Adani Row: ಹಿಂಡನ್​​ಬರ್ಗ್ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂಗೆ ಪಿಐಎಲ್; ಶಾರ್ಟ್ ಸೆಲ್ಲಿಂಗ್ ಅಕ್ರಮ ಎಂದು ಘೋಷಿಸಲೂ ಮನವಿ

|

Updated on: Feb 03, 2023 | 4:43 PM

ಅದಾನಿ ಸಮೂಹದ ವಿರುದ್ಧ ಅಕ್ರಮದ ಆರೋಪ ಮಾಡಿರುವ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಮತ್ತು ಅದರ ಸ್ಥಾಪಕ ನಾಥನ್ ಆ್ಯಂಡರ್ಸನ್​ ವಿರುದ್ಧ ತನಿಖೆ ನಡೆಸಬೇಕು. ಷೇರು ಮಾರುಕಟ್ಟೆಯಲ್ಲಿ ನಡೆಯುವ ‘ಶಾರ್ಟ್​​ ಸೆಲ್ಲಿಂಗ್’ ಪ್ರಕ್ರಿಯೆಯನ್ನು ಅಕ್ರಮ, ಅಪರಾಧ ಎಂದು ಘೋಷಿಸಬೇಕು ಎಂಬುದಾಗಿ ಮನವಿ ಮಾಡಿ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

Adani Row: ಹಿಂಡನ್​​ಬರ್ಗ್ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂಗೆ ಪಿಐಎಲ್; ಶಾರ್ಟ್ ಸೆಲ್ಲಿಂಗ್ ಅಕ್ರಮ ಎಂದು ಘೋಷಿಸಲೂ ಮನವಿ
ಸುಪ್ರೀಂಕೋರ್ಟ್
Follow us on

ನವದೆಹಲಿ: ಅದಾನಿ ಸಮೂಹದ (Adani group) ವಿರುದ್ಧ ಅಕ್ರಮದ ಆರೋಪ ಮಾಡಿರುವ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ (Hindenburg Research) ಮತ್ತು ಅದರ ಸ್ಥಾಪಕ ನಾಥನ್ ಆ್ಯಂಡರ್ಸನ್​ (Nathan Anderson) ವಿರುದ್ಧ ತನಿಖೆ ನಡೆಸಬೇಕು. ಷೇರು ಮಾರುಕಟ್ಟೆಯಲ್ಲಿ ನಡೆಯುವ ‘ಶಾರ್ಟ್​​ ಸೆಲ್ಲಿಂಗ್’ ಪ್ರಕ್ರಿಯೆಯನ್ನು ಅಕ್ರಮ, ಅಪರಾಧ ಎಂದು ಘೋಷಿಸಬೇಕು ಎಂಬುದಾಗಿ ಮನವಿ ಮಾಡಿ ಸುಪ್ರೀಂ ಕೋರ್ಟ್​ನಲ್ಲಿ (Supreme Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ವಕೀಲ ಎಂಎಲ್​ ಶರ್ಮಾ ಎಂಬವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಹಿಂಡನ್​ಬರ್ಗ್ ಆರೋಪದ ಪರಿಣಾಮವಾಗಿ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿರುವುದು, ಹೂಡಿಕೆದರರಿಗೆ ನಷ್ಟವಾಗಿರುವ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ.

‘ಶಾರ್ಟ್​​ ಸೆಲ್ಲಿಂಗ್’ ಅನ್ನು ಅಕ್ರಮ, ವಂಚನೆ ಎಂದು ಘೋಷಿಸಬೇಕು. ‘ಶಾರ್ಟ್​​ ಸೆಲ್ಲಿಂಗ್’ ಮೂಲಕ ಕೃತಕವಾಗಿ ಷಧೇರು ಮೌಲ್ಯ ಕುಸಿಯುವಂತೆ ಮಾಡಿ ಮುಗ್ದ, ಅಮಾಯಕ ಹೂಡಿಕೆದಾರರನ್ನು ವಂಚಿಸಿರುವ ಆ್ಯಂಡರ್ಸನ್ ಮತ್ತು ಹಿಂಡನ್​​ಬರ್ಗ್ ವಿರುದ್ಧ ತನಿಖೆ ನಡೆಸಬೇಕು ಎಂದು ಪಿಐಎಲ್​​​ನಲ್ಲಿ ಉಲ್ಲೇಖಿಸಲಾಗಿದೆ. ‘ಶಾರ್ಟ್​​ ಸೆಲ್ಲಿಂಗ್’ ಮಾಡಿದ ಅಮೆರಿಕದ ಕಂಪನಿಗೆ ದಂಡ ವಿಧಿಸಿ, ಅದರಿಂದ ಸಂಗ್ರಹಿಸಿದ ಮೊತ್ತವನ್ನು ನಷ್ಟ ಅನುಭವಿಸಿದ ಹೂಡಿಕೆದಾರರಿಗೆ ನೀಡಬೇಕು ಎಂದೂ ಮನವಿ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ‘ಶಾರ್ಟ್ ಸೆಲ್ಲಿಂಗ್’ ಮಾಡುವುದು ಮಾರುಕಟ್ಟೆ ನಿಯಂತ್ರಕ ಸೆಬಿಯ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದೂ ವಕೀಲ ಎಂಎಲ್​ ಶರ್ಮಾ ಪ್ರತಿಪಾದಿಸಿದ್ದಾರೆ.

