Adani Group: ಅದಾನಿಯಿಂದ ವ್ಯವಸ್ಥಿತ ಲೂಟಿ, ಈ ವಂಚನೆಯನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಮರೆಮಾಚಲಾಗದು; ಹಿಂಡನ್​ಬರ್ಗ್

ಹಿಂಡನ್​ಬರ್ಗ್ ಭಾರತದ ಮೇಲೆ ದಾಳಿ ನಡೆಸಿದೆ ಎಂಬ ಅದಾನಿ ಸಮೂಹದ ಹೇಳಿಕೆಯನ್ನು ಸಂಸ್ಥೆಯು ತಿರಸ್ಕರಿಸಿದೆ. ವಂಚನೆಯನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಮರೆಮಾಚಲಾಗದು ಎಂದು ಹೇಳಿದೆ.

Adani Group: ಅದಾನಿಯಿಂದ ವ್ಯವಸ್ಥಿತ ಲೂಟಿ, ಈ ವಂಚನೆಯನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಮರೆಮಾಚಲಾಗದು; ಹಿಂಡನ್​ಬರ್ಗ್
ಅದಾನಿ ಸಮೂಹImage Credit source: Reuters
Follow us
|

Updated on:Jan 30, 2023 | 11:08 AM

ನವದೆಹಲಿ: ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು (Adani Group) ವ್ಯವಸ್ಥಿತ ಲೂಟಿ ಮಾಡುತ್ತಿದೆ ಎಂದು ಮತ್ತೆ ಟೀಕಿಸಿರುವ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್ (Hindenburg Research), ಈ ವಂಚನೆಯನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದೆ. ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಹಿಂಡನ್​ಬರ್ಗ್ ಬಿಡುಗಡೆ ಮಾಡಿದ್ದ ವರದಿಗೆ ಅದಾನಿ ಸಮೂಹವು 413 ಪುಟಗಳ ಪ್ರತಿಕ್ರಿಯೆ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಂಡನ್​ಬರ್ಗ್, ಅದಾನಿ ಸಮೂಹದ ವಿರುದ್ಧ ವಾಗ್ದಾಳಿ ನಡೆಸಿದೆ. ಭಾರತವು ಭವ್ಯ ಪ್ರಜಾಪ್ರಭುತ್ವ ದೇಶವಾಗಿದ್ದು ಉತ್ತಮ ಭವಿಷ್ಯವನ್ನು ಹೊಂದಿದೆ. ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದೆ. ಆದರೆ, ಆ ದೇಶದ ಬೆಳವಣಿಗೆಯ ಓಟಕ್ಕೆ ಅದಾನಿ ಸಮೂಹದ ವ್ಯವಸ್ಥಿತ ಲೂಟಿ ತಡೆಯಾಗಿ ಪರಿಣಮಿಸಿದೆ ಎಂದು ಹಿಂಡನ್​ಬರ್ಗ್ ಹೇಳಿದೆ.

ಹಿಂಡನ್​ಬರ್ಗ್ ಭಾರತದ ಮೇಲೆ ದಾಳಿ ನಡೆಸಿದೆ ಎಂಬ ಅದಾನಿ ಸಮೂಹದ ಹೇಳಿಕೆಯನ್ನು ಸಂಸ್ಥೆಯು ತಿರಸ್ಕರಿಸಿದೆ. ವಂಚನೆಯನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಮರೆಮಾಚಲಾಗದು ಎಂದು ಹೇಳಿದೆ.

ಇದನ್ನೂ ಓದಿ: ಭಾರತದ ಮೇಲಿನ ಲೆಕ್ಕಾಚಾರ ಹಾಕಿ ನಡೆಸಿದ ದಾಳಿ: ಹಿಂಡನ್‌ಬರ್ಗ್‌ ವರದಿಗೆ ಅದಾನಿ ಗ್ರೂಪ್‌ನಿಂದ 413 ಪುಟಗಳ ಪ್ರತಿಕ್ರಿಯೆ

