ಬೆಂಗಳೂರು ಮೂಲದ ಫಿನ್ಟೆಕ್ ಸ್ಟಾರ್ಟ್ಅಪ್ವೊಂದು ಪ್ರತಿಭೆಗಳನ್ನು ಸೆಳೆಯುವ ಉದ್ದೇಶದಿಂದ ಅಮೋಘವಾದ ಆಲೋಚನೆಯೊಂದನ್ನು ಜಾರಿಗೆ ತರುವುದಕ್ಕೆ ಮುಂದಾಗಿದೆ. ವಾರದಲ್ಲಿ ಮೂರೇ ದಿನ ಸಿಬ್ಬಂದಿಯಿಂದ ಕೆಲಸ ಮಾಡಿಸುವ ಆಲೋಚನೆ ಇದು. ಭಾರತೀಯ ಕಂಪೆನಿಗಳಲ್ಲಿ ಪ್ರತಿಭೆಗಳಿಗೆ ಕೊರತೆ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚೆಚ್ಚು ತಂತ್ರಜ್ಞಾನ ಪ್ರತಿಭೆಗಳನ್ನು ಸೆಳೆದುಕೊಳ್ಳುವುದು ಕಂಪೆನಿಯ ಉದ್ದೇಶವಾಗಿದೆ. ಫಿನ್ಟೆಕ್ ಕಂಪೆನಿಯಾದ ಸ್ಲೈಸ್ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವಾರದಲ್ಲಿ ಮೂರು ದಿನ ಕೆಲಸವನ್ನು ಪ್ರಸಕ್ತ ಮಾರುಕಟ್ಟೆ ದರದ ಶೇ 80ರಷ್ಟು ವೇತನದೊಂದಿಗೆ ನೀಡುತ್ತಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. “ಇದು ಕಂಪೆನಿಗಳಿಗೂ- ಉದ್ಯೋಗಿಗಳಿಗೂ ಗೆಲುವಿನ ಸನ್ನಿವೇಶ. ಇದರಿಂದಾಗಿ ಉದ್ಯೋಗಿಗಳು ಇತರ ಆಸಕ್ತಿಗಳಲ್ಲಿ ಅಥವಾ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಸದ್ಯಕ್ಕೆ ಸ್ಥಿರವಾದ ಠೇವಣಿ ಮತ್ತು ಅನುಕೂಲವನ್ನೇ ಸ್ಲೈಸ್ನಿಂದ ನೀಡಲಾಗುತ್ತಿದೆ,” ಎಂದು ಕಂಪೆನಿಯ ಸ್ಥಾಪಕ ರಾಜನ್ ಬಜಾಜ್ ಹೇಳಿರುವುದಾಗಿ ವರದಿ ಆಗಿದೆ.
ಇದು ಭವಿಷ್ಯದ ಉದ್ಯೋಗ, ಎಂದು 28 ವರ್ಷದ ರಾಜನ್ ಫೋನ್ ಸಂದರ್ಶನದಲ್ಲಿ ಬ್ಲೂಮ್ಬರ್ಗ್ಗೆ ಹೇಳಿದ್ದಾರೆ. ಜನರು ಕೆಲಸಕ್ಕೆ ಕಟ್ಟಿ ಹಾಕಿಕೊಳ್ಳುವುದಕ್ಕೆ ಇಷ್ಟಪಡಲ್ಲ.ಜಾಗತಿಕ ಹೂಡಿಕೆದಾರರು ಬಿಲಿಯನ್ಗಟ್ಟಲೆ ಡಾಲರ್ಗಳನ್ನು ಟೆಕ್ ಸ್ಟಾರ್ಟ್ಅಪ್ಗಳ ಮೇಲೆ ಭಾರತದಲ್ಲಿ ಸುರಿಯುತ್ತಿದ್ದಾರೆ. ತಂಡವನ್ನು ಕಟ್ಟುವುದಕ್ಕೆ ಉದ್ಯಮಿಗಳ ಮೇಲೆ ಒತ್ತಡ ಇದೆ. ಪ್ರತಿಭೆಗಳಿಗೆ ಕೊರತೆ ಇರುವುದು ಐ.ಟಿ. ಔಟ್ಸೋರ್ಸ್ ಕಂಪೆನಿಗಳಿಗೆ, ಗ್ಲೋಬಲ್ ರೀಟೇಲರ್ಗಳಿಗೆ ಮತ್ತು ವಾಲ್ಸ್ಟ್ರೀಟ್ ಬ್ಯಾಕ್ಸ್ಗಳ ತಂತ್ರಜ್ಞಾನ ಕೇಂದ್ರಗಳಿಗೆ ಹೀಗೆ ಬೆಳೆಯುತ್ತಿರುವ ನೂರಾರು ಸಂಖ್ಯೆಯ ಸ್ಟಾರ್ಟ್ ಅಪ್ಗಳಿಗೆ ಸವಾಲಾಗಿದೆ.
