
ನವದೆಹಲಿ, ನವೆಂಬರ್ 11: ಭಾರತಕ್ಕೆ ಅತಿಮುಖ್ಯವಾಗಿರುವ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ (BESS- Battery Energy Storage System) ಕ್ಷೇತ್ರಕ್ಕೆ ಅದಾನಿ ಗ್ರೂಪ್ ಪ್ರವೇಶ ಮಾಡುತ್ತಿದೆ. ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಅನ್ನು ಈ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದೆ. 1,126 ಮೆ.ವ್ಯಾ. ಯೋಜನೆಯನ್ನು ಜಾರಿಗೆ ತರಲಿದ್ದು, ಇದರಿಂದ 3,530 ಎಂಡಬ್ಲ್ಯುಎಚ್ (MWh) ಶಕ್ತಿ ಸಂಗ್ರಹಣೆಯ ಸಾಮರ್ಥ್ಯ ನಿರ್ಮಿಸಲಿದೆ. ಗುಜರಾತ್ನ ಖಾವಡ ಜಿಲ್ಲೆಯಲ್ಲಿ ಈಗಾಗಲೇ ಈ ಯೋಜನೆ ನಿರ್ಮಾಣ ಹಂತದ ಕೊನೆಯಲ್ಲಿ ಇದೆ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, 2026ರ ಮಾರ್ಚ್ ವೇಳೆಗೆ ಅದಾನಿ ಗ್ರೂಪ್ನ ಈ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಪೂರ್ಣಗೊಳ್ಳು ನಿರೀಕ್ಷೆ ಇದೆ. ಲಿಥಿಯಂ ಅಯಾನ್ ಬ್ಯಾಟರಿ ಟೆಕ್ನಾಲಜಿಯನ್ನು ಇದಕ್ಕೆ ಬಳಸಲಾಗುತ್ತಿದೆ. ಇದೇನಾದರೂ ಜಾರಿಯಾದಲ್ಲಿ ಭಾರತದಲ್ಲಿ ಅದು ಅತಿದೊಡ್ಡ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಎನಿಸಲಿದೆ. ವಿಶ್ವದ ಅತಿದೊಡ್ಡ ಸ್ಟೋರೇಜ್ ಸಿಸ್ಟಂಗಳಲ್ಲಿ ಒಂದೆನಿಸಲಿದೆ.
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…
‘ಈ ಐತಿಹಾಸಿಕ ಯೋಜನೆಯೊಂದಿಗೆ ನಾವು ಜಾಗತಿಕ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿರುವುದು ಮಾತ್ರವಲ್ಲ, ಭಾರತದ ಇಂಧನ ಸ್ವಾತಂತ್ರ್ಯ ಮತ್ತು ಸುಸ್ಥಿರತೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತಿದ್ದೇವೆ’ ಎಂದು ಅದಾನಿ ಗ್ರೂಪ್ ಸಂಸ್ಥೆಯ ಛೇರ್ಮನ್ ಗೌತಮ್ ಅದಾನಿ ಹೇಳಿದ್ದಾರೆ.
ಗುಜರಾತ್ನಲ್ಲಿ ಅದಾನಿ ಗ್ರೂಪ್ನ ಎನರ್ಜಿ ಸ್ಟೋರೇಜ್ ಸಿಸ್ಟಂ ಅಷ್ಟಕ್ಕೇ ಸೀಮಿತವಾಗಿರಲ್ಲ. 2026ರ ಮಾರ್ಚ್ ನಂತರವೂ ಎನರ್ಜಿ ಸ್ಟೋರೇಜ್ ಸಿಸ್ಟಂನ ಸಾಮರ್ಥ್ಯವನ್ನು ಮತ್ತಷ್ಟು ಏರಿಸುವ ಯೋಜನೆ ಮುಂದುವರಿಯಲಿದೆ. 2027ರ ಮಾರ್ಚ್ನೊಳಗೆ 15 ಜಿಡಬ್ಲ್ಯುಎಚ್ನಷ್ಟು ಬ್ಯಾಟರಿ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸಲಿದೆ. ಐದು ವರ್ಷದಲ್ಲಿ ಇದನ್ನು 50 ಜಿಡಬ್ಲ್ಯುಎಚ್ಗೆ ಹೆಚ್ಚಿಸುವ ದೊಡ್ಡ ಗುರಿ ಇಟ್ಟಿದೆ ಅದಾನಿ ಗ್ರೂಪ್.
ಇದನ್ನೂ ಓದಿ: ಸಕ್ಕರೆ ಉತ್ಪಾದನೆ ಶೇ. 16ರಷ್ಟು ಏರಿಕೆ ಸಾಧ್ಯತೆ; ಮಹಾರಾಷ್ಟ್ರ, ಕರ್ನಾಟಕದಲ್ಲಿ ಹೆಚ್ಚು ಹೆಚ್ಚಳ ನಿರೀಕ್ಷೆ
ಭಾರತದಲ್ಲಿ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಇವೆಲ್ಲವೂ ಲೈವ್ ಆಗಿದ್ದು, ಇವುಗಳನ್ನು ಎಲ್ಲೆಡೆ ವಿತರಣೆ ಮಾಡುವುದು ದೊಡ್ಡ ಸವಾಲಿನ ಕೆಲಸ. ವಿದ್ಯುತ್ ಸಂಗ್ರಹ ವ್ಯವಸ್ಥೆ ಇದ್ದರೆ ಬೇಕೆಂದಾಗ, ಬೇಕೆಂದಷ್ಟು ವಿದ್ಯುತ್ ಅನ್ನು ವಿತರಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳು ಬಹಳ ಮುಖ್ಯ ಎನಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