ನವದೆಹಲಿ, ಜನವರಿ 9: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೆಚ್ಚೆಚ್ಚು ಪ್ರಬಲಗೊಂಡಂತೆ ಮನುಷ್ಯರ ಶ್ರಮ ಕಡಿಮೆ ಆಗುತ್ತದೆ. ಹಾಗೆಯೇ, ಮನುಷ್ಯರ ಉದ್ಯೋಗಕ್ಕೂ ಕುತ್ತು ಬರುತ್ತದೆ ಎನ್ನುವ ಹಲವರ ಭಯ ನಿಜವಾಗುತ್ತಿದೆ. ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ನ ವರದಿಯೊಂದರ ಪ್ರಕಾರ ಮುಂದಿನ ಮೂರರಿಂದ ಐದು ವರ್ಷದಲ್ಲಿ ಜಾಗತಿಕವಾಗಿ 2 ಲಕ್ಷ ಬ್ಯಾಂಕ್ ಉದ್ಯೋಗಗಳು ಎಐ ಪಾಲಾಗಲಿವೆ ಎನ್ನಲಾಗಿದೆ. ಜಾಗತಿಕ ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇ. 3ರಷ್ಟು ಇಳಿಕೆ ಆಗಲು ಎಐ ಕಾರಣವಾಗಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಕೆಲ ಬ್ಯಾಂಕುಗಳು ಶೇ. 5ರಿಂದ 10ರಷ್ಟು ಸಿಬ್ಬಂದಿವರ್ಗ ಸಂಖ್ಯೆ ಮೊಟಕುಗೊಳ್ಳುವ ಸಾಧ್ಯತೆ ಇದೆ.
ಬ್ಯಾಂಕುಗಳಲ್ಲಿ ಬ್ಯಾಕ್ ಆಫೀಸ್, ಮಿಡಲ್ ಆಫೀಸ್ ಮತ್ತು ಆಪರೇಶನ್ಸ್ ಉದ್ಯೋಗಗಳು ಎಐ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಕೆಲ ಗ್ರಾಹಕ ಸೇವೆಗಳೂ ಪರಿವರ್ತನೆ ಹೊಂದಬಹುದು. ಎಐ ಚಾಲಿತ ಬೋಟ್ಗಳು ಗ್ರಾಹಕರ ಅನುಮಾನಗಳನ್ನು ಪರಿಹರಿಸುವ ವ್ಯವಸ್ಥೆ ಹೆಚ್ಚಬಹುದು. ಬ್ಯಾಂಕುಗಳ ಕೆವೈಸಿ ಕ್ರಮಗಳ ಹೊಣೆಯನ್ನು ಎಐ ಬೋಟ್ಗಳಿಗೆ ವಹಿಸಬಹುದು ಎಂಬುದನ್ನು ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ನ ಹಿರಿಯ ಅನಾಲಿಸ್ಟ್ ಆದ ಟೊಮಾಜ್ ನೋಯೆಟ್ಜೆಲ್ ಹೇಳುತ್ತಾರೆ.
ಇದನ್ನೂ ಓದಿ: ವಿಶ್ವದ ದರ್ಜೆ ರೈಲು ಪ್ರಯಾಣ ವ್ಯವಸ್ಥೆಗೆ ಹೂಡಿಕೆ; ಮುಕ್ಕಾಲು ಪಾಲು ಬಜೆಟ್ ಅನುದಾನ ಬಳಸಿದ ರೈಲ್ವೆ ಇಲಾಖೆ
ಯಾಂತ್ರಿಕವಾದ, ಪುನರಾವರ್ತನೆ ಮಾಡಬೇಕಾದ ಕಾರ್ಯಗಳನ್ನು ಒಳಗೊಂಡಿರುವ ಯಾವುದೇ ಉದ್ಯೋಗಗಳು ಅಪಾಯಕ್ಕೆ ಸಿಲುಕಲಿವೆ. ಈ ಉದ್ಯೋಗಗಳನ್ನು ಪೂರ್ಣವಾಗಿ ಎಐ ಕಿತ್ತುಕೊಳ್ಳುವುದಿಲ್ಲ. ಆದರೆ, ಉದ್ಯೋಗ ಸ್ವರೂಪಗಳಲ್ಲಿ ಬದಲಾವಣೆ ತರಬಲ್ಲುದು ಎಂಬುದು ಅವರ ಅನಿಸಿಕೆ.
