ಆಪಲ್ ಇಂಕ್ನಿಂದ (Apple Inc.) ಸಣ್ಣ ಸಂಖ್ಯೆಯ ಎಂಜಿನಿಯರ್ಗಳಿಗೆ ಮತ್ತೊಂದು ಸುತ್ತಿನ ವಿಶೇಷ ಬೋನಸ್ ನೀಡಲಾಗುತ್ತಿದೆ. ಕಂಪೆನಿಯ ಪ್ರಮುಖ ಪ್ರತಿಭೆಗಳನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಇಂಥ ನಿರ್ಧಾರಕ್ಕೆ ಬರಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಕಂಪೆನಿಯ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವಿಭಾಗದಲ್ಲಿನ ಆಯ್ದ ಗುಂಪಿನ ಉದ್ಯೋಗಿಗಳಿಗೆ ಬೋನಸ್ ನೀಡುವುದಕ್ಕೆ ಮುಂದಾಗಿದೆ. ಬೋನಸ್ ವಿಚಾರವನ್ನು ಅಧಿಕೃತವಾಗಿ ಸಾರ್ವಜನಿಕಗೊಳಿಸದ ಕಾರಣಕ್ಕೆ ತಮ್ಮ ಹೆಸರನ್ನು ಹೇಳಲು ಇಚ್ಛಿಸದ ಜನರ ಪ್ರಕಾರ, ಕಂಪೆನಿಯ ಉದ್ಯೋಗಿಗಳಿಗೆ 1 ಲಕ್ಷ ಯುಎಸ್ಡಿಯಿಂದ (ಭಾರತದ ರೂಪಾಯಿ ಲೆಕ್ಕದಲ್ಲಿ 76 ಲಕ್ಷ) 2 ಲಕ್ಷ ಯುಎಸ್ಡಿ (1.52 ಕೋಟಿ ರೂಪಾಯಿ) ನಿರ್ಬಂಧಿತ ಸ್ಟಾಕ್ ಯೂನಿಟ್ಸ್ನಲ್ಲಿ ನೀಡಲಾಗುತ್ತದೆ.
ಸಿಬ್ಬಂದಿಯನ್ನು ಕಂಪೆನಿಯಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಈ ಸ್ಟಾಕ್ ಬೋನಸ್ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಕಂಪೆನಿಯಲ್ಲಿ ಇರುವಂಥವರು ಕೆಲಸ ಬಿಡಬಾರದು ಎಂಬ ಕಾರಣಕ್ಕೆ ಹೀಗೆ ಬೋನಸ್ ನೀಡಲಾಗುತ್ತಿದ್ದು, ಸ್ಟಾಕ್ ಬೆಲೆ ಏರಿಕೆ ಆದಂತೆಯೂ ಅದರ ಮೌಲ್ಯ ಹೆಚ್ಚಾಗುತ್ತದೆ. ಕಳೆದ ಹನ್ನೆರಡು ತಿಂಗಳಲ್ಲಿ ಆಪಲ್ ಷೇರಿನ ಬೆಲೆ ಶೇ 40ಕ್ಕೂ ಹೆಚ್ಚಾಗಿದೆ. 2022ರಲ್ಲಿ ಆಪಲ್ ಕಂಪೆನಿ ಷೇರಿನ ಬೆಲೆಯಲ್ಲಿ ಇಳಿಕೆ ಆದ ನಂತರವೂ ಇಷ್ಟು ಬೆಲೆಯಿದೆ. ಈ ವರ್ಷ ಟೆಕ್ ಸ್ಟಾಕ್ ಬೆಲೆಗಳು ಕಡಿಮೆ ಆಗಿವೆ.
