4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು
Story of how Bharat Harakchand Shah lost Rs 35 crore in trading fraud: ಹೂಡಿದ ಹಣವನ್ನು ನಿಮ್ಮ ಪರವಾಗಿ ಹಣಕಾಸು ಸಲಹಾ ಕಂಪೆನಿಗಳು ಡಬಲ್ ಮಾಡುತ್ತವೆಂದು ಕಣ್ಣು ಮುಚ್ಚಿ ಕೂರಬೇಡಿ. ಆಗೊಮ್ಮೆ ಆದರೆ ಏನಾಗುತ್ತೆ ಎಂಬುದಕ್ಕೆ ಮುಂಬೈನ 72 ವರ್ಷದ ವ್ಯಕ್ತಿಗೆ ಆದ ವಂಚನೆಯ ಕಥೆ ಒಂದು ನಿದರ್ಶನವಾಗಿದೆ. 4 ವರ್ಷ ನಂಬಿಸಿ, ನಯವಾಗಿ 35 ಕೋಟಿ ರೂ ಯಾಮಾರಿಸಿರುವ ಘಟನೆ ಇದು...

ಮುಂಬೈ, ನವೆಂಬರ್ 28: ಹಣ ಇದ್ದವರನ್ನು ಯಾಮಾರಿಸಲು ಧೂರ್ತರು ಹೊಂಚು ಹಾಕುತ್ತಲೇ ಇರುತ್ತಾರೆ. ಷೇರು ಮಾರುಕಟ್ಟೆಯ (stock market) ಗಂಧಗಾಳಿಯೇ ಇಲ್ಲದ ವ್ಯಕ್ತಿಯೊಬ್ಬರನ್ನು ಬ್ರೋಕರೇಜ್ ಕಂಪನಿಯ ಉದ್ಯೋಗಿಗಳು ಯಾಮಾರಿಸಿ 35 ಕೋಟಿ ರೂ ಪಂಗನಾಮ ಹಾಕಿದ ಸುದ್ದಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವ್ಯಕ್ತಿ ಮುಂಬೈನ 72 ವರ್ಷದ ಭರತ್ ಹರಕ್ಚಂದ್ ಶಾ. ಇವರು ಹಾಗೂ ಪತ್ನಿ ಇಬ್ಬರೂ ಮುಂಬೈನ ಪಾರೆಲ್ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಬಾಡಿಗೆಗೆ ಗೆಸ್ಟ್ ಹೌಸ್ ಸೇವೆ ಒದಗಿಸುತ್ತಾರೆ.
ಭರತ್ ಷಾ ಅವರಿಗೆ 1984ರಲ್ಲಿ ಮೃತಪಟ್ಟ ಅವರ ತಂದೆ ಕಡೆಯಿಂದ ಹಲವು ಕೋಟಿ ರೂ ಮೌಲ್ಯದ ಷೇರುಗಳನ್ನು ಪಡೆದಿರುತ್ತಾರೆ. ಆದರೆ, ಷೇರು ಮಾರುಕಟ್ಟೆಯ ಗಂಧಗಾಳಿ ಇಲ್ಲದ ಕಾರಣ ಇವರು ಎಂದಿಗೂ ಟ್ರೇಡಿಂಗ್ ಮಾಡಿದವರಲ್ಲ. ಷೇರುಗಳನ್ನು ಮಾರಿದವರಲ್ಲ, ಖರೀದಿಸಿದವರಲ್ಲ. ಇಷ್ಟೇ ಆಗಿದ್ದರೆ ಷೇರುಗಳು ಇವರ ಪೋರ್ಟ್ಫೋಲಿಯೋದಲ್ಲಿ ಹಾಗೇ ಉಳಿದುಹೋಗುತ್ತಿತ್ತು. ಆದರೆ, 2020ರಲ್ಲಿ ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ ಎನ್ನುವ ಬ್ರೋಕರ್ ಸಂಸ್ಥೆಯಲ್ಲಿ ಡೀಮ್ಯಾಟ್ ಅಕೌಂಟ್ ತೆರೆದ ನಂತರ ಇವರಿಗೆ ವಂಚನೆ ಶುರುವಾಯಿತು.
