ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್ಮ್ಯಾನ್ ಸಲಹೆ ಕೇಳಿ
Sam Altman says on new ideas and secrecy:ನಿಮ್ಮಲ್ಲಿ ಹೊಸ ಐಡಿಯಾ ಇದೆ ಎಂದು ಯಾರೂ ಬಹಳ ದಿನ ಕೊಂಡಾಡುವುದಿಲ್ಲ. ಐಡಿಯಾವನ್ನು ಸರಿಯಾಗಿ ಎಕ್ಸಿಕ್ಯೂಟ್ ಮಾಡುವವನೇ ಯಶಸ್ಸು ಗಳಿಸೋದು. ಹಾಗಂತ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಹೇಳುತ್ತಾರೆ. ಹೊಸ ಸ್ಟಾರ್ಟಪ್ಗಳು ತಮ್ಮ ಹೊಸ ಐಡಿಯಾವನ್ನು ಮುಚ್ಚಿಡುವ ಬದಲು ಅದನ್ನು ಸಮರ್ಪಕವಾಗಿ ಜಾರಿಗೆ ತರುವ ಬಗ್ಗೆ ಯೋಚಿಸಬೇಕು ಎಂಬುದು ಅವರ ಸಲಹೆ.

ನವದೆಹಲಿ, ಫೆಬ್ರುವರಿ 23: ಇವತ್ತು ಬೆಳೆಯುತ್ತಿರುವ ಪ್ರಪಂಚದಲ್ಲಿ ಹೊಸ ಹೊಸ ಆಲೋಚನೆಗಳು, ಬ್ಯುಸಿನೆಸ್ ಐಡಿಯಾಗಳು ಹೊರಹೊಮ್ಮುತ್ತಲೇ ಇರುತ್ತವೆ. ಯಾರಿಗೋ ಬಂದಿದ್ದ ಐಡಿಯಾವನ್ನು ಇನ್ಯಾರೋ ಸಮರ್ಪಕವಾಗಿ ಜಾರಿಗೆ ತಂದು ಯಶಸ್ವಿಯಾಗಿರುವ ಹಲವು ನಿದರ್ಶನಗಳಿವೆ. ಮೊದಲು ಐಡಿಯಾ ಹೊಂದಿದ್ದವರು ಅದನ್ನು ಜಾರಿಗೆ ತರಲು ವಿಫಲರಾಗಿರುವ ನಿದರ್ಶನಗಳೂ ಬಹಳ ಇವೆ. ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ (Sam Altman) ಈ ವಿಚಾರದ ಬಗ್ಗೆ ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ್ದಾರೆ. ನಿಮ್ಮಲ್ಲಿ ಐಡಿಯಾ ಇದೆಯಾ ಅನ್ನೋದು ಯಾರಿಗೂ ಬೇಕಾಗಿಲ್ಲ. ಆ ಐಡಿಯಾವನ್ನು ಹೇಗೆ ಜಾರಿಗೆ ತರುತ್ತೀರಿ ಎಂಬುದು ಮುಖ್ಯ ಎಂದು ಚ್ಯಾಟ್ಜಿಪಿಟಿ ರೂವಾರಿ ಹೇಳಿದ್ದಾರೆ.
‘ಹೊಸ ಐಡಿಯಾಗಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಭಾವಿಸುವವರು ಅನೇಕರಿದ್ದಾರೆ. ಮೂಲ ಪರಿಕಲ್ಪನೆ ಯಾರದ್ದೇ ಇರಲಿ, ಅದನ್ನು ಸರಿಯಾಗಿ ಎಕ್ಸಿಕ್ಯೂಟ್ ಮಾಡುವುದು ಹೆಚ್ಚು ಮುಖ್ಯ. ನಿಮ್ಮ ಐಡಿಯಾ ಎಷ್ಟೇ ಗ್ರೇಟ್ ಆಗಿರಲಿ, ಯಾರಿಗೂ ಅದರಿಂದ ಆಗಬೇಕಾದ್ದೇನಿಲ್ಲ’ ಎಂದು ಹಳೆಯ ವಿಡಿಯೋವೊಂದರಲ್ಲಿ ಸ್ಯಾಮ್ ಆಲ್ಟ್ಮ್ಯಾನ್ ಹೇಳುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಹೊಸ ಐಡಿಯಾ ಅನುಷ್ಠಾನಕ್ಕೆ ಏನು ಮಾಡಬೇಕು?
