ಅಮೆರಿಕ ಮಾಡಿರುವ ಹೊಸ ದಾಖಲೆಯಿದು. ಅಂದ ಹಾಗೆ ಇದು ಕೆಟ್ಟ ದಾಖಲೆಯಾದರೂ ಚರಿತ್ರೆಯಲ್ಲಿ ಉಳಿದು ಹೋಗುವಂಥದ್ದು. ಏನದು ಅಂತೀರಾ? ಅಮೆರಿಕದ ರಾಷ್ಟ್ರೀಯ ಸಾಲ ದಾಖಲೆಯ ಗರಿಷ್ಠ ಮಟ್ಟವಾದ 30 ಲಕ್ಷ ಕೋಟಿ ಡಾಲರ್ಗೆ ಮುಟ್ಟಿದೆ. ಮಂಗಳವಾರದಂದು ಖಜಾನೆ ಇಲಾಖೆ ಮುದ್ರಿಸಿರುವ ಡೇಟಾದ ಪ್ರಕಾರ ಈ ಅಂಕಿ-ಅಂಶ ಬಯಲಾಗಿದೆ. ಈ ಖಜಾನೆ ಇಲಾಖೆಯು ಅಮೆರಿಕ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. “ಎಷ್ಟು ಸಾಲವು ಹೆಚ್ಚು ಸಾಲ ಎನಿಸಿಕೊಳ್ಳುತ್ತದೆ” ಎಂಬ ವಿಚಾರವು ಈಗ ಅಮೆರಿಕದ ಮಾಧ್ಯಮ ಸಂಸ್ಥೆಗಳಲ್ಲಿ ಚರ್ಚೆಯ ಸಂಗತಿ ಆಗಿದೆ. ಅಷ್ಟೇ ಅಲ್ಲ, ಭಿನ್ನ ಭಿನ್ನ ಅಭಿಪ್ರಾಯಗಳು ಬರುತ್ತಿವೆ. ಆದರೆ ಒಂದು ವಿಚಾರದಲ್ಲಿ ಎಲ್ಲರಿಗೂ ಸಹಮತ ಇದೆ. ಅದೇನೆಂದರೆ, ಈ ಸಾಲದ ಮಟ್ಟ ದಾಖಲೆ ಹಂತಕ್ಕೆ ತಲುಪಿರುವುದು ಬಹಳ ಸೂಕ್ಷ್ಮ ಸಮಯದಲ್ಲಿ. ಮೊದಲೇ ಅಮೆರಿಕದ ಆರ್ಥಿಕತೆ (US economy) ಬದಲಾವಣೆ ಹಂತದಲ್ಲಿದ್ದು, ಸಾಲದ ವೆಚ್ಚ ಹೆಚ್ಚಾಗುತ್ತದೆ ಎಂದು ಹಣಕಾಸು ನೀತಿ ನಿರೂಪಣೆ ಮಾಡುತ್ತಿರುವ ಹೊತ್ತಲ್ಲಿ ಆರ್ಥಿಕತೆ ಮೇಲೆ ಇದರಿಂದ ದೊಡ್ಡ ಪರಿಣಾಮ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಸಾಲ ಅಂದರೆ, ಒಂದು ಸರ್ಕಾರ- ಒಂದು ದೇಶದ ಸರ್ಕಾರ ಪಡೆದುಕೊಂಡಿರುವ ಒಟ್ಟು ಸಾಲದ ಮೊತ್ತ. ಜನವರಿ 31, 2022ರ ಕೊನೆಗೆ ಇರುವ ಒಟ್ಟು ಸಾಲ ಬಾಕಿ 30.1 ಲಕ್ಷ ಕೋಟಿ ಅಮೆರಿಕನ್ ಡಾಲರ್. ಇದನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 2256.10 ಲಕ್ಷ ಕೋಟಿಗಳಾಗುತ್ತದೆ. ಸೊನ್ನೆಗಳು ಸಹ ದಿಕ್ಕು ತಪ್ಪಿ, ತಲೆ ಗಿರ್ ಎಂದು ತಿರುಗುವಷ್ಟು ಮೊತ್ತ ಇದು. ಓದುಗರಿಗೆ ಸರಳವಾಗಿ ಅರ್ಥವಾಗುವುದಕ್ಕಾಗಿ ಒಂದು ಉದಾಹರಣೆ ಕೊಡಬೇಕು ಅಂದರೆ, ಈ ಬಾರಿ ಭಾರತದ ಕೇಂದ್ರ ಬಜೆಟ್ ಮೊತ್ತ 34 ಲಕ್ಷ ಕೋಟಿ ರೂಪಾಯಿ. ಭಾರತದ ಬಜೆಟ್ನ 66 ಪಟ್ಟು ವೆಚ್ಚಕ್ಕೆ ಸಮ ಅಮೆರಿಕದ ಈಗಿನ ಸಾಲದ ಮೊತ್ತ. 2020ರ ಜನವರಿಯಿಂದ ಈಚೆಗೆ ಅಂದರೆ ಯಾವಾಗ ಕೊವಿಡ್ ಕಾಣಿಸಿಕೊಂಡಿತೋ ಅದಕ್ಕೂ ಸ್ವಲ್ಪ ಮುಂಚಿನಿಂದ ಸಾಲದ ಮೊತ್ತ 7 ಲಕ್ಷ ಕೋಟಿ ಡಾಲರ್ ಜಾಸ್ತಿ ಆಗಿದೆ.
