Budget Expections: ಚೇತರಿಕೆ ಕಾಲದಲ್ಲಿ ಮಂಡನೆಯಾಗಲಿದೆ ನಿರೀಕ್ಷೆಗಳ ಭಾರ ಹೊತ್ತ ಬಜೆಟ್​: ಹತ್ತಾರು ವರ್ಗದ ನೂರಾರು ಬೇಡಿಕೆಗಳು

Nirmala Sitharaman: ಕೊರೊನಾದ ಮೂರನೇ ಅಲೆ, ಹೆಚ್ಚಾಗುತ್ತಿರುವ ವಿತ್ತೀಯ ಕೊರತೆ, ಹೆಚ್ಚುತ್ತಿರುವ ನಿರುದ್ಯೋಗ, ರೈತರ ಪ್ರತಿಭಟನೆ, ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನರನ್ನು ಓಲೈಸುವ ಸವಾಲುಗಳ ಮಧ್ಯೆಯೇ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ

Budget Expections: ಚೇತರಿಕೆ ಕಾಲದಲ್ಲಿ ಮಂಡನೆಯಾಗಲಿದೆ ನಿರೀಕ್ಷೆಗಳ ಭಾರ ಹೊತ್ತ ಬಜೆಟ್​: ಹತ್ತಾರು ವರ್ಗದ ನೂರಾರು ಬೇಡಿಕೆಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 31, 2022 | 6:20 PM

ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ (ಫೆ.1) 2022-23ನೇ ಸಾಲಿನ ಸಾಮಾನ್ಯ ಬಜೆಟ್ (Union Budget 2022) ಅನ್ನು ಲೋಕಸಭೆಯಲ್ಲಿ ಮಂಡಿಸುವರು. ಕೇಂದ್ರದ ಬಜೆಟ್ ಬಗ್ಗೆ ಜನಸಾಮಾನ್ಯರು ಸೇರಿದಂತೆ ಎಲ್ಲ ವರ್ಗಗಳಿಗೆ ತಮ್ಮದೇ ಆದ ನಿರೀಕ್ಷೆಗಳಿವೆ (Budget Expectations). ಎಲ್ಲ ವರ್ಗದ ನಿರೀಕ್ಷೆಗಳನ್ನು ಸ್ಪಲ್ಪಮಟ್ಟಿಗಾದರೂ ಈಡೇರಿಸುವ ಸವಾಲು ನಿರ್ಮಲಾ ಸೀತಾರಾಮನ್ ಅವರಿಗೂ ಇದೆ. ಕೊವಿಡ್ ಬಿಕ್ಕಟ್ಟು, ಕೊರೊನಾದ ಮೂರನೇ ಅಲೆ, ಹೆಚ್ಚಾಗುತ್ತಿರುವ ವಿತ್ತೀಯ ಕೊರತೆ, ಹೆಚ್ಚುತ್ತಿರುವ ನಿರುದ್ಯೋಗ, ರೈತರ ಪ್ರತಿಭಟನೆ, ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನರನ್ನು ಓಲೈಸುವ ಸವಾಲುಗಳ ಮಧ್ಯೆಯೇ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಲೋಕಸಭೆಯಲ್ಲಿ ಮಂಡನೆಯಾಗುವ ಬಜೆಟ್​ನತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಈ ಬಾರಿಯೂ ನಿರ್ಮಲಾ ಸೀತಾರಾಮನ್ ಬಜೆಟ್ ಮುದ್ರಿತ ಪ್ರತಿಯ ಬದಲು ಟ್ಯಾಬ್ಲೆಟ್​ನಲ್ಲಿಯೇ ಬಜೆಟ್ ಮಂಡಿಸುವರು. ಸಂಸದರು, ಜನಸಾಮಾನ್ಯರಿಗೂ ಬಜೆಟ್ ಆ್ಯಪ್ ಮೂಲಕ ಬಜೆಟ್ ಪ್ರತಿ ನೀಡಲಾಗುತ್ತೆ. ಕೇಂದ್ರದ ಬಜೆಟ್‌ ಬಗ್ಗೆ ಸಂಬಳ ಗಳಿಸುವ ವರ್ಗವು ತಮ್ಮದೇ ಆದ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಆದಾಯ ತೆರಿಗೆ ವಿನಾಯ್ತಿ ನಿರೀಕ್ಷೆ

