PM Kisan: ಪಿಎಂ ಕಿಸಾನ್ ಯೋಜನೆ: ಫಲಾನುಭವಿಗಳಿಗೆ ಹಣ ಬಿಡುಗಡೆಯಾಗುವ ವ್ಯವಸ್ಥೆ ಹೇಗೆ? ಇಲ್ಲಿದೆ ಡೀಟೇಲ್ಸ್

Procedure Of Release of Installments: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗಿದೆ. ಇದರ ಹಿಂದೆ ಒಂದಷ್ಟು ಕುತೂಹಲಕಾರಿ ಕ್ರಮಗಳು ಮತ್ತು ವಿಧಾನಗಳನ್ನು ಅನುಸರಿಸಲಾಗುತ್ತದೆ. ಹಂತ ಹಂತದ ಪ್ರಕ್ರಿಯೆಯ ವಿವರ ಇಲ್ಲಿದೆ...

PM Kisan: ಪಿಎಂ ಕಿಸಾನ್ ಯೋಜನೆ: ಫಲಾನುಭವಿಗಳಿಗೆ ಹಣ ಬಿಡುಗಡೆಯಾಗುವ ವ್ಯವಸ್ಥೆ ಹೇಗೆ? ಇಲ್ಲಿದೆ ಡೀಟೇಲ್ಸ್
ಪಿಎಂ ಕಿಸಾನ್ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2023 | 3:29 PM

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ (PM Kisan Scheme 14th Installment) ಹಣ ಬಿಡುಗಡೆ ಆಗಿದೆ. ಸರ್ಕಾರ 8.5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಲಾ 2,000 ರೂನಂತೆ ಒಟ್ಟು 17,000 ಕೋಟಿ ರೂಗೂ ಹೆಚ್ಚು ಹಣವನ್ನು ನೇರವಾಗಿ ಖಾತೆಗೆ ಕಳುಹಿಸಿದೆ. ಪಿಎಂ ಕಿಸಾನ್ ಯೋಜನೆ ನಿರ್ವಹಿಸಲು ಸರ್ಕಾರ ಸಮರ್ಪಕ ವ್ಯವಸ್ಥೆ ರಚಿಸಿದೆ. ಅರ್ಹ ರೈತರು ನೊಂದಾಯಿಸಿಕೊಳ್ಳುವುದರಿಂದ ಹಿಡಿದು ವಿವಿಧ ಹಂತಗಳಲ್ಲಿ ಅದರ ಪರಿಶೀಲನೆಯಾಗಿ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗುವವರೆಗೂ ವಿವಿಧ ಕ್ರಮಗಳ ವಿವರ ಇಲ್ಲಿದೆ.

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಹಣ ಸಿಗುವ ಕ್ರಮ

ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಲು ಒಂದಷ್ಟು ಮಾನದಂಡಗಳಿವೆ. ಅವುಗಳ ಪ್ರಕಾರ ರೈತರನ್ನು ಗುರುತಿಸಲು ಕೇಂದ್ರ ಸರ್ಕಾರವೊಂದಕ್ಕೇ ಸಾಧ್ಯವಾಗುವುದಿಲ್ಲ. ವಿವಿಧ ರಾಜ್ಯ ಸರ್ಕಾರಗಳ ಸಹಕಾರ ಅತ್ಯಗತ್ಯ. ಹೀಗಾಗಿ, ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಗಳೇ ತಯಾರಿಸಿ ಕೇಂದ್ರಕ್ಕೆ ಕೊಡುತ್ತವೆ. ಅದಕ್ಕಾಗಿ ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ ರೂಪಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಕಳುಹಿಸುವ ಡೇಟಾವನ್ನು ಅಪ್​ಲೋಡ್ ಮಾಡಲಾಗುತ್ತದೆ. ಅದಕ್ಕೂ ಮೊದಲು ರೈತರು ನೊಂದಣಿ ಮಾಡಿಕೊಳ್ಳುವುದರಿಂದ ಶುರುವಾಗಿ ವಿವಿಧ ಕ್ರಮಗಳು ಹೀಗಿರುತ್ತವೆ:

ಇದನ್ನೂ ಓದಿ: PM Kisan 14th Instalment Release: ಪಿಎಂ ಕಿಸಾನ್: 14ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಮೊದಲಿಗೆ ಯೋಜನೆಗೆ ಅರ್ಹರಾಗಿರುವ ರೈತರು ಸೂಕ್ತ ದಾಖಲೆಗಳೊಂದಿಗೆ ಸಮೀಪದ ಕಂದಾಯ ಕೇಂದ್ರ ಮತ್ತಿತರ ನಿಗದಿತ ಸ್ಥಳಗಳಿಗೆ ಹೋಗಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುತ್ತಾರೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿ ನೇಮಿಸಿರುವ ನೋಡಲ್ ಅಧಿಕಾರಿಗಳು ಈ ವಿವರವನ್ನು ರಾಜ್ಯ ನೋಡಲ್ ಅಧಿಕಾರಿಗಳಿಗೆ (ಎಸ್​ಎನ್​ಒ) ರವಾನಿಸುತ್ತಾರೆ.

