ಆರೋಗ್ಯ ವಿಮೆ ಪಾಲಿಸಿ ಅಡಿ ತೆರಿಗೆ ವಿನಾಯಿತಿ, ಎಷ್ಟು ಮೊತ್ತದ ತೆರಿಗೆ ವಿನಾಯಿತಿ ಪಡೆಯಬಹುದು? ಇಲ್ಲಿದೆ ಫುಲ್ ಡೀಟೇಲ್ಸ್

| Updated By: Rakesh Nayak Manchi

Updated on: May 17, 2022 | 1:37 PM

ನಿಮ್ಮ ವೇತನದಲ್ಲಿ ಆದಾಯ ತೆರಿಗೆ ಕಡಿತವಾಗುತ್ತಿದ್ದರೆ ಕೂಡಲೇ ಆರೋಗ್ಯ ವಿಮಾ ಖರೀದಿಸಿ. ಇದರಿಂದ ಸಾಕಷ್ಟು ತೆರಿಗೆ ವಿನಾಯಿತಿ ಪಡೆಯಿರಿ. ಇದು ವೇತನದಾರರಿಗೂ ತುಂಬಾ ಉಪಯುಕ್ತ ಆಯ್ಕೆಯಾಗಿದೆ.

ಆರೋಗ್ಯ ವಿಮೆ ಪಾಲಿಸಿ ಅಡಿ ತೆರಿಗೆ ವಿನಾಯಿತಿ, ಎಷ್ಟು ಮೊತ್ತದ ತೆರಿಗೆ ವಿನಾಯಿತಿ ಪಡೆಯಬಹುದು? ಇಲ್ಲಿದೆ ಫುಲ್ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us on

ನಿಮ್ಮ ವೇತನದಲ್ಲಿ ಆದಾಯ ತೆರಿಗೆ(Income Tax) ಕಡಿತವಾಗುತ್ತಿದ್ದರೆ ಕೂಡಲೇ ಆರೋಗ್ಯ ವಿಮೆಯೇನಾದರೂ ಖರೀದಿಸಿ. ಏಕೆಂದರೆ, ಆರೋಗ್ಯ ವಿಮೆ ಪಾಲಿಸಿ ಅಡಿಯಲ್ಲಿ ಸೆಕ್ಷನ್ 80ಡಿ ಅಡಿಯಲ್ಲಿ ನೀವು ತೆರಿಗೆ ವಿನಾಯಿತಿ (Tax deduction) ಪಡೆಯಬಹುದಾಗಿದೆ. ಆದರೆ, ಎಷ್ಟು ತೆರಿಗೆ ಲಾಭ ಪಡೆಯಬಹುದು ಎಂಬುದನ್ನು ನಾವು ಮುಂದೆ ಹೇಳುತ್ತೇವೆ. ನೀವು ನಿಮ್ಮ ಹಣಕಾಸು ಯೋಜನೆಯಲ್ಲಿ ಆರೋಗ್ಯ ವಿಮೆ(Health insurance)ಯನ್ನು ಮೊದಲು ಸೇರಿಸಿ. ಈ ಕ್ರಮದಿಂದ ನೀವು ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸುವ ಅವಶ್ಯಕತೆ ಇರುವುದಿಲ್ಲ. ಪ್ರತಿ ವರ್ಷ ತೆರಿಗೆ ಮೇಲೆ ಸಾಕಷ್ಟು ಉಳಿತಾಯ ಮಾಡಬಹುದು.

ಸ್ಟಾಟಿಸ್ಟಾ ವರದಿ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಟ್ಟ 51.40 ಕೋಟಿ ಜನರ ಪೈಕಿ 34.29 ಕೋಟಿ ಜನರು ಸರ್ಕಾರಿ ಯೋಜನೆಯಡಿ ಹಾಗೂ 11.87 ಕೋಟಿ ಜನರು ವಿಮೆ ಪಾಲಿಸಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಕೇವಲ 5.1 ಕೋಟಿ ಜನರು ವೈಯಕ್ತಿಕ ಆರೋಗ್ಯ ವಿಮೆ ಪಾಲಿಸಿ ಹೊಂದಿದ್ದಾರೆ.

