ಆನ್ಲೈನ್ನಲ್ಲಿ ಬ್ಯಾಂಕಿಂಗ್ (Online Banking) ಮಾಡಲು ಈ ಹಿಂದೆ ಬಹಳ ಮಂದಿ ಹೆದರುತ್ತಿದ್ದರು. ಈಗ ಹೆಚ್ಚು ಭಯ ಇಲ್ಲದೇ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸುತ್ತಾರೆ. ಇದಕ್ಕೆ ಕಾರಣ, ಬ್ಯಾಂಕುಗಳು ತೆಗೆದುಕೊಂಡಿರುವ ಹಲವು ಸುರಕ್ಷಾ ಕ್ರಮಗಳು. ಅದರ ನಡುವೆಯೂ ವಂಚಕರು ವಿನೂತನ ಮಾರ್ಗಗಳ ಮೂಲಕ ಅಮಾಯಕ ಜನರನ್ನು ವಂಚಿಸುವುದು ಪೂರ್ತಿ ನಿಂತಿಲ್ಲ. ಮಾರುವೇಷದ ಮೆಸೇಜ್ಗಳನ್ನು (Phishing Message) ಕಳುಹಿಸುವುದು ಇತ್ಯಾದಿ ಕುತಂತ್ರಗಳ ಮೂಲಕ ಜನರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಜಾಲಗಳು ಹೇರಳ ಇವೆ. ಈ ನಿಟ್ಟಿನಲ್ಲಿ ಬ್ಯಾಂಕುಗಳು, ಆರ್ಬಿಐ ಮೊದಲಾದ ಸಂಸ್ಥೆಗಳು ಗ್ರಾಹಕರಿಗೆ ಅರಿವು (Awareness) ಮೂಡಿಸುವ ಕೆಲಸ ಮಾಡುತ್ತಿರುತ್ತವೆ. ಎಸ್ಬಿಐ ಕೂಡ ಆಗಾಗ್ಗೆ ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಒಂದಷ್ಟು ಸಲಹೆಗಳನ್ನು ನೀಡುತ್ತಿರುತ್ತದೆ. ಇಂದು ಜುಲೈ 27ರಂದು ಎಸ್ಬಿಐ ಇಂಥದ್ದೊಂದು ಇಮೇಲ್ ಕಳುಹಿಸಿ, ಆನ್ಲೈನ್ ಬ್ಯಾಂಕಿಂಗ್ ವಹಿವಾಟಿಗೆ ಸುರಕ್ಷಿತ ಕ್ರಮಗಳನ್ನು ಹೇಗೆ ಅನುಸರಿಸಬಹುದು ಎಂದು ಒಂದಷ್ಟು ಟಿಪ್ಸ್ ನೀಡಿದೆ. ಹಾಗೆಯೇ, ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೊಟ್ಟಿದೆ.
ಪ್ಯಾನ್ ಅಥವಾ ಕೆವೈಸಿ ಅಪ್ಡೇಟ್ ಮಾಡಲು ಎಸ್ಬಿಐ ಕಳುಹಿಸುವ ಮೆಸೇಜ್ ಮತ್ತು ಇಮೇಲ್ಗಳಲ್ಲಿ ಲಿಂಕ್ಗಳು ಒಳಗೊಂಡಿರುವುದಿಲ್ಲ. ಹಾಗೆಯೇ, ವೈಯಕ್ತಿಕ ಮಾಹಿತಿ, ಪಾಸ್ವರ್ಡ್ ಅಥವಾ ಬಹಳ ಸೂಕ್ಷವಾದ ಒನ್ ಟೈಮ್ ಎಸ್ಸೆಮ್ಮೆಸ್ ಪಾಸ್ವರ್ಡ್ ಅನ್ನು ಕೇಳಿ ಯಾವ ಎಸ್ಬಿಐ ಪ್ರತಿನಿಧಿಯೂ ಕರೆ ಮಾಡುವುದಿಲ್ಲ, ಅಥವಾ ಇಮೇಲ್, ಎಸ್ಸೆಮ್ಮೆಸ್ ಕಳುಹಿಸುವುದಿಲ್ಲ ಎಂದು ಎಸ್ಬಿಐ ತನ್ನ ಗ್ರಾಹಕರಿಗೆ ಕಳುಹಿಸಿದ ಇಮೇಲ್ನಲ್ಲಿ ಎಚ್ಚರಿಸಿದೆ.