ಜಾಗತಿಕ ಮಟ್ಟದ ಬ್ಯಾಂಕುಗಳಾದ ಸಿಟಿ ಗ್ರೂಪ್, ಜೆಪಿ ಮಾರ್ಗನ್ ಚೇಸ್, ಗೋಲ್ಡ್ಮ್ಯಾನ್ ಸ್ಯಾಕ್ಸ್ ಗ್ರೂಪ್ ಮೊದಲಾದವು ಸೇರಿದಂತೆ 93 ಸಂಸ್ಥೆಗಳು ಈ ಸಮೀಕ್ಷೆಗೆ ಸ್ಪಂದಿಸಿವೆ. ಶೇ. 25ರಷ್ಟು ಸಂಸ್ಥೆಗಳು ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇ. 5ರಿಂದ 10ರಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ಮಾಡಿವೆ.
ಸಕಾರಾತ್ಮಕ ಅಂಶವೆಂದರೆ, ಬ್ಯಾಂಕುಗಳ ಹೆಡ್ಕೌಂಟ್ ಕಡಿಮೆ ಆದರೂ ಆದಾಯ ಹೆಚ್ಚಲಿದೆ. ತೆರಿಗೆ ಪೂರ್ವದ ಲಾಭದಲ್ಲಿ ಶೇ. 12ರಿಂದ ಶೇ. 17ಕ್ಕೆ ಹೆಚ್ಚಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಉತ್ಪನ್ನಶೀಲತೆ ಹೆಚ್ಚುವುದು ಇದಕ್ಕೆ ಕಾರಣವಾಗಿರುತ್ತದೆ. ಸಮೀಕ್ಷೆಯಲ್ಲಿ ಶೇ. 80ರಷ್ಟು ಮಂದಿ ಈ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಬ್ಯಾಂಕುಗಳಿಗೆ ದಿನಕ್ಕೆ 100 ರೂನಂತೆ ದಂಡ
ಎಐ ಪರಿಣಾಮ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತದೆ. ಆದರೆ, ಹೆಚ್ಚು ಪರಿಣಾಮ ಬೀರುವುದು ಬ್ಯಾಂಕಿಂಗ್, ರೋಬೊಟಿಕ್ಸ್, ಸಾಫ್ಟ್ವೇರ್ ಕ್ಷೇತ್ರಗಳಲ್ಲಿ ಎನ್ನಲಾಗಿದೆ. ಸಿಟಿಗ್ರೂಪ್ನಂತಹ ಸಂಸ್ಥೆಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಅರ್ಧದಷ್ಟು ಬ್ಯಾಂಕಿಂಗ್ ಉದ್ಯೋಗಿಗಳು ಮನುಷ್ಯರ ಕೈತಪ್ಪಲಿವೆ. ಈ ಅನಿಸಿಕೆಗೆ ಇಂಬು ಕೊಡುವಂತೆ, ಬ್ಯಾಂಕುಗಳು ತಮ್ಮ ಉತ್ಪನ್ನಶೀಲತೆ ಹೆಚ್ಚಿಸಲು ಎಐ ಟೆಕ್ನಾಲಜಿಯ ಹೊಸ ಹೊಸ ಆವಿಷ್ಕಾರಗಳತ್ತ ಮುಗಿಬೀಳುತ್ತಿರುವುದು ಕಂಡುಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