Air conditioner price increase: ಏರ್​ಕಂಡೀಷನರ್​ಗಳ ಬೆಲೆ 100 ದಿನದಲ್ಲಿ ಎರಡನೇ ಬಾರಿಗೆ ಏರಿಕೆ

|

Updated on: Apr 08, 2021 | 6:32 PM

Air conditioner price increase: ಕಳೆದ ನೂರು ದಿನದಲ್ಲಿ ಎರಡನೇ ಬಾರಿಗೆ ಏರ್​ಕಂಡೀಷನರ್​​ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಪದಾರ್ಥಗಳ ಬೆಲೆಯಲ್ಲಿ ಏರಿಕೆ ಆಗಿದ್ದರಿಂದ ಇನ್​ಪುಟ್ ಕಾಸ್ಟ್​ನಲ್ಲಿ ಹೆಚ್ಚಳವಾಗಿ ಈ ಬೆಳವಣಿಗೆ ಆಗಿದೆ.

Air conditioner price increase: ಏರ್​ಕಂಡೀಷನರ್​ಗಳ ಬೆಲೆ 100 ದಿನದಲ್ಲಿ ಎರಡನೇ ಬಾರಿಗೆ ಏರಿಕೆ
ಏರ್ ಕಂಡೀಷನರ್ (ಸಾಂದರ್ಭಿಕ ಚಿತ್ರ)
Follow us on

ಕಳೆದ 100 ದಿನದೊಳಗೆ ಇದು ಎರಡನೇ ಬಾರಿಗೆ ಏರ್​ಕಂಡೀಷನರ್ ಉತ್ಪಾದಿಸುವ ಕಂಪೆನಿಗಳು ಶೇಕಡಾ 8ರಿಂದ 13ರಷ್ಟು ಬೆಲೆ ಏರಿಕೆ ಮಾಡಿವೆ. ಸಾಗರ ಸಾಗಣೆ ವೆಚ್ಚದಲ್ಲಿನ ಹೆಚ್ಚಳ ಹಾಗೂ ಏಸಿ ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ಇನ್​ಪುಟ್ ವೆಚ್ಚ ಜಾಸ್ತಿ ಆಗಿದೆ. ಆ ಕಾರಣಕ್ಕೆ ಹೀಗೆ ಬೆಲೆ ಏರಿಸಲಾಗಿದೆ ಎಂದು ತಿಳಿಸಲಾಗಿದೆ. ಬ್ಲ್ಯೂಸ್ಟಾರ್ ಕಾರ್ಯನಿರ್ವಾಹಕ ನಿರ್ದೇಶಕ ಬಿ. ತ್ಯಾಗರಾಜನ್ ಮಾತನಾಡಿ, ಉಕ್ಕು, ತಾಮ್ರ ಮತ್ತು ಎಬಿಎಸ್ ಪ್ಲಾಸ್ಟಿಕ್ ಇವೆಲ್ಲ 2020ರ ಮಾರ್ಚ್​ನಿಂದ ಸರಾಸರಿ ಶೇಕಡಾ 25ರಷ್ಟು ಜಾಸ್ತಿಯಾಗಿದೆ. 2021ರ ಜನವರಿಯಲ್ಲಿ ಶೇಕಡಾ 5ರಿಂದ 8ರಷ್ಟು ಏಸಿ ಮಾರಾಟ ಬೆಲೆ ಹೆಚ್ಚಳ ಮಾಡಿದ ನಂತರ, ನಾವು ಮತ್ತೊಮ್ಮೆ ಏಪ್ರಿಲ್ 1ರಂದು ಶೇಕಡಾ 3ರಿಂದ 5ರಷ್ಟು ದರ ಹೆಚ್ಚಿಸಿದ್ದೇವೆ. ಬೆಲೆ ಏರಿಕೆ ಹೊರತಾಗಿಯೂ ಇದನ್ನು ತಡೆಯುವ ನಿರೀಕ್ಷೆ ಮಾಡಿದ್ದೆವು ಎಂದಿದ್ದಾರೆ. ಆದರೂ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಕಡಿಮೆ ಬೆಲೆ ಇರಿಸಿದ್ದೇವೆ ಎಂದಿದ್ದಾರೆ.

