Budget 2022: ಕೃಷಿ ಸಾಲ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ರೈಲ್ವೆಗೆ ಹೆಚ್ಚಿನ ಅನುದಾನ; ಬಜೆಟ್ ಕುರಿತ ಪ್ರಮುಖ ಬೇಡಿಕೆಗಳಿವು
Union Budget Expectations: ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 2022-23ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಸುಮಾರು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ. ರೈಲ್ವೆ ಇಲಾಖೆಗೆ ಹಂಚಿಕೆ ಮಾಡುವ ಹಣದ ಮೊತ್ತವನ್ನು ಶೇ.20ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ನಿಂದ ಪ್ರತಿಯೊಂದು ವಲಯಕ್ಕೂ ತಮ್ಮದೇ ಆದ ನಿರೀಕ್ಷೆಗಳಿವೆ. ದೇಶದ ರೈತಾಪಿ ಜನರು ಬಜೆಟ್ನಿಂದ (Budget) ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉದ್ಯಮ, ಕೈಗಾರಿಕೆ ವಲಯಕ್ಕೂ ತಮ್ಮದೇ ಆದ ನಿರೀಕ್ಷೆಗಳಿವೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಿಸಿ, ಯುವಜನತೆಯ ಕೈಗೆ ಉದ್ಯೋಗ ನೀಡಬೇಕಾದ ಸವಾಲು ಕೇಂದ್ರ ಸರ್ಕಾರಕ್ಕೆ ಇದೆ. ಈ ಎಲ್ಲ ಕ್ಷೇತ್ರಗಳ ನಿರೀಕ್ಷೆ ಹಾಗೂ ಸವಾಲುಗಳಿಗೆ ಬಜೆಟ್‌ನಲ್ಲಿ ಉತ್ತರ ನೀಡಬೇಕಾಗಿದೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ, ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಲಿರುವ 2022-23ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಸುಮಾರು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಕೇಂದ್ರದ ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) 16.5 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಸರ್ಕಾರವು ಪ್ರತಿ ವರ್ಷ ಕೃಷಿ ವಲಯದ ಸಾಲದ ಗುರಿಯನ್ನು ಹೆಚ್ಚಿಸುತ್ತಿದೆ. ಈ ಬಾರಿಯೂ 2022-23ಕ್ಕೆ ಗುರಿಯನ್ನು 18-18.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆದರೆ, ರೈತರ ಆದಾಯ ದ್ವಿಗುಣವಾಗಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದ ರೈತರು ಕೇಂದ್ರದ ಕೃಷಿ ಕಾಯಿದೆ ವಿರುದ್ಧ ಹೋರಾಟ ನಡೆಸಿದ್ದರು. ಕೊನೆಗೆ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾಯಿದೆಗಳನ್ನು ವಾಪಾಸ್ ಪಡೆದಿದೆ. ಈಗ ರೈತರ ಮನ ಗೆಲ್ಲಲು ಹೊಸ ಯೋಜನೆ, ಘೋಷಣೆ ಮಾಡುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಪೋತ್ಸಾಹದ ಜೊತೆಗೆ ಇನ್ಯಾವ ಹೊಸ ಯೋಜನೆ ಘೋಷಿಸುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ. ದೇಶದಲ್ಲಿ ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ದೇಶದ ಜನರು ಕಾಯುತ್ತಿದ್ದಾರೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಗೆಲುವಿಗೆ ರೈತರ ಮತಗಳೇ ನಿರ್ಣಾಯಕ. ಹೀಗಾಗಿ ರೈತರ ಮನ ಗೆಲ್ಲಲು ಯಾವುದಾದರೂ ಆಕರ್ಷಕ ಘೋಷಣೆ ಮಾಡಬಹುದೇ ಎಂಬ ಬಗ್ಗೆ ಕುತೂಹಲ ಇದೆ. ಸ್ಥಳೀಯ ಕೃಷಿ ಉತ್ಪನ್ನಗಳನ್ನು ವಿದೇಶಿಗಳಿಗೆ ರಫ್ತು ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುವ ಘೋಷಣೆ ಮಾಡುವ ನಿರೀಕ್ಷೆ ಇದೆ.
ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಹಂಚಿಕೆ ಮಾಡುವ ಹಣದ ಮೊತ್ತವನ್ನು ಶೇ.20ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ 2.15 ಲಕ್ಷ ಕೋಟಿ ರೂ.ಯನ್ನು ರೈಲ್ವೆ ಇಲಾಖೆಗೆ ನೀಡಿದ್ದರು. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ನೀಡುವ ಮೊತ್ತವನ್ನು 2.5 ಲಕ್ಷ ಕೋಟಿ ರೂ.ಗೆ ಏರಿಸುವ ಸಾಧ್ಯತೆ ಇದೆ. ಇದರಿಂದ ರೈಲ್ವೆ ಇಲಾಖೆಗೆ ದೊಡ್ಡ ಮೊತ್ತದ ಬಂಡವಾಳ ಸಿಗಲಿದೆ. ಇದನ್ನು ಬಳಸಿಕೊಂಡು ರೈಲ್ವೆ ಇಲಾಖೆಯು ದೇಶದ ರೈಲ್ವೆಯಲ್ಲಿ ದೀರ್ಘಾವಧಿ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಿದೆ. ಸರಕು-ಸಾಗಣೆ ಮಾರ್ಗಗಳು, ಸ್ಪೀಡ್ ಟ್ರೇನ್ ಹಾಗೂ ರೈಲ್ವೆ ಆಧುನೀಕರಣ, ವ್ಯಾಗನ್, ಲೋಕೋ ಟ್ರೇನ್ ಗಳ ಅಭಿವೃದ್ದಿ, ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಹೆಚ್ಚು ಬಂಡವಾಳ ತೊಡಗಿಸಲು ಸಾಧ್ಯವಾಗುತ್ತದೆ.
