ಭಾರತದ ಮೇಲಿನ ಲೆಕ್ಕಾಚಾರ ಹಾಕಿ ನಡೆಸಿದ ದಾಳಿ: ಹಿಂಡನ್‌ಬರ್ಗ್ ವರದಿಗೆ ಅದಾನಿ ಗ್ರೂಪ್‌ನಿಂದ 413 ಪುಟಗಳ ಪ್ರತಿಕ್ರಿಯೆ
ಯಾವುದೇ ತಾತ್ವಿಕ ಉದ್ದೇಶವನ್ನು ಆಧರಿಸಿ ಹಿಂಡನ್‌ಬರ್ಗ್ ಈ ವರದಿ ಪ್ರಕಟಿಸಿಲ್ಲ. ಇದಕ್ಕಿರುವುದು ಶುದ್ಧ ಸ್ವಾರ್ಥದ ಉದ್ದೇಶಗಳು ಎಂದು ಅದಾನಿ ಗ್ರೂಪ್ ಆರೋಪಿಸಿದೆ.
ಹಿಂಡೆನ್‌ಬರ್ಗ್ ವರದಿಯ ಬಗ್ಗೆ ಅದಾನಿ ಗ್ರೂಪ್ ಭಾನುವಾರ ಅಧಿಕೃತ ಪ್ರತಿಕ್ರಿಯೆ ನೀಡಿದೆ. ವರದಿಯನ್ನು ‘ಭಾರತದ ಮತ್ತು ಭಾರತೀಯ ಕಂಪನಿಗಳ ಅಭಿವೃದ್ಧಿ ಸಹಿಸದವರು ನಡೆಸಿರುವ ಲೆಕ್ಕಾಚಾರದ ದಾಳಿ’ ಎಂದು ಅದಾನಿ ಗ್ರೂಪ್ ಹೇಳಿದೆ. 106 ಪುಟಗಳ ಹಿಂಡೆನ್‌ಬರ್ಗ್ ವರದಿಯ ಕುರಿತು ಅದಾನಿ ಗ್ರೂಪ್ 413 ಪುಟಗಳ ಪ್ರತಿಕ್ರಿಯೆ ದಾಖಲಿಸಿದೆ. ಅದಾನಿ ಗ್ರೂಪ್ ಲೆಕ್ಕಪತ್ರಗಳನ್ನು ತಿದ್ದುಪಡಿ ಮಾಡಿದೆ ಮತ್ತು ತಪ್ಪು ದಾಖಲೆಗಳನ್ನು ನೀಡಿದೆ ಎಂದು ಹಿಂಡೆನ್‌ಬರ್ಗ್ ವರದಿ ಆರೋಪ ಮಾಡಿತ್ತು. ಈ ವರದಿಯನ್ನು ಅದಾನಿ ಗ್ರೂಪ್ ಸಾರಾಸಗಟಾಗಿ ಅಲ್ಲಗಳೆದಿದೆ. ‘ಇದು ಯಾವುದೋ ಒಂದು ನಿರ್ದಿಷ್ಟ ಕಂಪೆನಿ ಅಥವಾ ಸಮೂಹದ ಮೇಲೆ ನಡೆದ ಅಚಾನಕ್ ದಾಳಿಯಲ್ಲ. ಇದು ಭಾರತದ ಮೇಲೆ, ಭಾರತದ ಸ್ವಾತಂತ್ರ್ಯದ ಮೇಲೆ, ಸಾರ್ವಭೌಮತ್ವದ ಮೇಲೆ, ಭಾರತೀಯ ಸಂಸ್ಥೆಗಳ ಗುಣಮಟ್ಟದ ಮೇಲೆ, ಭಾರತದ ಅಭಿವೃದ್ಧಿ ಕಥನಗಳ ಮೇಲೆ ನಡೆದ ಯೋಜಿತ ದಾಳಿ’ ಎಂದು ಅದಾನಿ ಗ್ರೂಪ್ ಪ್ರತ್ಯಾರೋಪ ಮಾಡಿದೆ.
