ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಸಂಖ್ಯೆಗಳ ನಗದು ವ್ಯವಹಾರ(Cash transaction) ನಡೆಸುವುದು ಕಷ್ಟ. ಏಕೆಂದರೆ, ಕೇಂದ್ರ ಸರ್ಕಾರವು ನಗದು ವ್ಯವಹಾರಗಳ ಮೇಲೆ ಕೆಲವೊಂದು ನಿರ್ಬಂಧ(Restriction)ಗಳನ್ನು ವಿಧಿಸಿದೆ. ಹೀಗಿದ್ದಾಗ ಮಿತಿ ಮೀರಿ ವ್ಯವಹಾರ ನಡೆಸಿದರೆ ಆದಾಯ ತೆರಿಗೆ ಇಲಾಖೆ ಮೊತ್ತಕ್ಕೆ ಸಮನಾದ ದಂಡ ವಿಧಿಸಬಹುದು. ಈ ಬಗ್ಗೆ ಎಚ್ಚರವಿರಬೇಕು. ಇದನ್ನು ಕಥೆ ಮೂಲಕ ಹೇಳುವುದಾದರೆ, ಸುನಿಲ್ ಎಂಬ ವ್ಯಕ್ತಿ ರಾಜೇಶ್ ಎಂಬ ವ್ಯಕ್ತಿಯಿಂದ 2ಲಕ್ಷ ರೂ. ಸಾಲ ಪಡೆದರು. ಇದನ್ನು ವಾಪಸ್ ನೀಡುವ ವೇಳೆ ಸುನಿಲ್, ರಾಜೇಶ್ ಬ್ಯಾಂಕ್ ಖಾತೆಗೆ ನಗದು(Cash) ರೂಪದಲ್ಲಿ ಪಾವತಿ ಮಾಡಿದರು. ಈ ವಹಿವಾಟಿನ ಹಿನ್ನೆಲೆ ಆದಾಯ ತೆರಿಗೆ ಇಲಾಖೆ(Income Tax Department) ನೋಟಿಸ್ ಜಾರಿ ಮಾಡಿತು. ಇದಕ್ಕೆ ಕಾರಣ, ಇಲಾಖೆಯು ಕಪ್ಪು ಹಣದ ಚಲಾವಣೆ ತಡೆಯಲು ನಗದು ವ್ಯವಹಾರಗಳ ಮೇಲೆ ನಿಗಾ ಇರಿಸಿರುವುದು.
ಆದಾಯ ತೆರಿಗೆ ಕಾಯ್ದೆಯ ಅಡಿ, ನೀವು ಯಾರಿಂದಲೂ 20,000 ರೂ.ಗಳಿಗೂ ಹೆಚ್ಚಿನ ಮೊತ್ತದ ಸಾಲವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ಮಾತ್ರವಲ್ಲ, ಇದೇ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತದ ಸಾಲದ ಮರುಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ. ಆದಾಗ್ಯೂ, ಇದು ನಿಮ್ಮ ತೆರಿಗೆ ಹೊಣೆಗಾರಿಕೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನೀವೇನಾದರೂ ನಿಮ್ಮ ಸಾಲದ ವ್ಯವಹಾರದಲ್ಲಿ ಈ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಪಡೆದರೆ ಅಥವಾ ನೀಡಿದರೆ, ಆಗ ಆದಾಯ ತೆರಿಗೆ ಇಲಾಖೆಯು ನೀವು ಪಡೆದ ಅಥವಾ ನೀಡಿದ ನಿಗದಿಪಡಿಸಲಾದ ಮಿತಿಗಿಂತ ಹೆಚ್ಚಿನ ಮೊತ್ತಕ್ಕೆ ಸಮನಾದ ಮೊತ್ತದ ದಂಡವನ್ನು ವಿಧಿಸಬಹುದು.
