ಚೀನಾದ ಕ್ಸಿನ್ಜಿಯಾಂಗ್ ಭಾಗದಿಂದ ಉತ್ಪನ್ನಗಳ ಆಮದು ನಿಷೇಧಿಸಿ ಅಮೆರಿಕದ ಸೆನೆಟ್ ಬುಧವಾರದಂದು ಕಾನೂನು ಅಂಗೀಕಾರ ಮಾಡಿದೆ. ಚೀನಾದಲ್ಲಿ ಉಯ್ಘರ್ಸ್ ಮತ್ತು ಇತರ ಮುಸ್ಲಿಮರ ಹತ್ಯೆಯನ್ನು ದಂಡಿಸುವ ಉದ್ದೇಶದಿಂದ ವಾಷಿಂಗ್ಟನ್ ಈ ಕ್ರಮಕ್ಕೆ ಮುಂದಾಗಿದೆ. ಉಯ್ಘರ್ಸ್ ಬಲವಂತದ ಕಾರ್ಮಿಕ ತಡೆ ಕಾಯ್ದೆಯ ಅಡಿಯಲ್ಲಿ ಈ ಖಂಡನೀಯ ಕ್ರಮಕ್ಕೆ ನಿರ್ಧರಿಸಿದ್ದು, ಕ್ಸಿನ್ಜಿಯಾಂಗ್ನಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳು ಬಲವಂತದ ಕಾರ್ಮಿಕರಿಂದ ತಯಾರಾದದ್ದು ಎಂದು ತೀರ್ಮಾನಿಸಲಾಗಿದೆ. ಯುಎಸ್ ಅಧಿಕಾರಿಗಳು ಪ್ರಮಾಣೀಕರಿಸದ ಹೊರತು 1930 ಕರ ಕಾಯ್ದೆ ಅಡಿಯಲ್ಲಿ ನಿಷೇಧಿಸಲಾಗಿದೆ. ಒಮ್ಮತದ ಅಭಿಪ್ರಾಯದೊಂದಿಗೆ ಈ ಮಸೂದೆಯನ್ನು ಅಮೆರಿಕ ಅಂಗೀಕರಿಸಿದೆ. ಬಲವಂತವಾಗಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಬೇಕಾದಷ್ಟು ಸಾಕ್ಷ್ಯವಿದ್ದಲ್ಲಿ ಆಮದು ನಿಷೇಧಿಸಲಾಗುತ್ತದೆ.
ಆದರೆ, ಅಧ್ಯಕ್ಷ ಜೋ ಬೈಡನ್ ಸಹಿಗೆ ವೈಟ್ಹೌಸ್ಗೆ ಕಳುಹಿಸುವ ಮುನ್ನ ಈ ಮಸೂದೆಯು ಜನಪ್ರತಿನಿಧಿಗಳ ಸಭೆಯಲ್ಲೂ ಪಾಸ್ ಆಗಬೇಕು. ಆ ನಂತರವಷ್ಟೇ ಇದು ಕಾನೂನಾಗುತ್ತದೆ. ಇದು ಯಾವಾಗ ಜಾರಿಗೆ ಬರುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಿಪಬ್ಲಿಕನ್ ಪಕ್ಷದ ಸೆನೆಟರ್ ಮಾರ್ಕೊ ರುಬಿಯೋ ಈ ಕಾನೂನನ್ನು ಮಂಡಿಸಿದ್ದು, ಡೆಮಾಕ್ರಟ್ ಪಕ್ಷ್ ಜೆಫ್ ಮರ್ಕ್ಲೆ ಅವರು ಶೀಘ್ರವಾಗಿ ಕಾನೂನು ಜಾರಿಯಾಗಬೇಕು ಎಂದು ಕೇಳಿದ್ದಾರೆ. “ಮಾನವೀಯತೆಯ ವಿರುದ್ಧ ಈಗ ಸಿಸಿಪಿಯಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ನಾವು ಕಣ್ಣು ಕಾಣದವರಂತೆ ಇರುವುದಕ್ಕೆ ಸಾಧ್ಯವಿಲ್ಲ. ಅಂಥ ಭೀಕರ ದಾಳಿಗಳಿಂದ ಲಾಭ ಮಾಡಿಕೊಳ್ಳುವುದಕ್ಕೆ ಕಾರ್ಪೊರೇಷನ್ಗಳಿಗೆ ಮುಕ್ತ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ,” ಎಂದು ರುಬಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದಬ್ಬಾಳಿಕೆಗಳಿಂದ ಯಾವ ಅಮೆರಿಕನ್ ಕಾರ್ಪೊರೇಷನ್ಗಳೂ ಲಾಭ ಮಾಡಿಕೊಳ್ಳಬಾರದು. ಯಾವುದೇ ಅಮೆರಿಕನ್ ಗ್ರಾಹಕರು ಸಹ ಗುಲಾಮಗಿರಿಯ ಕಾರ್ಮಿಕರು ತಯಾರಿಸಿದ ಉತ್ಪನ್ನಗಳನ್ನು ತಮಗೆ ಗೊತ್ತಿಲ್ಲದೆ ತೆಗೆದುಕೊಳ್ಳುವಂತಾಗಬಾರದು ಎಂದು ಮರ್ಕ್ಲೆ ಹೇಳಿದ್ದಾರೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಸದಸ್ಯರು ಹೇಳುವಂತೆ, ಸಂಸತ್ನಲ್ಲಿ ಈ ಕ್ರಮಕ್ಕೆ ಭಾರೀ ಬೆಂಬಲ ದೊರೆಯುವ ನಿರೀಕ್ಷೆ ಇದೆ. ಕಳೆದ ವರ್ಷ ಇಂಥದ್ದೇ ಕ್ರಮವನ್ನು ಅಲ್ಲಿನ ಸಭೆಯಲ್ಲಿ ಅವಿರೋಧವಾಗಿ ಒಪ್ಪಿಕೊಳ್ಳಲಾಗಿತ್ತು. ಚೀನಾದಲ್ಲಿ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಅಮೆರಿಕದಿಂದ ಪೂರೈಕೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಸಿನ್ಜಿಯಾಂಗ್ನ ಟೊಮೆಟೊ, ಹತ್ತಿ ಮತ್ತು ಇತರ ಸೋಲಾರ್ ಉತ್ಪನ್ನಗಳನ್ನು ಖರೀದಿಸುತ್ತಿಲ್ಲ. ಈಗಿನ ಕ್ರಮದಿಂದ ಇನ್ನಷ್ಟು ವಿಸ್ತರಿಸಲಿದೆ.
ಬೈಡನ್ ಆಡಳಿತದಲ್ಲಿ ನಿರ್ಬಂಧವನ್ನು ಹೆಚ್ಚಿಸಲಾಗಿದೆ. ಮಂಗಳವಾರದಂದು ಉದ್ಯಮಗಳಿಗೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಯಾವುದಾದರೂ ಕಾರ್ಯ ಚಟುವಟಿಕೆಗಳು ಪರೋಕ್ಷವಾಗಿಯಾದರೂ ಕ್ಸಿನ್ಜಿಯಾಂಗ್ನ ಸರ್ವೆಲೆನ್ಸ್ ನೆಟ್ವರ್ಕ್ಗಳ ಜತೆಗೆ ಪರೋಕ್ಷವಾಗಿ ನಂಟನ್ನು ಹೊಂದಿದ್ದರೂ ಅದು ಅಮೆರಿಕದ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದೆ. ಹಕ್ಕುಗಳ ಗುಂಪುಗಳು, ಸಂಶೋಧಕರು, ಮಾಜಿ ನಿವಾಸಿಗಳು ಮತ್ತು ಕೆಲವು ಪಾಶ್ಚಾತ್ಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೇಳುವಂತೆ, ಕ್ಸಿನ್ಜಿಯಾಂಗ್ನ ಅಧಿಕಾರಿಗಳು ಹತ್ತಾರು ಲಕ್ಷ ಉಯ್ಘರ್ಸ್ ಮತ್ತು ಇರ ಮುಸ್ಲಿಮ್ ಸಮುದಾಯದವರನ್ನು 2016ರಿಂದ ಬಲವಂತವಾಗಿ ಕಾರ್ಮಿಕರನ್ನಾಗಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್
(America Senate passed legislation to ban import from China Xinjiang region. Here are the reasons behind)