ಗಾರ್ಮೆಂಟ್ಸ್ ರಫ್ತು: ಭಾರತ ಬಿಟ್ಟು ಮಾಲ್ಡೀವ್ಸ್ ಮಾರ್ಗ ಹಿಡಿದ ಬಾಂಗ್ಲಾದೇಶ; ಭಾರತಕ್ಕೇನು ಹಾನಿ?

|

Updated on: Nov 05, 2024 | 11:03 AM

Bangladesh bypasses India for Maldives: ಬಾಂಗ್ಲಾದೇಶ ತನ್ನ ಗಾರ್ಮೆಂಟ್ಸ್ ರಫ್ತಿಗೆ ಭಾರತದ ಬಂದರು ಬದಲು ಮಾಲ್ಡೀವ್ಸ್ ಮೂಲಕ ಸಾಗಿಸುತ್ತಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ. ಸಾಂಪ್ರದಾಯಿಕವಾಗಿ ಬಾಂಗ್ಲಾ ರಫ್ತು ಸರಕುಗಳು ಭಾರತದ ಪೋರ್ಟ್​ಗಳಿಗೆ ಬಂದು ಆ ಮೂಲಕ ಬೇರೆ ದೇಶಗಳಿಗೆ ಸಾಗಣೆ ಆಗುತ್ತಿದ್ದವು. ಈಗ ಮಾಲ್ಡೀವ್ಸ್​ಗೆ ಅವನ್ನು ಸಾಗಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಗಾರ್ಮೆಂಟ್ಸ್ ರಫ್ತು: ಭಾರತ ಬಿಟ್ಟು ಮಾಲ್ಡೀವ್ಸ್ ಮಾರ್ಗ ಹಿಡಿದ ಬಾಂಗ್ಲಾದೇಶ; ಭಾರತಕ್ಕೇನು ಹಾನಿ?
ರಫ್ತು
Follow us on

ನವದೆಹಲಿ, ನವೆಂಬರ್ 5: ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದೇಶದ ರಾಜಕೀಯ ಚರ್ಯೆ ಬದಲಾಗುತ್ತಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಭಾರತಕ್ಕಿಂತಲೂ ಮುಂಚೂಣಿಯಲ್ಲಿರುವ ಬಾಂಗ್ಲಾದೇಶ ಈಗ ಭಾರತಕ್ಕೆ ಮತ್ತೊಂದು ಆಘಾತ ಕೊಟ್ಟಿದೆ. ಬಾಂಗ್ಲಾದೇಶ ತನ್ನ ಗಾರ್ಮೆಂಟ್ಸ್ ರಫ್ತನ್ನು ಸಾಗಿಸುವ ಮಾರ್ಗ ಬದಲಿಸಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ. ವರದಿ ಪ್ರಕಾರ ಬಾಂಗ್ಲಾದೇಶ ಭಾರತದ ಪೋರ್ಟ್​ಗಳಿಗೆ ತಮ್ಮ ಉತ್ಪನ್ನಗಳನ್ನು ಸಾಗಿಸಿ ಅಲ್ಲಿಂದ ಬೇರೆಡೆಗೆ ರಫ್ತು ಮಾಡುತ್ತಿತ್ತು. ಈಗ ಭಾರತವನ್ನು ಬೈಪಾಸ್ ಮಾಡಿ ಮಾಲ್ಡೀವ್ಸ್​ನ ಪೋರ್ಟ್​ಗೆ ನೇರವಾಗಿ ಸಾಗಿಸುತ್ತಿದೆಯಂತೆ.

ದಿ ಮಿಂಟ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಬಾಂಗ್ಲಾದೇಶವು ತಮ್ಮ ಗಾರ್ಮೆಂಟ್ಸ್ ಸರಕುಗಳನ್ನು ಹಡಗುಗಳ ಮೂಲಕ ಮಾಲ್ಡೀವ್ಸ್​ಗೆ ಸಾಗಿಸುತ್ತಿದೆ. ಅಲ್ಲಿಂದ ಬೇರೆ ಹಡಗುಗಳಲ್ಲಿ ಯೂರೋಪ್​ಗೆ ಸಾಗಣೆ ಆಗುತ್ತಿದೆ. ಎಚ್ ಅಂಡ್ ಎಂ, ಝಾರಾ ಮೊದಲಾದ ಪ್ರಮುಖ ಗ್ಲೋಬಲ್ ಬ್ರ್ಯಾಂಡ್​ಗಳಿಗೆ ಬಾಂಗ್ಲಾದೇಶವು ಗಾರ್ಮೆಂಟ್ಸ್ ರಫ್ತು ಮಾಡುತ್ತದೆ.

ಇದನ್ನೂ ಓದಿ: ರತನ್ ಟಾಟಾ ಹಳೆಯ ಲವ್ ಸ್ಟೋರಿ; ಅಡ್ಡಿಯಾಗಿತ್ತು ಚೀನಾ ಗೋಡೆ; ಟಾಟಾ ಕೈತಪ್ಪಿದ್ದಕ್ಕೆ ಪರಿತಪಿಸಿದ್ದ ಅಮೆರಿಕನ್ ಚೆಲುವೆ

ಬಾಂಗ್ಲಾದೇಶಕ್ಕೆ ಏನು ಅನುಕೂಲ?

