Supreme Court: ಹಿಂಡನ್ಬರ್ಗ್ ವರದಿಯೇ ಸತ್ಯ ಅಲ್ಲ, ಸೆಬಿ ತನಿಖೆ ಮುಗಿಯಲಿ: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್; ಅದಾನಿ ಕಂಪನಿ ನಿರಾಳ

|

Updated on: Nov 24, 2023 | 6:01 PM

Adani Hindenburg Row: ಹಿಂಡನ್ಬರ್ಗ್ ರಿಸರ್ಚ್​ನ ವರದಿಯನ್ನು ಅಂತಿಮ ಸತ್ಯ ಎಂದು ಭಾವಿಸಲು ಸಾಧ್ಯವಿಲ್ಲ. ಆ ವರದಿಯಲ್ಲಿ ಸತ್ಯಾಂಶ ಇದೆಯಾ ಎಂದು ಪರಿಶೀಲಿಸಲು ಸೆಬಿಗೆ ತನಿಖೆ ವಹಿಸಿದ್ದೇವೆ ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ. ಸೆಬಿ ಈಗ 22 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದೆ. ಬಾಕಿ ಇರುವ ಇನ್ನೂ 2 ಪ್ರಕರಣಗಳ ತನಿಖೆ ಪೂರ್ಣಗೊಳಿಸಲಿ ಎಂದ ನ್ಯಾಯಪೀಠ, ತನ್ನ ತೀರ್ಪನ್ನು ಕಾಯ್ದಿರಿಸಿದೆ.

Supreme Court: ಹಿಂಡನ್ಬರ್ಗ್ ವರದಿಯೇ ಸತ್ಯ ಅಲ್ಲ, ಸೆಬಿ ತನಿಖೆ ಮುಗಿಯಲಿ: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್; ಅದಾನಿ ಕಂಪನಿ ನಿರಾಳ
ಸುಪ್ರೀಂಕೋರ್ಟ್
Follow us on

ನವದೆಹಲಿ, ನವೆಂಬರ್ 24: ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಸಂಸ್ಥೆ (Adani Hindenburg Case) ಮಾಡಿದ ಆರೋಪ ಸಂಬಂಧದ ಪ್ರಕರಣದಲ್ಲಿ ಇಂದು ನವೆಂಬರ್ 24ರಂದು ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ನ್ಯಾಯಪೀಠ (Supreme Court) ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇವತ್ತಿನ ವಿಚಾರಣೆಯ ಅಂಶಗಳು ಅದಾನಿ ಗ್ರೂಪ್​ಗೆ ನಿರಾಳತೆ ತಂದಿರುವುದು ಗಮನಾರ್ಹ. ಅಂತೆಯೇ, ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಇಂದು ಗರಿಗೆದರಿ ನಿಂತಿವೆ. ಅದಾನಿ ಗ್ರೂಪ್ ಮತ್ತು ಸೆಬಿ ವಿರುದ್ಧ ಅರ್ಜಿದಾರರು ವ್ಯಕ್ತಪಡಿಸಿದ ಆಕ್ರೋಶ ಮತ್ತು ಅನುಮಾನಗಳನ್ನು ಕೋರ್ಟ್ ಪುರಸ್ಕರಿಸಲಿಲ್ಲ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದಿಂದ ಇವತ್ತಿನ ವಿಚಾರಣೆ ನಡೆಯಿತು. ಅದರ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

ಹಿಂಡನ್ಬರ್ಗ್ ರಿಸರ್ಚ್​ನ ವರದಿಯನ್ನು ಅಂತಿಮ ಸತ್ಯ ಎಂದು ಭಾವಿಸಲು ಸಾಧ್ಯವಿಲ್ಲ. ಆ ವರದಿಯಲ್ಲಿ ಸತ್ಯಾಂಶ ಇದೆಯಾ ಎಂದು ಪರಿಶೀಲಿಸಲು ಸೆಬಿಗೆ ತನಿಖೆ ವಹಿಸಿದ್ದೇವೆ ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ. ಸೆಬಿ ಈಗ 22 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದೆ. ಬಾಕಿ ಇರುವ ಇನ್ನೂ 2 ಪ್ರಕರಣಗಳ ತನಿಖೆ ಪೂರ್ಣಗೊಳಿಸಲಿ ಎಂದು ನ್ಯಾಯಪೀಠದ ಸದಸ್ಯರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ಪ್ರಕರಣ: ತನಿಖೆಗೆ ಹೆಚ್ಚುವರಿ ಕಾಲಾವಕಾಶ ಕೇಳುವುದಿಲ್ಲ- ಸುಪ್ರೀಂಕೋರ್ಟ್ ಬಳಿ ಸೆಬಿ ಸ್ಪಷ್ಟನೆ

