Layoffs: 17,000 ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ ಬೋಯಿಂಗ್

Boeing layoffs: ವಿಶ್ವದ ಅತಿದೊಡ್ಡ ವಿಮಾನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬೋಯಿಂಗ್ ತನ್ನ 17,000 ಉದ್ಯೋಗಿಗಳ ಲೇ ಆಫ್ ಮಾಡಿದೆ. ನವೆಂಬರ್ 13ರಿಂದಲೇ ನೌಕರರು ಪಿಂಕ್ ಸ್ಲಿಪ್ ಪಡೆಯಲು ಆರಂಭಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಬೋಯಿಂಗ್ ಸಂಸ್ಥೆ ಇದೀಗ ಚೇತರಿಕೆಗೆ ಅವಿರತ ಪ್ರಯತ್ನ ನಡೆಸುತ್ತಿದೆ.

Layoffs: 17,000 ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ ಬೋಯಿಂಗ್
ಬೋಯಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 15, 2024 | 1:41 PM

ವರ್ಜಿನಿಯಾ, ನವೆಂಬರ್ 15: ಅಮೆರಿಕ ಮೂಲದ ವಿಮಾನ ತಯಾರಕ ಸಂಸ್ಥೆಯಾದ ಬೋಯಿಂಗ್ ತನ್ನ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ. 17,000 ಮಂದಿಯ ಲೇ ಆಫ್ ಮಾಡುವ ನಿರ್ಧಾರವನ್ನು ಬೋಯಿಂಗ್ ಸಂಸ್ಥೆ ಪ್ರಕಟಿಸಿದೆ. ಮೊನ್ನೆ ಬುಧವಾರದಿಂದಲೇ ಉದ್ಯೋಗಿಗಳಿಗೆ ಲೇ ಆಫ್ ನೋಟೀಸ್ (ಪಿಂಕ್ ಸ್ಲಿಪ್) ಕಳುಹಿಸಲು ಆರಂಭಿಸಿದೆ ಎಂದು ಬ್ಲೂಮ್​ಬರ್ಗ್ ಏಜೆನ್ಸಿಯ ವರದಿ ತಿಳಿಸಿದೆ. ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಕ್ಷಮತೆ ಹೆಚ್ಚಿಸಲು ಮತ್ತು ಉತ್ಪನ್ನಶೀಲತೆ ಹೆಚ್ಚಿಸಲು ಬೋಯಿಂಗ್ ಈ ಕ್ರಮ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.

ವಾಷಿಂಗ್ಟನ್​ನ ಸಿಯಾಟಲ್​ನಲ್ಲಿ ಬೋಯಿಂಗ್​ನ ಅತಿದೊಡ್ಡ ಫ್ಯಾಕ್ಟರಿ ಇದೆ. ಸಿಯಾಟಲ್ ನಗರದಲ್ಲಿ ನಿರುದ್ಯೋಗ ಪ್ರಮಾಣ ಕೇವಲ ಶೇ. 4 ಮಾತ್ರವೇ ಇದೆ. ಈ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿರುವುದು ಬೋಯಿಂಗ್ ಕಂಪನಿಗೆ ರಿಸ್ಕಿ ಎನಿಸಬಹುದು. ಭವಿಷ್ಯದಲ್ಲಿ ಅಗತ್ಯಬೀಳುವ ಕೆಲಸಗಳಿಗೆ ಉದ್ಯೋಗಿಗಳನ್ನು ಆಕರ್ಷಿಸಲು ಕಷ್ಟವಾಗಬಹುದು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್

ಸ್ಪೇಸ್​ಎಕ್ಸ್, ಬ್ಲೂ ಆರೈಜಿನ್, ಅಮೇಜಾನ್​ನ ಪ್ರಾಜೆಕ್ಟ್ ಕ್ಯೂಪರ್ ಮೊದಲಾದ ಹಲವು ಸಂಸ್ಥೆಗಳ ಫ್ಯಾಕ್ಟರಿಗಳು ಇದೇ ಸಿಯಾಟಲ್​ನಲ್ಲಿವೆ. ಏರೋಸ್ಪೇಸ್ ಸೆಕ್ಟರ್​ನಲ್ಲಿ ಕೆಲಸ ಮಾಡುವ ಜನರಿಗೆ ಈಗ ಸಖತ್ ಬೇಡಿಕೆ ಇದೆ. ಹೀಗಾಗಿ, ಬೋಯಿಂಗ್ ಮುಂದಿನ ದಿನಗಳಲ್ಲಿ ಚೇತರಿಕೆ ಹಾದಿಗೆ ಬರಲು ಸ್ವಲ್ಪ ಕಷ್ಟಪಡಬೇಕಾಗಬಹುದು.

ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆ ಎನಿಸಿದ ಬೋಯಿಂಗ್ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಕೆಲ ಸಂಕಷ್ಟಗಳಿಗೆ ಸಿಲುಕಿದೆ. ಅದರ ಕೆಲ ವಿಮಾನಗಳು ವಿವಿಧೆಡೆ ಅಪಘಾತಗೊಂಡಿವೆ. ವಿಮಾನದ ಕೆಲ ಸಾಫ್ಟ್​ವೇರ್ ಮತ್ತು ಹಾರ್ಡ್​ವೇರ್​ಗಳಲ್ಲಿನ ದೋಷ ಇದಕ್ಕೆ ಕಾರಣ ಎನ್ನಲಾಗಿದೆ. ಇದರ ಜೊತೆಗೆ, 2018ರಿಂದಲೂ ಅದು ಲಾಭವನ್ನೇ ಕಂಡಿಲ್ಲ.

ಇದನ್ನೂ ಓದಿ: Reliance Jio: ಕೇವಲ 11 ರೂಗೆ 10 ಜಿಬಿ ಡಾಟಾ; ಜಿಯೋದಿಂದ ಹೊಸ ಪ್ಯಾಕ್ ಬಿಡುಗಡೆ

ಈ ಮಧ್ಯೆ ಬೋಯಿಂಗ್​ನ ನೌಕರರು ಇತ್ತೀಚೆಗೆ 53 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಶೇ. 38ರಷ್ಟು ವೇತನ ಹೆಚ್ಚಳದ ಬೇಡಿಕೆಗೆ ಸಮ್ಮತಿಸಿದ ಬಳಿಕವಷ್ಟೇ ಮುಷ್ಕರ ಹಿಂಪಡೆಯಲಾಗಿತ್ತು. ಇದೆಲ್ಲವೂ ವಿಮಾನದ ಉತ್ಪನ್ನತೆಗೆ ಹಿನ್ನಡೆ ತಂದಿದೆ. ಆಗಸ್ಟ್​ನಲ್ಲಿ ಹೊಸ ಸಿಇಒ ಬಂದಿದ್ದು, ಅವರು ಸಂಸ್ಥೆಗೆ ಚೇತರಿಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಸುವುದೂ ಒಂದು ಭಾಗವಾಗಿದೆ. ಕಳೆದ ತಿಂಗಳೇ ಅವರು ಶೇ. 10ರಷ್ಟು ಲೇ ಆಫ್ ಮಾಡುವ ಸುಳಿವು ನೀಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