Life Certificate: ಪಿಂಚಣಿದಾರರೆ ಗಮನಿಸಿ, ಈ ವರ್ಷದ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ ತಿಂಗಳು ಗಡುವು
Digital Life Certificate information: ಸರ್ಕಾರಿ ಪಿಂಚಣಿದಾರರು ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಅಗತ್ಯ. ನವೆಂಬರ್ 30ರೊಳಗೆ ಸರ್ಟಿಫಿಕೇಟ್ ಸಲ್ಲಿಸದೇ ಹೋದರೆ ಡಿಸೆಂಬರ್ನಲ್ಲಿ ಪಿಂಚಣಿ ಬರುವುದಿಲ್ಲ. ವಿವಿಧೆಡೆ ಇರುವ ಜೀವನ್ ಪ್ರಮಾಣ್ ಸೆಂಟರ್ಗಳಲ್ಲಿ ನೀವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಯೂ ಪ್ರಮಾಣಪತ್ರ ಪಡೆಯಬಹುದು.
ನವದೆಹಲಿ, ನವೆಂಬರ್ 5: ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ವ್ಯಕ್ತಿಗಳು ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಕಡ್ಡಾಯ. ಪಿಂಚಣಿದಾರರು ತಾವು ಜೀವಂತವಾಗಿರುವುದನ್ನು ತೋರಿಸಲು ಈ ನಿಯಮ ಮಾಡಲಾಗಿದೆ. ಪ್ರತೀ ವರ್ಷ ನವೆಂಬರ್ನೊಳಗೆ ಪ್ರತೀ ಪಿಂಚಣಿದಾರರೂ ಜೀವನ ಪ್ರಮಾಣಪತ್ರ ಸಲ್ಲಿಸಬೇಕು. ನವೆಂಬರ್ 30ರವರೆಗೂ ಗಡುವು ಇದೆ.
ನಿಮಗೆ ಪಿಂಚಣಿ ಸಿಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನ ಕಚೇರಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಈಗ ಡಿಜಿಟಲ್ ಮೂಲಕ ಪ್ರಮಾಣಪತ್ರ ಸಲ್ಲಿಸುವ ಅವಕಾಶ ಇದೆ. ಮುಂಚೆಯಾದರೆ, ಪಿಂಚಣಿದಾರರೇ ಖುದ್ದಾಗಿ ಪಿಂಚಣಿ ವಿತರಕ ಸಂಸ್ಥೆಯ ಕಚೇರಿಗೆ (ಬ್ಯಾಂಕ್ ಅಥವಾ ಅಂಚೆ ಕಚೇರಿ) ಹೋಗಬೇಕಿತ್ತು. ಅಥವಾ ತಾವು ಕೆಲಸ ಮಾಡಿದ್ದ ಸಂಸ್ಥೆಯನ್ನು ಸಂಪರ್ಕಸಿ ಅಲ್ಲಿಂದ ಲೈಫ್ ಸರ್ಟಿಫಿಕೇಟ್ ಅನ್ನು ಪಿಂಚಣಿ ವಿತರಕ ಸಂಸ್ಥೆಗೆ ಕಳುಹಿಸುವಂತೆ ಮಾಡಬೇಕಿತ್ತು.
ಈಗ ಡಿಜಿಟಲ್ ಆಗಿ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ಜೀವನ್ ಪ್ರಮಾಣ್ ವೆಬ್ಸೈಟ್ಗೆ ಹೋಗಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ನವೆಂಬರ್ 1ರಿಂದ 15 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಿದ್ದಾರೆನ್ನಲಾಗಿದೆ.
ಇದನ್ನೂ ಓದಿ: 150 ದಿನಗಳ ವ್ಯಾಲಿಡಿಟಿಯ ಬಿಎಸ್ಸೆನ್ನೆಲ್ ರೀಚಾರ್ಜ್ ಪ್ಲಾನ್; ಬೆಲೆ 400 ರೂಗಿಂತ ಕಡಿಮೆ
ದೇಶಾದ್ಯಂತ ಇರುವ ಜೀವನ್ ಪ್ರಮಾಣ್ ಸೆಂಟರ್ಗಳಲ್ಲಿ ನೀವು ನೊಂದಾಯಿಸಬಹುದು. ಅಥವಾ, ಜೀವನ್ ಪ್ರಮಾಣ್ ವೆಬ್ಸೈಟ್ಗೆ ಹೋದರೆ ಅಲ್ಲಿ ನೀವು ಅರ್ಜಿ ಡೌನ್ಲೋಡ್ ಮಾಡಬಹುದು.
ಆನ್ಲೈನ್ನಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವ ಕ್ರಮ
- ನೀವು ಜೀವನ್ ಪ್ರಮಾಣ್ ವೆಬ್ಸೈಟ್ಗೆ ಹೋಗಿ ಡೌನ್ಲೋಡ್ ಲಿಂಕ್ ಕ್ಲಿಕ್ ಮಾಡಿ
- ಅಲ್ಲಿ ನಿಮ್ಮ ಇಮೇಲ್ ಐಡಿಯನ್ನು ನೀಡಿ, ಕ್ಯಾಪ್ಚಾ ನಮೂದಿಸಿ, ಐ ಅಗ್ರೀ ಟು ಡೌನ್ಲೋಡ್ ಎಂಬುದನ್ನು ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಐಡಿಗೆ ಬರುವ ಒಟಿಪಿಯನ್ನು ನಮೂದಿಸಿದರೆ ಡೌನ್ಲೋಡ್ ಪೇಜ್ ಕಾಣಿಸುತ್ತದೆ.