ವಿನೋದ್ ಅದಾನಿಯ ಅಕ್ರಮಗಳ ಕುರಿತ ದಾಖಲೆಗಳು ಪತ್ರಕರ್ತರಿಗೆ ಸಿಗುತ್ತವೆ. ಆದರೆ, ಸೆಬಿಗೆ ಇವು ಸಿಗುವುದಿಲ್ಲ ಎಂದು ವಾದಿಸಿದ ಅರ್ಜಿದಾರರು, ತಮ್ಮ ವಾದಕ್ಕೆ ಪುಷ್ಟಿಯಾಗಿ ಫೈನಾನ್ಷಿಯಲ್ ಟೈಮ್ಸ್​ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದರು.

ಈ ಪ್ರಕರಣದ ವ್ಯಾಪ್ತಿಗೆ ಬರದ ಪತ್ರಕರ್ತರ ಬೆನ್ನತ್ತಬೇಕೇ ಸೆಬಿ ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರು, ಸೆಬಿ ನಡೆಸಿರುವ ತನಿಖೆಯ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಎತ್ತಿತೋರಿಸಿದರು. ಇದಕ್ಕೆ ಕೋರ್ಟ್, ‘ಕಾನೂನು ಪ್ರಕಾರ ಕ್ರಮ ಜಾರಿಗೊಳಿಸುವ ಮುನ್ನವೇ ಸೆಬಿ ತನ್ನ ವರದಿಯನ್ನು ಬಹಿರಂಗಪಡಿಸಬೇಕಾ? ಸೆಬಿ ವರದಿಯಲ್ಲಿ ಏನಿದೆ ಎಂದು ನಾವು ಪತ್ತೆ ಮಾಡಲು ಆಗುತ್ತದಾ?’ ಎಂದಿತು.

ಸೆಬಿ ತನಿಖೆ ಬಗ್ಗೆ ಸುಪ್ರೀಂ ಸಮಾಧಾನ?

ಕೋರ್ಟ್ ವಿಚಾರಣೆ ವೇಳೆ ಸೆಬಿ ತನಿಖೆ ಬಗ್ಗೆ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿ, ಕೋರ್ಟ್​ನಿಂದ ಎಸ್​ಐಟಿ ರಚನೆಯಾಗಿ ಅದರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದನ್ನು ಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿತು: ‘ಸೆಬಿ ತನಿಖೆಯನ್ನು ಅನುಮಾನಿಸುವ ಅಂಶ ನಮ್ಮ ಮುಂದೆ ಎಲ್ಲಿದೆ?’ ಎಂದು ಅರ್ಜಿದಾರರನ್ನು ಕೇಳಿತು.

ಇದನ್ನೂ ಓದಿ: Supreme Court: ಅದಾನಿ-ಹಿಂಡನ್ಬರ್ಗ್ ಪ್ರಕರಣ: ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲು

ಶಾರ್ಟ್ ಸೆಲ್ಲಿಂಗ್​ಗೆ ಕಡಿವಾಣ ಹಾಕಿ

ಹಿಂಡನ್ಬರ್ಗ್ ರಿಸರ್ಚ್ ವರದಿ ಬಿಡುಗಡೆ ಆದ ಬಳಿಕ ಸಾಕಷ್ಟು ಷೇರುಗಳು ಕುಸಿತ ಕಂಡಿದ್ದವು. ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ ನಷ್ಟವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಶಾರ್ಟ್ ಸೆಲ್ಲಿಂಗ್​ನಿಂದ ಹೂಡಿಕೆದಾರರಿಗೆ ನಷ್ಟವಾಗುವುದನ್ನು ತಪ್ಪಿಸಲು ಸರಿಯಾದ ಕ್ರಮ ಕೈಗೊಳ್ಳುವಂತೆ ಸೆಬಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತು.

ಇವತ್ತು ವಿಚಾರಣೆ ಮುಗಿದಿದ್ದು, ನ್ಯಾಯಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ. ವರದಿಗಳ ಪ್ರಕಾರ ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಸೆಬಿಗೆ ಕೆಲ ನಿರ್ದೇಶನಗಳನ್ನು ಕೊಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Fri, 24 November 23