Budget 2022: ಕೇಂದ್ರ ಬಜೆಟ್​ನಿಂದ ಕರ್ನಾಟಕದ ನಿರೀಕ್ಷೆಗಳಿವು: ರಾಜ್ಯದ ಅಭಿವೃದ್ಧಿಗೆ ಸಿಗಲಿದೆಯೇ ನಿರೀಕ್ಷಿತ ನೆರವು

ಭಾರತದ ಇತರೆಲ್ಲ ರಾಜ್ಯಗಳಂತೆ ಕರ್ನಾಟಕವೂ ಕೊರೊನಾ 3ನೇ ಅಲೆಯಲ್ಲಿ ಸಿಲುಕಿದೆ. ಸತತ ಎರಡು ವರ್ಷಗಳ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ರಾಜ್ಯಕ್ಕೆ ಸಹಜವಾಗಿಯೇ ಪುನಶ್ಚೇತನಕ್ಕೆ ನೆರವು ಸಿಗಬಹುದೆಂಬ ನಿರೀಕ್ಷೆಗಳಿವೆ.

Budget 2022: ಕೇಂದ್ರ ಬಜೆಟ್​ನಿಂದ ಕರ್ನಾಟಕದ ನಿರೀಕ್ಷೆಗಳಿವು: ರಾಜ್ಯದ ಅಭಿವೃದ್ಧಿಗೆ ಸಿಗಲಿದೆಯೇ ನಿರೀಕ್ಷಿತ ನೆರವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 31, 2022 | 8:25 PM

ಬೆಂಗಳೂರು: ಭಾರತದ ಇತರೆಲ್ಲ ರಾಜ್ಯಗಳಂತೆ ಕರ್ನಾಟಕವೂ ಕೊರೊನಾ 3ನೇ ಅಲೆಯಲ್ಲಿ ಸಿಲುಕಿದೆ. ಸತತ ಎರಡು ವರ್ಷಗಳ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ರಾಜ್ಯಕ್ಕೆ ಸಹಜವಾಗಿಯೇ ಪುನಶ್ಚೇತನಕ್ಕೆ ನೆರವು ಸಿಗಬಹುದೆಂಬ ನಿರೀಕ್ಷೆಗಳಿವೆ. ರಾಜ್ಯ ಬಜೆಟ್ ಮಂಡನೆಗೆ ಸರಿಯಾಗಿ ಒಂದು ತಿಂಗಳು ಮೊದಲು ಕೇಂದ್ರ ಬಜೆಟ್ (Union Budget 2022) ಮಂಡನೆಯಾಗುತ್ತಿದೆ. ಕರ್ನಾಟಕ ರಾಜ್ಯ ಬಜೆಟ್ ಮಾರ್ಚ್ 1ರಂದು ಮಂಡನೆಯಾದರೆ, ಕೇಂದ್ರ ಬಜೆಟ್ ನಾಳೆ, ಅಂದರೆ ಸೋಮವಾರ (ಫೆ.1) ಮಂಡನೆಯಾಗುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ವಿವಿಧ ವಲಯಗಳು ಕಳೆದ ಕೆಲ ತಿಂಗಳುಗಳಿಂದ ಅಲ್ಪಸ್ವಲ್ಪ ಚೇತರಿಕೆ ದಾಖಲಿಸಿವೆ. ಕರ್ನಾಟಕದ ವಿವಿಧ ವಲಯಗಳ ನಿರೀಕ್ಷೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಕೃಷಿ: ಎಲ್ಲ ಉತ್ಪನ್ನಗಳಿಗೆ ಬೇಕು ಬೆಂಬಲ ಬೆಲೆ ಕೃಷಿ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತ ನಂತರ ಹೆಚ್ಚೂ ಕಡಿಮೆ ಒಂದು ವರ್ಷ ರೈತರು ಪ್ರತಿಭಟನೆ ನಡೆಸಿದರು. ನಂತರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ಭರವಸೆ ನೀಡಿದರು. ರೈತರ ಬೇಡಿಕೆಗಳಿಗೆ ಸರ್ಕಾರ ಹೇಗೆ ಸ್ಪಂದಿಸಬಹುದು ಎಂಬ ಅಂಶವು ಇದೇ ಕಾರಣಕ್ಕೆ ಎಲ್ಲರ ಗಮನ ಸೆಳೆದಿದೆ. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ಸಿಗಬೇಕು. ಕೃಷಿ ವಿಮೆಯ ವ್ಯಾಪ್ತಿ ವಿಸ್ತರಿಸಬೇಕು. ಕೃಷಿ ಬೆಳೆಗಳ ಖರೀದಿ ಮತ್ತು ವಿತರಣೆಯಲ್ಲಿರುವ ಹಲವು ಸಮಸ್ಯೆಗಳು ಪರಿಹಾರವಾಗಬೇಕು. ರೈತರಿಗೆ ಸುಲಭದಲ್ಲಿ ಸಾಲ ಸಿಗುವಂತೆ ಆಗಬೇಕು ಎನ್ನುವ ಬೇಡಿಕೆಗಳು ಕೃಷಿಕರ ವಲಯದಲ್ಲಿ ಕೇಳಿ ಬಂದಿವೆ. ರೈತರ ಉತ್ಪನ್ನಗಳಿಗೆ ಶಾಸನ ಬದ್ಧ ಕನಿಷ್ಠ ಬೆಂಬಲ ಬೆಲೆಯು ಹಲವು ಸಮಸ್ಯೆಗಳನ್ನು ಪರಿಹರಿಸಲಿದೆ. ಕೊರೊನಾ ಪಿಡುಗಿನಿಂದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ಅವರು ಚೇತರಿಸಿಕೊಳ್ಳಲು ಸರ್ಕಾರವು ಗರಿಷ್ಠ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸುತ್ತಾರೆ.

