ನವದೆಹಲಿ, ನವೆಂಬರ್ 22: ಕೇಂದ್ರ ಸರ್ಕಾರಿ ನೌಕರರೆಲ್ಲರೂ 8ನೇ ವೇತನ ಆಯೋಗ ರಚನೆಯ ಘಳಿಗೆಗೆ ಕಾಯುತ್ತಿದ್ದಾರೆ. ನೌಕರರು ಮಾತ್ರವಲ್ಲ ಪಿಂಚಣಿದಾರರೂ ಕೂಡ ಕಾತರದಿಂದ ಕಾಯುತ್ತಿದ್ದಾರೆ. ಇವರಿಗೆ ಖುಷಿ ಕೊಡುವ ಸುದ್ದಿಯೊಂದು ಹರಿದಾಡುತ್ತಿದೆ. ವರದಿಗಳ ಪ್ರಕಾರ ಎಂಟನೇ ವೇತನ ಆಯೋಗ ರಚನೆಯಾದ ಬಳಿಕ ಕೇಂದ್ರ ಸರ್ಕಾರಿ ಉದ್ಯೋಗಿಗಳ ಕನಿಷ್ಠ ಸಂಬಳದಲ್ಲಿ ಭರ್ಜರಿ ಏರಿಕೆ ಆಗಬಹುದು. ಶೇ. 186ರಷ್ಟು ಹೆಚ್ಚಬಹುದು ಎನ್ನಲಾಗಿದೆ. ಅಂದರೆ ಹೆಚ್ಚೂಕಡಿಮೆ ಮೂರು ಪಟ್ಟು ಸಂಬಳ ಹೆಚ್ಚಬಹುದು. ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಹೆಚ್ಚಿಸುವುದರಿಂದ ಸಂಬಳ ಪ್ರಮಾಣ ಹೆಚ್ಚಲಿದೆ.
ಆರನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನ 7,000 ರೂ ಇತ್ತು. 2014ರ ಫೆಬ್ರುವರಿಯಲ್ಲಿ ಏಳನೇ ವೇತನ ಆಯೋಗ ರಚನೆಯಾಯಿತು. ಅದು ಬೇಸಿಕ್ ಮಿನಿಮಮ್ ಸ್ಯಾಲರಿಯನ್ನು 7,000 ರೂನಿಂದ 18,000 ರೂಗೆ ಏರಿಸಿತು. ಇದರ ಶಿಫಾರಸುಗಳು 2016ರ ಜನವರಿ 1ರಿಂದ ಜಾರಿಗೆ ಬಂದಿವೆ.
ಇದನ್ನೂ ಓದಿ: ಬ್ಯಾಂಕ್ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…
ಈಗ ಎಂಟನೇ ವೇತನ ಆಯೋಗ ರಚನೆ ಆಗುವ ನಿರೀಕ್ಷೆ ಇದೆ. ಆದರೆ, ಯಾವಾಗ ಇದು ರಚನೆ ಆಗುತ್ತದೆ ಎನ್ನುವ ಖಚಿತ ಮಾಹಿತಿ ಇಲ್ಲ. ಡಿಸೆಂಬರ್ನಲ್ಲಿ ಸಭೆಯೊಂದು ನಡೆಯಲಿದ್ದು ಅಲ್ಲಿ ಇದರ ಬಗ್ಗೆ ಸುಳಿವು ಸಿಗಬಹುದು. 2025-26ರ ಬಜೆಟ್ನಲ್ಲಿ 8ನೆ ವೇತನ ಆಯೋಗದ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ ಕನಿಷ್ಠ ಮೂಲ ಸಂಬಳದ ಮೇಲೆ ಪರಿಣಾಮ ಬೀರಬಲ್ಲ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು 2.86ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಏಳನೇ ವೇತನ ಆಯೋಗದಲ್ಲಿ ಈ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ. ಒಂದು ವೇಳೆ ಇದನ್ನು 2.86ಕ್ಕೆ ಹೆಚ್ಚಿಸಿದಲ್ಲಿ ಕನಿಷ್ಠ ಸಂಬಳ ಶೇ. 186ರಷ್ಟು ಹೆಚ್ಚಲಿದೆ. ಅಂದರೆ, ಕನಿಷ್ಠ ಮೂಲ ಸಂಬಳವು 18,000 ರೂ ಇದ್ದದ್ದು ಬರೋಬ್ಬರಿ 51,480 ರೂ ಆಗಲಿದೆ. ಇದು ಫಿಟ್ಮೆಂಟ್ ಫ್ಯಾಕ್ಟರ್ನ ಮಹಿಮೆ. ಒಂದು ವೇಳೆ ಫಿಟ್ಮೆಂಟ್ ಫ್ಯಾಕ್ಟರ್ 2.86ಕ್ಕಿಂತಲೂ ಹೆಚ್ಚಿದರೆ ಕನಿಷ್ಠ ಸಂಬಳವೂ ಗುಣಾತ್ಮವಾಗಿ ಹೆಚ್ಚುತ್ತದೆ.
ಇದನ್ನೂ ಓದಿ: ಒಂದು ತಿಂಗಳಲ್ಲಿ 1 ಕೋಟಿ ಗ್ರಾಹಕರನ್ನು ಕಳೆದುಕೊಂಡ ಜಿಯೋ, ಏರ್ಟೆಲ್, ವಿಐ; ಗಳಿಸಿಕೊಂಡಿದ್ದು ಬಿಎಸ್ಸೆನ್ನೆಲ್ ಮಾತ್ರವೇ
ಹಾಲಿ ನೌಕರರಿಗೆ ಇಷ್ಟೊಂದು ಏರಿಕೆ ಆಗುತ್ತದೆ. ಹಾಗೆಯೇ, ಪಿಂಚಣಿದಾರರಿಗೂ ಇದು ವರದಾನವಾಗಿದೆ. ಸದ್ಯ ಕನಿಷ್ಠ ಪಿಂಚಣಿ 9,000 ರೂ ಇದೆ. ಒಂದು ವೇಳೆ ಫಿಟ್ಮೆಂಟ್ ಫ್ಯಾಕ್ಟರ್ 2.86ಕ್ಕೆ ಹೆಚ್ಚಿದರೆ ಕನಿಷ್ಠ ಪಿಂಚಣಿಯು 25,740 ರೂ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