ಭಾರತದ ಜಿಡಿಪಿ ಬೆಳವಣಿಗೆಯ ನಿರೀಕ್ಷೆ ಶೇ. 6.5ರಿಂದ ಶೇ. 7.2ಕ್ಕೆ ಹೆಚ್ಚಿಸಿದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್

ADB revises its GDP growth forecast for India: ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಬಹುದು ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಿರೀಕ್ಷಿಸಿದೆ. ತನ್ನ ಹಿಂದಿನ ವರದಿಯಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚಬಹುದು ಎಂದು ಹೇಳಿದ್ದ ಎಡಿಬಿ ಇದೀಗ ತನ್ನ ನಿರೀಕ್ಷೆ ಹೆಚ್ಚಿಸಿದೆ. ಹಣದುಬ್ಬರ ವಿಚಾರದಲ್ಲೂ ಎಡಿಬಿ ಅನಿಸಿಕೆ ಬದಲಾಗಿದೆ. ಶೇ. 3.1 ಹಣದುಬ್ಬರ ಎಂದಿದ್ದ ಅದು ಈಗ ಶೇ. 2.1ಕ್ಕೆ ಇಳಿಸಿದೆ.

ಭಾರತದ ಜಿಡಿಪಿ ಬೆಳವಣಿಗೆಯ ನಿರೀಕ್ಷೆ ಶೇ. 6.5ರಿಂದ ಶೇ. 7.2ಕ್ಕೆ ಹೆಚ್ಚಿಸಿದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್
ಎಡಿಬಿ

Updated on: Dec 10, 2025 | 4:33 PM

ನವದೆಹಲಿ, ಡಿಸೆಂಬರ್ 10: ಭಾರತದ ಜಿಡಿಪಿ ಬೆಳವಣಿಗೆ (GDP Growth) ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ಗಳಲ್ಲಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ ವರ್ಷದ ಒಟ್ಟಾರೆ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ. ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ಏಜೆನ್ಸಿಗಳೂ ಕೂಡ ಸಕಾರಾತ್ಮಕ ನಿಲುವು ಹೊಂದಿವೆ. ಐಎಂಎಫ್, ವರ್ಲ್ಡ್ ಬ್ಯಾಂಕ್​ಗಳು ತಮ್ಮ ಹಿಂದಿನ ಅಭಿಪ್ರಾಯವನ್ನು ಬದಲಿಸಿ, ಹೆಚ್ಚಿನ ವೇಗದ ಬೆಳವಣಿಗೆ ನಿರೀಕ್ಷಿಸಿವೆ. ಈಗ ಎಡಿಬಿ ಕೂಡ ಇದೇ ಹಾದಿ ತುಳಿದಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ತನ್ನ ಹೊಸ ವರದಿಯಲ್ಲಿ ಭಾರತದ ಈ ವರ್ಷದ ಜಿಡಿಪಿ ದರ ಶೇ. 7.2ರಷ್ಟಿರಬಹುದು ಎಂದು ಹೇಳಿದೆ. ತನ್ನ ಹಿಂದಿನ ವರದಿಯಲ್ಲಿ ಅದು ಶೇ. 6.5ರ ದರ ನಿರೀಕ್ಷಿಸಿತ್ತು.

ಭಾರತ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದ ಪ್ರಕಾರ, ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ (ಏಪ್ರಿಲ್​ನಿಂದ ಜೂನ್) ಜಿಡಿಪಿ ಶೇ. 7.8ರಷ್ಟು ಹೆಚ್ಚಿದೆ. ಎರಡನೇ ಕ್ವಾರ್ಟರ್​ನಲ್ಲಿ ಇದು ಶೇ. 8.2ಕ್ಕೆ ಹೆಚ್ಚಿದೆ. ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದ ಆರ್ಥಿಕತೆ ಸರಾಸರಿಯಾಗಿ ಶೇ. 8ರಷ್ಟು ಹೆಚ್ಚಿದಂತಾಗಿದೆ.

