ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ
India GDP grows 8.2pc in Q2 of FY26: ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು ಹೆಚ್ಚಿ ಅಚ್ಚರಿ ಹುಟ್ಟಿಸಿದ್ದ ಭಾರತದ ಆರ್ಥಿಕತೆ ಎರಡನೇ ಕ್ವಾರ್ಟರ್ನಲ್ಲಿ ಇನ್ನೂ ಹೆಚ್ಚು ಅಚ್ಚರಿ ತಂದಿದೆ. ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.2ರಷ್ಟು ಬೆಳೆದಿದೆ. ಹೆಚ್ಚಿನ ಆರ್ಥಿಕ ತಜ್ಞರು ಶೇ. 7ರಿಂದ ಶೇ. 7.50ರ ಶ್ರೇಣಿಯಲ್ಲಿ ಬೆಳೆಯಬಹುದು ಎಂದು ನಿರೀಕ್ಷಿಸಿದ್ದರು.

ನವದೆಹಲಿ, ನವೆಂಬರ್ 28: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಜಿಡಿಪಿ (GDP) ನಿರೀಕ್ಷೆಮೀರಿ ಭರ್ಜರಿಯಾಗಿ ಬೆಳೆದಿದೆ. ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಆರ್ಥಿಕತೆ ಶೇ. 8.2ರಷ್ಟು ಹೆಚ್ಚಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬರುತ್ತದೆ. ಈ ತ್ರೈಮಾಸಿಕದಲ್ಲಿ ಆರ್ಥಿಕತೆ ಈ ಪರಿ ಬೆಳೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹೆಚ್ಚಿನ ಆರ್ಥಿಕ ತಜ್ಞರು ಮಾಡಿದ ಅಂದಾಜು ಶೇ. 7ರಿಂದ ಶೇ. 7.5ರ ಶ್ರೇಣಿಯಲ್ಲಿತ್ತು. ಮೊದಲ ಕ್ವಾರ್ಟರ್ನಲ್ಲಿ ಬೆಳೆದ ಶೇ. 7.8ರ ದರವನ್ನೂ ಮೀರಿಸಿದ ಎರಡನೇ ಕ್ವಾರ್ಟರ್ನ ಬೆಳವಣಿಗೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, 2024-25ರ ಎರಡನೇ ಕ್ವಾರ್ಟರ್ನಲ್ಲಿ ಭಾರತದ ರಿಯಲ್ ಜಿಡಿಪಿ 44.94 ಲಕ್ಷ ಕೋಟಿ ರೂ ಇತ್ತು. ಈ ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಇದು 48.63 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಕ್ವಾರ್ಟರ್ಗೆ ಹೋಲಿಸಿದರೆ ಆರ್ಥಿಕತೆ ಶೇ. 8.2ರಷ್ಟು ಬೆಳೆದಂತಾಗಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಏಷ್ಯಾದ ಪ್ರಮುಖ ಶಕ್ತಿ ಎನಿಸಿದ ಭಾರತ; ಏಷ್ಯಾ ಪವರ್ ಇಂಡೆಕ್ಸ್ನಲ್ಲಿ 3ನೇ ಸ್ಥಾನ
ನಿವ್ವಳ ಉತ್ಪನ್ನ ತೆರಿಗೆಗಳನ್ನು ಜಿಡಿಪಿಯಿಂದ ಕಳೆದರೆ ಉಳಿಯುವ ರಿಯಲ್ ಜಿವಿಎ 2025-26ರ 2ನೇ ಕ್ವಾರ್ಟರ್ನಲ್ಲಿ 44.77 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ ರಿಯಲ್ ಜಿವಿಎನಲ್ಲಿ ಶೇ. 8.1ರಷ್ಟು ಹೆಚ್ಚಾಗಿದೆ.
ದತ್ತಾಂಶದ ಪ್ರಕಾರ, ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಶೇ. 9.1ರಷ್ಟು ಬೆಳೆದಿದೆ. ಈ ಉತ್ಪಾದನಾ ವಲಯದ ಬೆಳವಣಿಗೆ ತುಸು ಅನಿರೀಕ್ಷಿತವೆನಿಸಿದೆ. ಭಾರತದ ಈ ಕ್ವಾರ್ಟರ್ನ ಜಿಡಿಪಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳ ಉತ್ಪಾದನೆ ಶೇ. 10.2ರಷ್ಟು ಬೆಳೆದಿದೆ. ಕೃಷಿ ವಲಯ ಶೇ. 3.5ರಷ್ಟು ಸಾಧಾರಣ ಬೆಳವಣಿಗೆ ಕಂಡಿದೆ. ವಿದ್ಯುತ್, ಗ್ಯಾಸ್, ನೀರು ಸರಬರಾಜು ಮೊದಲಾದ ನಾಗರಿಕ ಸೇವೆಗಳ ಸೆಕ್ಟರ್ ಕೂಡ ಶೇ. 4.4ರ ಸಾಧಾರಣ ಬೆಳವಣಿಗೆ ಕಂಡಿದೆ.
ಇದನ್ನೂ ಓದಿ: ತೃತೀಯ ಜಗತ್ತಿನ ದೇಶಗಳಿಂದ ವಲಸೆ ಬಂದ್ ಮಾಡುತ್ತೇವೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?
ಮುಂದುವರಿದ ದೇಶವಾಗಲು ಈ ವೇಗ ಸಾಕು…
2047ರ ವೇಳೆಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಬೇಕೆನ್ನುವ ಸಂಕಲ್ಪ ಕೇಂದ್ರ ಸರ್ಕಾರದ್ದಾಗಿದೆ. ಈ ಹಂತಕ್ಕೆ ಭಾರತ ಹೋಗಬೇಕೆಂದರೆ ಮುಂದಿನ 22 ವರ್ಷ ಆರ್ಥಿಕತೆಯು ಶೇ. 7.8ರ ಸರಾಸರಿ ದರದಲ್ಲಿ ಬೆಳೆಯಬೇಕು ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲೂ (2024-25) ಇದೇ ಅಂದಾಜು ಮಾಡಲಾಗಿತ್ತು. ಎರಡು ದಶಕಗಳ ಕಾಲ ಶೇ. 8ರ ಸರಾಸರಿ ವೇಗದಲ್ಲಿ ಆರ್ಥಿಕತೆ ಬೆಳೆದರೆ 2047ಕ್ಕೆ ಭಾರತ ವಿಕಸಿತ ದೇಶವಾಗಲು ಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Fri, 28 November 25