ಕಳೆದ ಬಾರಿ 2021ರ ಡಿಸೆಂಬರ್ನಲ್ಲಿ ಆಪಲ್ ಕಂಪೆನಿಯಿಂದ ಸ್ಟಾಕ್ ಆಧಾರಿತ ಬೋನಸ್ ನೀಡಲಾಗಿತ್ತು. ಆಗಿನ ಗರಿಷ್ಠ ಮಟ್ಟ ಅಂದರೆ 1,80,000 ಯುಎಸ್ಡಿ ಆಗಿತ್ತು. ಆ ಪ್ರಕರಣದಲ್ಲಿ ಕಂಪೆನಿಯ ಹಾರ್ಡ್ವೇರ್ ಟೆಕ್ನಾಲಜೀಸ್ ಗುಂಪಿಗೆ ನೀಡಲಾಗಿತ್ತು. ಅದು ಕಸ್ಟಮ್ ಚಿಪ್ಸ್ ರೂಪಿಸುತ್ತದೆ, ಮತ್ತು ಇದೇ ಗುಂಪು ಭವಿಷ್ಯದ ವರ್ಚುವಲ್ ಮತ್ತು ಆಗುಮೆಂಟೆಡ್ ರಿಯಾಲಿಟಿ ಹೆಡ್ಸೆಟ್ಗಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಈ ಹಿಂದೆ ಇಂಥ ಬಗೆಯಲ್ಲಿ ಉದ್ಯೋಗಿಗಳಿಗೆ ರಿವಾರ್ಡ್ಸ್ ನೀಡಿರುವುದು ತುಂಬ ವಿರಳ. ಅಂದ ಹಾಗೆ ಚಿಪ್ ಡಿಸೈನ್ ಗುಂಪಿನಲ್ಲಿ ಕೆಲವು ಪ್ರಮಾಣದಲ್ಲಿ ಕೆಲಸದಿಂದ ಬಿಟ್ಟರು. ಫೇಸ್ಬುಕ್ ಮಾತೃ ಸಂಸ್ಥೆ ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್ ಎಂಜಿನಿಯರ್ಗಳ ನೇಮಕಾತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಆ ಎಂಜಿನಿಯರ್ಗಳನ್ನು ಮೆಟಾ ವರ್ಸ್ನಲ್ಲಿ ಕೆಲಸಕ್ಕೆ ಇರಿಸುವ ಉದ್ದೇಶವನ್ನು ಇಟ್ಟುಕೊಂಡಿದೆ.
ಕಳೆದ ಡಿಸೆಂಬರ್ನಲ್ಲಿ ಎಷ್ಟು ಉದ್ಯೋಗಿಗಳಿಗೆ ವಿಶೇಷ ಮೊತ್ತ ಸಿಕ್ಕಿತೋ ಅದಕ್ಕಿಂತ ಕಡಿಮೆ ಸಂಖ್ಯೆಯವರಿಗೆ ಈ ಬಾರಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. ಆಯಾ ವಿಭಾಗದ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಈ ಬೋನಸ್ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಕಳೆದ ಕೆಲವು ವಾರದಿಂದ ವಾಋ್ಷಿಕ ಬೋನಸ್ಗಳನ್ನು ನೀಡಲಾಗುತ್ತಿದೆ. ಅದಕ್ಕೆ ಏಪ್ರಿಲ್ 15 ದಿನಾಂಕ ಆಗಿದೆ. ಉದ್ಯೋಗಿಗಳಿಗೆ ವರ್ಷಕ್ಕೆ ಎರಡು ಸಲ, ಅಂದರೆ ಏಪ್ರಿಲ್ ಮತ್ತು ಅಕ್ಟೋಬರ್ನಲ್ಲಿ ನೀಡಲಾಗುತ್ತದೆ. ಇನ್ನು ಹಣದುಬ್ಬರದ ಕಾರಣಕ್ಕಾಗಿ ಈಗ ವೇತನ ಹೆಚ್ಚಿಸಬೇಕಾದ ಒತ್ತಡದಲ್ಲಿ ಉದ್ಯೋಗದಾತರಿದ್ದಾರೆ. ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳುವ ಸಿದ್ಧತೆ ನಡೆಸಿದ್ದು, ಕೆಲ ಉದ್ಯೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕನಿಷ್ಠ ಮೂರು ದಿನ ಕಚೇರಿ ನಡೆಸುವುದಕ್ಕಾಗಿ ಆಪಲ್ ಕಂಪೆನಿಗೆ ಎಂಜಿನಿಯರ್ಗಳು ಮತ್ತು ಇತರ ಕಾರ್ಪೊರೇಟ್ ಸಿಬ್ಬಂದಿ ಅಗತ್ಯ ಇದೆ.
ಇದನ್ನೂ ಓದಿ: ಆಪಲ್ ಐಫೋನ್ ಎಸ್ಇ3 ಬಿಡುಗಡೆ; ಫೋನ್ನ ಫೀಚರ್ಸ್, ದರ ಮತ್ತಿತರ ವಿವರ ಇಲ್ಲಿದೆ