ಇದನ್ನೂ ಓದಿ: ಅಮೇಜಾನ್​ನಿಂದ ಭಾರೀ ಹೂಡಿಕೆ ಘೋಷಣೆ; ಭಾರತದಲ್ಲಿ ಗೂಗಲ್, ಮೈಕ್ರೋಸಾಫ್ಟ್​ಗಿಂತ ಎರಡು ಪಟ್ಟು ಹೆಚ್ಚು ಹೂಡಿಕೆ

ಈ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದ ಒಟ್ಟಾರೆ ಜಿಡಿಪಿ ಬೆಳವಣಿಗೆ ಬಗ್ಗೆ ಎಡಿಬಿ ತನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ, ಮುಂದಿನ ಹಣಕಾಸು ವರ್ಷದಲ್ಲಿ (2026-27) ಶೇ. 6.5ರಷ್ಟು ಬೆಳೆಯಬಹುದು ಎಂದು ಅದು ಹಿಂದಿನ ವರದಿಯಲ್ಲಿ ಮಾಡಿದ್ದ ಅಂದಾಜನ್ನೇ ಈ ಬಾರಿಯೂ ಪುನರುಚ್ಚರಿಸಿದೆ.

ಈ ಹಣಕಾಸು ವರ್ಷದಲ್ಲಿ ಭಾರತ ಉತ್ತಮ ಬೆಳವಣಿಗೆ ಹೊಂದಲು ಕಾರಣ ಮೊದಲೆರಡು ಕ್ವಾರ್ಟರ್​ಗಳ ಫಲಿತಾಂಶ ಉತ್ತಮವಾಗಿರುವುದು ಮಾತ್ರವಲ್ಲ, ತೆರಿಗೆಗಳ ಕಡಿತದಿಂದ ಅನುಭೋಗ ಹೆಚ್ಚಿದೆ. ಇದರಿಂದ ಅಮೆರಿಕದ ಟ್ಯಾರಿಫ್ ಪರಿಣಾಮವನ್ನು ತಗ್ಗಿಸಲು ಸಾಧ್ಯವಾಗಿದೆ. ಹೀಗಾಗಿ, ಜಿಡಿಪಿ ನಿರೀಕ್ಷೆಗಿಂತ ಉತ್ತಮವಾಗಿ ಹೆಚ್ಚಬಹುದು ಎಂಬುದು ಎಡಿಬಿ ಅನಿಸಿಕೆ.

ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

ಹಣದುಬ್ಬರ ಶೇ. 2.1 ಮಾತ್ರ ಎಂದ ಎಡಿಬಿ

ಕಳೆದ ವಾರ ಆರ್​ಬಿಐ ನಡೆಸಿದ ಎಂಪಿಸಿ ಸಭೆಯಲ್ಲೂ ಜಿಡಿಪಿ ಬಗ್ಗೆ ಅಂದಾಜು ಮಾಡಲಾಯಿತು. ರಿಸರ್ವ್ ಬ್ಯಾಂಕ್ ಈ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 7.3ರಷ್ಟು ಇರಬಹುದು ಎಂದು ಹೇಳಿದೆ. ಹಾಗೆಯೇ, ಹಣದುಬ್ಬರವು ಶೇ. 2.1ರಷ್ಟು ಇರಬಹುದು ಎಂದು ಅಭಿಪ್ರಾಯಪಟ್ಟಿದೆ. ಹಣದುಬ್ಬರ ವಿಚಾರದಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಕೂಡ ತನ್ನ ಅನಿಸಿಕೆ ಬದಲಾಯಿಸಿದೆ. ಕಳೆದ ಬಾರಿಯ ವರದಿಯಲ್ಲಿ ಎಡಿಬಿ ಭಾರತದಲ್ಲಿ ಹಣದುಬ್ಬರ ಶೇ. 3.1ರಷ್ಟು ಇರಬಹುದು ಎಂದಿತ್ತು. ಆದರೆ, ಈಗ ಹಣದುಬ್ಬರ ದರ ಶೇ. 2.1 ಮಾತ್ರವೇ ಇರಬಹುದು ಎನ್ನುವ ಅನಿಸಿಕೆಗೆ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