್ಯ; ರೈಲ್ವೆ ಬಜೆಟ್​​ ನಿರೀಕ್ಷೆಗಳೇನು?

Budget Expections: ಚೇತರಿಕೆ ಕಾಲದಲ್ಲಿ ಮಂಡನೆಯಾಗಲಿದೆ ನಿರೀಕ್ಷೆಗಳ ಭಾರ ಹೊತ್ತ ಬಜೆಟ್​: ಹತ್ತಾರು ವರ್ಗದ ನೂರಾರು ಬೇಡಿಕೆಗಳು