‘ನೀವು ಹೊಸ ಕಾನ್ಸೆಪ್ಟ್ನ ಪೂರ್ಣ ಪ್ಲಾನ್ ಅನ್ನು ದೊಡ್ಡ ಕಂಪನಿಗೆ ನೇರವಾಗಿ ಕೊಟ್ಟು ನೋಡಿ. ಅವರು ಅದನ್ನು ಸರಿಯಾಗಿ ನಕಲು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಯಾಕೆಂದರೆ, ಹೊಸ ಐಡಿಯಾವನ್ನು ಯಶಸ್ವಿಯಾಗಿ ಜಾರಿಗೆ ತರಲು ಗಮನ, ಛಲ ಮತ್ತು ಪ್ರಾಬ್ಲಮ್ ಸಾಲ್ವಿಂಗ್ ಚಾತುರ್ಯ ಬೇಕಾಗುತ್ತದೆ’ ಎಂದು ಸ್ಯಾಮ್ ಆಲ್ಟ್ಮ್ಯಾನ್ ಹೇಳುತ್ತಾರೆ.
ರಹಸ್ಯವಾಗಿಡುವುದು ತಪ್ಪು
ಹೊಸ ಸ್ಟಾರ್ಟಪ್ಗಳು ತಮ್ಮ ಬ್ಯುಸಿನೆಸ್ ಐಡಿಯಾವನ್ನು ರಹಸ್ಯವಾಗಿ ಇಡುವುದನ್ನು ಸ್ಯಾಮ್ ಆಲ್ಟ್ಮ್ಯಾನ್ ಅಲ್ಲಗಳೆಯುತ್ತಾರೆ. ‘ಸಂಸ್ಥಾಪಕರು ತಾವು ಏನು ನಿರ್ಮಿಸುತ್ತಿದ್ದೇವೆ ಎಂಬುದನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಹಾಗಾದಾಗ ಉದ್ಯೋಗಿಗಳನ್ನು ಆಕರ್ಷಿಸಬಹುದು, ಹೂಡಿಕೆದಾರರನ್ನು ಸಮಾಧಾನಗೊಳಿಸಬಹುದು, ಗ್ರಾಹಕರನ್ನು ಪಡೆಯಬಹುದು. ಮತ್ತು ಉತ್ಪನ್ನದ ಗುಣಮಟ್ಟ ಸುಧಾರಿಸಲು ಬೇಕಾದ ಸಲಹೆ ಸೂಚನೆಗಳನ್ನು ಪಡೆಯಬಹುದು’ ಎಂದು ಓಪನ್ಎಐ ಸಿಇಒ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?
ಕಂಪನಿಗಳು ತಮ್ಮ ಹೊಸ ಐಡಿಯಾವನ್ನು ಮುಚ್ಚಿಟ್ಟುಕೊಂಡರೆ ಪ್ರಯೋಜನವಿಲ್ಲ. ಬೇಕೆಂದರೆ, ಅದನ್ನು ಎಕ್ಸಿಕ್ಯೂಟ್ ಮಾಡುವ ಕಾರ್ಯವಿಧಾನಗಳ ವಿವರವನ್ನು ರಹಸ್ಯವಾಗಿಟ್ಟುಕೊಳ್ಳಬಹುದು ಎಂದೂ ಹೇಳಿದ ಸ್ಯಾಮ್ ಆಲ್ಟ್ಮ್ಯಾನ್, ತಾನು ಹಿಂದೆ ಕೆಲಸ ಮಾಡುತ್ತಿದ್ದ ವೈ ಕಾಂಬಿನೇಟರ್ ಎನ್ನುವ ಹೂಡಿಕೆ ಸಂಸ್ಥೆಯಲ್ಲಿನ ಅನುಭವಗಳನ್ನು ಮೆಲುಕು ಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