ಆದಾಯ ತೆರಿಗೆಯ ವಿನಾಯಿತಿಯ ಮೂಲ ಮಿತಿಯನ್ನು ವಾರ್ಷಿಕ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆಯು ಸಂಬಳದಾರ ವರ್ಗದಲ್ಲಿದೆ. ಹಿರಿಯ ನಾಗರಿಕರ ಆದಾಯ ತೆರಿಗೆ ವಿನಾಯಿತಿಯ ಮೂಲಮಿತಿಯನ್ನು ಈಗಿರುವ ₹ 3 ಲಕ್ಷದಿಂದ ₹ 3.5 ಲಕ್ಷಕ್ಕೆ ಏರಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ನಿರ್ಮಲಾ ಸೀತಾರಾಮನ್ ಅವರು 2020ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಘೋಷಿಸಿದ್ದರು. ಆದಾಯ ತೆರಿಗೆ ವಿನಾಯಿತಿ, ಕಡಿತ ಪಡೆಯದವರು ಹೊಸ ಆದಾಯ ತೆರಿಗೆ ಪದ್ಧತಿಯಡಿ ಆದಾಯ ತೆರಿಗೆ ಪಾವತಿಸಬಹುದು ಎಂದು ಹೇಳಲಾಗಿತ್ತು. ಹೊಸ ಮತ್ತು ಹಳೆಯ ಆದಾಯ ತೆರಿಗೆ ಪದ್ಧತಿಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.

ಸದ್ಯ ವಾರ್ಷಿಕ ₹ 2.5 ಲಕ್ಷದವರೆಗಿನ ಆದಾಯಕ್ಕೆ ಹಳೆಯ ಹಾಗೂ ಹೊಸ ಪದ್ಧತಿಗಳೆರಡರಲ್ಲೂ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ₹ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಹಳೆಯ ಹಾಗೂ ಹೊಸ ಪದ್ದತಿಯಡಿ ಶೇ 5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ₹ 5 ಲಕ್ಷದಿಂದ ₹ 7.5 ಲಕ್ಷದವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20ರಷ್ಟು ಆದಾಯ ತೆರಿಗೆ ವಿಧಿಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 10 ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 15ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ.

ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳಡಿ ₹ 5 ಲಕ್ಷದವರೆಗಿನ ಆದಾಯಕ್ಕೆ ₹ 12,500 ತೆರಿಗೆ ವಿನಾಯ್ತಿ ಪಡೆಯಲು ಸೆಕ್ಷನ್ 87 (ಎ) ಅಡಿ ಅವಕಾಶ ಇದೆ. ಹೀಗಾಗಿ ಹಳೆಯ ಮತ್ತು ಹೊಸ ಪದ್ಧತಿಗಳಡಿ ವಾರ್ಷಿಕ ₹ 5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ಆದಾಯ ತೆರಿಗೆ ಪಾವತಿಸದೇ ಇರಲು ಅವಕಾಶವಿದೆ. ಐಟಿ ಕಾಯ್ದೆಯ ಸೆಕ್ಷನ್ 80ಸಿ ಅಡಿ ಸಿಗುತ್ತಿರುವ ವಿನಾಯ್ತಿ ಮಿತಿಯು 2014ರ ನಂತರ ಏರಿಕೆಯಾಗಿಲ್ಲ. ಸದ್ಯ 80ಸಿ ಅಡಿ ವಾರ್ಷಿಕ ₹ 1.5 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ವಿನಾಯಿತಿ ಇದೆ. ಇದೇ ಸೆಕ್ಷನ್​ನ ಅಡಿ ಗೃಹಸಾಲದ ಮೇಲಿನ ಅಸಲು ಮೊತ್ತಕ್ಕೆ ವಾರ್ಷಿಕ ₹ 1.5 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ವಿನಾಯಿತಿ ಇದೆ. ಇದನ್ನು ₹ 2 ಲಕ್ಷಕ್ಕೆ ಏರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಗೃಹ ಸಾಲದ ಮೇಲಿನ ಬಡ್ಡಿ ಮೇಲಿನ ತೆರಿಗೆ ವಿನಾಯಿತಿಯನ್ನು 1.5 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಸದ್ಯ ಅಗ್ಗದ ಮನೆಗಳ ಮೇಲಿನ ಗೃಹ ಸಾಲದ ಮೇಲಿನ 1.5 ಲಕ್ಷ ರೂಪಾಯಿ ಬಡ್ಡಿ ಪಾವತಿಗೆ 2023ರ ಮಾರ್ಚ್ ವರೆಗೂ ವಿನಾಯಿತಿ ನೀಡುವ ನಿರೀಕ್ಷೆಯನ್ನು ರಿಯಲ್ ಎಸ್ಟೇಟ್ ಕ್ಷೇತ್ರ ಇಟ್ಟುಕೊಂಡಿದೆ. ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು ವಾರ್ಷಿಕ 50 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿವರೆಗೆ ಏರಿಸುವ ನಿರೀಕ್ಷೆ ಇದೆ. ಕೊರೊನಾದ ಕಾರಣದಿಂದ ಜನರು ಹೆಚ್ಚಾಗಿ ಆರೋಗ್ಯ ವಿಮೆ ತೆಗೆದುಕೊಳ್ಳುತ್ತಿದ್ದಾರೆ. ಆರೋಗ್ಯ ವಿಮೆ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ವಾರ್ಷಿಕ ₹ 25 ಸಾವಿರದಿಂದ 50 ಸಾವಿರಕ್ಕೆ ಏರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.

