Adani FPO: ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ರದ್ದು; ಹೂಡಿಕೆದಾರರಿಗೆ ಹಣ ಮರಳಿಸಲು ನಿರ್ಧಾರ
Gautam Adani Statement: ಇವತ್ತು ಮಾರುಕಟ್ಟೆ ಪರಿಸ್ಥಿತಿ ವಿಶೇಷವಾಗಿದ್ದು, ನಮ್ಮ ಏರು ಬೆಲೆಯಲ್ಲಿ ಬಹಳ ವ್ಯತ್ಯಯವಾಗಿದೆ. ಈ ಅಸಾಧಾರಣ ಸಂದರ್ಭದಲ್ಲಿ ಎಫ್ಒಪಿ ಯೋಜನೆಯಲ್ಲಿ ಮುಂದುವರಿಯುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ ಎಂದು ಗೌತಮ್ ಅದಾನಿ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಹಿಂಡನ್ಬರ್ಗ್ ವರದಿ (Hindenburg Research Report) ಬಳಿಕ ಬಹಳಷ್ಟು ವಿವಾದಕ್ಕೆ ಕಾರಣವಾಗಿರುವ ಗೌತಮ್ ಅದಾನಿ ಮಾಲಕತ್ವದ ಅದಾನಿ ಎಂಟರ್ಪ್ರೈಸಸ್ ತನ್ನ ಎಫ್ಪಿಒ (Adani Enterprises FPO) ಯೋಜನೆಯನ್ನು ರದ್ದುಗೊಳಿಸಿದ್ದು, ಹೂಡಿಕೆದಾರರಿಗೆ ಅವರ ಹಣವನ್ನು ವಾಪಸ್ ನೀಡಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಎಫ್ಪಿಒ ಮುಂದುವರಿಸುವುದು ನೈತಿಕವಾಗಿ ಸರಿಯಲ್ಲ ಎಂದು ಅನಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದಾನಿ ಎಂಟರ್ಪ್ರೈಸಸ್ ಕಂಪನಿ ಹೇಳಿದೆ.
ಅದಾನಿ ಎಂಟರ್ಪ್ರೈಸ್ ಜನವರಿ 27ರಿಂದ 31ರವರೆಗೆ ಎಫ್ಪಿಒ ಆಫರ್ ಕೊಟ್ಟಿತ್ತು. ಹಿಂಡನ್ಬರ್ಗ್ ರೀಸರ್ಚ್ ವರದಿ ಪ್ರಕಟವಾಗಿ ವಿವಾದಕ್ಕೆ ಒಳಗಾದರೂ ಕಂಪನಿಯ ಎಫ್ಒಒಗೆ ಉತ್ತಮ ಸ್ಪಂದನೆ ಸಿಕ್ಕು ಪೂರ್ಣವಾಗಿ ಭರ್ತಿಯಾಗಿತ್ತು. ಆದರೂ ಕೂಡ ನೈತಿಕ ದೃಷ್ಟಿಯಿಂದ ಈ ಯೋಜನೆಯನ್ನು ರದ್ದು ಮಾಡಿ ಹಣ ಹೂಡಿದವರಿಗೆ ಕಂಪನಿ ಹಣ ವಾಪಸ್ ಮಾಡುತ್ತಿದೆ. ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಮಾತ್ರ ವಿಪರೀತವಾಗಿ ಬಿದ್ದಿವೆ. ಈ ಕಾರಣಕ್ಕೂ ಕಂಪನಿ ಎಫ್ಪಿಒ ರದ್ದು ಮಾಡಿರಬಹುದು.
“ಇವತ್ತು ಮಾರುಕಟ್ಟೆ ಪರಿಸ್ಥಿತಿ ವಿಶೇಷವಾಗಿದ್ದು, ನಮ್ಮ ಏರು ಬೆಲೆಯಲ್ಲಿ ಬಹಳ ವ್ಯತ್ಯಯವಾಗಿದೆ. ಈ ಅಸಾಧಾರಣ ಸಂದರ್ಭದಲ್ಲಿ ಎಫ್ಒಪಿ ಯೋಜನೆಯಲ್ಲಿ ಮುಂದುವರಿಯುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ. ಹೂಡಿಕೆದಾರರ ಹಿತಾಸಕ್ತಿ ನಮಗೆ ಬಹಳ ಮುಖ್ಯವಾಗಿದ್ದು, ಅವರಿಗೆ ಯಾವುದೇ ರೀತಿಯ ಹಣಕಾಸು ನಷ್ಟದ ಸಾಧ್ಯತೆಯಿಂದ ರಕ್ಷಿಸುವುದು ಮುಖ್ಯ. ಆದ್ದರಿಂದ ಎಫ್ಪಿಒ ಅನ್ನು ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ” ಎಂದು ಅದಾನಿ ಎಂಟರ್ಪ್ರೈಸ್ ಛೇರ್ಮನ್ ಗೌತಮ್ ಅದಾನಿ ನಿನ್ನೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ಸಂಸ್ಥೆಯ ಎಫ್ಪಿಒಗೆ ಬೆಂಬಲ ನೀಡಿದ ಹೂಡಿಕೆದಾರರಿಗೆ ಅದಾನಿ ಇದೇ ವೇಳೆ ಧನ್ಯವಾದ ಹೇಳಿದ್ದಾರೆ.