ಸೆಕ್ಷನ್ 80ರ ಅಡಿಯಲ್ಲಿ ಆರೋಗ್ಯ ವಿಮೆ ಪ್ರಿಮಿಯಂ ಪಾವತಿ ಮೇಲೆ ತೆರಿಗೆ ಕಡಿತದ ಲಾಭ ದೊರೆಯುತ್ತದೆ. ನೀವು ಇದರ ಮೇಲಿನ ತೆರಿಗೆ ವಿನಾಯಿತಿಯನ್ನು ನಿಮಗಾಗಲಿ, ನಿಮ್ಮ ಪತಿ, ಪತ್ನಿ, ನಿಮ್ಮ ಮಕ್ಕಳು ಅಥವಾ ನಿಮ್ಮ ಪೋಷಕರಿಗಾಗಲಿ ಖರೀದಿಸಿದ ಆರೋಗ್ಯ ವಿಮೆ ಪ್ರಿಮಿಯಂ ಮೇಲೆಯೂ ಪಡೆಯಬಹುದಾಗಿದೆ. ಸಹೋದರ-ಸಹೋದರಿಯರ ಆರೋಗ್ಯ ವಿಮೆಗೆ ಮಾಡಿದ ಪಾವತಿ ಮೇಲೆ ವಿನಾಯಿತಿ ದೊರೆಯುವುದಿಲ್ಲ.  ಮಕ್ಕಳು ಸಹ ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆ ಪಾಲಿಸಿಯಲ್ಲಿ ಒಂದು ನಿಗದಿತ ವಯಸ್ಸಿನವರೆಗೆ ಮಾತ್ರ ಈ ವಿನಾಯಿತಿಗೆ ಒಳಪಡುತ್ತಾರೆ.

ನೀವು  60 ವರ್ಷಕ್ಕಿಂತ ಕೆಳಗಿನ ವಯೋಮಾನದ ಉದ್ಯೋಗಸ್ಥರಾಗಿದ್ದರೆ 25 ಸಾವಿರ ರೂ.ವರೆಗಿನ ವಾರ್ಷಿಕ ಪ್ರೀಮಿಯಂಗೆ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಾಭವನ್ನು ನಿಮಗೂ ಹಾಗೂ ನಿಮ್ಮ ಪತ್ನಿ ಹಾಗೂ ಮಕ್ಕಳಿಗೆ ಪಡೆಯಬಹುದಾಗಿದೆ. ಇದಲ್ಲದೆ, ನಿಮ್ಮ ಪೋಷಕರಿಗೆ ಆರೋಗ್ಯ ವಿಮೆ ಖರೀದಿಸಲು ಇಚ್ಛಿಸಿದರೆ ಅದರ ಮೇಲಿನ 25 ಸಾವಿರ ರೂ.ವರೆಗಿನ ಪ್ರೀಮಿಯಂಗೆ ಹೆಚ್ಚುವರಿ ವಿನಾಯಿತಿ ದೊರೆಯುತ್ತದೆ. ಒಂದು ವೇಳೆ ಪೋಷಕರು ಹಿರಿಯ ನಾಗರಿಕರಾಗಿದ್ದರೆ, 50 ಸಾವಿರ ರೂ.ವರೆಗೆ ತೆರಿಗೆ ವಿನಾಯಿತಿ ಲಾಭ ಪ್ರೀಮಿಯಂ ಮೇಲೆ ದೊರೆಯುತ್ತದೆ. ಈ ರೀತಿಯಾಗಿ, ನೀವು ಒಟ್ಟು ಒಂದು ಹಣಕಾಸು ವರ್ಷದಲ್ಲಿ 75 ಸಾವಿರ ರೂ.ವರೆಗಿನ ಪ್ರೀಮಿಯಂ ಪಾವತಿಗೆ ತೆರಿಗೆ ಲಾಭ ಪಡೆಯಬಹುದು.

ಒಂದು ವೇಳೆ ಓರ್ವ ವ್ಯಕ್ತಿ 60 ವರ್ಷ ವಯಸ್ಸು ದಾಟಿದ್ದರೆ ಆತ ತನಗಾಗಿ ಹಾಗೂ ತನ್ನ ಪೋಷಕರಿಗಾಗಿ ಆರೋಗ್ಯ ವಿಮೆಯನ್ನು ಖರೀದಿಸಿದರೆ ಆತ 1 ಲಕ್ಷ ರೂ.ವರೆಗಿನ ಪ್ರೀಮಿಯಂ ಪಾವತಿ ಮೇಲೆ ತೆರಿಗೆ ವಿನಾಯಿತಿ ಲಾಭ ಪಡೆಯಬಹುದು. ಇಂತಹ ಒಂದು ಅವಕಾಶ ಇದೆ ಎಂದು ಬಹಳಷ್ಟು ಮಂದಿಗೆ ತಿಳಿದೇ ಇಲ್ಲ.