ಮತ್ತಷ್ಟು ಓದಿ:LIC: ಅದಾನಿ ಸಮೂಹ ಷೇರು ಮೌಲ್ಯ ಕುಸಿತ; ಎಲ್ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ
ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ, ಯಾವುದೇ ವಿಶ್ವಾಸಾರ್ಹತೆ ಅಥವಾ ನೈತಿಕತೆ ಇಲ್ಲದ ಸಂಸ್ಥೆಯೊಂದರ ವರದಿಯಿಂದ ನಮ್ಮ ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟವಾಗಿರುವುದು ಬೇಸರದ ಸಂಗತಿ ಎಂದು ಅದಾನಿ ಗ್ರೂಪ್ ತಿಳಿಸಿದೆ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯು ಪ್ರಕಟವಾದ ನಂತರ ಅದಾನಿ ಗ್ರೂಪ್ 50 ಶತಕೋಟಿ ಅಮೆರಿಕನ್ ಡಾಲರ್‌ಗೂ ಅಧಿಕ ಮೌಲ್ಯ ಕಳೆದುಕೊಂಡಿದೆ. ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ 20 ಶತಕೋಟಿ ಡಾಲರ್ ಕಡಿಮೆಯಾಗಿದೆ. ಇದು ಅವರ ಒಟ್ಟು ಸಂಪತ್ತಿನಲ್ಲಿ 5ನೇ 1ರಷ್ಟು ಆಗುತ್ತದೆ.
ವರದಿಯು ಪ್ರಕಟವಾದ ಸಮಯದ ಬಗ್ಗೆಯೂ ಅದಾನಿ ಗ್ರೂಪ್ ಪ್ರಶ್ನಿಸಿದೆ. ಅದಾನಿ ಗ್ರೂಪ್‌ನ ಮುಂಚೂಣಿ ಸಂಸ್ಥೆ ಅದಾನಿ ಎಂಟರ್‌ಪೈಸಸ್‌ನ ಎಫ್‌ಪಿಒ ಆರಂಭವಾಗುವುದಕ್ಕೆ ಮೊದಲು ಈ ವರದಿ ಬಹಿರಂಗವಾಗಿದೆ. ‘ಭಾರತದ ಅತಿದೊಡ್ಡ ಎಫ್‌ಪಿಒ ಇದಾಗಿತ್ತು. ಎಫ್‌ಪಿಒ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮೊದಲು ಇಂಥ ವರದಿ ಪ್ರಕಟವಾಗಿರುವುದು ಅದರ ಉದ್ದೇಶ ಏನು ಎಂಬ ಬಗ್ಗೆ ಸಾಕಷ್ಟು ವಿವರಿಸುತ್ತದೆ’ ಎಂದು ಅದಾನಿ ಗ್ರೂಪ್ ಹೇಳಿದೆ.
Adani calls Hindenburg allegations “a calculated attack on India”, its institutions and country’s growth story and its ambitions
— Press Trust of India (@PTI_News) January 29, 2023
‘ಹಿಂಡನ್‌ಬರ್ಗ್ ವರದಿಯು ಸ್ವತಂತ್ರವೂ ಅಲ್ಲ, ವಸ್ತುನಿಷ್ಠವೂ ಅಲ್ಲ, ಸಂಶೋಧನೆಯನ್ನು ಆಧಾರವಾಗಿ ಹೊಂದಿರುವುದೂ ಅಲ್ಲ. ಯಾವುದೇ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆ. ಈ ವರದಿಯಲ್ಲಿ ಆರಿಸಿಕೊಂಡ ಒಂದಿಷ್ಟು ತಪ್ಪು ಮಾಹಿತಿ, ಮರೆಮಾಚಿದ ಸತ್ಯಗಳು, ಆಧಾರರಹಿತ ಆರೋಪಗಳು ತುಂಬಿವೆ’ ಎಂದು ತನ್ನ ಪ್ರತಿಕ್ರಿಯೆಯಲ್ಲಿ ಅದಾನಿ ಗ್ರೂಪ್ ತಿಳಿಸಿದೆ.