ಆಹಾರ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವುದು ಮತ್ತು ವಿತರಿಸುವುದಕ್ಕೆ ಸರ್ಕಾರಗಳು ಗಮನ ಹರಿಸಬೇಕು. ಪಡಿತರ ವಿತರಣೆ ಯೋಜನೆಯಡಿ ಅಕ್ಕಿಯ ಜೊತೆಗೆ ಕಿರುಧಾನ್ಯಗಳು, ಕಾಳುಗಳನ್ನೂ ಕೊಡಬಹುದು. ಉತ್ತಮ ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳನ್ನು ಮಧ್ಯಾಹ್ನ ಬಿಸಿಯೂಟ ಯೋಜನೆಯ ಭಾಗವಾಗಿಸಬೇಕು. ಆಗ ರೈತರಿಗೂ ಅನುಕೂಲವಾಗಲಿದೆ, ಮಕ್ಕಳಿಗೂ ಪೌಷ್ಟಿಕಾಂಶದ ಆಹಾರ ದೊರೆಯುತ್ತದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಡುತ್ತಾರೆ.

ಉದ್ಯಮ: ಬಡ್ಡಿ ಮನ್ನಾ ಮಾಡಿ, ಬಂಡವಾಳ ಹೊಂಚಿಕೊಳ್ಳಲು ನೆರವಾಗಿ ಕರ್ನಾಟಕದ ಕೈಗಾರಿಕಾ ವಲಯವು ಸಹ ಕೊರೊನಾದಿಂದ ಕಂಗಾಲಾಗಿದೆ. ಬೇಡಿಕೆ ಕೊರತೆ ಮತ್ತು ವಿತರಣೆ ಸರಪಳಿಯಲ್ಲಿ ಉಂಟಾದ ಸಮಸ್ಯೆಗಳಿಂದ ಸಾಕಷ್ಟು ಉದ್ಯಮಗಳು ಬಾಗಿಲು ಹಾಕಿದವು. ಹೀಗಾಗಿಯೇ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ (Micro, Small & Medium Enterprises – MSMEs) ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