- ಅಲ್ಲಿ ಮೊಬೈಲ್ ಆ್ಯಪ್ ಡೌನ್ಲೋಡ್ ಎನ್ನುವ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಇಮೇಲ್ ಐಡಿಗೆ ಡೌನ್ಲೋಡ್ ಲಿಂಕ್ ಬಂದಿರುತ್ತದೆ.
- ನೀವು ಇಮೇಲ್ ತೆರೆದು ಆ ಡೌನ್ಲೋಡ್ ಲಿಂಕ್ ಕ್ಲಿಕ್ ಮಾಡಿ, ಜೀವನ್ ಪ್ರಮಾಣ್ ಆ್ಯಪ್ ಅನ್ನು ಮೊಬೈಲ್ಗೆ ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಇಲ್ಲಿ ನಿಮ್ಮ ಆಧಾರ್ ನಂಬರ್, ಪೆನ್ಷನ್ ಪೇಮೆಂಟ್ ಆರ್ಡರ್, ಬ್ಯಾಂಕ್ ಅಕೌಂಟ್, ಬ್ಯಾಂಕ್ ಹೆಸರು, ಮೊಬೈಲ್ ನಂಬರ್ ಇತ್ಯಾದಿ ವಿವರ ತುಂಬಬೇಕು. ಆಧಾರ್ ದೃಢೀಕರಣ ನೀಡಬೇಕಾಗುತ್ತದೆ. ಆ ಬಳಿಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ನ ಐಡಿ ಸಿಗುತ್ತದೆ.
ಈ ಸರ್ಟಿಫಿಕೇಟ್ಗಳು ರೆಪಾಸಿಟರಿಗಳಲ್ಲಿ ಸಂಗ್ರಹವಾಗಿರುತ್ತವೆ. ಪೆನ್ಷನ್ ವಿತರಕ ಏಜೆನ್ಸಿ, ಪಿಂಚಣಿದಾರರು ಯಾವಾಗ ಬೇಕಾದರೂ ಈ ರೆಪಾಸಿಟರಿಗಳಿಂದ ಜೀವನ್ ಪ್ರಮಾಣ್ ಸರ್ಟಿಫಿಕೇಟ್ ಐಡಿಯನ್ನು ಪಡೆಯಬಹುದು.
ನವೆಂಬರ್ 30ರೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಏನಾಗುತ್ತೆ?
ಲೈಫ್ ಸರ್ಟಿಫಿಕೇಟ್ ಡಿಸೆಂಬರ್ 1ರಿಂದ ಮುಂದಿನ ವರ್ಷದ ನವೆಂಬರ್ 30ರವರೆಗೂ ಸಿಂಧು ಇರುತ್ತದೆ. ನವೆಂಬರ್ 30ರೊಳಗೆ ರಿನಿವಲ್ ಮಾಡದೇ ಹೋದರೆ ಡಿಸೆಂಬರ್ನಲ್ಲಿ ಬರುವ ಪೆನ್ಷನ್ ಸಿಗುವುದಿಲ್ಲ. ನೀವು ಲೈಫ್ ಸರ್ಟಿಫಿಕೇಟ್ ಸಲ್ಲಿಸುವವರೆಗೂ ಪಿಂಚಣಿ ಬರೋದು ನಿಂತಿರುತ್ತದೆ.
ಇದನ್ನೂ ಓದಿ: ಚಿನ್ನ ನಕಲಿಯಾ, ಅಸಲಿಯಾ ಪತ್ತೆ ಹಚ್ಚುವುದು ಹೇಗಿದೆ? ಇಲ್ಲಿದೆ ಕ್ರಮ
ತಡವಾಗಿ ನೀವು ಲೈಫ್ ಸರ್ಟಿಫಿಕೇಟ್ ನೀಡಿದರೆ ಅರಿಯರ್ಸ್ ಸಮೇತ ಪಿಂಚಣಿ ಬರುತ್ತದೆ. ಉದಾಹರಣೆಗೆ, ನವೆಂಬರ್ 30ರ ಬದಲು ನೀವು ಜನವರಿ 10ಕ್ಕೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಿದಲ್ಲಿ ಆಗ ಫೆಬ್ರುವರಿ ತಿಂಗಳಿಂದ ಪಿಂಚಣಿ ಪುನಾರಂಭವಾಗುತ್ತದೆ. ನಿಂತು ಹೋಗಿದ್ದ ಎರಡು ತಿಂಗಳ ಪಿಂಚಣಿ ಹಣವೂ ಸೇರಿಸಿ ಫೆಬ್ರುವರಿಯಲ್ಲಿ ನಿಮಗೆ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