ಕಳೆದ ವಾರದಲ್ಲಿ ಷೇರು ಬೆಲೆಯಲ್ಲಿ ಕುಸಿತವಾದರೂ ಕಂಪನಿಯಲ್ಲಿ ಮತ್ತು ಅದರ ಆಡಳಿತ ಮತ್ತು ವ್ಯವಹಾರಗಳಲ್ಲಿ ನೀವು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ನಿಜಕ್ಕೂ ಋಣಿಯಾಗಿದ್ದೇವೆ ಎಂದು ಅದಾನಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಅದಾನಿ ಗ್ರೂಪ್ಗೆ ಸೇರಿದ ವಿವಿಧ ಕಂಪನಿಗಳ ಷೇರುಗಳ ಬೆಲೆ ಕುಸಿತ ಮುಂದುವರಿಯುತ್ತಿದೆ. ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯ ಷೇರುಗಳು ನಿನ್ನೆ ಬುಧವಾರ ಒಂದೇ ದಿನ ಶೇ. 28ರಷ್ಟು ಬಿದ್ದುಹೋಗಿವೆ. ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿ ಷೇರು ಶೇ. 19ರಷ್ಟು ಬೆಲೆ ಕಳೆದುಕೊಂಡಿವೆ.
ಇನ್ನು, ಪೂರ್ಣವಾಗಿ ಹೂಡಿಕೆಯಾಗಿದ್ದ ಎಫ್ಪಿಒ ಅನ್ನು ರದ್ದು ಮಾಡಿದ ಕ್ರಮದಿಂದ ಕಂಪನಿಯ ಆರೋಗ್ಯಕ್ಕೆ ಏನೂ ತೊಂದರೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
“ಸುರಕ್ಷಿತ ಆಸ್ತಿ (Secure Asset), ಉತ್ತಮ ನಗದು ಹರಿವು (Cash Flow) ಇದ್ದು, ನಮ್ಮ ಬ್ಯಾಲೆನ್ಸ್ ಶೀಟ್ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಸಾಲ ಮರುಪಾವತಿಯ ಸ್ಥಿತಿ ಕೂಡ ಚೆನ್ನಾಗಿದೆ. ಎಫ್ಪಿಒ ರದ್ದು ಮಾಡುವ ನಿರ್ಧಾರದಿಂದ ನಮ್ಮ ಈಗಿನ ಕಾರ್ಯಾಚರಣೆಗಳು ಮತ್ತು ಭವಿಷ್ಯದ ಯೋಜನೆಗಳ ಮೇಲೆ ಯಾವ ಪರಿಣಾಮ ಬೀರದು. ದೀರ್ಘಾವಧಿ ಮೌಲ್ಯ ವರ್ಧನೆ ಮತ್ತು ಅಭಿವೃದ್ಧಿಯತ್ತ ನಮ್ಮ ಗಮನ ಮುಂದುವರಿಯುತ್ತದೆ. ಮಾರುಕಟ್ಟೆಯು ಸ್ಥಿರತೆಗೆ ಬಂದ ಬಳಿಕ ಮುಂದಿನ ಹೆಜ್ಜೆಗಳ ಪರಿಶೀಲನೆ ಮಾಡುತ್ತೇವೆ. ನಿಮ್ಮ ಬೆಂಬಲ ಹೀಗೇ ಮುಂದುವರಿಯುತ್ತದೆ ಎನ್ನುವ ವಿಶ್ವಾಸ ನಮಗಿದೆ” ಎಂದು ಅದಾನಿ ಹೇಳಿದ್ದಾರೆ.
ಐಪಿಒ ಮತ್ತು ಎಫ್ಪಿಒ ಮಧ್ಯೆ ವ್ಯತ್ಯಾಸ ಏನು?
ಎಫ್ಪಿಒ ಎಂದರೆ ಫಾಲೋ ಆನ್ ಪಬ್ಲಿಕ್ ಆಫರ್. ಇದು ಈಗಾಗಲೇ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ ಸಾರ್ವಜನಿಕರಿಗೆ ಷೇರುಗಳನ್ನು ಮಾರುವ ಯೋಜನೆಯಾಗಿದೆ. ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್. ಇದು ಖಾಸಗಿ ಕಂಪನಿಯೊಂದು ಷೇರುಮಾರುಕಟ್ಟೆ ಪ್ರವೇಶಿಸಲು ಮತ್ತು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಮಾಡುವ ಯೋಜನೆಯಾಗಿದೆ.
Published On - 7:38 am, Thu, 2 February 23