ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದ ಅರಂಭದಲ್ಲಿಯೇ ‘ಇದು ಅಮೃತ ಕಾಲದ ಮೊದಲ ಬಜೆಟ್’ ಎಂದು ಘೋಷಿಸಿದ್ದರು. ತಮ್ಮ ಬಜೆಟ್ ಭಾಷಣದುದ್ದಕ್ಕೂ ‘ಅಮೃತಕಾಲ’ ಪದವನ್ನು ಹಲವು ಬಾರಿ ಪುನರುಚ್ಚರಿಸಿದರು. ‘ಅಮೃತಕಾಲದ ಬಗೆಗಿನ ನಮ್ಮ ದೃಷ್ಟಿಯಲ್ಲಿ ತಂತ್ರಜ್ಞಾನ ಪ್ರೇರಿತ ಮತ್ತು ಜ್ಞಾನಾಧಾರಿತ ಆರ್ಥಿಕತೆಯು ಸೇರುತ್ತದೆ. ಪ್ರಬಲ ಸಾರ್ವಜನಿಕ ಹಣಕಾಸು ಮತ್ತು ಸಶಕ್ತ ಹಣಕಾಸು ವಲಯ ಇರುತ್ತದೆ. ಇದನ್ನು ಸಾಧಿಸಲು ಜನರ ಸಹಭಾಗಿತ್ವ (jan-bhaagidari), ಸರ್ವರ ಪ್ರಯತ್ನ (sabka saath, sabka prayas) ಅತ್ಯಗತ್ಯ’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು.
ಮೊದಲು ಅಮೃತಕಾಲ ಎಂದವರು ಮೋದಿ
‘ಅಮೃತಕಾಲ’ ಪದವನ್ನು ಮೊದಲು ಬಳಸಿದ್ದು ಪ್ರಧಾನಿ ನರೇಂದ್ರ ಮೋದಿ. 2021ರಲ್ಲಿ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಭಾಷಣದಲ್ಲಿ ಅವರು ‘ಅಮೃತಕಾಲ’ ಪದವನ್ನು ಬಳಕೆ ಮಾಡಿದ್ದರು. ‘ಭಾರತ ಮತ್ತು ಭಾರತೀಯರು ಸಮೃದ್ಧಿಯ ಹೊಸ ಎತ್ತರ ಮುಟ್ಟುವಂತೆ ಆಗುವುದು ಅಮೃತಕಾಲದ ಗುರಿಯಾಗಿದೆ. ಮುಂದಿನ 25 ವರ್ಷಗಳ ಅವಧಿ ದೇಶಕ್ಕೆ ಅಮೃತಕಾಲವಾಗಿರಲಿದೆ. ದೇಶದ ನಾಗರಿಕರ ಬದುಕು ಸುಧಾರಿಸಲು ನಾವು ಶ್ರಮಿಸಬೇಕಿದೆ. ಹಳ್ಳಿಗಳು ಮತ್ತು ನಗರಗಳ ನಡುವಣ ಅಂತರ ಕುಗ್ಗಬೇಕು. ಜನರ ಬದುಕಿನಲ್ಲಿ ಸರ್ಕಾರದ ಹಸ್ತಕ್ಷೇಪ ಕನಿಷ್ಠಮಟ್ಟಕ್ಕೆ ಇಳಿಯಬೇಕು ಮತ್ತು ಅತ್ಯಾಧುನಿಕ ಮೂಲಸೌಕರ್ಯ ವ್ಯವಸ್ಥೆ ಎಲ್ಲರಿಗೂ ಸಿಗಬೇಕು’ ಎಂದು ಅವರು ಹೇಳಿದರು.
ನಮ್ಮ ಗುರಿಗಳನ್ನು ಮುಟ್ಟಲು ನಾವು ಹೆಚ್ಚು ಕಾಲ ಕಾಯಬೇಕಿಲ್ಲ. ತಕ್ಷಣದಿಂದಲೇ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಒಂದು ಸೆಕೆಂಡ್ ಸಹ ನಾವು ವ್ಯರ್ಥ ಮಾಡಬಾರದು. ನಮ್ಮ ದೇಶವು ಬದಲಾಗಬೇಕು, ನಾಗರಿಕರಾದ ನಾವು ಸಹ ನಮ್ಮನ್ನು ನಾವು ಬದಲಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದರು. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಒಟ್ಟು 14 ಬಾರಿ ‘ಅಮೃತಕಾಲ’ ಪದ ಬಳಸಿದ್ದರು. ಮೋದಿ ಭಾಷಣದ ವಿಡಿಯೊ ಒಮ್ಮೆ ನೋಡಿ.