ಸ್ಲೈಸ್ ತಿಳಿಸುವಂತೆ, ಈ ಧೋರಣೆಯು ಪ್ರತಿಸ್ಪರ್ಧಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ಕಂಪೆನಿಗೆ 450 ಸಿಬ್ಬಂದಿ ಇದ್ದಾರೆ ಮತ್ತು 1000 ಎಂಜಿನಿಯರ್ಗಳನ್ನು ಮತ್ತು ಪ್ರಾಡಕ್ಟ್ ಮ್ಯಾನೇಜರ್ಗಳನ್ನು ಮುಂದಿನ ಮೂರು ವರ್ಷದಲ್ಲಿ ನೇಮಿಸಿಕೊಳ್ಳುವುದಕ್ಕೆ ಬಯಸಿದೆ. “ಉದ್ಯೋಗಿಗಳು ಮೂರು ದಿನ ಕೆಲಸ ಮಾಡಿದರೂ ಸಂಬಳ ಹಾಗೂ ಪೂರ್ತಿ ಅನುಕೂಲ ಪಡೆಯುತ್ತಾರೆ. ಬಾಕಿ ಸಮಯವನ್ನು ತಮ್ಮ ಕನಸುಗಳನ್ನು ಬೆನ್ನಟ್ಟಲು ಹಾಗೂ ಕೆಲಸದ ಹೊರತಾದ ಆಸಕ್ತಿಗಾಗಿ ಮೀಸಲಿಡಬಹುದು,” ಎನ್ನುತ್ತಾರೆ ರಾಜನ್. ಅಂದಹಾಗೆ ಈಗಿನ ಈ ಬೆಳವಣಿಗೆಯು ಕಂಡುಬಂದಿರುವುದು ಈಚೆಗೆ ಹಲವು ಕಂಪೆನಿಗಳು ಕೆಲಸದ ಅವಧಿಯನ್ನು ಕಡಿಮೆ ಮಾಡಿ, ಪ್ರೋತ್ಸಾಹಧನ ನೀಡುತ್ತಾ ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿರುವುದು ಸುದ್ದಿಯಾಗುತ್ತಿರುವ ಮೇಲೆಯೇ.
ಈಚೆಗೆ ಸೈಬರ್ ಸೆಕ್ಯೂರಿಟಿ ಕಂಪೆನಿ ಟಿಎಸಿ ಸೆಕ್ಯೂರಿಟಿಯು ವಾರದಲ್ಲಿ ನಾಲ್ಕು ದಿನದ ಕೆಲಸಕ್ಕೆ ಇಳಿಸಿತು. ಕಳೆದ ಏಳು ತಿಂಗಳಿಂದ ಶುಕ್ರವಾರ ಕೂಡ ಕಂಪೆನಿ ಕಾರ್ಯ ನಿರ್ವಹಿಸುತ್ತಿಲ್ಲ. ಒಂದು ವೇಳೆ ಇದರಿಂದ ಸಿಬ್ಬಂದಿಗೆ ಸಂತೋಷ ಆಗುತ್ತದೆ ಮತ್ತು ಉತ್ಪಾದಕತೆ ಜಾಸ್ತಿ ಆಗುತ್ತದೆ ಅನ್ನೋದಾದರೆ ಮುಂಬೈ ಕಚೇರಿಯಲ್ಲಿ ಇದನ್ನೇ ಶಾಶ್ವತ ಮಾಡುವುದಾಗಿ ಕಂಪೆನಿ ಹೇಳಿದೆ. ಅಂದಹಾಗೆ 1926ನೇ ಇಸವಿಯಲ್ಲಿ ಹೆನ್ರಿ ಫೋರ್ಡ್ ಮಹತ್ತರ ನಿರ್ಧಾರ ಕೈಗೊಂಡು, ಆರು ದಿನಗಳ ಕಾಲ ಇದ್ದ ಕೆಲಸವನ್ನು ಐದು ದಿನಕ್ಕೆ ಇಳಿಸಿದ್ದರು. ಆ ಪ್ರಯೋಗವು ಫಲ ಕೊಟ್ಟಿತು. ಉತ್ಪಾದನೆ ಕಡಿಮೆ ಆಗಲಿಲ್ಲ. ಇದೀಗ ವಾರದಲ್ಲಿ ನಾಲ್ಕು ದಿನದ ಕೆಲಸ ಮಾಡುವ ಪ್ರಯೋಗ ಸಿಬ್ಬಂದಿಯ ಉತ್ಪಾದನೆಯನ್ನು ಹೆಚ್ಚು ಮಾಡುತ್ತಿದೆ. ಐಸ್ಲ್ಯಾಂಡ್ ಮತ್ತು ಐರ್ಲೆಂಡ್ನಂಥ ದೇಶಗಳು ಇದನ್ನು ಪ್ರಯತ್ನಿಸುತ್ತಿವೆ. 2018ರಲ್ಲಿ ಆಯ್ದ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನದ ಕೆಲಸದ ಪ್ರಯೋಗವನ್ನು ಅಮೆಜಾನ್ ಮಾಡಿತ್ತು. ಚೀನಾ ಕೂಡ ಅಂಥದ್ದೇ ಪ್ರಯತ್ನದಲ್ಲಿದೆ.