ಇದನ್ನೂ ಓದಿ: ತೃತೀಯ ಜಗತ್ತಿನ ದೇಶಗಳಿಂದ ವಲಸೆ ಬಂದ್ ಮಾಡುತ್ತೇವೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?
ಸ್ನೇಹಿತರೊಬ್ಬರ ಸಲಹೆ ಮೇರೆಗೆ ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ ಸಂಸ್ಥೆಯಲ್ಲಿ ಭರತ್ ಹರಕ್ಚಂದ್ ಷಾ ಹಾಗೂ ಅವರ ಪತ್ನಿ ಡೀಮ್ಯಾಟ್ ಅಕೌಂಟ್ಗಳನ್ನು ತೆರೆಯುತ್ತಾರೆ. ತಮ್ಮ ಅಪ್ಪನಿಂದ ಬಂದ ಷೇರುಗಳನ್ನು ಈ ಹೊಸ ಡೀಮ್ಯಾಟ್ ಅಕೌಂಟ್ಗಳಿಗೆ ವರ್ಗಾವಣೆ ಮಾಡುತ್ತಾರೆ. ಇಲ್ಲಿಂದ ಬ್ರೋಕರೇಜ್ ಕಂಪನಿಯ ಪ್ರತಿನಿಧಿಗಳು ಆಟ ಆಡಲು ಆರಂಭಿಸುತ್ತಾರೆ. ಟ್ರೇಡಿಂಗ್ ಖೆಡ್ಡಾಗೆ ಬೀಳಿಸುತ್ತಾರೆ.
ಟ್ರೇಡಿಂಗ್ ಮಾಡಲು ಹೊಸ ಹೂಡಿಕೆ ಬೇಕಾಗಿಲ್ಲ. ಇರುವ ಷೇರುಗಳನ್ನೇ ಅಡಮಾನವಾಗಿ ಇಟ್ಟು ಟ್ರೇಡ್ ಮಾಡಬಹುದು ಎಂದು ಹೇಳಿ ನಂಬಿಸಿ 72 ವರ್ಷದ ಷಾ ಅವರಿಗೆ ಇಬ್ಬರು ಪರ್ಸನಲ್ ಗೈಡ್ಗಳನ್ನು ಕಂಪನಿ ನಿಯೋಜಿಸುತ್ತದೆ. ಅಕ್ಷಯ್ ಬಾರಿಯಾ ಮತ್ತು ಕರಣ್ ಸಿರೋಯಾ ಎನ್ನುವ ಈ ಇಬ್ಬರು ಉದ್ಯೋಗಿಗಳು ಷಾ ಅವರ ಪೋರ್ಟ್ಫೋಲಿಯೋ ನಿರ್ವಹಿಸಲು ನಿಯೋಜಿತಗೊಂಡಿರುತ್ತಾರೆ.
ಈ ಇಬ್ಬರು ಯುವಕರು ನಿತ್ಯವೂ ಷಾ ದಂಪತಿಗೆ ಕರೆ ಮಾಡಿ ಯಾವ ಆರ್ಡರ್ಗಳನ್ನು ಪ್ಲೇಸ್ ಮಾಡಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡುತ್ತಿರುತ್ತಾರೆ. ಮನೆಗೂ ಭೇಟಿ ಕೊಡತೊಡಗುತ್ತಾರೆ. ನಿಧಾನವಾಗಿ ಷಾ ಅವರ ನಂಬಿಕೆಯನ್ನು ಗಳಿಸುತ್ತಾ ಹೋಗುತ್ತಾರೆ. ಆ ಹುಡುಗರು ಕೇಳಿದಾಗೆಲ್ಲಾ ಒಟಿಪಿ, ಎಸ್ಸೆಮ್ಮೆಸ್, ಇಮೇಲ್ ಇತ್ಯಾದಿಗೆಲ್ಲಾ ಸ್ಪಂದಿಸುತ್ತಾ ಮಾಹಿತಿ ಕೊಡುತ್ತಾ ಹೋಗುತ್ತಾರೆ. ಭರತ್ ಹರಕ್ಚಂದ್ ಷಾ ಹಾಗೂ ಅವರ ಪತ್ನಿಯ ಅಕೌಂಟ್ಗಳ ಪೂರ್ಣ ನಿಯಂತ್ರಣವನ್ನು ಆ ಇಬ್ಬರು ಯುವಕರು ಹೊಂದಿರುತ್ತಾರೆ.
