Mango EMI: ಈಗ ತಿನ್ನಿ, ಆಮೇಲೆ ದುಡ್ಡು ಕೊಡಿ; ಮಾವಿನ ಹಣ್ಣಿಗೂ ಬಂತು ಇಎಂಐ

|

Updated on: Apr 08, 2023 | 6:34 PM

EMI Facility For Mango Purchase: ಮಾವಿನ ಹಣ್ಣಿನ ವ್ಯಾಪಾರಿಯೊಬ್ಬರು ಇಎಂಐ ಸೌಲಭ್ಯ ನೀಡಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಇಎಂಐ ಮೂಲಕ ಮಾವಿನ ಹಣ್ಣು ಮಾರುತ್ತಿರುವ ಮೊದಲ ಅಂಗಡಿ ತಮ್ಮದು ಎಂದು ಅವರು ಹೇಳಿಕೊಳ್ಳುತ್ತಾರೆ.

Mango EMI: ಈಗ ತಿನ್ನಿ, ಆಮೇಲೆ ದುಡ್ಡು ಕೊಡಿ; ಮಾವಿನ ಹಣ್ಣಿಗೂ ಬಂತು ಇಎಂಐ
ಆಲ್ಫೋನ್ಸೋ ಮಾವಿನ ಹಣ್ಣು
Follow us on

ಪುಣೆ: ಈಗ ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಹಣ್ಣುಗಳ ರಾಜ (King of Fruits) ಎಂದೇ ಎನಿಸಿರುವ ಮಾವಿನ ಹಣ್ಣಿನ (Mango Fruit) ತರಹಾವೇರಿ ತಳಿಗಳು ಬೀದಿ ಬೀದಿ ಅಂಗಡಿ, ಗಾಡಿಗಳಲ್ಲಿ ನಳನಳಿಸುತ್ತಾ, ಜನರ ಬಾಯಲ್ಲಿ ನೀರೂರಿಸಲಿವೆ. ಮಾವಿನ ಹಣ್ಣನ್ನು ತಿನ್ನಲು ಹಿಂದೇಟು ಹಾಕುವವರು ಯಾರಿದ್ದಾರೆ ಹೇಳಿ? ಈಗ ಸೀಸನ್ ಆರಂಭಗೊಂಡಿರುವುದರಿಂದ ಕೆಲ ತಳಿಗಳ ಮಾವಿನ ಹಣ್ಣು ಕಿಲೋಗೆ 300 ರೂವರೆಗೂ ಬೆಲೆ ಹೊಂದಿದೆ. ರಸಪೂರಿ, ಬಾದಾಮಿ, ಮಲ್ಲಿಗೆ, ಆಲ್ಫೋನ್ಸೋ ಇತ್ಯಾದಿ ಬಗೆಯ ಮಾವಿನ ಹಣ್ಣುಗಳು ಜನರ ಕಣ್ಕುಕ್ಕಲು ಆರಂಭಿಸಿ. ಮಹಾರಾಷ್ಟ್ರದ ರತ್ನಗಿರಿ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಆಲ್ಫೋನ್ಸೋ ಮಾವಿನ ಹಣ್ಣು ಬಹಳ ಸ್ವಾದಿಷ್ಟವಾಗಿರುವುದರ ಜೊತೆ ದುಬಾರಿಯೂ ಎನಿಸಿದೆ. ಮಾವು ಸವಿಯಲು ಮುಂದಾಗುವ ಜನರಿಗೆ ದುಬಾರಿ ಬೆಲೆ ಒಂದು ರೀತಿ ತಡೆ ಸಿಕ್ಕಿದಂತಾಗುತ್ತದೆ. ದುಬಾರಿ ಬೆಲೆ ಇದ್ದಾಗ ಮಾವಿನ ಹಣ್ಣು ಹೇಗೆ ಮಾರಬೇಕೆಂದು ವ್ಯಾಪಾರಿಗಳಿಗೂ ತಲೆನೋವೇ. ಆದರೆ, ಪುಣೆಯ ವರ್ತಕರೊಬ್ಬರು ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ. ಅದುವೇ ಇಎಂಐ ಸೌಲಭ್ಯ.