ಪ್ಯಾನಾಸೋನಿಕ್ ಅಧಿಕಾರಿಗಳು ಮಾತನಾಡಿ, ಈಗಿನ ಮಾರುಕಟ್ಟೆ ಸನ್ನಿವೇಶಕ್ಕೆ ಶೇಕಡಾ 6ರಿಂದ 8ರಷ್ಟು ಏಸಿಗಳ ಬೆಲೆಯಲ್ಲಿ ಏರಿಕೆ ಮಾಡಲು ಯೋಜನೆ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ. ಇನ್ನು ರೆಫ್ರಿಜರೇಟರ್ ಶೇಕಡಾ 3ರಿಂದ 4ರಷ್ಟು ಜಾಸ್ತಿ ಆಗಬಹುದು. ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ಆ ಮೂಲಕ ಉತ್ಪಾದನಾ ವೆಚ್ಚವೂ ಹೆಚ್ಚಳ ಆಗಿದೆ ಎನ್ನುತ್ತಾರೆ.

ಏರ್​ಕಂಡೀಷನರ್​ಗಳ ಮಾರಾಟದಲ್ಲಿ ಶೇಕಡಾ 25ರಷ್ಟು ಬೆಳವಣಿಗೆ
ಇನ್ನು ಕಂಪೆನಿಯ ಭಾರತ ಮತ್ತು ದಕ್ಷಿಣ ಏಷ್ಯಾ ಅಧ್ಯಕ್ಷ ಮತ್ತು ಸಿಇಒ ಮನೀಶ್ ಶರ್ಮಾ ಮಾತನಾಡಿ, ಒಂದು ಸಂಸ್ಥೆಯಾಗಿ, ಗರಿಷ್ಠ ವೆಚ್ಚವನ್ನು ನಮ್ಮ ಮೇಲೆ ಹಾಕಿಕೊಳ್ಳಲು ಹಾಗೂ ಗ್ರಾಹಕರ ಮೇಲೆ ಹಾಕದಿರುವುದಕ್ಕೆ ಪ್ರಯತ್ನಿಸಿದೆವು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಏರ್​ಕಂಡೀಷನರ್​ಗಳ ಮಾರಾಟದಲ್ಲಿ ಶೇಕಡಾ 25ರಷ್ಟು ಬೆಳವಣಿಗೆ ಆಗಿದೆ ಎಂದು ಹೇಳಿದ್ದಾರೆ.

ಇನ್ನು ಎಲ್​ಜಿ ಎಲೆಕ್ಟ್ರಾನಿಕ್ಸ್​ನಿಂದ ಈ ವರ್ಷ ಶೇಕಡಾ 5ರಿಂದ 7ರಷ್ಟು ಬೆಲೆ ಏರಿಸಲಾಗಿದೆ. ವೋಲ್ಟಾಸ್ ತಿಳಿಸಿರುವಂತೆ, ಏಸಿಗಳು ಮತ್ತು ತಂಪು ಸಾಧನಗಳು ಒಟ್ಟಾರೆಯಾಗಿ ಸರಾಸರಿ ಮಾರುಕಟ್ಟೆ ಬೆಲೆಯಲ್ಲಿ ಶೇಕಡಾ 3ರಿಂದ 5ರಷ್ಟು ಏರಿಕೆಯಾಗಿವೆ. ಇನ್ನು ಈ ಪೈಕಿ ಕೆಲವು ಭಾಗಗಳ ಸೀಮಾಸುಂಕ ಕೂಡ ಹೆಚ್ಚಾಗಿದೆ.