ಸಣ್ಣ ಉದ್ದಿಮೆಗಳು ದುಡಿಯುವ ಬಂಡವಾಳವಾಗಿ ಪಡೆದಿರುವ ಸಾಲಕ್ಕೆ ಕೆಂದ್ರ ಸರ್ಕಾರವು ಬಡ್ಡಿ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಒಕ್ಕೂಟವು (Karnataka Small Scale Industries Association – KASSIA) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಕೇಂದ್ರ ಸರ್ಕಾರದಿಂದ ಈ ಭರವಸೆ ಸಿಕ್ಕಿರೆ ಹೊಸದಾಗಿ ಬಂಡವಾಳ ಹೊಂದಿಸಿಕೊಳ್ಳಲು ಸಾಲ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ಸಣ್ಣ ಉದ್ಯಮಿಗಳ ಅಭಿಪ್ರಾಯ. ಇದರ ಜೊತೆಗೆ ಸಾಲ ಪಡೆಯುವಾಗ ಉದ್ಯಮಿಗಳಿಂದ ಬ್ಯಾಂಕ್​ಗಳು ಜಾಮೀನು ಪಡೆಯುವ ವಿಧಾನದಲ್ಲಿಯೂ ಬದಲಾವಣೆ ಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಬಂಡವಾಳ ಹೊಂದಿಸಿಕೊಳ್ಳುವುದರ ಜೊತೆಗೆ ಕೆಲಸಕ್ಕೆ ಉದ್ಯೋಗಿಗಳನ್ನು ಹುಡುಕಲೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಕೌಶಲಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು. ಮೊದಲ ಬಾರಿಗೆ ಉದ್ಯಮ ಕ್ಷೇತ್ರಕ್ಕೆ ಬರುವವರಿಗೆ, ಉದ್ಯಮ ಕುಟುಂಬಗಳ ಬೆಂಬಲ ಇಲ್ಲದವರಿಗೆ ಬಂಡವಾಳ ಹೊಂದಿಸಿಕೊಳ್ಳಲು ನೆರವಾಗಲೆಂದು ಯೋಜನೆ ರೂಪಿಸಬೇಕು ಎಂಬ ಬೇಡಿಕೆಯೂ ರಾಜ್ಯದ ಉದ್ಯಮಿಗಳ ವಲಯದಲ್ಲಿ ಕೇಳಿ ಬರುತ್ತಿದೆ ಎನ್ನುತ್ತಾರೆ ಕಾಸಿಯಾದ ಆಡಳಿತಾಧಿಕಾರಿ ಶಶಿಧರ.

ಆರೋಗ್ಯ: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಲ ತುಂಬಬೇಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಲ ತುಂಬಬೇಕು, ತಳಮಟ್ಟದಲ್ಲಿ ಆರೋಗ್ಯ ಕ್ಷೇತ್ರವನ್ನು ಸದೃಢಗೊಳಿಸಬೇಕು. ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಆಹಾರ ಸಿಗಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಆರೋಗ್ಯ ವಲಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ಸಿಬ್ಬಂದಿಯ ಕೌಶಲಾಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಬೇಕು. ತೀವ್ರ ನಿಗಾ ಘಟಕಗಳಲ್ಲಿ ಕೆಲಸ ಮಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿ ದೊರಕಿಸಿಸಲು ಅನುದಾನ ಮೀಸಲಿಡಬೇಕು ಎಂಬ ಬೇಡಿಕೆಗಳು ಆರೋಗ್ಯ ಕ್ಷೇತ್ರದಲ್ಲಿ ಕೇಳಿಬಂದಿವೆ.

ಇದನ್ನೂ ಓದಿ: Budget 2022: ಕೃಷಿ ಸಾಲ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ರೈಲ್ವೆಗೆ ಹೆಚ್ಚಿನ ಅನುದಾನ; ಬಜೆಟ್​ ಕುರಿತ ಪ್ರಮುಖ ಬೇಡಿಕೆಗಳಿವು ಇದನ್ನೂ ಓದಿ: Budget 2022: ಈ ಬಾರಿಯ ಬಜೆಟ್​ನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಾಧ್ಯತೆ; ಶಿಕ್ಷಣ, ನೀರಾವರಿ ಕ್ಷೇತ್ರದ ನಿರೀಕ್ಷೆಗಳೇನು?

Published On - 8:25 pm, Mon, 31 January 22