ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ?
Reasons for stock market crash today: ಇಂದು ಮಂಗಳವಾರ (ಫೆ. 24) ಭಾರತದ ಷೇರು ಮಾರುಕಟ್ಟೆ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶೇ. 1ರಷ್ಟು ಕುಸಿತ ಕಂಡಿವೆ. ಬೆಳಗಿನ ವಹಿವಾಟಿನ ಅರ್ಧಗಂಟೆಯಲ್ಲಿ ಹೂಡಿಕೆದಾರರಿಗೆ 4 ಟ್ರಿಲಿಯನ್ ರೂಗಳಷ್ಟು ನಷ್ಟವಾಗಿದೆ. ಷೇರು ಮಾರುಕಟ್ಟೆ ಇವತ್ತು ಕುಸಿಯಲು ಕೆಲ ಸಂಭಾವ್ಯ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ನವದೆಹಲಿ, ಫೆಬ್ರುವರಿ 24: ಕಳೆದ ಕೆಲ ಟ್ರೇಡಿಂಗ್ ದಿನಗಳು ಪಾಸಿಟಿವ್ ಆಗಿದ್ದ ಷೇರುಪೇಟೆಯ (stock market) ಪ್ರಮುಖ ಸೂಚ್ಯಂಕಗಳು ಇವತ್ತು ಮಂಗಳವಾರ ಕೆಂಪು ಬಣ್ಣಕ್ಕೆ ತಿರುಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಬೆಳಗಿನ ವಹಿವಾಟಿನಲ್ಲಿ ಶೇ. 1ರಷ್ಟು ಕುಸಿತ ಕಂಡಿದ್ದವು. ಈ ವರದಿ ಬರೆಯುವಾಗ ಸೆನ್ಸೆಕ್ಸ್ 746 ಅಂಕಗಳನ್ನು ಕಳೆದುಕೊಂಡು 82,544 ಮಟ್ಟದಲ್ಲಿತ್ತು. ನಿಫ್ಟಿ ಸೂಚ್ಯಂಕ 208 ಅಂಕ ಕಳೆದುಕೊಂಡು 25,506ರ ಮಟ್ಟದಲ್ಲಿತ್ತು.
ಇವತ್ತಿನ ಟ್ರೇಡಿಂಗ್ನ ಒಂದು ಹಂತದಲ್ಲಿ ನಿಫ್ಟಿ 25,464 ಮಟ್ಟಕ್ಕೆ ಕುಸಿದಿತ್ತು. ಸೆನ್ಸೆಕ್ಸ್ 82,422 ಅಂಕಗಳ ಮಟ್ಟಕ್ಕೆ ಇಳಿದಿತ್ತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳಂತೂ ಹೆಚ್ಚಿನ ಹೊಡೆತ ಪಡೆದಿವೆ. ಒಂದು ಅಂದಾಜು ಪ್ರಕಾರ ಮಂಗಳವಾರ ಬೆಳಗ್ಗೆ ಟ್ರೇಡಿಂಗ್ ಆರಂಭವಾದ 30 ನಿಮಿಷದಲ್ಲಿ ಒಟ್ಟೂ ಮಾರುಕಟ್ಟೆ ಬಂಡವಾಳ 4 ಲಕ್ಷ ಕೋಟಿ ರೂನಷ್ಟು ಕಡಿಮೆ ಆಗಿ ಹೋಗಿತ್ತು. ಷೇರು ಮಾರುಕಟ್ಟೆ ಇವತ್ತು ಇಷ್ಟು ಕುಸಿಯಲು ಪ್ರಮುಖ ಕಾರಣಗಳೇನು?
ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್ಮ್ಯಾನ್ ಸಲಹೆ ಕೇಳಿ
ಇನ್ನೂ ನಿಂತಿಲ್ಲ ಅಮೆರಿಕದ ಟ್ಯಾರಿಫ್ ರಗಳೆ
ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ತೀರ್ಪು ನೀಡಿದರೂ ಟ್ರಂಪ್ ಅವರ ಟ್ಯಾರಿಫ್ ಕಿರಿಕ್ ಕಡಿಮೆ ಆಗಿಲ್ಲ. ಟ್ರಂಪ್ ಅವರ ಟ್ಯಾರಿಫ್ ಕ್ರಮವನ್ನು ಕೋರ್ಟ್ ಅಮಾನ್ಯಗೊಳಿಸಿ, ಎಲ್ಲಾ ದೇಶಗಳಿಗೂ ಟ್ಯಾರಿಫ್ ಅನ್ನು ಸಮಾನವಾಗಿ ಶೇ. 10ಕ್ಕೆ ಇಳಿಸಿತ್ತು. ಆದರೆ, ಟ್ರಂಪ್ ಅವರು ಟ್ರೇಡ್ ಎಕ್ಸ್ಪ್ಯಾನ್ಷನ್ ಆ್ಯಕ್ಟ್ನ 232 ಸೆಕ್ಷನ್ ಬಳಸಿ ಟ್ಯಾರಿಫ್ ಅನ್ನು ಮತ್ತೆ ಹಾಕಲು ಹೊರಟಿದ್ದಾರೆ. ಕೋರ್ಟ್ ತಾಳಕ್ಕೆ ಕುಣಿದರೆ ಸಿಕ್ಕಾಪಟ್ಟೆ ಟ್ಯಾರಿಫ್ ಹಾಕುವುದಾಗಿ ಎಲ್ಲಾ ದೇಶಗಳಿಗೂ ಎಚ್ಚರಿಕೆ ಕೊಟ್ಟಿದ್ದಾರೆ ಟ್ರಂಪ್. ಈ ಕಾರಣಕ್ಕೆ ಮಾರುಕಟ್ಟೆ ನೆಗಟಿವ್ ಆಗಿ ಸ್ಪಂದಿಸುತ್ತಿದೆ.
ಅಮೆರಿಕ ಮತ್ತು ಇರಾನ್ ಬಿಕ್ಕಟ್ಟು
ಇರಾನ್ ವಿರುದ್ಧ ದಾಳಿ ಮಾಡಲು ಅಮೆರಿಕ ಸಜ್ಜಾಗಿದೆ. ಯಾವಾಗ ಬೇಕಾದರೂ ಆಕ್ರಮಣ ಮಾಡಬಹುದು ಎನ್ನುವ ಸ್ಥಿತಿ ಇದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ತ್ಯಜಿಸಬೇಕು ಎಂಬುದು ಅಮೆರಿಕ ಹಿಡಿದಿರುವ ಬಿಗಿಪಟ್ಟು.
ಐಟಿ ಷೇರುಗಳ ಮಾರಾಟ ಭರಾಟೆ
ಆಂಥ್ರೋಪಿಕ್ನ ಕ್ಲಾಡ್ ಎಐ ಟೂಲ್ಗಳು ಕೋಡಿಂಗ್ ಕೆಲಸವನ್ನು ಸಲೀಸಾಗುವಂತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಐಟಿ ಉದ್ಯಮದ ಮೇಲೆ ಕರಿನೆರಳು ಬಿದ್ದಂತಾಗಿದೆ. ಇದರಿಂದಾಗಿ, ಐಟಿ ಷೇರುಗಳು ಕುಸಿಯುತ್ತಾ ಹೋಗುತ್ತಿವೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಷೇರು ಮಾರುಕಟ್ಟೆ ಕುಸಿಯಲು ಈ ಮೇಲಿನ ಕಾರಣಗಳು ಪ್ರಮುಖವಾಗಿ ಕಾಣುತ್ತಿವೆ. ಹಾಗೆಯೇ, ಇವತ್ತು ಮಂಗಳವಾರ ಡಾಲರ್ ಎದುರು ರುಪಾಯಿ ಮೌಲ್ಯ ಸ್ವಲ್ಪ ಕುಸಿದಿದೆ. ಜಾಗತಿಕವಾಗಿ ವಿವಿಧ ಷೇರುಪೇಟೆಗಳೂ ಕೂಡ ಕೆಂಪು ಬಣ್ಣದಲ್ಲಿ ಇವೆ. ಇವು ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