ಕೃಷಿಸಾಲದ ಏರಿಕೆ ಸಾಧ್ಯತೆ ಕೃಷಿಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿಸಾಲದ ಗುರಿಯನ್ನು ₹ 18 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 16.5 ಲಕ್ಷ ಕೋಟಿ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ಸರ್ಕಾರವು ಪ್ರತಿವರ್ಷ ಕೃಷಿವಲಯದ ಸಾಲದ ಗುರಿಯನ್ನು ಹೆಚ್ಚಿಸುತ್ತಿದೆ. ಈ ಬಾರಿಯೂ 2022-23ಕ್ಕೆ ಗುರಿಯನ್ನು ₹18ರಿಂದ 18.5 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆಯಿದೆ.

ರೈಲ್ವೆಗೆ ಮತ್ತಷ್ಟು ಹಣ ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಹಂಚಿಕೆ ಮಾಡುವ ಹಣದ ಮೊತ್ತವನ್ನು ಶೇ 20ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷದ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ₹ 2.15 ಲಕ್ಷ ಕೋಟಿಯನ್ನು ರೈಲ್ವೆ ಇಲಾಖೆಗೆ ನೀಡಿದ್ದರು. ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ನೀಡುವ ಮೊತ್ತವನ್ನು ₹ 2.5 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಬಂಡವಾಳ ಬಳಸಿಕೊಂಡು ರೈಲ್ವೆ ಇಲಾಖೆಯು ದೀರ್ಘಾವಧಿ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಿದೆ. ಸರಕು-ಸಾಗಣೆ ಮಾರ್ಗಗಳು, ಸ್ಪೀಡ್ ಟ್ರೇನ್, ಆಧುನೀಕರಣ, ವ್ಯಾಗನ್, ಲೋಕೊ ಟ್ರೇನ್​ಗಳ ಅಭಿವೃದ್ದಿ, ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಹೆಚ್ಚು ಬಂಡವಾಳ ತೊಡಗಿಸಲು ಸಾಧ್ಯವಾಗುತ್ತದೆ.

ಮೂಲಸೌಕರ್ಯ ದೇಶದಲ್ಲಿ ಆರ್ಥಿಕ ಬೆಳವಣಿಗೆಯಾಗಬೇಕಾದರೇ, ಹೆಚ್ಚಿನ ಹಣವನ್ನು ಸರ್ಕಾರ ಹಾಗೂ ಖಾಸಗಿ ರಂಗ ಹೂಡಿಕೆ ಮಾಡಿ ಖರ್ಚು ಮಾಡಬೇಕು. ಹೀಗಾಗಿ ಮೂಲಸೌಕರ್ಯ ಕ್ಷೇತ್ರದ ಮೇಲೆ ಹೆಚ್ಚಿನ ಹಣವನ್ನು ಖರ್ಚು ಮಾಡಲು ಕೇಂದ್ರ ಸರ್ಕಾರವೇ ಹೂಡಿಕೆ ಮಾಡಲಿದೆ. ಹೆದ್ದಾರಿ, ವಿಮಾನ ನಿಲ್ದಾಣ, ಬಂದರು ನಿರ್ಮಾಣ ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡುವ ಸಾಧ್ಯತೆ ಇದೆ.

