ನವದೆಹಲಿ, ಜನವರಿ 3: ಗೌತಮ್ ಅದಾನಿ (Gautam Adani) ಅವರಿಗೆ ಇನ್ನಷ್ಟು ನಿರಾಳತೆ ತರುವ ಬೆಳವಣಿಗೆಯೊಂದರಲ್ಲಿ, ಸುಪ್ರೀಮ್ ಕೋರ್ಟ್ ಹಿಂಡನ್ಬರ್ಗ್ ಪ್ರಕರಣದ (Adani – Hindenburg Research Case) ತನಿಖೆಯನ್ನು ಸೆಬಿಯಿಂದ ಎಸ್ಐಟಿಗೆ ವರ್ಗಾಯಿಸಲು ನಿರಾಸಕ್ತಿ ತೋರಿದೆ. ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಮಾಡಿದ ಆರೋಪಗಳ ಸಂಬಂಧ ಸೆಬಿ (SEBI) ಸದ್ಯ ತನಿಖೆ ನಡೆಸುತ್ತಿದೆ. ಈ ತನಿಖೆಯನ್ನು ಎಸ್ಐಟಿಗೆ ವರ್ಗಾಯಿಸಲು ಸೂಕ್ತ ಕಾರಣಗಳು ಇಲ್ಲ ಎಂದು ಸುಪ್ರೀಂಕೋರ್ಟ್ (supreme court) ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ತೀರ್ಮಾನಕ್ಕೆ ಬಂದಿದೆ.
ಹಿಂಡನ್ಬರ್ಗ್ ರಿಸರ್ಚ್ ಅಥವಾ ಇನ್ಯಾವುದಾದರೂ ವರದಿಯ ಆಧಾರದ ಮೇಲೆ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡುವ ಅವಶ್ಯಕತೆ ಇಲ್ಲ. ಹಾಗೆ ತನಿಖೆಗೆ ಆದೇಶಿಸುವಂತಹ ಅಂಶಗಳೂ ಕಾಣುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ನ್ಯಾಯಪೀಠದಲ್ಲಿ ಸಿಜೆಐ ಡಿವೈ ಚಂದ್ರಚೂಡ್ ಜೊತೆಗೆ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿದ್ದಾರೆ.
ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸಂಬಂಧ 22 ವಿಷಯಗಳ ಪೈಕಿ 20ರಷ್ಟನ್ನು ಸೆಬಿ ತನಿಖೆ ಪೂರ್ಣಗೊಳಿಸಿದೆ. ಇನ್ನೆರಡು ಪ್ರಕರಣಗಳು ಬಾಕಿ ಇವೆ. ಮುಖ್ಯ ನ್ಯಾಯಮೂರ್ತಿಗಳು ಈ ಎರಡು ಪ್ರಕರಣದ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಸೆಬಿಗೆ ಆದೇಶಿಸಿದ್ದಾರೆ.
ಕಳೆದ ವರ್ಷದ ಜನವರಿಯಲ್ಲಿ ಶಾರ್ಟ್ ಸೆಲ್ಲರ್ ಸಂಸ್ಥೆಯಾದ ಹಿಂಡನ್ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಸ್ಫೋಟಕ ವರದಿ ಬಿಡುಗಡೆ ಮಾಡಿತ್ತು. ಷೇರು ಅಕ್ರಮ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಆ ವರದಿ ಬಿಡುಗಡೆ ಆಗುತ್ತಿದ್ದಂತೆಯೇ ಅದಾನಿ ಗ್ರೂಪ್ನ ವಿವಿಧ ಸಂಸ್ಥೆಗಳ ಷೇರುಗಳು ಕುಸಿತ ಕಂಡವು. ನೋಡನೋಡುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ಅದಾನಿ ಗ್ರೂಪ್ನ ಒಟ್ಟೂ ಷೇರುಸಂಪತ್ತು ಶೇ. 60ಕ್ಕಿಂತಲೂ ಹೆಚ್ಚು ಕರಗಿಹೋದವು.
ಇದೇ ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣದ ತನಿಖೆಯನ್ನು ಸೆಬಿಗೆ ವಹಿಸಿತು. ಮೂಲ ಕಾಲಾವಕಾಶದಲ್ಲಿ ಸೆಬಿ ತನಿಖೆ ಪೂರ್ಣಗೊಳಿಸಿಲ್ಲ. ಇದು ಗಂಭೀರ ಸ್ವರೂಪದ್ದಾದ್ದರಿಂದ ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕೆಂದು ಸೆಬಿ ಹೇಳಿದೆ. ಒಟ್ಟು 22 ಅಂಶಗಳಲ್ಲಿ ಸೆಬಿ ತನಿಖೆ ನಡೆಸಿದೆ. ಈ ಪೈಕಿ 20 ಅಂಶಗಳ ತನಿಖೆಯನ್ನು ಸೆಬಿ ಪೂರ್ಣಗೊಳಿಸಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ
ಈವರೆಗೆ ಬಂದಿರುವ ಸುಳಿವುಗಳ ಪ್ರಕಾರ ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಮಾಡಿರುವ ಆರೋಪಗಳಿಗೆ ಪ್ರಬಲ ಸಾಕ್ಷ್ಯಾಧಾರಗಳು ಸೆಬಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಸುಪ್ರೀಮ್ ಕೋರ್ಟ್ ಕೂಡ ಈ ಹಿಂದಿನ ವಿಚಾರಣೆಗಳಲ್ಲಿ, ಹಿಂಡನ್ಬರ್ಗ್ ಇತ್ಯಾದಿ ಸಂಸ್ಥೆಗಳಲ್ಲಿ ಬಂದ ವರದಿಯನ್ನೇ ಸತ್ಯವೆಂದು ನಂಬಲು ಸಾಧ್ಯ ಇಲ್ಲ ಎನ್ನುವಂಥ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಗಳು ಗೌತಮ್ ಅದಾನಿ ಮತ್ತವರ ಗ್ರೂಪ್ಗೆ ನಿರಾಳತೆ ತಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Wed, 3 January 24