ಭಾರತ ದೇಶದಲ್ಲಿ ಆರ್ಥಿಕ ಬೆಳವಣಿಗೆಯಾಗಬೇಕಾದರೆ, ಹೆಚ್ಚಿನ ಹಣವನ್ನು ಸರ್ಕಾರ ಹಾಗೂ ಖಾಸಗಿ ರಂಗ ಹೂಡಿಕೆ ಮಾಡಿ ಖರ್ಚು ಮಾಡಬೇಕು. ಹೀಗಾಗಿ, ಮೂಲಸೌಕರ್ಯ ಕ್ಷೇತ್ರದ ಮೇಲೆ ಹೆಚ್ಚಿನ ಹಣವನ್ನು ಖರ್ಚು ಮಾಡಲು ಕೇಂದ್ರ ಸರ್ಕಾರವೇ ಹೂಡಿಕೆ ಮಾಡಲಿದೆ. ಹೀಗಾಗಿ, ಮೂಲಸೌಕರ್ಯ ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡುವ ಸಾಧ್ಯತೆ ಇದೆ. ದೇಶದಲ್ಲಿ ಹೊಸ ಹೆದ್ದಾರಿ, ಹೊಸ ವಿಮಾನ ನಿಲ್ದಾಣ, ಬಂದರು ನಿರ್ಮಾಣ ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡುವ ಸಾಧ್ಯತೆ ಇದೆ.
ದೇಶದಲ್ಲಿ ರೈತರ ಪ್ರತಿಭಟನೆ ಹಾಗೂ ಪಂಚ ರಾಜ್ಯ ಚುನಾವಣೆಯ ಹಿನ್ನಲೆಯಲ್ಲಿ ಆಹಾರ, ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಮುಂದುವರಿಸಬಹುದು. ಕೊರೊನಾದ ಹಿನ್ನಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ನರೇಗಾ ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ಅನಿವಾರ್ಯ. ಕೊರೊನಾದ ಮಹಾಮಾರಿಯ ಹಿನ್ನಲೆಯಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ. ಬಂಡವಾಳ ವೆಚ್ಚವನ್ನು ಹೆಚ್ಚು ಮಾಡುವುದರಿಂದ ಜಿಡಿಪಿಯ ಬೆಳವಣಿಗೆಗೆ ಸಹಾಯಕವಾಗುತ್ತದೆ.
ರಫ್ತು ಉತ್ತೇಜನ ಹಾಗೂ ದೇಶೀಯ ಹೂಡಿಕೆ ಹೆಚ್ಚಳಕ್ಕೆ ಬಜೆಟ್ ನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ದೇಶದ 740 ಜಿಲ್ಲೆಗಳ ಪೈಕಿ 700 ಜಿಲ್ಲೆಗಳಿಂದಲೂ ವಿದೇಶಕ್ಕೆ ಸ್ಥಳೀಯ ತಲಾ ಒಂದು ಉತ್ಪನ್ನವನ್ನು ರಫ್ತು ಮಾಡುವ ಯೋಜನೆಯನ್ನು ಘೋಷಿಸುವ ನಿರೀಕ್ಷೆ ಇದೆ. ಈ ರಫ್ತು ಯೋಜನೆಗೆ ಕೇಂದ್ರದ ಬಜೆಟ್ ನಲ್ಲಿ 10 ಸಾವಿರ ಕೋಟಿ ರೂಪಾಯಿ ನೀಡುವ ನಿರೀಕ್ಷೆ ಇದೆ. ಉದ್ಯಮ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಘೋಷಿಸಲಾಗಿದೆ. ಚಿಪ್, ಸೆಮಿ ಕಂಡಕ್ಟರ್, ಜವಳಿ ಉತ್ಪನ್ನ, ಮೊಬೈಲ್, ಆಟೋಮೊಬೈಲ್ ಸೇರಿದಂತೆ ಅನೇಕ ಉತ್ಪನ್ನಗಳ ಉತ್ಪಾದನೆಗೆ ಉತ್ಪಾದನೆ ಆಧಾರಿತ ಪೋತ್ಸಾಹ ಧನ ಯೋಜನೆ ಘೋಷಿಸಲಾಗಿದೆ. ಇದನ್ನು ಮತಷ್ಟು ಕ್ಷೇತ್ರಗಳಿಗೆ ವಿಸ್ತರಿಸಬಹುದು. ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡಬಹುದು. ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಿಸಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ನೀಲಿ ನಕಾಶೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡುವಂಥ ಕ್ರಮಗಳನ್ನು ಬಜೆಟ್ ನಲ್ಲಿ ಘೋಷಿಸಬೇಕೆಂಬ ಬೇಡಿಕೆಯೂ ಇದೆ.
ಇದನ್ನೂ ಓದಿ: Budget 2022: ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಾಧ್ಯತೆ; ಶಿಕ್ಷಣ, ನೀರಾವರಿ ಕ್ಷೇತ್ರದ ನಿರೀಕ್ಷೆಗಳೇನು?
Budget Expectations ವೇಗದ ರೈಲುಗಳು, ವಿದ್ಯುದ್ದೀಕರಣ ಮತ್ತು ಹೆಚ್ಚಿನ ಸೌಲಭ್ಯ; ರೈಲ್ವೆ ಬಜೆಟ್ ನಿರೀಕ್ಷೆಗಳೇನು?