ಹಿಂಡನ್​ಬರ್ಗ್ ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಕೇವಲ 2 ದಿನಗಳ ವಹಿವಾಟಿನಲ್ಲಿ ಅದಾನಿ ಸಮೂಹ ಸುಮಾರು 4 ಲಕ್ಷ ಕೋಟಿ ರೂ. ಕಳೆದುಕೊಂಡಿತ್ತು. ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಶೇ 20ರ ವರೆಗೂ ಕುಸಿತವಾಗಿತ್ತು. ಇದರ ಬೆನ್ನಲ್ಲೇ ಹಿಂಡನ್​ಬರ್ಗ್ ವರದಿಗೆ ಅದಾನಿ ಸಮೂಹ ಪ್ರತಿಕ್ರಿಯೆ ನೀಡಿತ್ತು. ‘ಯಾವುದೇ ತಾತ್ವಿಕ ಉದ್ದೇಶವನ್ನು ಆಧರಿಸಿ ಹಿಂಡನ್‌ಬರ್ಗ್ ಈ ವರದಿ ಪ್ರಕಟಿಸಿಲ್ಲ. ಇದಕ್ಕಿರುವುದು ಶುದ್ಧ ಸ್ವಾರ್ಥದ ಉದ್ದೇಶಗಳು. ವಿದೇಶಿ ಷೇರುಪೇಟೆಯ ಕಾನೂನು ಮತ್ತು ಷೇರುವಹಿವಾಟು ನೀತಿಗಳನ್ನು ಇದು ಉಲ್ಲಂಘಿಸಿದೆ. ಹಿಂಡನ್‌ಬರ್ಗ್ ಎನ್ನುವುದು ಅನೈತಿಕ ಶಾರ್ಟ್‌ ಸೆಲಿಂಗ್ ತಂತ್ರಗಳನ್ನು ಅನುಸರಿಸುವವರ ಒಕ್ಕೂಟ. ಯಾವುದೇ ಷೇರುಮೌಲ್ಯವು ಏಕಾಏಕಿ ಕುಸಿಯುವಾಗ ಶಾರ್ಟ್‌ ಸೆಲ್ಲರ್‌ಗಳಿಗೆ ಲಾಭವಾಗುತ್ತದೆ’ ಎಂದು ಅದಾನಿ ಸಮೂಹವು ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿತ್ತು. ಜತೆಗೆ, ಹಿಂಡನ್​ಬರ್ಗ್ ವರದಿಗೆ ಪ್ರತಿಕ್ರಿಯಿಸಬೇಕಾದ್ದು ನಮ್ಮ ಹೊಣೆಗಾರಿಕೆ ಅಲ್ಲ. ಆದರೆ ನಮ್ಮ ಹೂಡಿಕೆದಾರರಿಗೆ ಪಾರದರ್ಶಕ ಮಾಹಿತಿ ಒದಗಿಸಬೇಕು ಮತ್ತು ಉತ್ತಮ ಕಾರ್ಪೊರೇಟ್ ಆಡಳಿತದ ನೆಲೆಗಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸಬೇಕು ಎಂಬ ಉದ್ದೇಶದಿಂದ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ ಎಂದೂ ಹೇಳಿತ್ತು.

ಅದಾನಿ ಕಂಪನಿಗಳ ಷೇರು ಮೌಲ್ಯ ಚೇತರಿಕೆ

ಅದಾನಿ ಸಮೂಹದ ಕಂಪನಿಗಳು ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಮಿಶ್ರ ಫಲಿತಾಂಶ ದಾಖಲಿಸಿವೆ. ಬಿಎಸ್​ಇಯಲ್ಲಿ ಅದಾನಿ ಎಂಟರ್​ಪ್ರೈಸಸ್ ಷೇರು ಮೌಲ್ಯದಲ್ಲಿ ಶೇ 10ರಷ್ಟು ಚೇತರಿಕೆ ಕಾಣಿಸಿತು. ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಷೇರು ಮೌಲ್ಯದಲ್ಲಿಯೂ ಶೇ 10ರ ಚೇತರಿಕೆ ಕಾಣಿಸಿತು. ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್​ಮಿಷನ್ ಹಾಗೂ ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯದಲ್ಲಿ ಶೇ 17ರ ಕುಸಿತ ದಾಖಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Mon, 30 January 23