ಇಷ್ಟು ಸಾಲ ಆಗುವುದಕ್ಕೆ ಏನು ಕಾರಣಗಳು ಅಂತ ನೋಡಿದರೆ ಸಾರ್ವಜನಿಕ ಹಾಗೂ ಅಂತರ ಸರ್ಕಾರ ಸರ್ಕಾರಗಳು ಕಾಣಿಸುತ್ತವೆ. ಒಂದು, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರವು ವೆಚ್ಚವನ್ನು ಹೆಚ್ಚು ಮಾಡಿದ್ದು. ಸಿಎನ್ಎನ್ ತಿಳಿಸಿರುವಂತೆ, 2019ರ ಕೊನೆಯ ಭಾಗದಿಂದ ಖರ್ಚು ಮಾಡಲಾಗುತ್ತಿದೆ. ಜಪಾನ್ ಮತ್ತು ಚೀನಾ ನೇತೃತ್ವದಲ್ಲಿ ಹೂಡಿಕೆದಾರರಿಂದ ಹತ್ತಿರ ಹತ್ತಿರ 7 ಲಕ್ಷ ಕೋಟಿ ಡಾಲರ್ ಸಾಲ ಪಡೆಯಲಾಗಿದೆ. ಅವುಗಳನ್ನು ಮರು ಪಾವತಿಸಬೇಕಾಗುತ್ತದೆ. ಇನ್ನೊಂದೇನೆಂದರೆ, 2008ರಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿತಲ್ಲ, ಆಗಿನಿಂದ ಸಾಲ ಹೆಚ್ಚಾಗುತ್ತಲೇ ಬರುತ್ತಿದೆ. ಅದಂತೂ ಕೊರೊನಾ ಕಾಣಿಸಿಕೊಳ್ಳುವ ದಶಕಕ್ಕೂ ಮುಂಚಿನ ಸವಾಲಾಗಿದೆ.
2007ರ ಡಿಸೆಂಬರ್ನಲ್ಲಿ, ಯಾವಾಗ ಜಾಗತಿಕವಾಗಿ ಆರ್ಥಿಕ ಕುಸಿತ ಕಾಣಿಸಿಕೊಂಡು, ಮಹಾ ಕುಸಿತ ಎಂದು ಆರಂಭವಾಯಿತೋ ಆಗ ಅಮೆರಿಕದ ರಾಷ್ಟ್ರೀಯ ಸಾಲದ ಬಾಕಿ 9.2 ಲಕ್ಷ ಕೋಟಿ ಡಾಲರ್ ಇತ್ತು. ಇನ್ನು ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಾಗ ಇದ್ದ ರಾಷ್ಟ್ರೀಯ ಸಾಲ ಪ್ರಮಾಣ 20 ಲಕ್ಷ ಕೋಟಿ ಡಾಲರ್, ಎಂದು ಸಿಎನ್ಎನ್ ವರದಿ ಮಾಡಿದೆ.
ತೆರಿಗೆ ನೀತಿ ಕೇಂದ್ರದ ಪ್ರಕಾರ, 2017ರಲ್ಲಿ ಹಿಂದಿನ ಟ್ರಂಪ್ ಸರ್ಕಾರವು ಜಾರಿಗೆ ತಂದ ತೆರಿಗೆ ಕಡಿತ ಮತ್ತು ಉದ್ಯೋಗ ಕಾಯ್ದೆ (TCJA) ಅಡಿಯಲ್ಲಿ ತೆರಿಗೆ ಕಡಿತದಿಂದ ಆದಾಯ ನಷ್ಟವು 2018 ಮತ್ತು 2025ರ ನಡುವೆ ಸರ್ಕಾರದ ಸಾಲದಲ್ಲಿ 1ರಿಂದ 2 ಟ್ರಿಲಿಯನ್ ಡಾಲರ್ ಅನ್ನು ಸೇರಿಸುತ್ತದೆ. ಹೆಚ್ಚುತ್ತಿರುವ ಕೊರತೆಗಳ ಜತೆಗೆ ಕೊರೊನಾ ಬಿಕ್ಕಟ್ಟು ಸಹ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
ಬೈಡನ್ ಆಳ್ವಿಕೆಯಲ್ಲಿಯೂ ಸಣ್ಣ ಉದ್ಯಮಗಳು, ನಿರುದ್ಯೋಗಿ ಕಾರ್ಮಿಕರು ಮತ್ತು ಅವರ ಕುಟುಂಬಗಳು ಮತ್ತು ಇತರ ಗುಂಪುಗಳಿಗೆ ಬೆಂಬಲವಾಗಿ ಕೊರೊನಾ ಪರಿಹಾರ (ಉತ್ತೇಜನ) ಕಾರ್ಯಕ್ರಮಗಳ ಅಡಿಯಲ್ಲಿ ಲಕ್ಷಗಟ್ಟಲೆ ಡಾಲರ್‌ಗಳನ್ನು ಕಾಂಗ್ರೆಸ್ (ಅಮೆರಿಕದ ಸಂಸತ್) ಅಧಿಕೃತಗೊಳಿಸಿತು.
ಈ ಮಧ್ಯೆ ಅಮೆರಿಕದ ಕೇಂದ್ರ ಬ್ಯಾಂಕ್ ಶೀಘ್ರದಲ್ಲೇ ಹಣದುಬ್ಬರವನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಶೂನ್ಯದ ಸಮೀಪದಿಂದ ಅಲ್ಪಾವಧಿಯ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇದು ಸುಮಾರು ನಾಲ್ಕು ದಶಕಗಳಲ್ಲಿ ಅತ್ಯಧಿಕ ಮಟ್ಟದಲ್ಲಿದೆ.
ಇದನ್ನೂ ಓದಿ: US Inflation: ಅಮೆರಿಕದಲ್ಲಿ ನವೆಂಬರ್ ತಿಂಗಳ ಹಣದುಬ್ಬರ ದರ 40 ವರ್ಷಗಳ ಗರಿಷ್ಠ ಮಟ್ಟಕ್ಕೆ