ಆಹಾರ, ರಸಗೊಬ್ಬರ ಸಬ್ಸಿಡಿ ಮೊತ್ತ ಹೆಚ್ಚಳ ದೇಶದಲ್ಲಿ ರೈತರ ಪ್ರತಿಭಟನೆ ಹಾಗೂ ಪಂಚ ರಾಜ್ಯ ಚುನಾವಣೆಯ ಹಿನ್ನಲೆಯಲ್ಲಿ ಆಹಾರ, ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಮುಂದುವರಿಸಬಹುದು. ಕೊರೊನಾ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ನರೇಗಾ ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ಅನಿವಾರ್ಯ. ಕೊರೊನಾದ ಮಹಾಮಾರಿಯ ಹಿನ್ನಲೆಯಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ. ಬಂಡವಾಳ ವೆಚ್ಚವನ್ನು ಹೆಚ್ಚು ಮಾಡುವುದರಿಂದ ಜಿಡಿಪಿಯ ಬೆಳವಣಿಗೆಗೆ ಸಹಾಯಕವಾಗುತ್ತೆ.

ರಫ್ತು ಉತ್ತೇಜಕಗಳ ಮೇಲೆ ಹೂಡಿಕೆ ಹೆಚ್ಚಳ ರಫ್ತು ಉತ್ತೇಜನ ಹಾಗೂ ದೇಶೀಯ ಹೂಡಿಕೆ ಹೆಚ್ಚಳಕ್ಕೆ ಬಜೆಟ್​ನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ದೇಶದ 740 ಜಿಲ್ಲೆಗಳ ಪೈಕಿ 700 ಜಿಲ್ಲೆಗಳಿಂದಲೂ ವಿದೇಶಕ್ಕೆ ತಲಾ ಒಂದು ಸ್ಥಳೀಯ ಉತ್ಪನ್ನ ರಫ್ತು ಮಾಡುವ ಯೋಜನೆಯನ್ನು ಘೋಷಿಸುವ ನಿರೀಕ್ಷೆ ಇದೆ. ಈ ರಫ್ತು ಯೋಜನೆಗೆ ಕೇಂದ್ರದ ಬಜೆಟ್​ನಲ್ಲಿ ₹ 10 ಸಾವಿರ ಕೋಟಿ ಅನುದಾನ ಸಿಗುವ ನಿರೀಕ್ಷೆಯಿದೆ. ಉದ್ಯಮ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಘೋಷಿಸಲಾಗಿದೆ. ಚಿಪ್, ಸೆಮಿ ಕಂಡಕ್ಟರ್, ಜವಳಿ ಉತ್ಪನ್ನ, ಮೊಬೈಲ್, ಆಟೊಮೊಬೈಲ್ ಸೇರಿದಂತೆ ಹಲವು ಉತ್ಪನ್ನಗಳ ಉತ್ಪಾದನೆಗೆ ಉತ್ಪಾದನೆ ಆಧರಿತ ಪೋತ್ಸಾಹ ಧನ ಯೋಜನೆ ಘೋಷಿಸಲಾಗಿದೆ. ಇದನ್ನು ಮತ್ತಷ್ಟು ಕ್ಷೇತ್ರಗಳಿಗೆ ವಿಸ್ತರಿಸಬಹುದು. ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡಬಹುದು.

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ವರ್ಷದ ಬಜೆಟ್​ನಲ್ಲಿ ₹ 2.23 ಲಕ್ಷ ಕೋಟಿ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಲಾಗಿತ್ತು. ಈ ವರ್ಷ ದೇಶದಲ್ಲಿ ಸದ್ಯ ಕೊರೊನಾದ 3ನೇ ಅಲೆ ನಿಯಂತ್ರಣದಲ್ಲಿದ್ದರೂ ಮುಂದಿನ ದಿನಗಳಲ್ಲಿ ಎದುರಾಗುವ ಸಾಂಕ್ರಾಮಿಕವನ್ನು ನಿಭಾಯಿಸಲು ಹೆಚ್ಚಿನ ಹಣವನ್ನು ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಬಲಪಡಿಸಲು ನೀಡುವ ಅನಿವಾರ್ಯತೆ ಇದೆ. ದೇಶದ ಜನರಿಗೆ ಬೂಸ್ಟರ್ ಡೋಸ್ ನೀಡುತ್ತಿರುವಂತೆ ಆರ್ಥಿಕ ಕ್ಷೇತ್ರದ ಚೇತರಿಕೆಗೆ ಹಾಗೂ ಆರೋಗ್ಯ ಕ್ಷೇತ್ರಕ್ಕೂ ನಿರ್ಮಲಾ ಸೀತಾರಾಮನ್ ಬಜೆಟ್ ಮೂಲಕ ಬೂಸ್ಟರ್ ಡೋಸ್ ನೀಡುವ ನಿರೀಕ್ಷೆ ಇದೆ.

