ನವದೆಹಲಿ: ಅದಾನಿ ಸಮೂಹ (Adani Group) ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಎಲ್ಐಸಿ (LIC) ಮತ್ತು ಎಸ್ಬಿಐಗೆ (SBI) ಹೆಚ್ಚಿನ ಹಾನಿಯಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ, ಅದಾನಿ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಇದೇ ಮೊದಲ ಬಾರಿಗೆ ಮೌನ ಮುರಿದಂತಾಗಿದೆ. ‘ಎನ್ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೀವು ಸದ್ಯ ಸುದ್ದಿಯಲ್ಲಿರುವ ನಿರ್ದಿಷ್ಟ ಕಂಪನಿಯೊಂದರ ಬಗ್ಗೆ ಪ್ರಶ್ನೆ ಮಾಡುತ್ತಿರುವುದಾದರೆ ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಂಪನಿಗಳ ಅದೃಷ್ಟದ ಬಗ್ಗೆ ನಾನು ಮಾತನಾಡಲಾರೆ. ಕಂಪನಿಗಳು ಅವುಗಳ ಶಕ್ತಿ ಮತ್ತು ದೌರ್ಬಲ್ಯಕ್ಕನುಗುಣವಾಗಿ ಏಳಿಗೆ ಮತ್ತು ಕುಸಿತ ಕಾಣುತ್ತವೆ. ಎಸ್ಬಿಐ ಮತ್ತು ಎಲ್ಐಸಿ ಬಗ್ಗೆಯಷ್ಟೇ ನಾನು ಪ್ರತಿಕ್ರಿಯಿಸಬಲ್ಲೆ ಎಂದು ಹೇಳಿದ್ದಾರೆ.
‘ಯಾವುದೇ ಕಂಪನಿಯಲ್ಲಿ ಎಲ್ಐಸಿ ಅಥವಾ ಎಸ್ಬಿಐ ಹೂಡಿಕೆ ಮಟ್ಟವು ತುಂಬಾ ಕಡಿಮೆ ಇದೆ. ವಿಮಾ ಕಂಪನಿ ಮತ್ತು ಬ್ಯಾಂಕ್ ಹೂಡಿಕೆದಾರರು ಈ ಬಗ್ಗೆ ಆತಂಕಪಡಬೇಕಿಲ್ಲ. ಒಂದು ಕಂಪನಿಯ ಭವಿಷ್ಯವು ಈ ಸಂಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್ ಠೇವಣಿದಾರರು ಅಥವಾ ವಿಮಾ ಕಂಪನಿಗಳ ಪಾಲಿಸಿದಾರರು ಆತಂಕಪಡಬೇಕಿಲ್ಲ’ ಎಂದು ಅವರು ಹೇಳಿದ್ದಾರೆ.
ಅದಾನಿ ಸಮೂಹಕ್ಕೆ ಸಂಬಂಧಿಸಿದ ಆರೋಪಗಳ ವಿರುದ್ಧ ತನಿಖೆಯಾಗಬೇಕೆಂದು ಪ್ರತಿಪಕ್ಷಗಳು ಸಂಸತ್ನಲ್ಲಿ ಆಗ್ರಹಿಸಿದ ಬೆನ್ನಲ್ಲೇ ಹಣಕಾಸು ಕಾರ್ಯದರ್ಶಿಯವರು ಈ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Adani FPO: ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ರದ್ದು; ಹೂಡಿಕೆದಾರರಿಗೆ ಹಣ ಮರಳಿಸಲು ನಿರ್ಧಾರ
ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್ಐಸಿ 4 ಶತಕೋಟಿ ಡಾಲರ್ಗೂ ಹೆಚ್ಚು ಹೂಡಿಕೆ ಮಾಡಿದೆ ಎನ್ನಲಾಗಿದ್ದು, ಎಸ್ಬಿಐ 2.6 ಶತಕೋಟಿ ಡಾಲರ್ ಸಾಲ ನೀಡಿದೆ ಎನ್ನಲಾಗಿದೆ. ಕಳೆದ ವಾರ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಲೆಕ್ಕಪತ್ರ ವಂಚನೆ ಮತ್ತು ಷೇರು ಮೌಲ್ಯ ತಿರುಚಿದ ಬಗ್ಗೆ ಅದಾನಿ ಸಮೂಹದ ವಿರುದ್ಧ ಆರೋಪ ಮಾಡಿತ್ತು. ಆ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಗಣನೀಯ ಕುಸಿತವಾಗಿತ್ತು. ಕಂಪನಿಯ ಮಾಲೀಕ ಗೌತಮ್ ಅದಾನಿ ಸಂಪತ್ತಿನಲ್ಲಿಯೂ ಗಣನೀಯ ಕುಸಿತವಾಗಿದ್ದು, ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅವರು 16ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ಮಧ್ಯೆ, ಅದಾನಿ ಸಮೂಹದ ವಿವಿಧ ಕಂಪನಿಗಳಿಗೆ ಯಾವ್ಯಾವ ಬ್ಯಾಂಕುಗಳು ಸಾಲ ನೀಡಿವೆ ಎಂದು ಆರ್ಬಿಐ ಮಾಹಿತಿ ಕಲೆಹಾಕುತ್ತಿದೆ. ಈ ಸಂಬಂಧ ಸ್ಥಳೀಯ ಬ್ಯಾಂಕುಗಳಿಂದ ಆರ್ಬಿಐ ವಿವರ ಕೋರಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಅದಾನಿ ಎಂಟರ್ಪ್ರೈಸಸ್ ತನ್ನ ಎಫ್ಪಿಒ (Adani Enterprises FPO) ಯೋಜನೆಯನ್ನು ರದ್ದುಗೊಳಿಸಿದ್ದು, ಹೂಡಿಕೆದಾರರಿಗೆ ಅವರ ಹಣವನ್ನು ವಾಪಸ್ ನೀಡಲು ನಿರ್ಧರಿಸಿರುವುದಾಗಿ ಗುರುವಾರ ತಿಳಿಸಿತ್ತು.