ಇಮೇಲ್ ಅಥವಾ ಎಸ್ಸೆಮ್ಮೆಸ್ ಅಥವಾ ಫೋನ್ ಕರೆ ಬಗ್ಗೆ ಅನುಮಾನ ಬಂದರೆ ಕೂಡಲೇ ಈ ಮುಂದಿನ ಇಮೇಲ್ ವಿಳಾಸಕ್ಕೆ ಅಲರ್ಟ್ ಕಳುಹಿಸಿ: phishing@sbi.co.in
ಅನಧಿಕೃತ ವಹಿವಾಟು ನಡೆದುಹೋದಲ್ಲಿ, 1930 ನಂಬರ್ ಕರೆ ಮಾಡಿ ಮಾಹಿತಿ ನೀಡಿ, ಅಥವಾ ಟ್ರಾನ್ಸಾಕ್ಷನ್ ಡೀಟೇಲ್ಸ್ ಅನ್ನು cybercrime.gov.in ವೆಬ್ಸೈಟ್ನಲ್ಲಿ ಸೈಬರ್ಕ್ರೈಮ್ ಸೆಲ್ಗೆ ಕಳುಹಿಸಿ.
ಎಸ್ಬಿಐ ಬ್ಯಾಂಕ್ನ 1800111109 ನಂಬರ್ಗೆ ಕರೆ ಅನಧಿಕೃತ ವಹಿವಾಟು ಬಗ್ಗೆ ತಿಳಿಸಿ. ಅಥವಾ crcf.sbi.co.in/ccf/ ಇಲ್ಲಿ ದೂರು ದಾಖಲಿಸಿ
ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ನಿಂದ YONO SBI/ YONO Lite ಮೊಬೈಲ್ ಆ್ಯಪ್ ಹಾಕಿಕೊಳ್ಳಿ.
ಆನ್ಲೈನ್ ಬ್ಯಾಂಕಿಂಗ್ನಲ್ಲಿ ನಿಮ್ಮ ಪಾಸ್ವರ್ಡ್ ಮತ್ತು ಎಂಪಿನ್ಗಳನ್ನು ಆಗಾಗ್ಗೆ ಬದಲಿಸುತ್ತಿರಿ.
ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ಮೊಬೈಲ್ನಲ್ಲಿ ಯಾವುದೇ ಮಾಲ್ವೇರ್, ಆ್ಯಡ್ವೇರ್ ಇತ್ಯಾದಿ ವಂಚಕ ತಂತ್ರಾಂಶಗಳು ಸೇರದಂತೆ ನೋಡಿಕೊಳ್ಳಿ.
ನೀವು ಬ್ರೌಸರ್ ಅಡ್ರೆಸ್ ಬಾರ್ನಲ್ಲಿ ನೇರವಾಗಿ ಆನ್ಲೈನ್ ಎಸ್ಬಿಐ ವೆಬ್ಸೈಟ್ನ ಯುಆರ್ಎಲ್ ಟೈಪ್ ಮಾಡುವಾಗ ಮೊದಲಿಗೆ https ಇರಲಿ.
ನಿಮಗೆ ಎಸ್ಬಿಐನ ವಾಟ್ಸಾಪ್ ಅಥವಾ ಕಾಲ್ ಸೆಂಟರ್ ನಂಬರ್ ಬಗ್ಗೆ ಮಾಹಿತಿ ಬೇಕೆಂದರೆ ಬ್ಯಾಂಕ್ನ ಅಧಿಕೃತ ವೆಬ್ಸೈಟ್ bank.sbi ಅಲ್ಲಿ ಗಮನಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