ಅಮೆರಿಕದಲ್ಲಿ ಅದಾನಿಗೆ ಲಂಚದ ಮಸಿ; ಆರೋಪ ನಿರಾಧಾರ ಎಂದು ಸ್ಪಷ್ಟಪಡಿಸಿದ ಅದಾನಿ ಗ್ರೂಪ್

|

Updated on: Nov 21, 2024 | 3:57 PM

Adani group clarification on bribery allegations: ಸೋಲಾರ್ ಎನರ್ಜಿ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎನ್ನುವ ಆರೋಪವು ಅದಾನಿ ವಿರುದ್ಧ ಅಮೆರಿಕದಲ್ಲಿ ಕೇಳಿಬಂದಿದೆ. ಗೌತಮ್ ಅದಾನಿ, ಸಾಗರ್ ಅದಾನಿಗೆ ಅಲ್ಲಿನ ಕೋರ್ಟ್​ವೊಂದು ಬಂಧನದ ವಾರಂಟ್ ನೀಡಲಾಗಿದೆ. ಇದೇ ವೇಳೆ, ಸೆಕ್ಯೂರಿಟಿ ಫೈಲಿಂಗ್​ನಲ್ಲಿ ಅದಾನಿ ಗ್ರೂಪ್ ಸಂಸ್ಥೆ ಈ ಲಂಚ ಆರೋಪಗಳನ್ನು ತಳ್ಳಿಹಾಕಿದೆ.

ಅಮೆರಿಕದಲ್ಲಿ ಅದಾನಿಗೆ ಲಂಚದ ಮಸಿ; ಆರೋಪ ನಿರಾಧಾರ ಎಂದು ಸ್ಪಷ್ಟಪಡಿಸಿದ ಅದಾನಿ ಗ್ರೂಪ್
ಅದಾನಿ ಗ್ರೂಪ್
Follow us on

ನವದೆಹಲಿ, ನವೆಂಬರ್ 21: ಸೌರಶಕ್ತಿ ಉತ್ಪಾದನೆಯ ಗುತ್ತಿಗೆ ಪಡೆಯಲು ಲಂಚ ನೀಡಿರುವ ಆರೋಪದ ಮಸಿ ಅದಾನಿ ಗ್ರೂಪ್ ಮೇಲೆ ಮತ್ತಿಕೊಂಡಿದೆ. ಈ ಸಂಬಂಧ ಅಮೆರಿಕದ ಕೋರ್ಟ್​ವೊಂದರಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಾಗಿದೆ. ಈ ಸುದ್ದಿಯು ಅದಾನಿ ಗ್ರೂಪ್​ನ ವಿವಿಧ ಷೇರುಗಳನ್ನು ಅಲುಗಾಡಿಸಿದೆ. ಇದೇ ವೇಳೆ, ಅದಾನಿ ಗ್ರೂಪ್ ಸಂಸ್ಥೆ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇವು ನಿರಾಧಾರವಾಗಿ ಮಾಡಲಾಗಿರುವ ಆರೋಪ ಎಂದು ಸಮಜಾಯಿಷಿ ನೀಡಿದೆ.

ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಉಲ್ಲೇಖಿಸಿ ಬಿಎಸ್​ಇ ಮತ್ತು ಎನ್​ಎಸ್​ಇಗಳಿಂದ ಅದಾನಿ ಗ್ರೂಪ್​ನ ವಿವಿಧ ಷೇರುಗಳಿಗೆ ಸ್ಪಷ್ಟನೆ ಕೋರಿ ನೋಟೀಸ್ ನೀಡಲಾಗಿತ್ತು. ಇದಕ್ಕೆ ಉತ್ತರಿಸಿರುವ ಅದಾನಿ ಗ್ರೂಪ್, ಅಮೆರಿಕ ಕೋರ್ಟ್​ನಲ್ಲಿ ಅದಾನಿ ಗ್ರೂಪ್​ಗೆ ಸೇರಿದ ಗೌತಮ್ ಅದಾನಿ, ಸಾಗರ್ ಅದಾನಿ, ವಿನೀತ್ ಜೈನ್ ಮೇಲೆ ಆರೋಪಗಳು ದಾಖಲಾಗಿರುವುದು ನಿಜ ಎಂದು ಹೇಳಿದೆ. ಅದೇ ಉಸುರಿನಲ್ಲಿ, ಈ ಆರೋಪಗಳನ್ನು ಅದಾನಿ ಗ್ರೂಪ್ ಸಾರಾಸಗಟಾಗಿ ತಳ್ಳಿಯೂ ಹಾಕಿದೆ. ಕಂಪನಿಯ ಮೇಲೆ ಆರೋಪ ಇಲ್ಲ ಎಂಬುದನ್ನೂ ಅದು ತಿಳಿಸಿದೆ.

ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್

ಅದಾನಿ ಗ್ರೂಪ್ ತಾನು ಬಿಸಿನೆಸ್ ನಡೆಸುವ ಯಾವುದೇ ಸ್ಥಳದಲ್ಲೂ ಸ್ವಚ್ಛ ಆಡಳಿತ, ಪಾರದರ್ಶಕತೆ, ಕಾನೂನುಬದ್ಧತೆ ಪಾಲಿಸುತ್ತದೆ. ತಮ್ಮ ಸಂಸ್ಥೆ ಎಲ್ಲಾ ಕಾನೂನುಗಳಿಗೂ ಬದ್ಧವಾಗಿರುತ್ತದೆ ಎಂದು ನಮ್ಮ ಸಹವರ್ತಿಗಳು, ಪಾಲುದಾರರು, ಉದ್ಯೋಗಿಗಳಿಗೆ ಭರವಸೆ ನೀಡಲು ಬಯಸುತ್ತೇವೆ ಎಂದು ಅದಾನಿ ಗ್ರೂಪ್​ನ ವಕ್ತಾರರೊಬ್ಬರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದಾರೆ.

ಅದಾನಿ ಮೇಲೆ ಏನಿದು ಹೊಸ ಆರೋಪ?

ಅದಾನಿ ಗ್ರೀನ್ ಎನರ್ಜಿ ಸಂಸ್ಥೆಗೆ ಸೋಲಾರ್ ಪವರ್ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್​ನಷ್ಟು ಲಂಚ ನೀಡಿರುವ ಆರೋಪ ಗೌತಮ್ ಅದಾನಿ, ಸಾಗರ್ ಅದಾನಿ, ವಿನೀತ್ ಜೈನ್ ಅವರ ಮೇಲಿದೆ. ಅಮೆರಿಕದಲ್ಲಿ ಬ್ಯಾಂಕು ಹಾಗೂ ಹೂಡಿಕೆದಾರರಿಂದ ಸಾಲ ಮತ್ತು ಬಾಂಡ್ ಮೂಲಕ ಹಣ ಪಡೆಯುವಾಗ ಅದಾನಿ ಗ್ರೂಪ್ ಈ ಲಂಚ ನೀಡಿಕೆಯ ವಿಚಾರವನ್ನು ಮುಚ್ಚಿಟ್ಟಿದೆ. ಇದು ಹೂಡಿಕೆದಾರರಿಗೆ ವಿಶ್ವಾಸದ್ರೋಹ ಮಾಡಿದಂತೆ ಎಂಬುದು ಆರೋಪ.

ಇದನ್ನೂ ಓದಿ: ಜೊಮಾಟೋದಲ್ಲಿ ಈ ಹುದ್ದೆಗೆ ಒಂದು ವರ್ಷ ಸಂಬಳ ಇಲ್ಲ; ಅಭ್ಯರ್ಥಿಯೇ 20 ಲಕ್ಷ ರು ಕೊಡಬೇಕಂತೆ… ಆದಾಗ್ಯೂ ಸಲ್ಲಿಕೆಯಾಗಿವೆ ಸಖತ್ ಅರ್ಜಿಗಳು

ಅಮೆರಿಕದ ನ್ಯಾಯ ಇಲಾಖೆ ಮತ್ತು ಷೇರುಪೇಟೆ ಪ್ರಾಧಿಕಾರ ನ್ಯೂಯಾರ್ಕ್​ನ ಡಿಸ್ಟ್ರಿಕ್ಟ್ ಕೋರ್ಟ್​​ವೊಂದರಲ್ಲಿ ಪ್ರಕರಣ ದಾಖಲಿಸಿವೆ. ಕೋರ್ಟ್​ನಿಂದ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಅರೆಸ್ಟ್ ವಾರಂಟ್ ಕೂಡ ಹೊರಡಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