ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಕಡಿಮೆ ಅದಾಯದವರಿಗೆ ವೃತ್ತಿ ತೆರಿಗೆ (Profession Tax) ವಿನಾಯಿತಿ ಮಿತಿಯನ್ನು ಹೆಚ್ಚಿಸಿರುವುದಾಗಿ ತಮ್ಮ ಬಜೆಟ್ನಲ್ಲಿ ಘೋಷಿಸಿದ್ದಾರೆ. ಪ್ರೊಫೆಷನಲ್ ಟ್ಯಾಕ್ಸ್ನಿಂದ ವಿನಾಯಿತಿ ಕೊಡಲಾಗುವ ಮಿತಿಯನ್ನು 25 ಸಾವಿರ ರೂಪಾಯಿಗೆ ಏರಿಸಲಾಗಿದೆ. ಈ ಹಿಂದೆ ಇದರ ಮಿತಿ 15 ಸಾವಿರ ರೂ ಇತ್ತು. ಹಾಗೆಯೇ, ವಾಣಿಜ್ಯ ತೆರಿಗೆ ಇಲಾಖೆ ದಾಖಲೆ ಮಟ್ಟದಲ್ಲಿ ಅದಾಯ ಗಳಿಸಿರುವ ಸಂಗತಿಯನ್ನು ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮತ್ತೊಂದು ಗಮನಾರ್ಹ ನಿರ್ಧಾರದಲ್ಲಿ ಕರ ಸಮಾಧಾನ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದು ಜಿಎಸ್ಟಿ ಪೂರ್ವ ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಇರುವ ಯೋಜನೆಯಾಗಿದೆ.
ವಾಣಿಜ್ಯ ತೆರಿಗೆಗಳು
ಕಡಿಮೆ ಆದಾಯದ ನೌಕರರಿಗೆ ವೃತ್ತಿ ತೆರಿಗೆಯಿಂದ ಮುಕ್ತಿ ಕೊಡಲಾಗಿದೆ. ವೃತ್ತಿ ತೆರಿಗೆಯಿಂದ ವಿನಾಯಿತಿ ಇರುವ ಮಿತಿಯನ್ನು 15 ಸಾವಿರ ರೂ ನಿಂದ 25 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ 25 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರಿಂದ ಪ್ರೊಫೆಷನ್ ಟ್ಯಾಕ್ಸ್ ಪಡೆಯಲಾಗುವುದಿಲ್ಲ. 25 ಸಾವಿರ ರೂಗಿಂತ ಹೆಚ್ಚು ಸಂಬಳ ಪಡೆಯುವವರು 200 ರೂ ವೃತ್ತಿ ತೆರಿಗೆ ಪಾವತಿಸಬೇಕು.
ಜಿಎಸ್ಟಿ ಪೂರ್ವ ತೆರಿಗೆ ವಿವಾದಗಳನ್ನು ಇತ್ಯರ್ಥಗೊಳಿಸಲು ಕರ ಸಮಾಧಾನ ಯೋಜನೆ ಜಾರಿಗೆ ತರಲಾಗುತ್ತಿದೆ. ತೆರಿಗೆ ಬಾಕಿ ಉಳಿಸಿಕೊಂಡವರು ಯಾವುದೇ ವ್ಯಾಜ್ಯದ ತಲೆನೋವಿಲ್ಲದೆ ಬಾಕಿ ಹಣ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 30ರವರೆಗೂ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಬಾಕಿ ತೆರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ ಇರುತ್ತದೆ ಎಂದು ಬಜೆಟ್ನಲ್ಲಿ ಆಶ್ವಾಸನೆ ಕೊಡಲಾಗಿದೆ.
ಇದನ್ನೂ ಓದಿ: Karnataka Budget 2023: ಕಿವಿಯಲ್ಲಿ ಹೂ ಇಟ್ಟುಕೊಂಡೇ ಸಿಎಂ ಬೊಮ್ಮಾಯಿಯನ್ನು ಅಭಿನಂದಿಸಿದ ಡಿಕೆ ಶಿವಕುಮಾರ್
ಜಿಎಸ್ಟಿ ಸಂಗ್ರಹ: ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ ಗಣನೀಯವಾಗಿ ಹೆಚ್ಚಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಸಿಗುವ ಜಿಎಸ್ಟಿ ಪರಿಹಾರ ಸೇರಿ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹವು 93,558 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್ಟಿ ಪರಿಹಾರ ಹೊರತುಪಡಿಸಿ 72,010 ಕೋಟಿ ರೂ ಗುರಿ ಹೊಂದಿತ್ತು. ಇದನ್ನು ಮೀರಿ 83,010 ಕೋಟಿ ರೂ ಸಂಗ್ರಹ ಮಾಡಲಾಗುತ್ತಿದೆ. ಕೇಂದ್ರದಿಂದ ಜಿಎಸ್ಟಿ ಪರಿಹಾರವಾಗಿ 10,548 ಕೋಟಿ ರೂ ಸಿಗಲಿದೆ.
2023-24 ರ ಸಾಲಿನ ವರ್ಷಕ್ಕೆ ಜಿಎಸ್ಟಿ ಪರಿಹಾರ ಹೊರತುಪಡಿಸಿ 92,000 ಕೋಟಿ ರೂ ತೆರಿಗೆ ಸಂಗ್ರಹಿಸಬೇಕೆಂದು ವಾಣಿಜ್ಯ ಇಲಾಖೆಗೆ ಗುರಿ ಕೊಡಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 2022-23ರ ಸಾಲಿನಲ್ಲಿ 15 ಸಾವಿರ ರೂಗಳ ಗುರಿ ಹೊಂದಿತ್ತು. ಆ ಗುರಿ ಮೀರಿ 17 ಕೋಟಿ ರೂ ರೆವೆನ್ಯೂ ಸಂಗ್ರಹ ಆಗುವ ನಿರೀಕ್ಷೆ ಇದೆ. ಮುಂದಿನ ಹಣಕಾಸು ವರ್ಷಕ್ಕೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಗೆ 19 ಸಾವಿರ ಕೋಟಿ ರೂ ರಾಜಸ್ವ ಸಂಗ್ರಹದ ಗುರಿ ಕೊಡಲಾಗಿದೆ.\
Published On - 2:01 pm, Fri, 17 February 23