ಬಂಡವಾಳ ಹಿಂತೆಗೆತ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 1.75 ಲಕ್ಷ ಕೋಟಿ ಬಂಡವಾಳ ಹಿಂತೆಗೆತದ ಗುರಿ ಇದ್ದರೂ ಸಾಧಿಸಿರುವುದು ಕೇವಲ ₹ 9,329 ಕೋಟಿ ಮಾತ್ರ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತ ಯಶಸ್ವಿಯಾಗಿ ನಡೆದರೆ, ಸರ್ಕಾರಕ್ಕೆ ಹೆಚ್ಚು ಹಣ ಹರಿದು ಬರಲಿದೆ. ಇದರಿಂದ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡಬಹುದು. 2022ರಲ್ಲಿ ಎಲ್‌ಐಸಿ ಐಪಿಒ ಷೇರು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಈ ವರ್ಷ ಒಂದೆರೆಡು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಬಂಡವಾಳ ಹಿಂತೆಗೆತ ಮಾಡುವ ಸಾಧ್ಯತೆ ಇದೆ. ಆರ್‌ಬಿಐನಿಂದ ಕೇಂದ್ರ ಸರ್ಕಾರಕ್ಕೆ ಸಿಗುವ ಡಿವಿಡೆಂಡ್​ನಿಂದ ಕೇಂದ್ರ ಸರ್ಕಾರದ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತೆ. 2022-21ರಲ್ಲಿ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ₹ 99,122 ಕೋಟಿ ರೂಪಾಯಿ ಡಿವಿಡೆಂಟ್ ನೀಡಿದೆ.

ಬಜೆಟ್​ನಲ್ಲಿ ಸುಧಾರಣೆ, ಅಭಿವೃದ್ಧಿ ದೃಷ್ಟಿಕೋನ ಹಾಗೂ ಜನಪ್ರಿಯತೆಗಿಂತಲೂ ಜನಪರ ಬಜೆಟ್ ನೀಡುವ ಮೂಲಕ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿಸುವತ್ತ ನಿರ್ಮಲಾ ಸೀತಾರಾಮನ್ ಯತ್ನಿಸಬಹುದು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯತ್ನ ಭಾರತದಲ್ಲಿ 2021ರ ಡಿಸೆಂಬರ್​ನಲ್ಲಿ ನಿರುದ್ಯೋಗದ ಪ್ರಮಾಣವು ಶೇ 8ರಷ್ಟಿದೆ ಎಂದು ಸಿಎಂಐಇ ಹೇಳಿದೆ. 2020 ಹಾಗೂ 2021ರ ಪೂರ್ತಿ ವರ್ಷ ದೇಶದ ನಿರುದ್ಯೋಗದ ಪ್ರಮಾಣ ಶೇ 7ರಷ್ಟಿತ್ತು. ಯಾವುದೇ ದೇಶಕ್ಕಾಗಲೀ, ನಿರುದ್ಯೋಗ ಪ್ರಮಾಣವು ಶೇ 5ಕ್ಕಿಂತ ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬಜೆಟ್​ನಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ನಿರುದ್ಯೋಗ ಸಮಸ್ಯೆ ನಿವಾರಣೆಯು ನಿರ್ಮಲಾ ಸೀತಾರಾಮನ್ ಮುಂದಿರುವ ಸವಾಲು ಕೂಡ ಹೌದು.