ಒಂದು ವೇಳೆ, ನೀವು ನೀಡಬೇಕಾಗಿರುವ ಸಾಲದ ಬಾಕಿ ಹಣದ ಮೊತ್ತವು 20,000ರೂ.ಗಳಿಗಿಂತ ಕಡಿಮೆ ಇದ್ದು, ಅದು ನೀವು ಕಟ್ಟಬೇಕಾದ ಕೊನೆಯ ಕಂತಿನ ಬಾಕಿ ಆಗಿದ್ದರೆ ಆಗ ನೀವು ಆ ಸಂಪೂರ್ಣ ಮೊತ್ತವನ್ನು ನಗದು ರೂಪದಲ್ಲೇ ಪಾವತಿ ಮಾಡಬಹುದು. ಇದಲ್ಲದೇ, ನಿಮ್ಮ ಸಾಲದ ಬಾಕಿಯನ್ನು ಮರುಪಾವತಿ ಮಾಡುವಾಗ ನೀವು ನಿಗದಿತ ಮಿತಿಯಾದ 20,000 ರೂ.ಗಳಿಗಿಂತ ಒಂದು ರೂ. ಹೆಚ್ಚು ಪಾವತಿಸುವಂತಿಲ್ಲ. ಆದರೆ ಈ ನಿರ್ಬಂಧವು ಗೃಹಸಾಲಗಳಿಗೆ ಅನ್ವಯವಾಗುವುದಿಲ್ಲ.
ವ್ಯವಹಾರ ಮತ್ತು ವೃತ್ತಿ
ತೆರಿಗೆ ಮತ್ತು ಹೂಡಿಕೆ ಪರಿಣಿತ ಬಲವಂತ್ ಜೈನ್ ಹೇಳುವಂತೆ, ನೀವೇನಾದರೂ ನಿಮ್ಮ ಸ್ವಂತ ವ್ಯವಹಾರವನ್ನು ಹೊಂದಿದ್ದರೆ ಅಥವಾ ನೀವು ಯಾವುದಾದರೂ ವೃತ್ತಿಯಲ್ಲಿ ನಿರತರಾಗಿದ್ದರೆ, ಅಗ ನೀವು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ 10,000 ರೂ.ಗಳಿಗೂ ಹೆಚ್ಚಿನ ದಿನನಿತ್ಯದ ವೆಚ್ಚವನ್ನು ನಗದು ರೂಪದಲ್ಲಿ ತೋರಿಸುವಂತಿಲ್ಲ. ನೀವೇನಾದರೂ ಹಾಗೆ ಮಾಡಿದಲ್ಲಿ ನೀವು ನಿಮ್ಮ ವೆಚ್ಚದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಲು ಅರ್ಹರಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.
ಸಂಪೂರ್ಣ ನಿರ್ಬಂಧಗಳು
ಆದಾಯ ತೆರಿಗೆ ಕಾಯ್ದೆಯ 269ಎಸ್ಟಿ ಸೆಕ್ಷನ್ ಪ್ರಕಾರ, 2 ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತದ ಹಣವನ್ನು ನಗದು ರೂಪದಲ್ಲಿ ಪಡೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ನಿರ್ಬಂಧವನ್ನು ಪಡೆಯುವವರ ಮೇಲೆ ವಿಧಿಸಲಾಗಿದೆಯೇ ವಿನಃ ನೀಡುವವರ ಮೇಲೆ ಅಲ್ಲ. ಈ ನಿರ್ಬಂಧವು ಯಾವುದೇ ಒಂದು ನಿರ್ದಿಷ್ಟ ವ್ಯವಹಾರದ ಸಂದರ್ಭದಲ್ಲಿ ಪಡೆಯಲಾಗುವ ಹಣಕ್ಕೆ ಅನ್ವಯವಾಗುತ್ತದೆ.
ಈ ಪಾವತಿಯನ್ನು ನೀವು ಒಂದೇ ದಿನದಂದು ಮಾಡಿರಬೇಕು ಅಂತೇನಿಲ್ಲ. ವಿವಾಹ ಸಮಾರಂಭಗಳು ಹಾಗೂ ಪ್ರವಾಸಗಳಂತಹ ಅನೇಕ ಸಂದರ್ಭಗಳಂತಹ ಕಪ್ಪು ಹಣದ ವ್ಯವಹಾರಗಳನ್ನು ನಿರ್ಬಂಧಿಸಲು ಈ ನಿಯಮ ತರಲಾಗಿದೆ. ತೆರಿಗೆ ನಿಯಮಗಳ ಅಡಿಯಲ್ಲಿ ಹೀಗೆ ಮಿತಿಯನ್ನು ಮೀರಿ ನಗದು ಪಾವತಿ ಮಾಡಿದವರಿಗೆ ಈ ಮೊತ್ತದ ಮೇಲೆ ಯಾವುದೇ ತೆರಿಗೆ ವಿನಾಯಿತಿ ಸಿಗುವುದಿಲ್ಲ.
Published On - 12:28 pm, Tue, 17 May 22