ಪುಣೆಯ ಸನ್ ಸಿಟಿ ರಸ್ತೆಯಲ್ಲಿರುವ ಆನಂದ್ ನಗರ್ ಪ್ರದೇಶದಲ್ಲಿ ಗುರುಕೃಪಾ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ಮಾಡುವ ಗೌರವ್ ಸನಸ್ ಎಂಬುವವರು ಇಎಂಐ ಸೌಲಭ್ಯ ನೀಡಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಇಎಂಐ ಮೂಲಕ ಮಾವಿನ ಹಣ್ಣು ಮಾರುತ್ತಿರುವ ಮೊದಲ ಅಂಗಡಿ ತಮ್ಮದು ಎಂದು ಗೌರವ್ ಸನಸ್ ಹೇಳಿಕೊಳ್ಳುತ್ತಾರೆ. ಸದ್ಯ ಇವರ ಮಾವಿನ ಅಂಗಡಿಯಲ್ಲಿ ದೇವಗಡದ ಆಲ್ಫೋನ್ಸೋ ಮಾವಿನ ಹಣ್ಣಿಗೆ ಈ ಇಎಂಐ ಸೌಲಭ್ಯ ಕೊಡಲಾಗಿದೆ. ಸದ್ಯ ಈ ತಳಿಯ ಹಣ್ಣಿನ ಬೆಲೆ ಡಜನ್​ಗೆ 1200ರೂನಷ್ಟು ಬೆಲೆ ಇದೆ.

ಇದನ್ನೂ ಓದಿKMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ

ಅಷ್ಟಕ್ಕೂ ಮಾಲ್​ಗೆ ಹೋಗಿ ಕ್ರೆಡಿಟ್ ಕಾರ್ಡ್ ಬಳಸಿ ಮಾವಿನ ಹಣ್ಣು ಖರೀದಿಸಿದರೂ ಆ ಹಣವನ್ನು ಇಎಂಐ ಆಗಿ ಪರಿವರ್ತಿಸಬಹುದಲ್ವಾ ಎಂದು ಕೇಳಬಹುದು. ಆದರೆ, ಎಲ್ಲಾ ಕ್ರೆಡಿಟ್ ಕಾರ್ಡ್​ಗಳೂ ಇಎಂಐ ಆಯ್ಕೆ ಹೊಂದಿರುವುದಿಲ್ಲ. ಇಲ್ಲಿ ಪುಣೆಯ ಗೌರವ್ ಸನಸ್ ಅಂಗಡಿಯಲ್ಲಿರುವ ಇಎಂಐ ವ್ಯವಸ್ಥೆ ತುಸು ಭಿನ್ನವಾಗಿದೆ.

ಗೌರವ್ ಸನಸ್ ಅವರು ಪೇಟಿಎಂ ಕಂಪನಿ ಅಧಿಕಾರಿಗಳ ಜೊತೆ ಮಾತನಾಡಿ ಇಎಂಐ ಸೌಲಭ್ಯ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ. ಆಗ ಪೇಟಿಎಂನಿಂದ ಇಎಂಐ ವ್ಯವಸ್ಥೆ ಸಿಕ್ಕಿತಂತೆ. ಪೇಟಿಎಂನಿಂದಲೇ ಸ್ವೈಪ್ ಮೆಷೀನ್ ಅನ್ನು ಅವರು ಪಡೆದರು. ಇಎಂಐ ಸೌಲಭ್ಯ ಪಡೆಯಲು ಗ್ರಾಹಕರ ಬಳಿ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇರಬೇಕಾಗುತ್ತದೆ. ಪೇಟಿಎಂ ಮೆಷೀನ್​ನಲ್ಲಿ ಕಾರ್ಡ್ ಸ್ವೈಪ್ ಮಾಡಿದಾಗ ಕೂಡಲೇ ಎಷ್ಟು ತಿಂಗಳಿಗೆ ಇಎಂಐ ಬೇಕೆಂದು ಆಯ್ಕೆಗಳು ಕಾಣುತ್ತವೆ. 3-12 ಕಂತುಗಳ ಅವಕಾಶ ಇರುತ್ತದೆ. ಅದರಲ್ಲಿ ಒಂದನ್ನು ಗ್ರಾಹಕರೇ ಆಯ್ದುಕೊಳ್ಳಬಹುದು. ಬಜಾಜ್ ಫೈನಾನ್ಸ್ ಇತ್ಯಾದಿ ಕೆಲಸ ಸಂಸ್ಥೆಗಳು ಬಿಟ್ಟರೆ ಹಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್​ಗೆ ಇಎಂಐ ಅವಕಾಶ ಇದೆ.