ವಿತ್ತೀಯ ಕೊರತೆ ತಗ್ಗಿಸುವ ಸವಾಲು 2021-22ರಲ್ಲಿ ವಿತ್ತೀಯ ಕೊರತೆಯು ₹ 6.90 ಲಕ್ಷ ಕೋಟಿ ರೂಪಾಯಿಗೆ ಕುಸಿಯಬಹುದು ಎಂಬ ಅಂದಾಜನ್ನು ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾಗಿದೆ. 2020-21ರಲ್ಲಿ ವಿತ್ತೀಯ ಕೊರತೆಯು 10.76 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಸರ್ಕಾರದ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಉಂಟಾಗುವ ಕೊರತೆಯನ್ನು ವಿತ್ತೀಯ ಕೊರತೆ ಎಂದು ಕರೆಯುತ್ತೇವೆ. ವಿತ್ತೀಯ ಕೊರತೆಯ ಹಣವನ್ನು ಸರ್ಕಾರ ಸಾಲದ ಮೂಲಕ ತುಂಬಿಕೊಳ್ಳಬೇಕಾಗುತ್ತೆ. ವಿತ್ತೀಯ ಕೊರತೆ ಕಡಿಮೆ ಇದ್ದಷ್ಟು ಆ ದೇಶದ ಆರ್ಥಿಕತೆ ಸದೃಢವಾಗಿದೆ ಎಂದೇ ಅರ್ಥ. ನಮ್ಮ ದೇಶದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3 ಕ್ಕಿಂತ ಕಡಿಮೆಗೆ ಇಳಿಸುವ ಗುರಿಯನ್ನು ಈ ಹಿಂದೆ ಯುಪಿಎ ಸರ್ಕಾರದ ಕಾಲದಲ್ಲಿ ಹಾಕಿಕೊಳ್ಳಲಾಗಿತ್ತು. ಆದರೆ, ಕಳೆದೆರೆಡು ವರ್ಷಗಳಿಂದ ಕೊರೊನಾದ ಕಾರಣದಿಂದ ವಿತ್ತೀಯ ಕೊರತೆಯು ಜಿಡಿಪಿಯ ಶೇ 6.8ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3ಕ್ಕೆ ತಗ್ಗಿಸುವ ಗುರಿ ತಲುಪುವುದು ಕೇಂದ್ರ ಸರ್ಕಾರದ ಮುಂದಿರುವ ಸವಾಲು.

ಶೇ 8.5 ರಷ್ಟು ಜಿಡಿಪಿ ಬೆಳವಣಿಗೆಯ ಅಂದಾಜು ಆರ್ಥಿಕ ಸಮೀಕ್ಷೆಯಲ್ಲಿ 2022-23ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ 8 ರಿಂದ ಶೇ 8.5 ರಷ್ಟು ಬೆಳವಣಿಗೆ ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸಕ್ತ 2021-22ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 9.2ರಷ್ಟು ಬೆಳವಣಿಗೆಯಾಗುವ ಅಂದಾಜು ಇದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಪ್ರಸಕ್ತ ಹಾಗೂ 2022ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಚೆನ್ನಾಗಿ ಆಗುತ್ತೆ ಎಂಬ ಆರ್ಥಿಕ ಸಮೀಕ್ಷೆಯ ಕಾರಣದಿಂದ ಸೋಮವಾರ ಮುಂಬೈ ಷೇರುಪೇಟೆಯಲ್ಲಿ ಮೆಚ್ಚುಗೆಯ ಸ್ವಾಗತ ವ್ಯಕ್ತವಾಗಿದೆ. ಸೋಮವಾರ ಸೆನ್ಸೆಕ್ಸ್ 1,057 ಪಾಯಿಂಟ್ ಏರಿಕೆ ಕಂಡು 58,257 ಪಾಯಿಂಟ್ ಗೆ ಏರಿಕೆಯಾಗಿತ್ತು. ನಿಫ್ಟಿ ಕೂಡ 17,410 ಪಾಯಿಂಟ್ ಗೆ ಏರಿಕೆಯಾಗಿತ್ತು.

ಇದನ್ನೂ ಓದಿ: Economic Survey: ಆಶಾದಾಯಕ ಬಜೆಟ್​ನ ಮುನ್ಸೂಚನೆ ನೀಡಿದ ಆರ್ಥಿಕ ಸಮೀಕ್ಷೆ, ಶೇ 9 ದಾಟಿದ ಜಿಡಿಪಿ ಅಂದಾಜು ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್ 2022ರಿಂದ ಜನ ಸಾಮಾನ್ಯರ ನಿರೀಕ್ಷೆಗಳೇನು?

Published On - 6:19 pm, Mon, 31 January 22