ಸಂಪೂರ್ಣ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲಿಲ್ಲ
ಗೋದ್ರೆಜ್ ಅಪ್ಲೈಯೆನ್ಸಸ್ ತಿಳಿಸಿರುವ ಪ್ರಕಾರ, ಜನವರಿಯಲ್ಲಿ ಶೇಕಡಾ 3ರಿಂದ 5ರಷ್ಟು ಬೆಲೆ ಏರಿಕೆ ಮಾಡಿದ ಮೇಲೆ ಏಪ್ರಿಲ್​ನಲ್ಲಿ ಶೇಕಡಾ 3ರಿಂದ 5ರಷ್ಟು ಹೆಚ್ಚುವರಿಯಾಗಿ ಬೆಲೆ ಏರಿಕೆ ಆಗುತ್ತಿದೆ. ಏಸಿ ಉತ್ಪನ್ನಗಳ ಸಮೂಹ ಮುಖ್ಯಸ್ಥ ಸಂತೋಷ್ ಸಾಲಿಯಾನ್ ಮಾತನಾಡಿ, ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಆರಂಭಿಕ ಹಂತದಲ್ಲಿ ಕಳೆದ ವರ್ಷ ಪದಾರ್ಥಗಳ ಬೆಲೆ ಶೇಕಡಾ 13ರಷ್ಟು ಹೆಚ್ಚಳವಾಯಿತು. ಉತ್ಪಾದಕರು ಆ ಸಮಯದಲ್ಲಿ ಸಂಪೂರ್ಣ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲಿಲ್ಲ. ಬೇಡಿಕೆ ಹೆಚ್ಚಾಗಲಿ ಎಂದು ಬೇಸಿಗೆ ತನಕ ಕಾಯ್ದು, ಆಮೇಲೆ ದರ ಹೆಚ್ಚಿಸಲು ಎದುರು ನೋಡಲಾಗುತ್ತಿತ್ತು ಎನ್ನಲಾಗಿದೆ.

ಈ ಮಧ್ಯೆ ಸಾಗರ ಸಾಗಣೆ ವೆಚ್ಚ ಕೂಡ ಹೆಚ್ಚಾಗಿದೆ. ಕೋವಿಡ್- 19 ಮುಂಚಿನ ಸಂದರ್ಭಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಇದರ ಹೊರತಾಗಿ ಭಾರತಕ್ಕೆ ಬರುವ ಕಂಟೇನರ್​ಗಳ ಸಂಖ್ಯೆಯಲ್ಲಿ ಕೂಡ ಕೊರತೆ ಆಗಿದೆ ಎಂದು ಉತ್ಪಾದಕರು ಹೇಳುತ್ತಾರೆ. “ಉತ್ಪಾದನಾ ಭಾಗಗಳಾದ ಉಕ್ಕು, ಕಂಪ್ರೆಸರ್​ಗಳನ್ನು ಆಮದು ಮಾಡಿಕೊಳ್ಳುವಂಥದ್ದು ಹಾಗೂ ಸಾಗಣೆ ವೆಚ್ಚ ಶೇಕಡಾ 200ರಿಂದ 300ರಷ್ಟು ಹೆಚ್ಚಾಗಿದೆ. ಅಂದರೆ ಕೋವಿಡ್​ಗೆ ಮುಂಚೆ ಒಂದು ಕಂಟೇನರ್​ಗೆ 900 ಅಮೆರಿಕನ್ ಡಾಲರ್ ಇದ್ದದ್ದು, 3300 ಅಮೆರಿಕನ್ ಡಾಲರ್​ಗೆ ಹೆಚ್ಚಳವಾಗಿದೆ,” ಎಂದು ಸಾಲಿಯಾನ್ ಹೇಳಿದ್ದಾರೆ.
ಮಾಹಿತಿ ಮೂಲ- ಟೈಮ್ಸ್ ಆಫ್ ಇಂಡಿಯಾ

ಇದನ್ನೂ ಓದಿ: ಏಸಿ, ಟೀವಿ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆ ಏಪ್ರಿಲ್​ನಲ್ಲಿ ಏರಿಕೆ ಸಾಧ್ಯತೆ

(Airconditioner manufacturers increased price second time in last 100 days.)