ಇದನ್ನೂ ಓದಿPMMY: ಪಿಎಂ ಮುದ್ರಾ ಯೋಜನೆ ಅಡಿ ವಿತರಣೆಯಾದ ಸಾಲ ಪಾಕಿಸ್ತಾನ ಜಿಡಿಪಿಗೆ ಸಮ? 41 ಕೋಟಿ ಜನರ ಸ್ವಂತ ಉದ್ಯಮದ ಕನಸು ನನಸಾಗಿಸಿದ ಮುದ್ರಾ ಸ್ಕೀಮ್

ಇನ್ನು ಡೆಬಿಟ್ ಕಾರ್ಡ್​ಗೂ ಇಎಂಐ ಇದೆಯಾದರೂ ಎಲ್ಲಾ ಬ್ಯಾಂಕ್ ಕಾರ್ಡ್​ಗಳೂ ತಾಳೆಯಾಗುತ್ತವಾ ಗೊತ್ತಿಲ್ಲ.

ಗೌರವ್ ಸನಸ್ ಅವರಿಗೆ ಇಎಂಐ ಐಡಿಯಾ ಬಂದದ್ದು ಹೇಗೆ?

ಕೋವಿಡ್ ಸಂದರ್ಭದಲ್ಲಿ ಜನರ ಬಳಿ ಹಣ ಇಲ್ಲದಾಗ ಬಹಳ ಮಂದಿ ಮಾವಿನ ಹಣ್ಣು ಖರೀದಿಸಲು ಆಸೆ ಪಟ್ಟರೂ ಸಾಧ್ಯವಾಗುತ್ತಿರಲಿಲ್ಲ. ಸಣ್ಣ ಮಕ್ಕಳು ತಮಗೆ ಮಾವಿನ ಹಣ್ಣು ಬೇಕೆಂದು ಗೋಗರೆದರೂ ಜನರು ಹಣ್ಣು ಖರೀದಿಗೆ ಹಿಂದೇಟು ಹಾಕುತ್ತಿದ್ದರು. ನಾಲ್ಕೈದು ಮಾವಿನ ಹಣ್ಣು ಖರೀದಿಸಿ ಸುಮ್ಮನಾಗುತ್ತಿದ್ದರು. ಆಗ ನನಗೆ ಇಎಂಐ ಸಾಧ್ಯತೆ ಬಗ್ಗೆ ಯೋಚಿಸತೊಡಗಿದೆ ಎನ್ನುತ್ತಾರೆ ಪುಣೆಯ ಈ ಹಣ್ಣಿನ ವರ್ತಕ. ಅಂದಹಾಗೆ, ಗೌರವ್ ಸನಸ್ ಅವರ ಗುರುಕೃಪಾ ಮಾವಿನ ಅಂಗಡಿಯಲ್ಲಿ ಇಎಂಐ ಮೂಲಕ ಈಗಾಗಲೇ ಕೆಲ ಮಂದಿ ಹಣ್ಣು ಖರೀದಿಸಿಕೊಂಡು ಹೋಗಿದ್ದಾರಂತೆ. ಮುಂದಿನ ದಿನಗಳಲ್ಲಿ ಇದು ಟ್ರೆಂಡ್ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