
ನವದೆಹಲಿ, ಮಾರ್ಚ್ 13: ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಇಲಾನ್ ಮಸ್ಕ್ (Elon Musk) ನೇರಾ ನೇರ ಮಾತುಗಳಿಗೆ ಹೆಸರುವಾಸಿಯಾದವರು. ಬಿಸಿನೆಸ್ಮ್ಯಾನ್ಗಳು ಬಹಳಷ್ಟು ಮುಲಾಜಿಗೆ ಒಳಗಾಗುತ್ತಾರೆ. ಇದಕ್ಕೆ ಮಸ್ಕ್ ಅಪವಾದ. ತಮಗೆ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೇ ಹೇಳುತ್ತಾರೆ. ಇದೀಗ ಅಮೆರಿಕ ದಿವಾಳಿ (Bankrupt) ಎದ್ದುಬಿಡಬಹುದು ಎಂಬ ಆತಂಕವನ್ನು ಇವರು ತೋಡಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು ಅಮೆರಿಕ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸುತ್ತಾರೆ. ಅದಕ್ಕೆ ಕಾರಣ, ಅಮೆರಿಕದ ಅತಿಯಾದ ಖರ್ಚು ಎನ್ನುವುದು ಅವರ ಅಭಿಪ್ರಾಯ.
ಅಮೆರಿಕದಲ್ಲಿ ಜನಸಾಮಾನ್ಯರ ಬಹುತೇಕ ಆದಾಯ ತೆರಿಗೆ ಹಣ ಅಮೆರಿಕ ಸರ್ಕಾರಕ್ಕೆ ಸಾಲಕ್ಕೆ ಬಡ್ಡಿ ಕಟ್ಟಲೇ ವೆಚ್ಚವಾಗಿ ಹೋಗುತ್ತದೆ ಎಂದು ಎಕ್ಸ್ ಬಳಕೆದಾರರು ಹಾಕಿದ ಪೋಸ್ಟ್ಗಳಿಗೆ ಇಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
‘ಅತಿಯಾದ ವೆಚ್ಚ ನಿಲ್ಲಬೇಕು. ಇಲ್ಲದಿದ್ದರೆ ಅಮೆರಿಕ ದಿವಾಳಿ ಆಗುತ್ತದೆ,’ ಎಂದು ಎಕ್ಸ್ ಮಾಲೀಕರೂ ಆಗಿರುವ ಮಸ್ಕ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಅಮೆರಿಕದ ರಾಷ್ಟ್ರೀಯ ಸಾಲಗಳಿಗೆ ಬಡ್ಡಿ ಕಟ್ಟಲು ತೆರಿಗೆದಾರರ ನೂರಕ್ಕೆ ನೂರು ಹಣ ಬಳಕೆ ಆಗುವ ಕಾಲಬಂದೀತು ಎಂದು ಒಬ್ಬರು ಎಚ್ಚರಿಸಿದ್ದಾರೆ.
ಇಲಾನ್ ಮಸ್ಕ್ ಹಾಕಿರುವ ಪೋಸ್ಟ್
ಇದನ್ನೂ ಓದಿ: ಎನ್ಎಸ್ಇ ಪ್ಲಾಟ್ಫಾರ್ಮ್ನಲ್ಲಿ ಟ್ರಾನ್ಸಾಕ್ಷನ್ ಶುಲ್ಕ ಶೇ. 1ರಷ್ಟು ಇಳಿಕೆ; ಏಪ್ರಿಲ್ 1ರಿಂದ ಜಾರಿ
