Budget 2023: ಬಜೆಟ್ ಅಧಿವೇಶನ ಹಿನ್ನೆಲೆ, ಸೋಮವಾರ ಸರ್ವಪಕ್ಷ ಸಭೆ
All Party Meeting at Center: ಬಜೆಟ್ ಅಧಿವೇಶನ ಸರಾಗವಾಗಿ ನಡೆಯುವಂತಾಗಲು ವಿಪಕ್ಷಗಳ ಸಹಕಾರ ಕೋರಿ ಇಂದು (ಜ. 30) ಸಂಸದೀಯ ಸಚಿವ ಪ್ರಲ್ಹಾದ್ ಜೋಷಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಸಂಸದೀಯ ಭವನದಲ್ಲಿ ಮಧ್ಯಾಹ್ನ ಈ ಸಭೆ ನಡೆಯಲಿದೆ.
ನವದೆಹಲಿ: ಫೆಬ್ರುವರಿ 1, ಬುಧವಾರದಂದು ಬಜೆಟ್ (Union Budget 2023) ಮಂಡನೆ ಇರುವ ಹಿನ್ನೆಲೆಯಲ್ಲಿ ಇಂದು ಸೋಮವಾರ ಕೇಂದ್ರ ಸರ್ಕಾರ ಸರ್ವಪಕ್ಷ (All Party Meeting) ಸಭೆ ಕರೆದಿದೆ. ಮಧ್ಯಾಹ್ನ ಈ ಸಭೆ ನಡೆಯಲಿದ್ದು ಬಜೆಟ್ ಅಧಿವೇಶನ (Budget Session) ಸರಾಗವಾಗಿ ಸಾಗಲು ಎಲ್ಲಾ ಪಕ್ಷಗಳೂ ಸಹಕಾರ ಕೊಡಬೇಕೆಂದು ಸರ್ಕಾರ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಈ ಸಭೆಯಲ್ಲಿ ವಿಪಕ್ಷಗಳು ತಮ್ಮ ಅನಿಸಿಕೆ ತೋರ್ಪಡಿಸಲಿದ್ದ ಬಜೆಟ್ ಅಧಿವೇಶನದಲ್ಲಿ ತಾವು ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ. ಸರ್ವಪಕ್ಷ ಸಭೆಯ ಬಳಿಕ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ನಾಯಕರು ಕೂಡ ಸಭೆ ಸೇರಿ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲಿದ್ದಾರೆ.
ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಇದು ಈ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿರುವುದು ಬಹಳಷ್ಟು ನಿರೀಕ್ಷೆಗಳಿವೆ. ಜಾಗತಿಕ ಆರ್ಥಿಕ ಹಿಂಜರಿತ ಎದುರಾಗುತ್ತಿರುವುದರಿಂದ ಆ ನಿಟ್ಟಿನಲ್ಲಿ ಸರ್ಕಾರ ಸುಧಾರಣಾ ಕ್ರಮಗಳತ್ತ ಗಮನ ಕೊಡುತ್ತದಾ ಅಥವಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಕೊಡಲು ಮುಂದಾಗುತ್ತಾ ಎಂಬುದು ಸದ್ಯದ ಪ್ರಶ್ನೆ.
ಬಜೆಟ್ ಅಧಿವೇಶನ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲ ಭಾಗವು ಜನವರಿ 31ರಂದು, ಅಂದರೆ ಮಂಗಳವಾರದಿಂದ ನಡೆಯುತ್ತದೆ. ಮೊದಲಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನ ಜಂಟಿ ಸದನ (ಲೋಕಸಭೆ ಮತ್ತು ರಾಜ್ಯಸಭೆ) ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಾದ ಬಳಿಕ ಆರ್ಥಿಕ ಸಮೀಕ್ಷೆಯನ್ನು ಸಂಸತ್ನಲ್ಲಿ ಮಂಡನೆ ಮಾಡಲಾಗುತ್ತದೆ. ಬಜೆಟ್ ಮಂಡನೆಯಾದ ಬಳಿಕವೂ ಅಧಿವೇಶ ಮುಂದುವರಿದು ಉಭಯ ಸದನಗಳಲ್ಲಿ ಚರ್ಚೆಗಳು ನಡೆಯುತ್ತವೆ. ಈ ಅಧಿವೇಶನ ಫೆಬ್ರುವರಿ 13ರವರೆಗೂ ಇರುತ್ತದೆ.
ವಿಶೇಷ ಎಂದರೆ ಹೊಸದಾಗಿ ನಿರ್ಮಿಸಿರುವ ಸಂಸದೀಯ ಭವನದಲ್ಲಿ ಈ ಬಾರಿಯ ಬಜೆಟ್ ಅಧಿವೇಶನ ನಡೆಯಲಿದೆ.
Published On - 7:48 am, Mon, 30 January 23