‘ಶಾರ್ಟ್ ಸೆಲಿಂಗ್ ತಂತ್ರದ ಮೂಲಕ ಲಾಭ ಮಾಡಿಕೊಳ್ಳಲು ಹಿಂಡನ್‌ಬರ್ಗ್ ಉದ್ದೇಶಿಸಿದೆ. ಇದರಿಂದ ಲೆಕ್ಕವಿಲ್ಲದಷ್ಟು ಚಿಲ್ಲರೆ ಹೂಡಿಕೆದಾರರಿಗೆ ನಷ್ಟವಾಗಿದೆ. ‘ಹಿಂಡನ್‌ಬರ್ಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವಿವರ, ಹೂಡಿಕೆಗಳ ವಿವರ, ಹಿಂಡನ್‌ಬರ್ಗ್ ಕಂಪನಿಯಲ್ಲಿ ಹೂಡಿಕೆ ಮಾಡಿರುವವರ ದ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಹಿಂಡನ್‌ಬರ್ಗ್ ವೆಬ್‌ಸೈಟ್‌ನಲ್ಲಿ ತನಗೆ ಹಲವು ದಶಕಗಳ ವಿಶ್ಲೇಷಣೆಯ ಅನುಭವವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಸಂಸ್ಥೆಯು 2017ರಲ್ಲಿ ಆರಂಭವಾಗಿದೆ’ ಎಂದು ಅದಾನಿ ಗ್ರೂಪ್ ಇಂಥ ಮಹತ್ವದ ಸಂಶೋಧನೆ ನಡೆಸಲು ಹಿಂಡನ್‌ಬರ್ಗ್‌ಗೆ ಸಾಮರ್ಥ್ಯವೇ ಇಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದೆ.
‘ಈ ವರದಿಗೆ ಪ್ರತಿಕ್ರಿಯಿಸಬೇಕಾದ್ದು ನಮ್ಮ ಶಾಸನಬದ್ಧ ಹೊಣೆಗಾರಿಕೆ ಆಗಿರುವುದಿಲ್ಲ. ಆದರೆ ನಮ್ಮ ಹೂಡಿಕೆದಾರರಿಗೆ ಪಾರದರ್ಶಕ ಮಾಹಿತಿ ಒದಗಿಸಬೇಕು ಮತ್ತು ಉತ್ತಮ ಕಾರ್ಪೊರೇಟ್ ಆಡಳಿತದ ನೆಲೆಗಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸಬೇಕು ಎಂಬ ಉದ್ದೇಶದಿಂದ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ’ ಎಂದು ಅದಾನಿ ಗ್ರೂಪ್ ಹೇಳಿದೆ. ವರದಿಗೆ ಸಂಬಂಧಿಸಿದಂತೆ 88 ಪ್ರಶ್ನೆಗಳನ್ನೂ ಕೇಳಿದೆ.
‘ಯಾವುದೇ ತಾತ್ವಿಕ ಉದ್ದೇಶವನ್ನು ಆಧರಿಸಿ ಹಿಂಡನ್‌ಬರ್ಗ್ ಈ ವರದಿ ಪ್ರಕಟಿಸಿಲ್ಲ. ಇದಕ್ಕಿರುವುದು ಶುದ್ಧ ಸ್ವಾರ್ಥದ ಉದ್ದೇಶಗಳು. ವಿದೇಶಿ ಷೇರುಪೇಟೆಯ ಕಾನೂನು ಮತ್ತು ಷೇರುವಹಿವಾಟು ನೀತಿಗಳನ್ನು ಇದು ಉಲ್ಲಂಘಿಸಿದೆ. ಹಿಂಡನ್‌ಬರ್ಗ್ ಎನ್ನುವುದು ಅನೈತಿಕ ಶಾರ್ಟ್ ಸೆಲಿಂಗ್ ತಂತ್ರಗಳನ್ನು ಅನುಸರಿಸುವವರ ಒಕ್ಕೂಟ. ಯಾವುದೇ ಷೇರುಮೌಲ್ಯವು ಏಕಾಏಕಿ ಕುಸಿಯುವಾಗ ಶಾರ್ಟ್ ಸೆಲ್ಲರ್‌ಗಳಿಗೆ ಲಾಭವಾಗುತ್ತದೆ’ ಎಂದು ಅದಾನಿ ಗ್ರೂಪ್ ಹೇಳಿದೆ. ‘ಅದಾನಿ ಗ್ರೂಪ್ ನೆಲದ ಕಾನೂನು ಗೌರವಿಸುತ್ತದೆ. ಆಂತರಿಕ ಮತ್ತು ಲೆಕ್ಕಪರಿಶೋಧನಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಆಡಳಿತವೂ ಬಿಗಿಯಾಗಿದೆ’ ಎಂದು ಅದಾನಿ ಗ್ರೂಪ್ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