Karnataka Budget 2022: ಕರ್ನಾಟಕ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ: ಕಂದಾಯ ಸಚಿವ ಆರ್ ಅಶೋಕ್ ಜೊತೆ ಸಭೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 09, 2022 | 6:29 PM

ಕಳೆದ ಬಜೆಟ್​ನಲ್ಲಿ ಮೀಸಲಿಟ್ಟ ಅನುದಾನದ ಬಳಕೆ ವಿವರ ಹಾಗೂ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ವಿವರಣೆ ನೀಡಿದರು.

Karnataka Budget 2022: ಕರ್ನಾಟಕ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ: ಕಂದಾಯ ಸಚಿವ ಆರ್ ಅಶೋಕ್ ಜೊತೆ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
Follow us on

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಬಜೆಟ್​ಗೆ (Karnataka Budget) ಸಿದ್ಧತೆ ಆರಂಭಿಸಿದ್ದಾರೆ. ಬಜೆಟ್​ಗೆ ಪೂರ್ವಭಾವಿಯಾಗಿ ಫೆ.25ರವರೆಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಮೊದಲ ದಿನವಾದ ಇಂದು (ಫೆ.9) ಕಂದಾಯ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಲೋಕೋಪಯೋಗಿ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.

ಕಂದಾಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ತಮ್ಮ ಪ್ರಸ್ತಾವ ಸಲ್ಲಿಸಿದರು. ಕಳೆದ ಬಜೆಟ್​ನಲ್ಲಿ ಮೀಸಲಿಟ್ಟ ಅನುದಾನದ ಬಳಕೆ ವಿವರ ಹಾಗೂ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ವಿವರಣೆ ನೀಡಿದರು.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಿಂದ ಬಜೆಟ್​ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ 60ರಿಂದ 100 ವರ್ಷದ ದಾಖಲೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಡಿಜಿಟಲ್ ರೂಪದ ದಾಖಲಾತಿಗೆ ವ್ಯವಸ್ಥೆ ಮಾಡಬೇಕು. ಎಲ್ಲ ಕಡೆ ಡ್ರೋಣ್ ಸಮೀಕ್ಷೆ ಮಾಡಬೇಕು. ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಿಸಬೇಕು. ಮನೆ ಬಾಗಿಲಿಗೆ ಪಿಂಚಣಿ ಕೊಡುವ ವ್ಯವಸ್ಥೆ ತರಬೇಕು. ಇಲಾಖೆಗೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ನಾವು ಕೋರಿರುವ ಅನುದಾನದಲ್ಲಿ ಕೊವಿಡ್ ಪರಿಹಾರದ ಮೊತ್ತವೂ ಸೇರಿದೆ. ಈ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್​ಡಿಆರ್​ಎಫ್ ನಿಯಮಕ್ಕಿಂತಲೂ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಹೆಕ್ಟೇರ್​ಗೆ ₹ 6 ಸಾವಿರ ರೂಪಾಯಿಯಂತೆ ಒಟ್ಟು ₹ 1135 ಕೋಟಿ ಮೊತ್ತವನ್ನು ಇಂದು ಮತ್ತು ನಾಳೆ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಸಚಿವರ ಹೆಸರು ಹೇಳಲಿ
ಸಚಿವರೊಬ್ಬರ ಮಗ ಶಾಲು ಹಂಚುತ್ತಿದ್ದಾನೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಿ ಯಾರು ಶಾಲು ಹಂಚುತ್ತಿದ್ದರು ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ಹೇಳಬೇಕು. ಅವರು ಗೊಂದಲ ಹುಟ್ಟಿಸುವ ರೀತಿ ಮಾತಾಡಬಾರದು. ನಾಳೆ ಮತ್ಯಾರಾದರೂ ಹಿಜಾಬ್ ಹಂಚುತ್ತಿದ್ದರು ಎಂದು ಆರೋಪ ಮಾಡಬಹುದು. ಬೆಂಕಿ ಬಿದ್ದ ಮನೆಯಲ್ಲಿ ಗಳ ತೆಗೆಯೋ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ಯಾವ ರೀತಿಯಲ್ಲಿ ತೀರ್ಪು ಕೊಟ್ಟರೂ ಸರ್ಕಾರ ಅದನ್ನು ಪಾಲಿಸಲಿದೆ. ನ್ಯಾಯಾಲಯ ತೀರ್ಪು ನೀಡುವವರೆಗೆ ಯಾರೂ ಗೊಂದಲ ಮಾಡಿಕೊಳ್ಳಬಾರದು. ತೀರ್ಪು ಬರೋವರೆಗೂ ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಎಲ್ಲರೂ ವರ್ತಿಸಬೇಕು; ಶಾಂತಿಯಿಂದ ಇರಲು ವಿದ್ಯಾರ್ಥಿಗಳಿಗೆ ಮನವಿ: ಸಿಎಂ ಬೊಮ್ಮಾಯಿ

ಇದನ್ನೂ ಓದಿ: CM Bommai cabinet meeting: ಸಿಎಂ ಬೊಮ್ಮಾಯಿ ಸಂಪುಟ ಸಭೆಯ ನಿರ್ಣಯಗಳು -ಕಾನೂನು ಸಚಿವ ಮಾಧುಸ್ವಾಮಿ ವಿವರಣೆ

Published On - 6:28 pm, Wed, 9 February 22