Economic Survey; ಇಂದು ಪ್ರಕಟವಾಗಲಿದೆ ಆರ್ಥಿಕ ಸಮೀಕ್ಷಾ ವರದಿ; ಎಲ್ಲಿ, ಹೇಗೆ ವೀಕ್ಷಿಸಬಹುದು?
ಆರ್ಥಿಕ ಸಮೀಕ್ಷಾ ವರದಿಯನ್ನೂ ಸಂಸತ್ನಲ್ಲಿ ನಿರ್ಮಲಾ ಸೀತಾರಾಮನ್ ಅವರೇ ಮಂಡಿಸಲಿದ್ದಾರೆ. ಬಳಿಕ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಅವರು ಪತ್ರಿಕಾಗೋಷ್ಠಿ ಮೂಲಕ ವರದಿಯನ್ನು ಬಹಿರಂಗಪಡಿಸಲಿದ್ದಾರೆ.
ನವದೆಹಲಿ: ಕೇಂದ್ರ ಬಜೆಟ್ಗೆ (Budget 2023) ಪೂರ್ವಭಾವಿಯಾಗಿ ಇಂದು (ಜನವರಿ 31) 2022-23ನೇ ಸಾಲಿನ ಆರ್ಥಿಕ ಸಮೀಕ್ಷಾ (Economic Survey) ವರದಿ ಪ್ರಕಟಗೊಳ್ಳಲಿದೆ. ಬಜೆಟ್ ಅಧಿವೇಶನ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಮೊದಲಿಗೆ ದ್ರೌಪದಿ ಮುರ್ಮು ಅವರು ಸಂಸತ್ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಆರ್ಥಿಕ ಸಮೀಕ್ಷಾ ವರದಿ ಪ್ರಕಟಗೊಳ್ಳಲಿದೆ. ಕೇಂದ್ರ ಬಜೆಟ್ನ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಪ್ರಕಟಿಸುವ ಸಂಪ್ರದಾಯ ದಶಕಗಳಿಂದಲೂ ನಡೆದುಬಂದಿದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಆರ್ಥಿಕ ಸಮೀಕ್ಷಾ ವರದಿಯನ್ನೂ ಸಂಸತ್ನಲ್ಲಿ ನಿರ್ಮಲಾ ಸೀತಾರಾಮನ್ ಅವರೇ ಮಂಡಿಸಲಿದ್ದಾರೆ. ಬಳಿಕ ಮುಖ್ಯ ಆರ್ಥಿಕ ಸಲಹೆಗಾರ (CEA) ಡಾ. ವಿ. ಅನಂತ ನಾಗೇಶ್ವರನ್ ಅವರು ಪತ್ರಿಕಾಗೋಷ್ಠಿ ಮೂಲಕ ಆರ್ಥಿಕ ಸಮೀಕ್ಷಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿದ್ದಾರೆ.
ಏನಿದು ಆರ್ಥಿಕ ಸಮೀಕ್ಷೆ?
ಆರ್ಥಿಕ ಸಮೀಕ್ಷೆ ಕೂಡ ಕೇಂದ್ರ ಬಜೆಟ್ನಂತೆ ವಾರ್ಷಿಕ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿವರಗಳ ದಾಖಲೆ. ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆ ಇದನ್ನು ಸಿದ್ಧಪಡಿಸುತ್ತದೆ. ದೇಶದ ಮುಖ್ಯ ಆರ್ಥಿಕ ಸಲಹೆಗಾರರು ಆರ್ಥಿಕ ಸಮೀಕ್ಷೆ ತಯಾರಿಯ ಪ್ರಮುಖ ಜವಾಬ್ದಾರಿ ವಹಿಸಿರುತ್ತಾರೆ. ಬಜೆಟ್ ಮಂಡನೆಗೂ ಮುನ್ನಾ ದಿನ ಇದನ್ನು ಸಂಸತ್ನ ಉಭಯ ಸದನಗಳಲ್ಲಿ ಮಂಡನೆ ಮಾಡಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಆರ್ಥಿಕ ಸಮೀಕ್ಷೆ ಒಳಗೊಂಡಿರುತ್ತದೆ.
ಇದನ್ನೂ ಓದಿ: Economic Survey; ಏನಿದು ಆರ್ಥಿಕ ಸಮೀಕ್ಷೆ, ಇದರ ಮಂಡನೆ ಹಿಂದಿನ ಮರ್ಮವೇನು? ಇಲ್ಲಿದೆ ವಿವರ
ಆರ್ಥಿಕ ಸಮೀಕ್ಷೆಯ ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?
ಕೇಂದ್ರ ಸರ್ಕಾರದ ಅಧಿಕೃತ ಚಾನೆಲ್ಗಳಾದ ಸಂಸದ್ ಟಿವಿ ಮೂಲಕ ಆರ್ಥಿಕ ಸಮೀಕ್ಷೆಯ ನೇರ ಪ್ರಸಾರ ನೋಡಬಹುದು. ಪಿಐಬಿ ಇಂಡಿಯಾ ಕೂಡ ಲೈವ್ಸ್ಟ್ರೀಮ್ ಮಾಡಲಿದೆ. ಪಿಐಬಿ ಯೂಟ್ಯೂಬ್ ಲಿಂಕ್ ಹೀಗಿದೆ (https://www.youtube.com/@pibindia/videos). ಹಣಕಾಸು ಸಚಿವಾಲಯದ ಫೇಸ್ಬುಕ್ ಪುಟದಲ್ಲಿಯೂ (https://www.facebook.com/finmin.goi) ನೇರ ಪ್ರಸಾರ ವೀಕ್ಷಿಸಬಹುದು. ಟ್ವಿಟರ್ನಲ್ಲಿಯೂ (https://twitter.com/FinMinIndia) ಲೈವ್ ಅಪ್ಡೇಟ್ಸ್ ದೊರೆಯಲಿದೆ. ಆರ್ಥಿಕ ಸಮೀಕ್ಷೆ ಮಂಡನೆಯಾದ ಬಳಿಕ ಅದರ ಪ್ರತಿಯನ್ನು (https://www.indiabudget.gov.in/economicsurvey) ಈ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಲೂ ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Mon, 30 January 23