ಬೆಂಗಳೂರು, ಅಕ್ಟೋಬರ್ 27: ಅಮೆರಿಕದ ಪ್ರಮುಖ ಚಿಪ್ ತಯಾರಕ ಕಂಪನಿ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (AMD) ಸಂಸ್ಥೆ ಭಾರತದಲ್ಲಿ ಮುಂದಿನ 5 ವರ್ಷ ಅವಧಿಯಲ್ಲಿ 400 ಮಿಲಿಯನ್ ಡಾಲರ್ (ಸುಮಾರು 3,300 ಕೋಟಿ ರೂ) ಹೂಡಿಕೆ ಮಾಡಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ನಿನ್ನೆ ಗುರುವಾರ (ಅ. 26) ಎಎಂಡಿ ಇಂಡಿಯಾದ ಮುಖ್ಯಸ್ಥೆ ಜಯಾ ಜಗದೀಶ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೆದುರು ಸಚಿವ ವೈಷ್ಣವ್ ಈ ಘೋಷಣೆ ಮಾಡಿದ್ದಾರೆ.
ಎಎಂಡಿ ಸಂಸ್ಥೆ ಬೆಂಗಳೂರಿನಲ್ಲಿ ಅತಿದೊಡ್ಡ ಚಿಪ್ ಡಿಸೈನ್ ಸೆಂಟರ್ ತೆರೆಯಲಿದೆ. ಇದು ಈ ವರ್ಷದೊಳಗೆಯೇ ಆರಂಭವಾಗುವ ನಿರೀಕ್ಷೆ ಇದೆ. ಎಎಂಡಿಯ ಮೂರನೇ ಅತಿದೊಡ್ಡ ಸೆಮಿಕಂಡಕ್ಟರ್ ಡಿಸೈನ್ ಕೇಂದ್ರ ಇದಾಗಿದೆ. ಆದರೆ, ಭಾರತಕ್ಕೆ ಇದು ಅತಿದೊಡ್ಡದು. ಬೆಂಗಳೂರಿನಲ್ಲಿನ ಈ ಆರ್ ಅಂಡ್ ಡಿ ಡಿಸೈನ್ ಸೆಂಟರ್ನಲ್ಲಿ 2028ರಷ್ಟರಲ್ಲಿ 3,000 ಹೊಸ ಎಂಜಿನಿಯರ್ಗಳ ನೇಮಕಾತಿ ಆಗಲಿದೆ.
ಎಎಂಡಿಯ ಡಿಸೈನ್ ಸೆಂಟರ್ ಸ್ಥಾಪನೆ ಬಗ್ಗೆ ಕೇಂದ್ರ ಸಚಿವ ಎ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ‘ಸೆಮಿಕಂಡಕ್ಟರ್ ಡಿಸೈನ್ನಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆಯನ್ನು ಎಎಂಡಿ ಪ್ರಕಟಿಸಿದೆ. ಎಎಂಡಿ ಟೆಕ್ನೋಸ್ಟಾರ್ ಸೆಂಟರ್ ಉತ್ತಮವಾಗಿ ರೂಪುಗೊಳ್ಳುತ್ತಿರುವುದು ತಿಳಿದು ಖುಷಿಯಾಯಿತು’ ಎಂದು ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
AMD had announced $400 mn investment in semiconductor design. Happy to know that the @AMD Technostar Centre is shaping up well. pic.twitter.com/mpdWcdvzM4
— Ashwini Vaishnaw (@AshwiniVaishnaw) October 26, 2023
ಇದನ್ನೂ ಓದಿ: ಒಂದೇ ವಾರದಲ್ಲಿ 18 ಲಕ್ಷಕೋಟಿ ರೂ ಕಳೆದುಕೊಂಡ ಹೂಡಿಕೆದಾರರು; ಷೇರುಪೇಟೆ ಈ ಪರಿ ಅಲುಗಾಡುತ್ತಿರುವುದೇಕೆ?
ಜುಲೈ ಕೊನೆಯ ವಾರದಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ನಡೆದ ಸೆಮಿಕಾನ್ ಇಂಡಿಯಾ 2023 ಕಾರ್ಯಕ್ರಮದಲ್ಲಿ ಎಎಂಡಿ ಸಂಸ್ಥೆ ಭಾರತದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಕಟಿಸಿತ್ತು. ಎಎಂಡಿ ಭಾರತದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿ ಎರಡು ದಶಕಗಳೇ ಗತಿಸಿವೆ. ಬೆಂಗಳೂರು, ದೆಹಲಿ ಸೇರಿದಂತೆ 10 ಕಡೆ ಅದರ ಕಚೇರಿಗಳಿವೆ. 6,500ಕ್ಕೂ ಹೆಚ್ಚು ಉದ್ಯೋಗಿಗಳು ಭಾರತದಲ್ಲಿ ಎಎಂಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈಗ ಬೆಂಗಳೂರಿನಲ್ಲಿ ಈಗಾಗಲೇ ಇರುವ ಕಚೇರಿ ಜೊತೆಗೆ ಸೆಮಿಕಂಡಕ್ಟರ್ ಆರ್ ಅಂಡ್ ಡಿ ಚಿಪ್ ಡಿಸೈನ್ ಸೆಂಟರ್ ಅನ್ನು 5,00,000 ಚದರಡಿ ಜಾಗದಲ್ಲಿ ಹೊಸದಾಗಿ ಸ್ಥಾಪಿಸಲಾಗುತ್ತಿದೆ. ಅದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೆರಡು ತಿಂಗಳೊಳಗೆ ಸಿದ್ಧವಾಗಬಹುದು. ಈ ಸೆಂಟರ್ನಲ್ಲಿ ಬಹಳಷ್ಟು ಲ್ಯಾಬ್ಗಳು, ಆಧುನಿಕ ಪೂರಕ ಉಪಕರಣ ಇತ್ಯಾದಿ ಇರಲಿವೆ.
ಇದನ್ನೂ ಓದಿ: Semiconductor Supply Chain: ಸೆಮಿಕಂಡಕ್ಟರ್ ಯೋಜನೆ: ಭಾರತ-ಜಪಾನ್ ಪಾಲುದಾರಿಕೆಗೆ ಕೇಂದ್ರ ಸಂಪುಟ ಅನುಮೋದನೆ
ಇದು ಭಾರತದ ಅತಿದೊಡ್ಡ ಆರ್ ಅಂಡ್ ಡಿ ಡಿಸೈನ್ ಸೆಂಟರ್ ಆಗಲಿದ್ದು, ಇದರಲ್ಲಿ ಅತ್ಯುತ್ತಮ ಸೆಮಿಕಂಡಕ್ಟರ್ ಎಂಜಿನಿಯರುಗಳು ಮತ್ತು ಸಂಶೋಧಕರಿಗೆ ಒಳ್ಳೆಯ ಉದ್ಯೋಗಾವಕಾಶ ಇರಲಿದೆ. ಸೆಮಿಕಂಡಕ್ಟರ್ ಚಿಪ್ ತಯಾರಿಸುವ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ಗುರಿ ಇಟ್ಟಿದ್ದು, ಅದಕ್ಕಾಗಿ ಪಿಎಲ್ಐ ಸ್ಕೀಮ್ ಇತ್ಯಾದಿ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಎಎಂಡಿಯ ಸಂಶೋಧನಾ ಮತ್ತು ವಿನ್ಯಾಸ ಕೇಂದ್ರ ಸ್ಥಾಪನೆಯಾಗಲಿರುವುದು ದೊಡ್ಡ ಪುಷ್ಟಿ ಸಿಕ್ಕಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Fri, 27 October 23