ಇದನ್ನೂ ಓದಿ: ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ…
ಟ್ರೇಡಿಂಗ್ನಿಂದ ಉತ್ತಮ ಲಾಭ ಬರುತ್ತಿದೆ ಎಂದು ಕಾಣುವಂತಹ ಸ್ಟೇಟ್ಮೆಂಟ್ಗಳನ್ನು ಕಾಲಕಾಲಕ್ಕೆ ನೀಡುತ್ತಿರುತ್ತಾರೆ. ಇದರಿಂದ ಭರತ್ ಷಾ ಅವರಿಗೆ ಯಾವುದೇ ಅನುಮಾನ ಬರುವುದಿಲ್ಲ. 4 ವರ್ಷ ಕಾಲ ಇದು ಮುಂದುವರಿದಿತ್ತು. ಆದರೆ, 2024ರ ಜುಲೈನಲ್ಲಿ ಷಾ ಅವರಿಗೆ ಶಾಕ್ ಸಿಗುತ್ತದೆ. ಗ್ಲೋಬ್ ಕ್ಯಾಪಿಟಲ್ನ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗದಿಂದ ಷಾ ಅವರಿಗೆ ಕರೆ ಬಂದು 35 ಕೋಟಿ ರೂ ಕಟ್ಟಬೇಕಾಗುತ್ತದೆ ಎಂದು ಕೇಳಲಾಗುತ್ತದೆ.
ಶಾಕ್ ಆದ ಷಾ ಅವರು ಕಂಪನಿಗೆ ಖುದ್ದಾಗಿ ಭೇಟಿ ನೀಡಿ ವಿಚಾರಿಸಿದಾಗ, ಅವರ ಪತ್ನಿಯ ಅಕೌಂಟ್ನಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಟ್ರೇಡಿಂಗ್ ನಡೆದಿರುತ್ತದೆ. ಇದರಿಂದ ಭಾರೀ ನಷ್ಟ ಉಂಟಾಗಿರುತ್ತದೆ. ಇದನ್ನು ಭರಿಸಲು ಷಾ ಅವರು ತಮ್ಮ ಉಳಿದ ಕೆಲ ಷೇರುಗಳನ್ನು ಮಾರಬೇಕಾಗುತ್ತದೆ. ಬಾಕಿ ಇರುವ ಷೇರುಗಳನ್ನು ಅವರು ಬೇರೆ ಬ್ರೋಕರೇಜ್ ಕಂಪನಿಗೆ ಟ್ರಾನ್ಸ್ಫರ್ ಮಾಡುತ್ತಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು
ಗ್ಲೋಬ್ ಕ್ಯಾಪಿಟಲ್ ಕಂಪನಿ ಮೇಲೆ ಕೇಸ್ ಹಾಕಿದ ವೃದ್ಧ
ಗ್ಲೋಬ್ ವೆಬ್ಸೈಟ್ನಿಂದ ತಮ್ಮ ಅಕೌಂಟ್ಗಳ ಟ್ರೇಡಿಂಗ್ ಸ್ಟೇಟ್ಮೆಂಟ್ ಅನ್ನು ಡೌನ್ಲೋಡ್ ಮಾಡಿ ನೋಡಿದಾಗ ತಮಗೆ ಹಿಂದೆ ನೀಡಲಾಗಿದ್ದ ಸ್ಟೇಟ್ಮೆಂಟ್ಗಳೆಲ್ಲಾ ಬೋಗಸ್ ಎಂಬುದು ಭರತ್ ಷಾ ಅವರಿಗೆ ಮನವರಿಕೆ ಆಗುತ್ತದೆ. ಮುಂಬೈನ ವಾನರಾಯ್ ಪೊಲೀಸ್ ಠಾಣೆಯಲ್ಲಿ ಅವರು ಎಫ್ಐಆರ್ ದಾಖಲಿಸಿದ್ದಾರೆ. ಮುಂಬೈನ ಆರ್ಥಿಕ ಅಪರಾಧಗಳ ವಿಭಾಗವು ಈಗ ತನಿಖೆ ನಡೆಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