ರಾಜ್ಯ ನೋಡಲ್ ಅಧಿಕಾರಿಗಳು ಈ ಡಾಟಾವನ್ನು ದೃಢೀಕರಿಸಿ, ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಬ್ಯಾಚ್ ಪ್ರಕಾರ ಆಗಾಗ್ಗೆ ಅಪ್​ಲೋಡ್ ಮಾಡುತ್ತಾ ಹೋಗುತ್ತಾರೆ.

ಎಸ್​ಎನ್​ಒಗಳು ಅಪ್​ಲೋಡ್ ಮಾಡಿರುವ ಫಲಾನುಭವಿಗಳ ಡಾಟಾವನ್ನು ಎನ್​​ಐಸಿ (ನ್ಯಾಷನಲ್ ಇನ್ಫಾರ್ಮಾಟಿಕ್ಸ್ ಸೆಂಟರ್) ಬಹು ಹಂತಗಳಲ್ಲಿ ಪರಿಶೀಲನೆ ನಡೆಸುತ್ತದೆ. ಹಾಗೆಯೇ, ಪಬ್ಲಿಕ್ ಫೈನಾನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ (ಪಿಎಫ್​ಎಂಎಸ್) ಹಾಗೂ ಬ್ಯಾಂಕುಗಳಿಂದಲೂ ವೆರಿಫಿಕೇಶನ್ ನಡೆಯುತ್ತದೆ.

ಈ ರೀತಿ ಪರಿಶೀಲಿಸಲಾದ ಡಾಟಾದ ಆಧಾರದವಾಗಿ ಸ್ಟೇಟ್ ನೋಡಲ್ ಆಫೀಸರುಗಳು ಆರ್​ಎಫ್​ಟಿಗೆ (ರಿಕ್ವೆಸ್ಟ್ ಫಾರ್ ಟ್ರಾನ್ಸ್​ಫರ್) ಸಹಿ ಹಾಕುತ್ತಾರೆ. ಆರ್​ಎಫ್​ಟಿಯಲ್ಲಿ ಒಂದು ನಿರ್ದಿಷ್ಟ ಬ್ಯಾಚ್​ನಲ್ಲಿ ಫಲಾನುಭವಿಗಳ ಒಟ್ಟು ಸಂಖ್ಯೆ ಹಾಗೂ ಆ ಬ್ಯಾಚ್​ಗೆ ರವಾನೆಯಾಗಬೇಕಾದ ಒಟ್ಟು ಹಣ ಈ ವಿವರ ಇರುತ್ತದೆ. ಇದನ್ನು ಪೋರ್ಟಲ್​ಗೆ ಅಪ್​ಲೋಡ್ ಮಾಡಲಾಗುತ್ತದೆ.

ಇದನ್ನೂ ಓದಿ: PM Kisan Status: ಪಿಎಂ ಕಿಸಾನ್: ಹಣ ಬಂದಿಲ್ಲವಾ? ಫಲಾನುಭವಿ ಸ್ಟೇಟಸ್ ಏನಿದೆ ತಿಳಿಯಿರಿ

ಈ ಆರ್​ಎಫ್​ಟಿ ಆಧಾರದ ಮೇಲೆ ಪಬ್ಲಿಕ್ ಫೈನಾನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ (ಪಿಎಫ್​ಎಂಎಸ್) ಫಂಡ್ ಟ್ರಾನ್ಸ್​ಫರ್ ಆರ್ಡರ್ ಹೊರಡಿಸುತ್ತದೆ.

ಎಫ್​ಟಿಒದಲ್ಲಿ (ಫಂಡ್ ಟ್ರಾನ್ಸ್​ಫರ್ ಆರ್ಡರ್) ನಮೂದಿಸಲಾಗಿರುವ ಹಣ ಬಿಡುಗಡೆಗೆ ಕೃಷಿ, ಸಹಕಾರ, ರೈತರ ಕಲ್ಯಾಣ ಇಲಾಖೆ ಆದೇಶ ಹೊರಡಿಸುತ್ತದೆ.

ಇಲಾಖೆಯಿಂದ ಅಕ್ರೆಡಿಟ್ ಆದ ಬ್ಯಾಂಕು ಮತ್ತು ರಾಜ್ಯ ಸರ್ಕಾರದ ಪ್ರಾಯೋಜಿತ ಬ್ಯಾಂಕುಗಳ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತದೆ. ಅದಕ್ಕಾಗಿ ಪಿಎಫ್​ಎಂಎಸ್ ಪೋರ್ಟಲ್ ಅನ್ನು ಬಳಸಲಾಗುತ್ತದೆ. ಇಡೀ ಬ್ಯಾಂಕಿಂಗ್ ವಹಿವಾಟನ್ನು ಎನ್​ಪಿಸಿಐನಿಂದ ನಿರ್ವಹಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