ಹತ್ತಿರ ಹತ್ತಿರ ಎರಡು ವರ್ಷಗಳ ನಂತರ ಕಚೇರಿಗೆ ಮರಳುತ್ತಿರುವ ಹತ್ತಾರು ಲಕ್ಷ ಸಂಖ್ಯೆಯ ಎಂಜಿನಿಯರ್ಗಳಿದ್ದಾರೆ. ಇನ್ನು ಸ್ಲೈಸ್ ಕಂಪೆನಿಯು ಸೋಮವಾರದಿಂದ ಶುರುವಾಗುವಂತೆ ಮೂರು ದಿನದ ಕೆಲಸವನ್ನು ಸಿಬ್ಬಂದಿಯ ಅನುಕೂಲಕ್ಕೆ ತಕ್ಕಂತೆ ಮಾಡುವುದಕ್ಕೆ ಅವಕಾಶ ನೀಡಿದೆ. ಸ್ಲೈಸ್ ಸ್ಟಾರ್ಟ್ ಅಪ್ ಕಂಪೆನಿಯಾಗಿದ್ದು, 2016ರಲ್ಲಿ ಆರಂಭವಾಯಿತು. ಭಾರತದ ಯುವಜನರಿಗೆ ಕ್ರೆಡಿಟ್ ಕಾರ್ಡ್ ನೀಡುವ ಕಂಪೆನಿ ಇದಾಗಿದ್ದು, ಕಳೆದ ತಿಂಗಳು 1,10,000ಕ್ಕೂ ಹೆಚ್ಚು ಕಾರ್ಡ್ಗಳನ್ನು ವಿತರಿಸಿದೆ. ಹೊಸ ನೇಮಕಾತಿಯನ್ನು ಸಣ್ಣ ತಂಡಗಳಾಗಿ ಮಾಡಲಾಗುತ್ತದೆ. ಕ್ರಿಪ್ಟೋಕರೆನ್ಸಿ ಅಥವಾ ಬೈ ನೌ ಪೇ ಲೇಟರ್ ಉತ್ಪನ್ನಗಳಿಗಾಗಿ ಕೆಲಸ ಮಾಡಬೇಕಾಗುತ್ತದೆ. ಈಗಾಗಲೇ ಇರುವ ಉದ್ಯೋಗಿಗಳೂ ವಾರದಲ್ಲಿ ಮೂರು ದಿನ ಕೆಲಸದ ಕಾರ್ಯಕ್ರಮಕ್ಕೆ ಅರ್ಹರು. “ವಾರದಲ್ಲಿ ಮೂರು ದಿನದ ಕೆಲಸ ಮಾಡುವುದು ಕೆಲವು ನಿರ್ದಿಷ್ಟ ಸಾಮರ್ಥ್ಯದ ಪ್ರತಿಭೆಗಳನ್ನು ಸೆಳೆಯುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಏಕೆಂದರೆ ಇಂಥ ಸವಲತ್ತನ್ನು ಗೂಗಲ್ ಮತ್ತು ಅಮೆಜಾನ್ನಂಥ ದೊಡ್ಡ ಕಂಪೆನಿಗಳ ಸಹ ನೀಡಲ್ಲ,” ಎಂದು ರಾಜನ್ ಹೇಳಿರುವುದಾಗಿ ಬ್ಲುಮ್ಬರ್ಗ್ ವರದಿ ಮಾಡಿದೆ.
ಇದನ್ನೂ ಓದಿ: 4 Days Work In A Week: ಭಾರತಕ್ಕೆ ಬಂತು ವಾರದಲ್ಲಿ ನಾಲ್ಕೇ ದಿನ ಕೆಲಸ; ಯಾವುದು ಈ ಐಟಿ ಕಂಪೆನಿ?