ಈ ಮಾರ್ಗ ಬದಲಾವಣೆಯಿಂದ ಬಾಂಗ್ಲಾದೇಶಕ್ಕೆ ಅನುಕೂಲ ಇದೆ. ಅದರ ಗಾರ್ಮೆಂಟ್ಸ್ ಸಪ್ಲೈ ಚೈನ್ ಹೆಚ್ಚು ಸಮರ್ಪಕವಾಗುತ್ತದೆ. ಬೇಗನೇ ತನ್ನ ಉತ್ಪನ್ನಗಳನ್ನು ನಿಗದಿತ ದೇಶಗಳಿಗೆ ತಲುಪಿಸಬಹುದು. ಪ್ರಖ್ಯಾತ ಬ್ರ್ಯಾಂಡ್​ಗಳು ಕಡಿಮೆ ಸಮಯಾವಕಾಶ ಕೊಡುವುದರಿಂದ ರಫ್ತು ವಿಲೇವಾರಿ ಬೇಗನೇ ಮಾಡಲು ಬಾಂಗ್ಲಾಗೆ ಸಾಧ್ಯವಾಗುತ್ತದೆ.

ಭಾರತಕ್ಕೆ ಏನು ನಷ್ಟ?

ಬಾಂಗ್ಲಾದೇಶದ ಬಹುಭಾಗದ ರಫ್ತು ಸರಕುಗಳು ಭಾರತದ ಬಂದರುಗಳು ಮತ್ತು ಏರ್​ಪೋರ್ಟ್​ಗಳ ಮೂಲಕ ಬೇರೆ ದೇಶಗಳಿಗೆ ಹೋಗುತ್ತಿತ್ತು. ಇದರಿಂದ ಭಾರತಕ್ಕೆ ಬಹಳಷ್ಟು ಆದಾಯ ಸಿಗುತ್ತದೆ. ಈಗ ಬಾಂಗ್ಲಾದೇಶದ ಗಾರ್ಮೆಂಟ್ಸ್ ರಫ್ತು ಮಾರ್ಗ ಬದಲಾವಣೆ ಆಗಿರುವುದರಿಂದ ಭಾರತಕ್ಕೆ ಸಿಗುತ್ತಿದ್ದ ಆದಾಯ ಸಹಜವಾಗಿ ಕಡಿಮೆ ಆಗಬಹುದು.

ಇದನ್ನೂ ಓದಿ: ಪಿಎಂ ವಿಶ್ವಕರ್ಮ ಯೋಜನೆ; ಒಂದು ವರ್ಷದಲ್ಲಿ ಎರಡೂವರೆ ಕೋಟಿ ಅರ್ಜಿ; ನೊಂದಾಯಿತರಲ್ಲಿ ಕರ್ನಾಟಕದವರೇ ಹೆಚ್ಚು

ಬಾಂಗ್ಲಾದೇಶ ಸ್ವತಂತ್ರಗೊಂಡಾಗಿನಿಂದ ಭಾರತ ಮತ್ತು ಆ ದೇಶದ ನಡುವಿನ ಸಂಬಂಧ ಬಹುತೇಕ ಸ್ನೇಹಮಯವಾಗಿದೆ. ಭಾರತದ ಜೊತೆ ಬಾಂಗ್ಲಾದೇಶ ಬಹುತೇಕ ಅವಧಿ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಬಾಂಗ್ಲಾಗೆ ಕಷ್ಟ ಬಂದಾಗೆಲ್ಲಾ ಭಾರತ ನೆರವು ನೀಡಲು ಹಿಂದೆ ಮುಂದೆ ನೋಡಿಲ್ಲ. ಈಗ ಒಂದು ವೇಳೆ ಬಾಂಗ್ಲಾದೇಶವು ಭಾರತವನ್ನು ಬಿಟ್ಟು ಮಾಲ್ಡೀವ್ಸ್ ಮೂಲಕ ರಫ್ತು ಮಾಡುತ್ತಿರುವುದು ನಿಜವೇ ಆದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಖಾರಗೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಬಾಂಗ್ಲಾ ಕ್ರಮೇಣವಾಗಿ ಚೀನಾ ತೆಕ್ಕೆಗೆ ಬಿದ್ದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು.

ಇದೇ ವೇಳೆ, ಭಾರತದ ಬಂದರು ಬದಲು ಮಾಲ್ಡೀವ್ಸ್ ಪೋರ್ಟ್​ಗಳಿಗೆ ಗಾರ್ಮೆಂಟ್ಸ್ ಸರಕುಗಳನ್ನು ಸಾಗಿಸಲಾಗುತ್ತಿದೆ ಎನ್ನುವಂತಹ ಸುದ್ದಿಯನ್ನು ಬಾಂಗ್ಲಾದೇಶ ತಳ್ಳಿಹಾಕಿದೆ. ಇಂಥ ಯಾವುದೆ ಬೆಳವಣಿಗೆ ಆಗಿಲ್ಲ ಎಂದು ಬಾಂಗ್ಲಾದೇಶದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