The upcoming Amrit Kaal calls for greater focus on harnessing innovation and leveraging technology. #IndiaAt75 pic.twitter.com/U3gQfLSVUL
— Narendra Modi (@narendramodi) August 15, 2022
ಅಮೃತಕಾಲಕ್ಕೇಕೆ ಇಷ್ಟು ಮಹತ್ವ
ವೈದಿಕ ಜ್ಯೋತಿಷದಲ್ಲಿ ‘ಅಮೃತಕಾಲ’ ಪದದ ಬಳಕೆಯಿದೆ. ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಅಮೃತಕಾಲ ಎಂದರೆ ಅದು ಅವರ ಬದುಕಿನ ಅತ್ಯಂತ ಉಚ್ಚ್ರಾಯ ಸ್ಥಿತಿಯನ್ನು ಸೂಚಿಸುತ್ತದೆ. ಈ ಪರಿಕಲ್ಪನೆಯನ್ನು ಮೋದಿ ಅವರು ದೇಶಕ್ಕೆ ಅನ್ವಯಿಸಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ್ದರು. ಬಿಜೆಪಿಯ ಸೈದ್ಧಾಂತಿಕ ಗುರುಸ್ವರೂಪಿ ಸಂಘಟನೆಯಾಗಿರುವ ಆರ್ಎಸ್ನ ಪ್ರಾರ್ಥನೆ ‘ನಮಸ್ತೆ ಸದಾ ವತ್ಸಲೆ’ಯಲ್ಲಿ ‘ಪರಂ ವೈಭವನ್ನೇತುಮೇ ತತ್ ಸ್ವರಾಷ್ಟ್ರಂ’ ಎನ್ನುವ ಸಾಲು ಇದೆ. ‘ದೇಶವನ್ನು ಪರಮವೈಭವದ ಸ್ಥಿತಿಗೆ ಕೊಂಡೊಯ್ಯೋಣ’ ಎನ್ನುವುದು ಈ ಸಂಸ್ಕೃತ ಸಾಹಿತ್ಯದ ಸ್ಥೂಲ ಅರ್ಥವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ‘ಅಮೃತಕಾಲ’ದ ಆಶಯವೂ ‘ಭಾರತದ ಪರಮವೈಭವ ಸ್ಥಿತಿ’ಯೇ ಆಗಿದೆ.
Watch Live: Smt @nsitharaman presents Union Budget 2023-24 in the Parliament. #AmritKaalBudget@PIB_India @FinMinIndia @sansad_tvhttps://t.co/xAd1jup6PN
— NSitharamanOffice (@nsitharamanoffc) February 1, 2023
ಚುನಾವಣೆ ಮತ್ತು ಅಮೃತಕಾಲ
2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಸಿದ್ಧತೆ ಚುರುಕುಗೊಳಿಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಪ್ರಗತಿಯ ವೇಗವನ್ನು ಇದೇ ರೀತಿ ಕಾಯ್ದುಕೊಳ್ಳಲು ಎಂಬುದನ್ನು ಸೂಚಿಸುವ ಉದ್ದೇಶದಿಂದಲೂ ಬಿಜೆಪಿ ನಾಯಕರು ಪದೇಪದೆ ‘ಅಮೃತಕಾಲ’ ಎಂದು ಉಲ್ಲೇಖಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತದೆ. ಸಮೃದ್ಧ ಆರ್ಥಿಕ ಪ್ರತಿಯೊಂದಿಗೆ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಲಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ.
‘ಅಮೃತಕಾಲ’ ಎನ್ನುವುದು ಭವಿಷ್ಯದ ಬಗೆಗಿನ ಆಶಾವಾದವನ್ನೂ ಪ್ರತಿನಿಧಿಸುತ್ತದೆ. ಮುಂದಿನ ದಿನಗಳಲ್ಲಿ ಭಾರತವು ಸ್ವಾವಲಂಬಿಯಾಗುವುದರೊಂದಿಗೆ ಎಲ್ಲ ರೀತಿಯ ಮಾನವೀಯ ಹೊಣೆಗಾರಿಕೆಗಳನ್ನು ನಿರ್ವಹಿಸಲಿದೆ ಎಂಬುದನ್ನೂ ಇದು ಸೂಚಿಸುತ್ತದೆ.
ಇದನ್ನೂ ಓದಿ: Budget 2023 Speech Highlights LIVE: ಕೇಂದ್ರ ಬಜೆಟ್: ಆದಾಯ ತೆರಿಗೆ ವಿನಾಯಿತಿ ಮಿತಿ ರೂ. 7 ಲಕ್ಷಕ್ಕೆ ಹೆಚ್ಚಳ
ಬಜೆಟ್ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 1 February 23