ನವದೆಹಲಿ: ಅಮೇಜಾನ್ನಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ (Amazon Job Cuts) ಭರಾಟೆ ಮುಂದುವರಿಯುತ್ತಿದೆ. ಈಗಾಗಲೇ 18 ಸಾವಿರ ಉದ್ಯೋಗಿಗಳನ್ನು ಲೇ ಆಫ್ ಮಾಡುವುದಾಗಿ ಜನವರಿ ತಿಂಗಳಲ್ಲಿ ಅಮೇಜಾನ್ ಹೇಳಿತ್ತು. ಅದರಂತೆ ಈಗಾಗಲೇ ಬಹಳಷ್ಟು ಮಂದಿ ಪಿಂಕ್ ಸ್ಲಿಪ್ ಪಡೆದು ಮನೆಗೆ ಹೋಗಿದ್ದಾರೆ. ಈಗ ಇದು ಸಾಕಾಗದು ಎಂದು ಇನ್ನೂ 9,000 ಮಂದಿಯನ್ನು ಕೆಲಸದಿಂದ ತೆಗೆಯಲು ಅಮೇಜಾನ್ ಯೋಜಿಸಿದೆ. ಇದರೊಂದಿಗೆ 2023, ಈ ವರ್ಷ ಅಮೇಜಾನ್ ಒಟ್ಟು 27,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದಂತಾಗುತ್ತದೆ. ಮುಂದಿನ ಕೆಲ ವಾರಗಳಲ್ಲಿ ಈ 9 ಸಾವಿರ ಮಂದಿಗೆ ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ.
ಅಮೇಜಾನ್ನಲ್ಲಿ ಸದ್ಯ ವಾರ್ಷಿಕ ಪ್ಲಾನಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಎರಡನೇ ಹಂತದ ಈ ಪ್ರಕ್ರಿಯೆಯಲ್ಲಿ ಅಮೇಜಾನ್ನ ವ್ಯವಹಾರ ಇರುವ ಯಾವ ಕ್ಷೇತ್ರದಲ್ಲಿ ಉದ್ಯೋಗಕಡಿತ ಮಾಡಬಹುದು ಎಂದು ನಿರ್ಧರಿಸಲಾಗಿದೆ. ಈ ಆಯ್ದ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಕಡಿತ ಮಾಡಲಾಗಿದೆ.
ಉದ್ಯೋಗ ಕಡಿತದ ಜೊತೆಗೆ ಅಮೇಜಾನ್ ಸಂಸ್ಥೆ ತನ್ನ ಇತರ ಕೆಲ ಖರ್ಚು ವೆಚ್ಚಗಳನ್ನು ತಗ್ಗಿಸಲು ಆಲೋಚಿಸಿದೆ. ಅಮೆರಿಕದ ನಾರ್ಥ್ ವರ್ಜೀನಿಯಾದಲ್ಲಿ ಅದರ ಮುಖ್ಯಕಚೇರಿ ನಿರ್ಮಾಣದ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಇದನ್ನೂ ಓದಿ: ಫಾಕ್ಸ್ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಸಿಎಂ ಬೊಮ್ಮಾಯಿ ನೇತೃತ್ವದ ಸಭೆ ಅನುಮೋದನೆ
ಅದರ ಗೇಮಿಂಗ್ ಪ್ಲಾಟ್ಫಾರ್ಮ್ ಟ್ವಿಚ್ ವಿಭಾಗದಲ್ಲೂ ಲೇ ಆಫ್ ಆಗುತ್ತಿದೆ. ಕಂಪನಿಯ ಸ್ಟೋರ್ ವಿಭಾಗವಾದ ಪಿಎಕ್ಸ್ಟಿಯಲ್ಲೂ ಉದ್ಯೋಗನಷ್ಟ ಆಗಿದೆ.
ಅಮೇಜಾನ್ ದೊಡ್ಡ ಮಟ್ಟದಲ್ಲಿ ಲೇ ಆಫ್ ಮಾಡುತ್ತಿದೆಯಾದರೂ ಹೊಸ ನೇಮಕಾತಿಗಳನ್ನೂ ಜೊತೆಜೊತೆಗೇ ನಡೆಸುತ್ತಿದೆ. ಹೀಗಾಗಿ, ಸದ್ಯ ಅಮೇಜಾನ್ನಲ್ಲಿ ನಡೆಯುತ್ತಿರುವುದು ಕಂಪನಿಯ ಖರ್ಚುವೆಚ್ಚ ತಗ್ಗಿಸುವುದರ ಜೊತೆಗೆ ವ್ಯವಹಾರ ಬಲಪಡಿಸುವ ಕಾರ್ಯವಾಗಿದೆ.
Published On - 10:23 am, Tue, 21 March 23