ಶಾರ್ಟ್​​ ಸೆಲ್ಲಿಂಗ್ ಎಂದರೇನು?

ಹೂಡಿಕೆದಾರರು ಷೇರುಗಳನ್ನು ಎರವಲು ಪಡೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಂತರ ಕಡಿಮೆ ಹಣಕ್ಕೆ ಖರೀದಿ ಮಾಡಲು ಮುಂದಾಗುವುದನ್ನು ಶಾರ್ಟ್​​ ಸೆಲ್ಲಿಂಗ್ ಎನ್ನಲಾಗುತ್ತದೆ. ಈ ರೀತಿಯ ಚಟುವಟಿಕೆಯಲ್ಲಿ ತೊಡಗಿರುವ ಹೂಡಿಕೆದಾರ ಅಥವಾ ಹೂಡಿಕೆ ಸಂಸ್ಥೆಗಳನ್ನು ಶಾರ್ಟ್​ ಸೆಲ್ಲರ್​​ಗಳು ಎಂದು ಕರೆಯಲಾಗುತ್ತದೆ. ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಅನ್ನು ‘ಶಾರ್ಟ್ ಸೆಲ್ಲಿಂಗ್’ ಸಂಸ್ಥೆ ಎಂದು ಅಲ್ಲಿನ ಮ್ಯಾನ್​ಹಾಟನ್ ನ್ಯಾಯಾಲಯ ಇತ್ತೀಚೆಗೆ ಘೋಷಿಸಿತ್ತು. ಜತೆಗೆ, ಶಾರ್ಟ್​ ಸೆಲ್ಲರ್​​ಗಳ ವರದಿ ಆಧಾರದಲ್ಲಿ ಮಾಡಿದ ಆರೋಪಗಳನ್ನು ಒಪ್ಪಲಾಗದು ಎಂದೂ ಹೇಳಿದ್ದರು.

ಇದನ್ನೂ ಓದಿ: Hindenburg Research: ಹಿಂಡನ್​​ಬರ್ಗ್​ ವರದಿಗೆ ಕಿಮ್ಮತ್ತೇ ನೀಡಿರಲಿಲ್ಲ ಅಮೆರಿಕದ ನ್ಯಾಯಾಲಯ; ಕಾರಣ ಇಲ್ಲಿದೆ ನೋಡಿ

ಅಮೆರಿಕದ ಸ್ಪೋರ್ಟ್ಸ್​ ಬೆಟ್ಟಿಂಗ್ ಕಂಪನಿ ‘ಡ್ರಾಫ್ಟ್​​ಕಿಂಗ್ಸ್’ ವಿರುದ್ಧದ ಅಕ್ರಮದ ಆರೋಪಕ್ಕೆ ಸಂಬಂಧಿಸಿ ಮ್ಯಾನ್​ಹಾಟನ್ ನ್ಯಾಯಾಲಯ ಇತ್ತೀಚೆಗೆ ಆದೇಶ ಪ್ರಕಟಿಸಿತ್ತು. ಶಾರ್ಟ್​ ಸೆಲ್ಲರ್​​ಗಳನ್ನು ಪಕ್ಷಪಾತ ಮಾಡದೆ ವರದಿ ನೀಡುವವರು ಎಂಬುದಾಗಿ ಭಾವಿಸಲಾಗದು ಎಂದು ಹೇಳಿದ್ದರು. ಇಂಥ ಪ್ರಕರಣಗಳಲ್ಲಿ ನ್ಯಾಯಾಲಯವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲಿಯೂ ಮಾಹಿತಿದಾರರ ಹೆಸರನ್ನು ಉಲ್ಲೇಖಿಸದೆಯೇ ಮಾಡಿರುವ ಆರೋಪಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಶಾರ್ಟ್​​ಸೆಲ್ಲರ್​​ಗಳು ಮಾಡಿರುವ ಆರೋಪಗಳನ್ನು ವಕೀಲರು ವೈಯಕ್ತಿಕವಾಗಿ ದೃಢೀಕರಿಸದಿದ್ದರೆ ನ್ಯಾಯಾಲಯಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತವೆ ಎಂದು ನ್ಯಾಯಾಧೀಶರು ಹೇಳಿದ್ದರು. ಹಿಂಡನ್​ಬರ್ಗ್ ವರದಿ ಆಧಾರದಲ್ಲಿ ಮಾಡಿದದ್ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