
ನವದೆಹಲಿ, ಜನವರಿ 23: ಬ್ಯಾಂಕುಗಳು ನಾಳೆಯಿಂದ (ಜ. 24) ಸತತ ನಾಲ್ಕು ದಿನ ಬಂದ್ (Bank holiday) ಆಗಿರುತ್ತವೆ. ಜನವರಿ 24, ಶನಿವಾರದಿಂದ ಜನವರಿ 27, ಮಂಗಳವಾರದವರೆಗೂ ಬ್ಯಾಂಕುಗಳ ಬಾಗಿಲು ಮುಚ್ಚಲಾಗಿರುತ್ತದೆ. ತುರ್ತಾಗಿ ಬ್ಯಾಂಕ್ ಕೆಲಸ ಇದ್ದವರು ಇವತ್ತಿಗೇ ಪ್ಲಾನ್ ಮಾಡಿಕೊಳ್ಳಬಹುದು. ಬ್ಯಾಂಕ್ ನೌಕರರ ಮುಷ್ಕರ (Bank workers strike) ಹಾಗೂ ಗಣರಾಜ್ಯೋತ್ಸವ (Republic Day) ಇರುವ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ.
ಜನವರಿ 24ರಿಂದ 27ರವರೆಗೂ ದೇಶವ್ಯಾಪಿ ಎಲ್ಲಾ ಬ್ಯಾಂಕುಗಳಿಗೂ ರಜೆ ಅನ್ವಯ ಆಗುತ್ತದೆ. ಬ್ಯಾಂಕ್ ನೌಕರರನ್ನು ಸಮಾಧಾನಗೊಳಿಸಿ ಮುಷ್ಕರ ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಿನ್ನೆ (ಜ. 22) ಕೂಡ ದೆಹಲಿಯಲ್ಲಿ ಸಂಧಾನ ಸಭೆ ನಡೆಯಿತು. ಆದರೂ ಕೂಡ ರಾಜಿ ಅಥವಾ ಪರಿಹಾರ ಬರಲಿಲ್ಲ. ಇವತ್ತೂ ಕೂಡ ಮಾತುಕತೆಗಳು ನಡೆಯಲಿವೆ. ಸಂಜೆ ಈ ಸಂಧಾನ ಯಶಸ್ವಿಯಾಗಿ ನೌಕರರ ಸಂಘ ಸಮಾಧಾನಗೊಂಡರೆ ಜನವರಿ 27ರಂದು ಮುಷ್ಕರವನ್ನು ಕೈಬಿಡಲಾಗಬಹುದು. ಇಲ್ಲದಿದ್ದರೆ ಮಂಗಳವಾರವೂ ಬ್ಯಾಂಕ್ ಬಂದ್ ಆಗಿರುತ್ತದೆ.
ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ
ಕೆಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತೆ ಬ್ಯಾಂಕುಗಳಲ್ಲೂ ವಾರಕ್ಕೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಒತ್ತಾಯವಾಗಿದೆ. ಸದ್ಯ ಪ್ರತೀ ಭಾನುವಾರ ರಜೆ ಇದೆ. ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ರಜೆಯಾಗಿ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ. ಬಹಳ ದಿನಗಳಿಂದ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