ಎಷ್ಟು ಲಾಭ ಪಡೆಯಬಹುದು?

ಒಂದು ವೇಳೆ ನೀವು ಆದಾಯ ತೆರಿಗೆಯ ಅಪ್ಪರ್ ಸ್ಲ್ಯಾಬ್ ಮೇಲ್ಸ್ತರದ ವ್ಯಾಪ್ತಿಗೆ ಒಳಪಡುತ್ತಿದ್ದರೆ ಆಗ ನೀವು ಶೇ.30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಆತ ಏನಾದರೂ ತನಗಾಗಿ 25 ಸಾವಿರ ರೂ. ಮೊತ್ತದ ಆರೋಗ್ಯ ವಿಮೆ ಖರೀದಿಸಿದರೆ ಆಗ 7,500 ರೂ.ವರಿಗಿನ ತೆರಿಗೆ ಉಳಿತಾಯವಾಗುತ್ತದೆ. ಇದಲ್ಲದೆ ತನ್ನ ತಾಯಿಗಾಗಿ ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ವಾರ್ಷಿಕ 50 ಸಾವಿರ ರೂ. ಪಾವತಿಸಿದರೆ 15 ಸಾವಿರ ರೂ.ವರೆಗೆ ತೆರಿಗೆ ಉಳಿತಾಯವಾಗುತ್ತದೆ. ತೆರಿಗೆ ಪಾವತಿಯ ಮೇಲೆ ಶೇ.4ರಷ್ಟು ಸೆಸ್ ಸೇರಿಸಿದರೆ  22,500 ರೂ.ಗೆ 900 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ 23,400 ರೂ.ವರೆಗೆ ಒಂದು ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಉಳಿತಾಯ ಮಾಡಬಹುದು.

ಆರೋಗ್ಯ ತಪಾಸಣೆಗೆ ತೆರಿಗೆ ವಿನಾಯಿತಿ

ಸೆಕ್ಷನ್ 80 ಡಿ ಅಡಿಯಲ್ಲಿ ಆರೋಗ್ಯ ತಪಾಸಣೆಗೆ ಮಾಡಿದ 5 ಸಾವಿರ ರೂ.ವರೆಗಿನ ವೆಚ್ಚಕ್ಕೆ ತೆರಿಗೆ ಕಡಿತದ ಲಾಭ ದೊರೆಯುತ್ತದೆ. ಈ ಲಾಭ, 25 ಸಾವಿರ ರೂ. ಹಾಗೂ 50 ಸಾವಿರ ರೂ.ವರೆಗಿನ ಒಟ್ಟಾರೆ ಮಿತಿಯಲ್ಲಿ ಸೇರಿರುತ್ತದೆ. ತೆರಿಗೆ ಹಾಗೂ ಹೂಡಿಕೆ ತಜ್ಞ ಬಲವಂತ್ ಜೈನ್ ಹೇಳುವಂತೆ, ‘‘ನಿಮಗೆ, ನಿಮ್ಮ ಪತ್ನಿಗೆ ಮತ್ತು ಮಕ್ಕಳಿಗೆ ಹಾಗೂ ಪೋಷಕರಿಗೆ ಸಾಕಷ್ಟು ವಿಮೆ ಸೌಲಭ್ಯ ಹೊಂದಿರಿ. ಆರೋಗ್ಯ ವಿಮೆ ಆದಾಯ ತೆರಿಗೆ ವ್ಯಾಪ್ತಿಗೆ ಬರುವ ವೇತನದಾರರಿಗೆ ತುಂಬಾ ಉಪಯುಕ್ತ ಆಯ್ಕೆ. ಪ್ರೀಮಿಯಂ ಪಾವತಿ ಬದಲಾಗಿ ನೀವು ಸಾಕಷ್ಟು ತೆರಿಗೆ ಉಳಿಸಬಹುದು” ಎಂಬ ಸಲಹೆಯನ್ನು ನೀಡುತ್ತಾರೆ.

Published On - 1:37 pm, Tue, 17 May 22