2024ರ ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಸರ್ಕಾರದ ಆದಾಯ ಮತ್ತು ವ್ಯಯದ ದತ್ತಾಂಶದ ಪ್ರಕಾರ ಅಲ್ಲಿ ಸಾಲಗಳಿಗೆ ಸರ್ಕಾರ ಕಟ್ಟಬೇಕಾದ ಹಣ 76.162 ಬಿಲಿಯನ್ ಡಾಲರ್. ಇನ್ನು, ಜನಸಾಮಾನ್ಯರಿಂದ ಕಲೆಹಾಕಲಾಗುವ ವೈಯಕ್ತಿ ಆದಾಯ ತೆರಿಗೆಗಳ ಮೊತ್ತ 120.884 ಬಿಲಿಯನ್ ಡಾಲರ್ ಇದೆ. ಅಂದರೆ, ಆದಾಯ ತೆರಿಗೆದಾರರಿಂದ ಸಂಗ್ರಹವಾಗುವ ಹಣದಲ್ಲಿ ಶೇ. 63ರಷ್ಟು ಮೊತ್ತವು ಸರ್ಕಾರದ ಸಾಲಗಳ ಬಡ್ಡಿ ಪಾವತಿಗೇ ವ್ಯಯವಾಗುತ್ತದೆ ಎಂಬ ಅಂಶವನ್ನು ಎಕ್ಸ್ ಬಳಕೆದಾರರೊಬ್ಬರು ಎತ್ತಿ ತೋರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬ ಬಳಕೆದಾರರು, ಮುಂದೊಂದು ದಿನ ಇಡೀ ಆದಾಯ ತೆರಿಗೆ ಹಣವು ಬಡ್ಡಿ ಕಟ್ಟಲು ಬಳಕೆ ಆದರೆ ಅಚ್ಚರಿ ಇಲ್ಲ ಎಂದಿದ್ದಾರೆ. ಕುತೂಹಲದ ಸಂಗತಿ ಎಂದರೆ ಅಮೆರಿಕ ಸರ್ಕಾರಕ್ಕೆ ಒಂದು ಹಣಕಾಸು ವರ್ಷದಲ್ಲಿ ಸುಮಾರು 271.126 ಬಿಲಿಯನ್ ಡಾಲರ್ನಷ್ಟು ಆದಾಯ ಬರುತ್ತದೆ. ಅದರಲ್ಲಿ 120 ಬಿಲಿಯನ್ ಡಾಲರ್ ವೈಯಕ್ತಿಕ ಆದಾಯ ತೆರಿಗೆಗಳಿಂದಲೇ ಬರುತ್ತದೆ.
ಅಮೆರಿಕ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಗಳು ಮತ್ತು ಆರೋಗ್ಯ ಹಾಗೂ ಮಾನವ ಸೇವೆಗಳಿಗೆ ಅತ್ಯಧಿಕ ವ್ಯಯ ಮಾಡುತ್ತದೆ. ಈ ಇಲಾಖೆಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತದೆ. ಸೋಷಿಯಲ್ ಸೆಕ್ಯೂರಿಟಿ ಸ್ಕೀಮ್ಗಳ ಮೂಲಕ ಜನರಿಗೆ ಬಹಳಷ್ಟು ಸಬ್ಸಿಡಿ ಇತ್ಯಾದಿ ನೀಡಲಾಗುತ್ತದೆ.
ಇದನ್ನೂ ಓದಿ: ಜೆಟ್ ಏರ್ವೇಸ್ ಮಾಲಕತ್ವ ವರ್ಗಾವಣೆಗೆ ಒಪ್ಪಿಗೆ; ಎಸ್ಬಿಐ ನೇತೃತ್ವದ ಗುಂಪಿನ ವಿರೋಧ ತಳ್ಳಿಹಾಕಿದ ಮೇಲ್ಮನವಿ ನ್ಯಾಯಮಂಡಳಿ
2025ರ ವರ್ಷಕ್ಕೆ ಅಮೆರಿಕ ಸರ್ಕಾರ 7.3 ಟ್ರಿಲಿಯನ್ ಡಾಲರ್ ಗಾತ್ರದಷ್ಟು ಬೃಹತ್ ಬಜೆಟ್ ಮಂಡಿಸುವ ಗುರಿ ಹೊಂದಿದೆ. ಹಿಂದೆ ಆಗುತ್ತಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚು ಗಾತ್ರ ಬಜೆಟ್ ಇದಾಗಿರುತ್ತದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಇದು 600 ಲಕ್ಷ ಕೋಟಿ ರೂಗೂ ಹೆಚ್ಚು. ಭಾರತದಲ್ಲಿ 2023ರಲ್ಲಿ ಮಂಡನೆಯಾದ ಬಜೆಟ್ನ ಗಾತ್ರ 45 ಲಕ್ಷ ಕೋಟಿ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