
ನವದೆಹಲಿ, ಡಿಸೆಂಬರ್ 10: ಭಾರತದಲ್ಲಿ ಹೂಡಿಕೆ ಮಾಡಲು ಜಾಗತಿಕ ತಂತ್ರಜ್ಞಾನ ದೈತ್ಯ ಕಂಪನಿಗಳು ಪೈಪೋಟಿಗೆ ಬಿದ್ದಂತಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ (Microsoft) ಸಂಸ್ಥೆಗಳು ಭಾರೀ ಮೊತ್ತದ ಹೂಡಿಕೆಯನ್ನು ಘೋಷಿಸಿದ ಬೆನ್ನಲ್ಲೇ ಇದೀಗ ಅಮೇಜಾನ್ (Amazon) ಕೂಡ ಭಾರತದಲ್ಲಿ ಹಣ ಹಾಕಲು ಸಿದ್ಧವಾಗಿದೆ. ಬರೋಬ್ಬರಿ 35 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡುವುದಾಗಿ ಅಮೇಜಾನ್ ಘೋಷಿಸಿದೆ.
ದೆಹಲಿಯಲ್ಲಿ ಇಂದು ಬುಧವಾರ ನಡೆದ ಆರನೇ ಆವೃತ್ತಿಯ ಅಮೇಜಾನ್ ಸಂಭವ್ ಶೃಂಗಸಭೆಯಲ್ಲಿ (6th Amazon Smbhav Summit 2025) ಇದನ್ನು ಪ್ರಕಟಿಸಲಾಗಿದೆ. ಅಮೇಜಾನ್ ಈಗಾಗಲೇ ಭಾರತದಲ್ಲಿ 40 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡಿದೆ. ಇದರ ಜೊತೆಗೆ ಇನ್ನೂ 35 ಬಿಲಿಯನ್ ಡಾಲರ್ ಹಣ ಹಾಕಲು ಬದ್ಧವಾಗಿದೆ. 35 ಬಿಲಿಯನ್ ಡಾಲರ್ ಎಂದರೆ ಬಹುತೇಕ ಮೂರು ಲಕ್ಷ ಕೋಟಿ ರೂಗಿಂತಲೂ ಅಧಿಕ ಹಣ.
ಇದನ್ನೂ ಓದಿ: ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ
ನಿನ್ನೆಯಷ್ಟೇ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರು ತಮ್ಮ ಕಂಪನಿಯು ಭಾರತದಲ್ಲಿ 17.5 ಬಿಲಿಯನ್ ಡಾಲರ್ (ಒಂದೂವರೆ ಲಕ್ಷ ಕೋಟಿ ರೂ) ಹೂಡಿಕೆ ಮಾಡುತ್ತಿರುವುದಾಗಿ ಘೋಷಿಸಿದ್ದರು. ಗೂಗಲ್ ಸಂಸ್ಥೆಯೂ ಕೂಡ ಮುಂದಿನ ಐದು ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿಯೂ ಹೇಳಿದೆ. ಅಮೇಜಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಕಂಪನಿಗಳಿಗಿಂತ ಎರಡು ಪಟ್ಟು ಹೆಚ್ಚು ಹೂಡಿಕೆ ಮಾಡುವುದಾಗಿ ಹೇಳಿದೆ.
ಅಮೇಜಾನ್ ತನ್ನ ಈ 35 ಬಿಲಿಯನ್ ಡಾಲರ್ ಹೂಡಿಕೆಯಿಂದ ಹತ್ತು ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದೆ. ಒಂದೂವರೆ ಕೋಟಿ ಸಣ್ಣ ಉದ್ದಿಮೆಗಳಿಗೆ ಎಐ ಲಾಭವನ್ನು ತಲುಪಿಸಲು ಮತ್ತು ರಫ್ತನ್ನು 80 ಬಿಲಿಯನ್ ಡಾಲರ್ಗೆ ಹೆಚ್ಚಿಸಲು ಸಹಾಯವಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?
ಈಗಾಗಲೇ 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಅಮೇಜಾನ್ ಭಾರತದಲ್ಲಿ ಅತಿಹೆಚ್ಚು ಹೂಡಿಕೆ ಮಾಡಿರುವ ವಿದೇಶೀ ಸಂಸ್ಥೆಯಾಗಿದೆ. ಭಾರತದಲ್ಲಿ ಅತಿಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುವ ಕಂಪನಿಗಳಲ್ಲಿ ಅದೂ ಒಂದೆನಿಸಿದೆ. 28 ಲಕ್ಷ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸಿದೆ. ಒಂದು ಕೋಟಿಗೂ ಅಧಿಕ ಉದ್ದಿಮೆಗಳನ್ನು ಡಿಜಿಟೈಸ್ ಮಾಡಿದೆ. ಇಕಾಮರ್ಸ್ನಲ್ಲಿ 20 ಬಿಲಿಯನ್ ಡಾಲರ್ಗೂ ಅಧಿಕ ರಫ್ತಿಗೆ ಕಾರಣವಾಗಿದೆ. ಈ ರಫ್ತನ್ನು ಮುಂದಿನ ಕೆಲ ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಬಹುದೆಂದು ನಿರೀಕ್ಷಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